ಎಂಪಿ ಚುನಾವಣೆಗೆ ವಿಜಯಪುರದಿಂದ ಕಾರಜೋಳ ಸ್ಪರ್ಧಿಸಲ್ಲ: ಸಂಸದ ಜಿಗಜಿಣಗಿ

By Kannadaprabha News  |  First Published Aug 20, 2023, 6:30 PM IST

ಮಾಜಿ ಸಚಿವ ಗೋವಿಂದ ಕಾರಜೋಳ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿಲ್ಲ. ಒಂದು ವೇಳೆ ಹಾಗೇನಾದರೂ ಇದ್ದರೇ ನಾನು ಅವರು ಕುಳಿತು ಮಾತನಾಡುತ್ತೇವೆ ಎಂದು ಸಂಸದ ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದರು.


ವಿಜಯಪುರ (ಆ.20): ಮಾಜಿ ಸಚಿವ ಗೋವಿಂದ ಕಾರಜೋಳ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿಲ್ಲ. ಒಂದು ವೇಳೆ ಹಾಗೇನಾದರೂ ಇದ್ದರೇ ನಾನು ಅವರು ಕುಳಿತು ಮಾತನಾಡುತ್ತೇವೆ ಎಂದು ಸಂಸದ ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಲೋಕಸಭಾ ಕ್ಷೇತ್ರದಿಂದ ಗೋವಿಂದ ಕಾರಜೋಳ ಸ್ಪರ್ಧೆ ಮಾಡುತ್ತಾರೆ ಎಂದು ಎಲ್ಲೂ ಹೇಳಿಲ್ಲ. ಅವರು ಹಾಗೂ ನಾನು ಬೇರೆ ಅಲ್ಲ. ಒಂದು ವೇಳೆ ನಿಲ್ಲುತ್ತಾರೆಂದರೆ ನಿಲ್ಲಲಿ. ಹಾಗೇನಿದ್ದರೂ ನಾವಿಬ್ಬರು ಕುಳಿತು ಮಾತನಾಡುತ್ತೇವೆ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾರೇ ಬಂದು ನಿಲ್ಲಲಿ ಎಂದು ಸವಾಲ ಹಾಕಿದರು.

ವಿಜಯಪುರದ ವಜ್ರಹನುಮಾನ ಬಳಿ ಅಂಡರ್‌ಪಾಸ್‌ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅಗತ್ಯ ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಇಲಾಖಾ ಅಧಿಕಾರಿಗಳು ಆರ್‌ಒಬಿ ಮಾಡುವ ನಿಟ್ಟಿನಲ್ಲಿ ಕ್ರಮವಹಿಸುತ್ತಿದ್ದಾರೆ. ಈ ಬಗ್ಗೆ ನಾನು ಪತ್ರವೇ ನೀಡಿಲ್ಲ. ಆದರೂ ಸಹ ಪತ್ರ ಸೃಷ್ಟಿಯಾಗಿದೆ. ಆ ಪತ್ರ ನಕಲಿಯೋ ಅಸಲಿಯೋ ಗೊತ್ತಿಲ್ಲ. ನಾನಂತೂ ಪತ್ರ ಕೊಟ್ಟಿಲ್ಲ. ಈ ಬಗ್ಗೆ ಮುಂದೆ ನೋಡೋಣ. ವಜ್ರಹನುಮಾನದಲ್ಲಿ ಅಂಡರ್‌ಪಾಸ್‌ ನಿರ್ಮಿಸಿದರೇ ಸೂಕ್ತ. ಹೀಗಾಗಿ ಅಂಡರ್‌ಪಾಸ್‌ ನಿರ್ಮಾಣಕ್ಕೆ ಕ್ರಮ ಜರುಗಿಸಲಾಗುವುದು ಹೊರತು ಆರ್‌ಒಬಿ ಅಲ್ಲ ಎಂದು ತಿಳಿಸಿದರು.

Tap to resize

Latest Videos

ಬಿಜೆಪಿಯ 13-14 ಶಾಸಕರು ಕಾಂಗ್ರೆಸ್‌ಗೆ: ಶಾಸಕ ವಿನಯ ಕುಲಕರ್ಣಿ

ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಿ: ಕೇಂದ್ರ ಪುರಸ್ಕೃತ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿ ಸಂಬಂಧಿಸಿದ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ಲಾಭ ದೊರಕಿಸುವಂತೆ ಮಾಡಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ 2023-24ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಜುಲೈ ತಿಂಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ವಿವಿಧ ಇಲಾಖೆಯಡಿ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸುವ ಬೋರ್‌ವೇಲ್‌ಗಳನ್ನು ನಿಯಮಾನುಸಾರ ಹಾಗೂ ಸಮರ್ಪಕವಾಗಿ ಕೊರೆಸಬೇಕು. 

ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕೊರೆದ ಬೋರ್‌ವೇಲ್‌ಗಳಿಗೆ ಸಕಾಲದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು. ಯಾವುದೇ ವಿಳಂಬ ಮಾಡದೇ ರೈತರಿಗೆ ಅನುಕೂಲ ಒದಗಿಸಿಕೊಡುವ ಮೂಲಕ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲೆಯಲ್ಲಿ ರೇಷ್ಮೆ ಉತ್ಪಾದನೆಗೆ ವಿಫುಲ್‌ ಅವಕಾಶಗಳಿದ್ದು, ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ರೈತರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ರೇಷ್ಮೆ ಉತ್ಪಾದನೆಗೆ ಉತ್ತೇಜನ ನೀಡುವಂತೆ ಅವರು ಹೇಳಿದರು.

ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಕ್ರಿಯಾಯೋಜನೆಯಡಿ ಅನುದಾನ ಕಾಯ್ದಿರಿಸಿ ನಗರ ವ್ಯಾಪ್ತಿಯಲ್ಲಿರುವ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಂಥಾಲಯ, ಸ್ಟಡಿ ರೂಂ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸಲು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್‌ ಅವರು ಸೂಚಿಸಿದರು. ಕೃಷಿ ಇಲಾಖೆಯಲ್ಲಿ ರಾಷ್ಟ್ರೀಯ ಆಹಾರ ಸುರಕ್ಷತಾ ಅಭಿಯಾನ, ಸೂಕ್ಷ್ಮ, ಹನಿ ನೀರಾವರಿ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಜಲಾನಯನ ಅಭಿವೃದ್ಧಿ ಘಟಕ, ಕೇಂದ್ರ ವಲಯದ ಅನುದಾನ ವೆಚ್ಚ ಮಾಡಲಾಗಿದೆ. ಬೀಜ ವಿತರಣೆ, ಮಣ್ಣಿನ ಸತ್ವ ಹೆಚ್ಚಿಸುವಿಕೆ, ಸಾವಯವ ಇಂಗಾಲ ಹೆಚ್ಚಿಸುವಿಕೆ, ಕೃಷಿ ಯಾಂತ್ರೀಕರಣ ಇತರೆ ರಾಜ್ಯ ವಲಯ ಯೋಜನೆಯಡಿ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಛಾಯಾಗ್ರಾಹಕರಿಗೆ ಹಂಪಿ ನೆಚ್ಚಿನ ತಾಣ: ಪವರ್‌ ಸ್ಟಾರ್‌ ಪುನೀತ್‌ಗೂ ಇಷ್ಟದ ಸ್ಥಳ

ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳಡಿ ಜುಲೈ-2023ರ ತಿಂಗಳ ಅಂತ್ಯದವರೆಗೆ ಸಾಧಿಸಿದ ಪ್ರಗತಿ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ ಸೌದಾಗರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ, ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ. ಚವ್ಹಾಣ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

click me!