ಇನ್ನು ಮುಂದೆ ನಮ್ಮ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕೆಲಸ ಮಾಡಬೇಕು. ಪರ್ಸೆಂಟೇಜ್, ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಬೇಕು. ಸಮಸ್ಯೆಗೆ ಪರಿಹಾರ ಕಲ್ಪಿಸುವ ಜನಸ್ನೇಹಿ ಆಡಳಿತ ನೀಡಿ, ಸಾಧ್ಯವಾಗದಿದ್ದರೆ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂದು ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.
ರಾಮನಗರ (ಜೂ.18): ಇನ್ನು ಮುಂದೆ ನಮ್ಮ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕೆಲಸ ಮಾಡಬೇಕು. ಪರ್ಸೆಂಟೇಜ್, ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಬೇಕು. ಸಮಸ್ಯೆಗೆ ಪರಿಹಾರ ಕಲ್ಪಿಸುವ ಜನಸ್ನೇಹಿ ಆಡಳಿತ ನೀಡಿ, ಸಾಧ್ಯವಾಗದಿದ್ದರೆ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂದು ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ನಿಮ್ಮ ಆಡಳಿತ ಪಾರದರ್ಶಕವಾಗಿ ಇರಬೇಕು. ಇಂದಿನಿಂದಲೇ ನಿಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳಬೇಕು. ಯಾವ ಅಧಿಕಾರಿಗೆ ಕೆಲಸ ಮಾಡಲು ಇಷ್ಟವಿದಿಯೋ ಇರಬಹುದು. ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ನಿಮಗೆ ಬೇಕಾದ ಕಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು. ನಿಮಗೆ ಅನುಕೂಲ ಇರುವ ಕಡೆಗೆ ಹೋಗುವುದಾದರೆ ಹೋಗಿ ನಮ್ಮದೇನು ಅಭ್ಯಂತರ ಇಲ್ಲ. ನಿಮ್ಮ ತಲೆಯಲ್ಲಿ ವರ್ಗಾವಣೆ ಆಲೋಚನೆ ಬಂದಿದ್ದರೆ ನಾನೇನು ಮಾಡಲು ಆಗಲ್ಲ. ನಿಮ್ಮನ್ನು ವರ್ಗಾವಣೆ ಮಾಡುವುದು ಸುಲಭ. ಆ ರೀತಿ ವರ್ಗಾವಣೆ ಮಾಡಿಸುವ ವ್ಯಕ್ತಿ ನಾನಲ್ಲ. ನೀವಾಗಿ ನೀವು ಹೋಗುವುದಾದರೆ ಹೋಗಬಹುದು ಎಂದು ಹೇಳಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಯೇ ಪ್ರತಿಷ್ಠಾನದ ಗುರಿ: ಮಕ್ಕಳ ಕಲಿಕೆಗೆ ಅಗತ್ಯ ಸಲಕರಣೆಗಳ ವಿತರಣೆ
ಜನರ ಭಾವನೆಗಳಿಗೆ ವಿರುದ್ಧ ನಡೆಯಬೇಡಿ: ಸರ್ಕಾರಿ ಅಧಿಕಾರಿಗಳು ರೈತರು ಮತ್ತು ಜನಸಾಮಾನ್ಯರ ಕಷ್ಟಸುಖಗಳನ್ನು ಆಲಿಸುವುದರ ಜೊತೆಗೆ ಅದಕ್ಕೆ ಪರಿಹಾರ ಸೂಚಿಸಬೇಕು. ಇನ್ನು ಮುಂದೆ ನಿಮ್ಮ ಪರ್ಸೆಂಟೇಜ್ , ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಬೇಕು. ಜನರ ಭಾವನೆಗಳು ಹಿಂದಿನ ಸರ್ಕಾರದ ಆಡಳಿತದ ವಿರುದ್ಧ ಇತ್ತು. ಭ್ರಷ್ಟಾಚಾರ ಎಂಬುದು ಸಾಕೆನ್ನುವಷ್ಟರ ಮಟ್ಟಿಗೆ ತಲುಪಿತ್ತು. ಹೀಗಾಗಿ ಬದಲಾವಣೆ ಬಯಸಿ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ ಎಂದು ತಾಕೀತು ಮಾಡಿದರು.
ಕೆಲಸ ಮಾಡದೆ ಕಾಲಹರಣ ಮಾಡಿದರೆ, ಭ್ರಷ್ಟಾಚಾರದಲ್ಲಿ ತೊಡಗಿದರೆ ಯಾರ ಮೇಲೂ ಮರ್ಜಿ ತೋರದೆ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ನಿಮ್ಮ ಆಡಳಿತ ಪಾರದರ್ಶಕವಾಗಿ ಇರಬೇಕು. ಇಂದಿನಿಂದಲೇ ನಿಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳಬೇಕು. ಎಲ್ಲರು ಬದಲಾವಣೆಯ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡಬೇಕು ಎಂದರು.
ನಿಮ್ಮಿಂದ ಟೀ ಬಿಸ್ಕೆಟ್ ಬಯಸಲ್ಲ: ಸರ್ಕಾರದ ಯೋಜನೆಗಳ ಅನುಷ್ಠಾನ ಹಾಗೂ ಅಭಿವೃದ್ಧಿ ವಿಚಾರದಲ್ಲಿ ರಾಮನಗರ ಜಿಲ್ಲೆ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿ ಇರಬೇಕು. ನಿಮ್ಮಿಂದ ಆ ರೀತಿ ಉತ್ತಮ ಜನಸ್ನೇಹಿ ಆಡಳಿತ ಮಾತ್ರ ನಿರೀಕ್ಷೆ ಮಾಡುತ್ತೇವೆಯೇ ಹೊರತು ನಯಾ ಪೈಸೆ, ಟೀ ಬಿಸ್ಕೆಟ್ ಬಯಸಲ್ಲ. ಅಭಿವೃದ್ಧಿ ವಿಚಾರವಾಗಿ ನಿಮಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ನೀವುಗಳು ಆಡಳಿತ ಸುಧಾರಣೆ ಮತ್ತು ಅಭಿವೃದ್ಧಿ ವಿಚಾರವಾಗಿ ಏನಾದರು ಸಲಹೆ ಸೂಚನೆಗಳಿದ್ದರೆ ನೀಡಿ, ಮುಕ್ತವಾಗಿ ಸ್ವೀಕರಿಸುತ್ತೇವೆ ಎಂದು ಹೇಳಿದರು.
ಜಿಲ್ಲಾಮಟ್ಟದ ಅಧಿಕಾರಿಗಳು ಸಹ ತಮ್ಮ ಕಾರ್ಯವೈಖರಿಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ಕಚೇರಿಯಲ್ಲಿ ಕುಳಿತು ದರ್ಬಾರ್ ನಡೆಸುವುದು, ಟೈಮ್ ಪಾಸ್ ಮಾಡುವುದನ್ನು ಬಿಡಬೇಕು. ಐದು ತಾಲೂಕುಗಳಿಗೂ ಭೇಟಿ ನೀಡಿ ಫೀಲ್ಡ್ ವರ್ಕ್ ಮಾಡಬೇಕು. ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ, ಜಿಲ್ಲಾಮಟ್ಟದ ಅಧಿಕಾರಿಗಳ ಕಾರ್ಯವೈಖರಿ ಮೇಲೆ ನಿಗಾ ವಹಿಸಬೇಕು. ಯಾವ ಅಧಿಕಾರಿ ಫೀಲ್ಡ್ ವರ್ಕ್ ಮಾಡುವುದಿಲ್ಲವೋ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.
ಕಚೇರಿಗೆ ಬರುವ ಅರ್ಜಿಗಳನ್ನು ನ್ಯಾಯಯುತವಾಗಿ ವಿಲೇವಾರಿ ಮಾಡಬೇಕು. ಸಮಸ್ಯೆಯನ್ನು ಮುಂದೂಡದೆ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಿನಾ ಕಾರಣ ಜನರಿಗೆ ತೊಂದರೆ ನೀಡಿದರೆ ಆಡಳಿತ ಕುಸಿದು ಪ್ರಗತಿ ಕಾಣುವುದಿಲ್ಲ. ಸಮಸ್ಯೆಗೆ ಪರಿಹಾರ ನೀಡುವಂತಹ ಜನಸ್ನೇಹಿ ಆಡಳಿತ ನೀಡಬೇಕು ಎಂದು ಸುರೇಶ್ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು. ಸಭೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಜಿಲ್ಲಾಧಿಕಾರಿ ಅವಿನಾಶ್, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಇತರರಿದ್ದರು.
ಬೇಡಿಕೆ ಕಳೆದುಕೊಂಡ ಶಿಕ್ಷಣ ಹಕ್ಕು ಕಾಯಿದೆ: ಬದಲಾದ ನಿಯಮದಿಂದಾಗಿ ಸೀಟು ಕೇಳುವವರೇ ಇಲ್ಲ!
48 ಗಂಟೆಯೊಳಗೆ ವರದಿ ಸಲ್ಲಿಸಿ - ಶಿಸ್ತು ಕ್ರಮ ಜರುಗಿಸಿ: ಹಿಂದಿನ ಮತ್ತು ಈಗಿನ ದಿಶಾ ಸಭೆಯಲ್ಲಿ ಯಾವ ಇಲಾಖೆ ಅಧಿಕಾರಿಗಳು ಗೈರಾಗಿದ್ದರೊ ಅವರಿಗೆಲ್ಲ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕು. ಮುಂದಿನ 48 ಗಂಟೆಯೊಳಗೆ ನನಗೆ ವರದಿ ಸಲ್ಲಿಸಬೇಕು ಎಂದು ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಅವರಿಗೆ ಸಂಸದ ಡಿ.ಕೆ.ಸುರೇಶ್ ಸೂಚನೆ ನೀಡಿದರು. ಚನ್ನಪಟ್ಟಣ ತಾಲೂಕು ಮೈಲನಾಯಕನಹಳ್ಳಿ ಗ್ರಾಪಂ ಕಚೇರಿಯಲ್ಲಿ ರೈತನೊಬ್ಬ ಕುರಿ ಕೂಡಿ ಹಾಕಿ ಪ್ರತಿಭಟನೆ ನಡೆಸಿದ ವಿಷಯ ಪ್ರಸ್ತಾಪಿಸಿದ ಸಂಸದರು, ಯಾವ ಕಾರಣದಿಂದಾಗಿ ವರ್ಷವಾದರು ಕೊಟ್ಟಿಗೆ ಹಣ ಬಿಡುಗಡೆ ಮಾಡಿಲ್ಲವೆಂದು ಪ್ರಶ್ನಿಸಿದರು. ಇಒ ಶಿವಕುಮಾರ್ ಆಧಾರ್‌ಲಿಂಕ್ ಸಮಸ್ಯೆ ಕಾರಣವೆಂದು ಹೇಳಿ ಸಮಜಾಯಿಷಿ ನೀಡಿದರು. ಇದನ್ನು ಒಪ್ಪದ ಸಂಸದರು ವರದಿ ಪಡೆದು ಪಿಡಿಒ ಸೇರಿದಂತೆ ಗ್ರಾಪಂ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಜಿಪಂ ಸಿಇಒಗೆ ಸೂಚಿಸಿದರು.