ಜೆಡಿಎಸ್‌ನಿಂದ ಮಂಡ್ಯ ಜಿಲ್ಲೆ ಕೈಜಾರಿಹೋಗುತ್ತಿರುವ ಬಗ್ಗೆ ದಳಪತಿಗಳಲ್ಲಿ ತಳಮಳ ಶುರುವಾಗಿದೆ. ಸೋಲಿನಿಂದ ಜಿಲ್ಲೆಯ ಜೆಡಿಎಸ್ ಮಾಜಿ ಶಾಸಕರು ಕಂಗೆಟ್ಟಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ನೊಳಗೆ ಬಲವಾಗಿ ಬೇರೂರಿರುವ ಸಚಿವ ಎನ್.ಚಲುವರಾಯಸ್ವಾಮಿ ನಾಯಕತ್ವ ದಳಪತಿಗಳ ನಿದ್ದೆಗೆಡಿಸುವಂತೆ ಮಾಡಿದೆ.
ಮಂಡ್ಯ ಮಂಜುನಾಥ
ಮಂಡ್ಯ (ಆ.10): ಜೆಡಿಎಸ್‌ನಿಂದ ಮಂಡ್ಯ ಜಿಲ್ಲೆ ಕೈಜಾರಿಹೋಗುತ್ತಿರುವ ಬಗ್ಗೆ ದಳಪತಿಗಳಲ್ಲಿ ತಳಮಳ ಶುರುವಾಗಿದೆ. ಸೋಲಿನಿಂದ ಜಿಲ್ಲೆಯ ಜೆಡಿಎಸ್ ಮಾಜಿ ಶಾಸಕರು ಕಂಗೆಟ್ಟಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ನೊಳಗೆ ಬಲವಾಗಿ ಬೇರೂರಿರುವ ಸಚಿವ ಎನ್.ಚಲುವರಾಯಸ್ವಾಮಿ ನಾಯಕತ್ವ ದಳಪತಿಗಳ ನಿದ್ದೆಗೆಡಿಸುವಂತೆ ಮಾಡಿದೆ. ಭವಿಷ್ಯದ ರಾಜಕೀಯದಲ್ಲಿ ಮುಂದೇನು ಎಂಬ ಆತಂಕ ದಳ ಪಾಳಯದಲ್ಲಿ ಮನೆಮಾಡಿದೆ. ವರ್ಗಾವಣೆ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಚಾಲಕ ಜಗದೀಶ್ ಆತ್ಮಹತ್ಮೆ ಯತ್ನ, ಕೃಷಿ ಅಧಿಕಾರಿಗಳಿಗೆ ಹಣದ ಬೇಡಿಕೆ ಇಟ್ಟಿರುವ ಪ್ರಕರಣಗಳಲ್ಲಿ ಸಚಿವ ಚಲುವರಾಯಸ್ವಾಮಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸುವಲ್ಲಿ ಜೆಡಿಎಸ್ ವಿಫಲವಾಗಿದೆ. ಎರಡೂ ಅಸ್ತ್ರಗಳು ಜೆಡಿಎಸ್‌ನವರಿಗೆ ತಿರುಗುಬಾಣವಾಗಿ ಮುಜುಗರ ಉಂಟುಮಾಡಿವೆ.
2018ರ ಚುನಾವಣೆಯ ಸೋಲಿನ ನಂತರ ಕಾಂಗ್ರೆಸ್ ಪಕ್ಷದೊಳಗೆ ಬಹಳ ಬೇಗ ರಾಜಕೀಯ ಪ್ರವರ್ಧಮಾನಕ್ಕೆ ಬಂದವರು ಚಲುವರಾಯಸ್ವಾಮಿ. ಆ ಚುನಾವಣೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಗೆದ್ದು ಬೀಗಿದ್ದ ಜೆಡಿಎಸ್, 2023ರ ಚುನಾವಣೆಯವರೆಗೆ ಒಂದೇ ಒಂದು ಚುನಾವಣೆಯಲ್ಲೂ ಗೆಲ್ಲದಂತೆ ಜೆಡಿಎಸ್ ಹೆಡೆಮುರಿ ಕಟ್ಟಿದ್ದರು. ಸೋಲಿನ ನಡುವೆಯೂ ಚಲುವರಾಯಸ್ವಾಮಿ ಕಾಂಗ್ರೆಸ್‌ಗೆ ದೊಡ್ಡ ಶಕ್ತಿಯಾಗಿ ನಿಂತು ದಳವನ್ನು ಧೂಳೀಪಟ ಮಾಡಿದರು. ಮಂಡ್ಯ ಜಿಲ್ಲೆಯೊಳಗೆ ಚಲುವರಾಯಸ್ವಾಮಿ ಅವರ ರಾಜಕೀಯ ಬೆಳವಣಿಗೆ ಜೆಡಿಎಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ.
ಶ್ರೀಸಾಮಾನ್ಯರ ಅಭ್ಯುದಯ ಕಾಂಗ್ರೆಸ್ಸಿಂದ ಮಾತ್ರ: ಸಚಿವ ಕೆ.ಎನ್.ರಾಜಣ್ಣ
ದಳಪತಿಗಳಿಗೆ ಆಘಾತ: ಜಿಲ್ಲೆಯೊಳಗೆ ಗೆದ್ದಿರುವ ರೈತಸಂಘ ಸೇರಿದಂತೆ 6 ಮಂದಿ ಶಾಸಕರು ಚಲುವರಾಯಸ್ವಾಮಿ ನಾಯಕತ್ವವನ್ನು ಒಪ್ಪಿಕೊಂಡು ಮುನ್ನಡೆಯುತ್ತಿದ್ದಾರೆ. ಕೆಲವರಲ್ಲಿ ಭಿನ್ನಮತವಿದ್ದರೂ ಬಹಿರಂಗವಾಗಿ ತೋರ್ಪಡಿಸಿಕೊಳ್ಳದೆ ಮುಂದುವರೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವಾಸಕ್ಕೆ ಪಾತ್ರರಾಗಿರುವ ಎನ್.ಚಲುವರಾಯಸ್ವಾಮಿ ಅವರು ಪ್ರಭಾವಿ ರಾಜಕೀಯ ನಾಯಕರಾಗಿ ಬೆಳವಣಿಗೆ ಸಾಧಿಸಿರುವುದು ದಳಪತಿಗಳಿಗೆ ಆಘಾತವನ್ನು ಉಂಟುಮಾಡಿದೆ.
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಬೆಳವಣಿಗೆಗೆ ಮಗ್ಗಲು ಮುಳ್ಳಂತಿರುವ ಚಲುವರಾಯಸ್ವಾಮಿ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವುದಕ್ಕೆ ಪ್ರಬಲವಾದ ಅಸ್ತ್ರಗಳೇ ಸಿಗದೆ ದಳ ನಾಯಕರು ಪರಿತಪಿಸುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್ ಸೋಲು, 2023ರ ವಿಧಾನಸಭಾ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ದಳ ನೆಲಕಚ್ಚುವಂತೆ ಮಾಡಿರುವ ಚಲುವರಾಯಸ್ವಾಮಿ ವಿರುದ್ಧ ಸೇಡು ತೀರಿಸಿಕೊಳ್ಳಲು ಕುಮಾರಸ್ವಾಮಿ ಅವರು ಹಪಹಪಿಸುತ್ತಿದ್ದಾರೆ. ಆದರೆ, ಅವಕಾಶಗಳು ಮಾತ್ರ ಸಿಗದೆ ಹತಾಶರಾಗುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
ಮೌನಕ್ಕೆ ಶರಣಾದ ಮಾಜಿ ಶಾಸಕರು: 2023ರ ಚುನಾವಣಾ ಸೋಲಿನಿಂದ ತೀವ್ರ ನಿರಾಶರಾಗಿರುವ ಜೆಡಿಎಸ್‌ನ ಮಾಜಿ ಶಾಸಕರು ಸಾರ್ವಜನಿಕವಾಗಿ ಹೊರಗೆ ಬರುವ ಧೈರ್ಯವನ್ನೇ ಮಾಡದೆ ಮೌನಕ್ಕೆ ಶರಣಾಗಿದ್ದಾರೆ. ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಚಲುವರಾಯಸ್ವಾಮಿ ವಿರುದ್ಧ ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್‌ಗೌಡ, ಡಾ.ಕೆ.ಅನ್ನದಾನಿ ಪ್ರಬಲವಾಗಿ ಧ್ವನಿ ಎತ್ತಿದರು. ಆದರೆ, ಕಾಂಗ್ರೆಸ್ಸಿಗರು ಆ್ಯಂಬುಲೆನ್ಸ್ ತಡೆದ ವಿಡಿಯೋ ಬಿಡುಗಡೆಯಾಗಿ ಸುರೇಶ್‌ಗೌಡರೇ ತಪ್ಪಿತಸ್ಥರೆಂಬ ಭಾವನೆ ಮೂಡಿಸುತ್ತಿದ್ದಂತೆ ಮಾಜಿ ಶಾಸಕರ ಧ್ವನಿ ಕ್ಷೀಣಿಸಿತು.
ಪಾದರಸದಂತೆ ಜೆಡಿಎಸ್‌ನೊಳಗೆ ಓಡಾಡುತ್ತಿದ್ದ ಮೇಲುಕೋಟೆ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಚುನಾವಣಾ ಸೋಲಿನ ನಂತರ ಹೊರಗೆ ಬರುತ್ತಲೇ ಇಲ್ಲ. ಯಾವುದೇ ಪ್ರಕರಣ ಸಂಬಂಧ ತುಟಿಬಿಚ್ಚಿ ಮಾತನಾಡುವ ಧೈರ್ಯವನ್ನೇ ತೋರುತ್ತಿಲ್ಲ. ರಾಜಕೀಯವಾಗಿ ಆರ್ಭಟಿಸುತ್ತಿದ್ದ ಅವರು ಈಗ ಅಜ್ಞಾತರಾಗಿದ್ದಾರೆ. ಜೆಡಿಎಸ್ ಪಕ್ಷದೊಳಗೆ ಏಕಾಂಗಿ ಶಾಸಕರಾಗಿರುವ ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ.
ದೊಡ್ಡ ಸವಾಲು: ಹಿಂದೊಮ್ಮೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಪ್ತಮಿತ್ರನಂತಿದ್ದ ಎನ್.ಚಲುವರಾಯಸ್ವಾಮಿ ಈಗ ಆಜನ್ಮ ಶತ್ರುವಾಗಿದ್ದಾರೆ. ಸದನದೊಳಗೆ ಜೊತೆ ಜೊತೆಯಾಗಿ ಇದ್ದವರು ಈಗ ಪರಸ್ಪರ ಎದುರಾಳಿಗಳಾಗಿ ಕಾದಾಟ ನಡೆಸುತ್ತಿದ್ದಾರೆ. ಜಿಲ್ಲೆಯೊಳಗೆ ಜೆಡಿಎಸ್‌ಗೆ ವಿರುದ್ಧವಾಗಿ ರಾಜಕೀಯ ತಂತ್ರಗಾರಿಕೆ ರೂಪಿಸುವಲ್ಲಿ ನಿಪುಣರಾಗಿರುವುದು ಜೆಡಿಎಸ್‌ನವರಿಗೆ ಸಹಿಸಲಾಗುತ್ತಿಲ್ಲ. ಅವರೆಲ್ಲಾ ತಂತ್ರಗಳು ವಿಫಲಗೊಳ್ಳುವಂತೆ ಮಾಡುವಲ್ಲಿ ಚಲುವರಾಯಸ್ವಾಮಿ ಪ್ರತಿ ಹಂತದಲ್ಲೂ ಯಶಸ್ವಿಯಾಗುತ್ತಿದ್ದಾರೆ. ದಿನೇ ದಿನೇ ರಾಜಕೀಯವಾಗಿ ಗಟ್ಟಿಯಾಗುತ್ತಿರುವ ಅವರನ್ನು ಕಟ್ಟಿಹಾಕುವುದು ದಳಪತಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕೃಷಿ ಕಾಯ್ದೆ ರದ್ದು: ಬಿಜೆಪಿ ಕಾರ್ಯಕರ್ತರಿಂದ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ
ಮಂಡ್ಯ ಜಿಲ್ಲೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಶಕ್ತಿ ಕೊಟ್ಟಿರುವ ಜಿಲ್ಲೆಯಾಗಿದೆ. ಈ ಜಿಲ್ಲೆಯನ್ನು ರಾಜಕೀಯವಾಗಿ ತಮ್ಮ ಒಂದು ಕಣ್ಣೆಂದೇ ಭಾವಿಸಿದ್ದಾರೆ. ಜೆಡಿಎಸ್ ಹಿಡಿತದಿಂದ ಮಂಡ್ಯ ಜಿಲ್ಲೆ ಯಾವುದೇ ಕಾರಣಕ್ಕೂ ಕೈತಪ್ಪಿಹೋಗಬಾರದು ಎನ್ನುವುದು ಅವರ ಮುಖ್ಯ ಗುರಿಯಾಗಿದೆ. ಆದರೆ, ಚಲುವರಾಯಸ್ವಾಮಿ ಅವರು ಜಿಲ್ಲೆಯೊಳಗೆ ಜೆಡಿಎಸ್‌ನ್ನು ಬೇರುಸಹಿತ ಕಿತ್ತು ಹಾಕಲು ಪಣ ತೊಟ್ಟಿದ್ದಾರೆ. ಈ ಸಮರದಲ್ಲಿ ಗೆಲ್ಲೋರು ಯಾರು ಕಾದುನೋಡಬೇಕಿದೆ.