ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಸಹ ಯೋಜನೆಗಳನ್ನು ತಲುಪಿಸುವ ಸಲುವಾಗಿ, ಕಾಡಿನಲ್ಲಿರುವ ಹಾಡಿಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಸ್ಥಿತಿ ಗತಿ ಅರಿಯಲು ಅಲ್ಲೇ ವಾಸ್ತವ್ಯ ಹೂಡಲು ಆರಂಭಿಸಿದ್ದೇನೆ ಎಂದು ಪ. ಪಂಗಡಗಳ ಕಲ್ಯಾಣ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ ಹೇಳಿದರು.
ಎಚ್.ಡಿ.ಕೋಟೆ (ಆ.10): ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಸಹ ಯೋಜನೆಗಳನ್ನು ತಲುಪಿಸುವ ಸಲುವಾಗಿ, ಕಾಡಿನಲ್ಲಿರುವ ಹಾಡಿಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಸ್ಥಿತಿ ಗತಿ ಅರಿಯಲು ಅಲ್ಲೇ ವಾಸ್ತವ್ಯ ಹೂಡಲು ಆರಂಭಿಸಿದ್ದೇನೆ ಎಂದು ಪ. ಪಂಗಡಗಳ ಕಲ್ಯಾಣ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ ಹೇಳಿದರು. ತಾಲೂಕಿನ ಸೊಳ್ಳೇಪುರ ಗ್ರಾಮದಲ್ಲಿರುವ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಪ. ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಆದಿವಾಸಿಗಳಿಗೆ ಆದ ನೋವನ್ನು, ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದೇನೆ, ಇಲ್ಲಿರುವ ಸಮಸ್ಯೆ ಮತ್ತು ನೋವನ್ನು ತೊಡದಾಕುವ ನಿಟ್ಟಿನಲ್ಲಿ ನಾನು ಹೋರಾಟ ಮಾಡುತ್ತೇನೆ, ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಯೇ ಒದಗಿಸುತ್ತೇನೆ. ಮುಂದಿನ ವರ್ಷದೊಳಗಾಗಿ ಈ ಎಲ್ಲ ಸಮಸ್ಯೆಗಳಿಗೆ ಕೊನೆ ಹಾಡಲಾಗುವುದು ಎಂದು ಭರವಸೆ ನೀಡಿದರು. ಆದಿವಾಸಿಗಳು ಪ್ರಾಣಿಗಳೊಂದಿಗೆ ನಿತ್ಯ ಸಂಘರ್ಷವನ್ನು ಎದುರಿಸುತ್ತಿದ್ದಾರೆ. ಅದು ಅವರಿಗೆ ಅಭ್ಯಾಸವಾಗಿದೆ. ಆದರೆ ನೀವು ಸರ್ಕಾರವನ್ನು ಬೇಡಿಕೊಳ್ಳುವ ಅಭ್ಯಾಸವಾಗಬಾರದು, ಆದ್ದರಿಂದ ಸರ್ಕಾರವೇ ನಿಮ್ಮ ಬೆನ್ನಹಿಂದೆ ನಿಂತು ಸಮಸ್ಯೆಯನ್ನು ಬಗೆಹರಿಸಲಿದೆ ಎಂದರು.
ದಳಪತಿಗಳ ತಳಮಳ: ಒಂದು ಕಾಲದ ಆಪ್ತ ಮಿತ್ರರು ಈಗ ಆಜನ್ಮ ಶತ್ರುಗಳು!
ಮುಂದಿನ ದಿನಗಳಲ್ಲಿ ಆಶ್ರಮ ಶಾಲೆಯಲ್ಲಿ ಓದಿದ ಮಕ್ಕಳಿಗೆ ಮೊರಾರ್ಜಿ ಶಾಲೆಗೆ ಅಥವಾ ಏಕಲವ್ಯ ಶಾಲೆಗೆ ಸೇರಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಆದಿವಾಸಿಗಳ ಮನೆ ನಿರ್ಮಾಣಕ್ಕೆ 5 ಲಕ್ಷ ನೀಡುವಂತೆ ಸರ್ಕಾರಕ್ಕೆ ಕೋರುತ್ತೇನೆ ಎಂದು ಆದಿವಾಸಿಗಳಿಗೆ ಭರವಸೆ ನೀಡಿದರು. ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಆದಿವಾಸಿಗಳಿಗೆ ನೀಡುತ್ತಿದ್ದ ಆರು ತಿಂಗಳ ಆಹಾರ ಪಡಿತರವನ್ನು ಒಂದು ವರ್ಷಕ್ಕೆ ನೀಡಲು ತೀರ್ಮಾನಿಸಲಾಗಿದೆ. ಆದಿವಾಸಿಗಳ ಅಭಿವೃದ್ಧಿಗಾಗಿ ಸದನದಲ್ಲಿ ನಾನು ಮಾತನಾಡುತ್ತಿದ್ದೇನೆ, ಆದಿವಾಸಿಗಳ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕೋ ಹೊರತು, ಅವರವರ ಹಿತಾಸಕ್ತಿಗೆ ಜೀವನ ನಡೆಸುವಂತೆ ಕಾಣುತ್ತಿದೆ, ಹೀಗಾದರೆ ಆದಿವಾಸಿಗಳು ಉದ್ಧಾರ ಹೇಗೆ ಸಾಧ್ಯ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕಾಡಿನಿಂದ ನಾಡಿಗೆ ಪುನರ್ವಸತಿ ಕಲ್ಪಿಸಿದ 3,318 ಕುಟುಂಬಗಳಿಗೆ ಹಕ್ಕುಪತ್ರವನ್ನು ನೀಡದಿರುವುದು ತಮಗೆ ಬೇಸರ ಉಂಟಾಗಿದೆ. ನನ್ನ ಅಧಿಕಾರವಧಿಯಲ್ಲಿ ಎಲ್ಲರಿಗೂ ಹಕ್ಕುಪತ್ರ ನೀಡಿಯೇ ನೀಡುತ್ತೇನೆ ಎಂದು ಆದಿವಾಸಿಗಳಿಗೆ ಭರವಸೆ ನೀಡಿದರು. ಗಿರಿಜನ ಆಶ್ರಮ ಶಾಲೆಗಳನ್ನು 12ನೇ ತರಗತಿಯವರಗೆ ಮೇಲ್ದರ್ಜೆಗೇರಿಸಿ ಸಕಲ ಸೌಲಭ್ಯ ನೀಡುವಂತೆ ನಾನು ಸಚಿವರಿಗೆ ಒತ್ತಾಯಿಸಿದ್ದೇನೆ ಎಂದು ತಿಳಿಸಿದರು. ಆದಿವಾಸಿ ಮುಖಂಡ ಕಾಳ ಕಲ್ಕರ್ ಆದಿವಾಸಿಗಳ ಸಮಸ್ಯೆಗಳನ್ನು ಬಿಚ್ಚಿಡುತ್ತಾ ಮಾತನಾಡಿ, ತಾಲೂಕಿನಲ್ಲಿ ಗಿರಿಜನ ಆಶ್ರಮಶಾಲೆಯನ್ನು ಹೆಸರಿಗಷ್ಟೇ ತೆರೆಯಲಾಗಿದೆ. ಈ ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲ, ಕಾಯಂ ವಾರ್ಡನ್‌ಗಳಿಲ್ಲ, ಗುಣಮಟ್ಟದ ಶಿಕ್ಷಣ ಇಲ್ಲದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಹಿನ್ನೆಲೆ ಈ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ಕಾಯ್ದೆ ರದ್ದು: ಬಿಜೆಪಿ ಕಾರ್ಯಕರ್ತರಿಂದ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ
ಪುನರ್ವಸತಿ ನೆಪವೊಡ್ಡಿ 3,318 ಕುಟುಂಬಗಳನ್ನು ಮೂಲ ಸೌಕರ್ಯವನ್ನು ನೀಡದೇ ಕಾಡಿನಿಂದ ಹೊರಹಾಕಿದ್ದು, ಉತ್ತಮ ಸೌಕರ್ಯವಿಲ್ಲದೇ ಪರದಾಡುವ ಸ್ಥಿತಿ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಸಹ ಒತ್ತಾಯಿಸಿದರು. ಜಿಲ್ಲಾ ಸಮನ್ವಯಾಧಿಕಾರಿ ಮುನಿ ರಾಜೇಂದ್ರ, ಪ. ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಕಲ್ಲೇಶ್, ವಾಲ್ಮೀಕಿ ನಿಗಮದ ಪದ್ಮನಾಭ, ಜಂಟಿ ನಿರ್ದೇಶಕ ರಾಜಕುಮಾರ್, ನಾಗರಹೊಳೆ ಅಭಯಾರಣ್ಯದ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸ್ಸಿ, ಎಸ್ಟಿಅಭಿವೃದ್ದಿ ಇಲಾಖೆಯ ಸುರೇಶ್, ತಾಲೂಕು ತಹಸೀಲ್ದಾರ್ ಸಣ್ಣರಾಮಪ್ಪ, ಚಕ್ಕೋಡನಹಳ್ಳಿ ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷ ರಾಜೇಗೌಡ, ಬೇಗೂರು ಗ್ರಾಪಂ ಅಧ್ಯಕ್ಷ ಶೈಲೇಂದ್ರ, ಮೈಮುಲ್ ನಿರ್ದೇಶಕ ಈರೇಗೌಡ, ಪರಶಿವಮೂರ್ತಿ, ಎಚ್.ಸಿ. ನರಸಿಂಹಮೂರ್ತಿ, ವಿಜಯಕುಮಾರ್, ಇಓ ಧರಣೇಶ, ವೆಂಕಟೇಶ್ ಪ್ರಸಾದ್ ಇದ್ದರು.