ಕಾಂಗ್ರೆಸ್ ಮತ್ತು ಬಿಜೆಪಿಗೆ ಅವಕಾಶ ನೀಡಿದ್ದೀರಿ. ಪೂರ್ಣ ಬಹುಮತದೊಂದಿಗೆ ಈ ಬಾರಿ ನನಗೆ ಒಂದು ಅವಧಿಗೆ ಅವಕಾಶ ಕೊಡಿ. ಜನಪರವಾಗಿ ಹೇಗೆ ಕೆಲಸ ಮಾಡಬಹುದು ಎಂಬುದನ್ನು ಮಾಡಿ ತೋರಿಸುತ್ತೇನೆ.
ತೀರ್ಥಹಳ್ಳಿ (ಫೆ.25) : ಕಾಂಗ್ರೆಸ್ ಮತ್ತು ಬಿಜೆಪಿಗೆ ಅವಕಾಶ ನೀಡಿದ್ದೀರಿ. ಪೂರ್ಣ ಬಹುಮತದೊಂದಿಗೆ ಈ ಬಾರಿ ನನಗೆ ಒಂದು ಅವಧಿಗೆ ಅವಕಾಶ ಕೊಡಿ. ಜನಪರವಾಗಿ ಹೇಗೆ ಕೆಲಸ ಮಾಡಬಹುದು ಎಂಬುದನ್ನು ಮಾಡಿ ತೋರಿಸುತ್ತೇನೆ. ಬೇರೆ ಪಕ್ಷದ ಜೊತೆ ಸೇರಿ 10, 20 ತಿಂಗಳು ಸಿಗುವ ಅಧಿಕಾರದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ವಿಧಾನಸಭಾ ಕ್ಷೇತ್ರ(Assembly Constituency)ದಲ್ಲಿ ಕಳೆದೆರಡು ದಿನಗಳಿಂದ ನಡೆದ ಪಂಚರತ್ನಯಾತ್ರೆ(Pancharatna rathayatre) ಅಂಗವಾಗಿ ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿ, ಈ ಮೊದಲು ಎರಡು ಬಾರಿ ಸಿಎಂ ಆಗಿರೋದು ಕೂಡ ಜನರ ಬೆಂಬಲದಿಂದ ಅಲ್ಲ. ದೇವರ ದಯೆಯಿಂದ. ಹೀಗಾಗಿ ಈ ಬಾರಿಯಾದರೂ ಪೂರ್ಣ ಬಹುಮತ ನೀಡಿ. ಸ್ಪಷ್ಟಬಹುಮತವಿಲ್ಲದ ಸರ್ಕಾರದಲ್ಲಿ ಅಧಿಕಾರಿಗಳು ಕೂಡ ನಮ್ಮ ಮಾತು ಕೇಳೋದಿಲ್ಲ ಎಂದರು.
Karnataka Election 2023: ಅಮಿತ್ ಶಾ ಭಾಷಣ 8ನೇ ಅದ್ಭುತ: ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯ
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಆಶ¿åದಂತೆ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ, 40 ಲಕ್ಷವರೆಗೆ ಉಚಿತ ಆರೋಗ್ಯ ಚಿಕಿತ್ಸೆ, ಯುವಕರ ಉದ್ಯೋಗಕ್ಕೆ ಶೇ.75 ಸಬ್ಸಿಡಿ ಸಾಲ, ಸೂರಿಲ್ಲದವರಿಗೆ ಉಚಿತ ಮನೆ, 65 ವರ್ಷ ದಾಟಿದವರಿಗೆ ಮಾಸಿಕ .5 ಸಾವಿರ ಹಾಗೂ .2500 ವಿಧವಾವೇತನ ನೀಡುವುದಲ್ಲದೇ ಕೇವಲ ಮೂರು ತಿಂಗಳಲ್ಲಿ ರೈತರ ಬಗರ್‌ಹುಕುಂ ಮತ್ತು ಮುಳುಗಡೆ ಸಂತ್ರಸ್ಥರ ಸಮಸ್ಯೆಯನ್ನೂ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.
ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಂ(Yadooru rajaram) ಮಾತನಾಡಿ, ನಾನು ಈ ಪಕ್ಷಕ್ಕಾಗಿ ಕೆಲಸ ಮಾಡಲು ಬಂದವನು. ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಈಗಾಗಲೇ 40 ವರ್ಷ ರಾಜಕೀಯ ಮಾಡಿದವರು. ಕಿರಿಯವನಾದ ನನಗೊಂದು ಅವಕಾಶ ಕೊಡಿ. ಈ ಕ್ಷೇತ್ರದ ಅಭ್ಯರ್ಥಿ ಕುಮಾರಣ್ಣ ಎಂದೇ ನೀವುಗಳು ಮತ ನೀಡಬೇಕು. ವಿಶಾಲವಾದ ವಿಧಾನಸಭಾಕ್ಷೇತ್ರ ಆಗಿದ್ದು, ಕಷ್ಟಪಟ್ಟು ಪಕ್ಷದ ಸಂಘಟನೆ ಮಾಡುತ್ತಿದ್ದೇನೆ ಎಂದರು.
ಸಭಾ ಕಾರ್ಯಕ್ರಮಕ್ಕೆ ಹೋಗುವ ಮುನ್ನ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಪಂಚರತ್ನ ಯಾತ್ರೆ ಆರಂಭ ಆಗುತ್ತಿದ್ದಂತೆ ಬಿಜೆಪಿಯವರಿಗೆ ಭಯ ಶುರುವಾಗಿದೆ. ಆ ಪಕ್ಷದ ಗ್ರಾಫ್ ಕೂಡ ಇಳಿಮುಖ ಆಗುತ್ತಿದೆ. ಅದರ ಸ್ಥಿತಿ ಏನಾಗುತ್ತದೆ ಎಂಬುದೂ ನಮಗೆ ತಿಳಿದಿದೆ. ರಾಜ್ಯಾದ್ಯಂತ ನಮ್ಮ ಶಕ್ತಿ ಅಗೋಚರವಾಗಿ ಹರಿಯುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಮಾಡ್ತಾರೆ ಎಂದು ಆರೋಪಿಸುವ ಮೊದಲು, ಬಿಜೆಪಿಯು ರಾಜ್ಯವನ್ನು ಯಾವ ಸ್ಥಿತಿಗೆ ತಂದು ನಿಲ್ಲಿಸಿದೆ ಎಂಬದನ್ನು ಯೋಚಿಸಬೇಕಿದೆ ಎಂದರು.
ಎಲ್ಲರೂ ರಾಜಕೀಯಕ್ಕಿಳಿದರೆ ಸಂಸಾರ ನಡೆಸುವವರು ಯಾರು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತಿಗೆ ಉತ್ತರಿಸಿ, ಈ ಬಗ್ಗೆ ಅವರ ಪಕ್ಕದಲ್ಲೇ ಇದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಕೇಳಿದ್ದರೆ ಅವರೇ ಹೇಳುತ್ತಿದ್ದರು. ಎಚ್.ಡಿ.ದೇವೇಗೌಡರ ಕುಟುಂಬ ಬಗ್ಗೆ ಮಾತನಾಡುವ ಮುನ್ನ ಯೋಚಿಸಬೇಕು. ದೇವೇಗೌಡರ ಕುಟುಂಬ ಇಡೀ ರಾಜ್ಯವನ್ನು ನಮ್ಮ ಸಂಸಾರ ಎಂದು ತಿಳಿದಿರುವ ಕುಟುಂಬ ಎಂದೂ ಟಾಂಗ್ ನೀಡಿದರು.
ಎಂಎಲ್‌ಸಿ ಭೋಜೇಗೌಡ, ಪಕ್ಷದ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ತಾಲೂಕು ಅಧ್ಯಕ್ಷ ಕುಣಜೆ ಕಿರಣ್, ಕಡಿದಾಳು ಗೋಪಾಲ್, ಚಾಬೂ ಸಾಬ್, ಕೆ.ಟಿ.ನಟರಾಜ್, ರಾಮಕೃಷ್ಣ, ಶೈಲಜಾ ನಾಗರಾಜ್, ತಲುಬಿ ರಾಘವೇಂದ್ರ, ವರ್ತೇಶ್ ಮುಂತಾದವರು ವೇದಿಕೆಯಲ್ಲಿದ್ದರು.
ಹುಂಚದಿಂದ ಹೊರಟ ಯಾತ್ರೆ ಕೋಣಂದೂರು, ಆರಗ ಮಾರ್ಗವಾಗಿ ಪಟ್ಟಣದ ನಡೆದ ರೋಡ್ ಶೋ ಮಧ್ಯೆ ಕಾರ್ಯಕರ್ತರು ತಮ್ಮ ನಾಯಕನಿಗೆ ಗಾಂಧಿಚೌಕದಲ್ಲಿ ಕ್ರೇನ್ ಮೂಲಕ ಭಾರಿ ಗಾತ್ರದ ಅಡಕೆ ಹಾರವನ್ನು ಹಾಕಿ ಸಂಭ್ರಮಿಸಿದರು.
BS Yadiyurappa: 40 ವರ್ಷಗಳ ಬಳಿಕ ವಿಧಾನಸೌಧದ ನಂಟು ಕಳಚಿದ ರಾಜಾಹುಲಿ!
ಪಟ್ಟಣದಲ್ಲಿ ನಡೆದ ರೋಡ್ ಶೋ ಮಧ್ಯೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಅಡಕೆ ಧಾರಣೆ ಕುಸಿತಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಮುಖ್ಯ ಕಾರಣ. ಇಲ್ಲಿನ ಅಡಕೆ ಸಂಶೋಧನಾ ಕೇಂದ್ರವನ್ನು ಗೆಸ್ಟ್ ಹೌಸ್ ಮಾಡಿದ್ದಾರೆ. ಸಿದ್ದರಾಮಯ್ಯ ಅರ್ಕಾವತಿ ಬಡಾವಣೆಯನ್ನು ಡಿನೋಟಿಫೈ ಮಾಡಿ 8 ಸಾವಿರ ಕೋಟಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸುವ ಬಿಜೆಪಿಯವರು ಇಷ್ಟರವರೆಗೆ ಮಾಡಿದ್ದೇನು? ಆ ಬಗ್ಗೆ ಯಾಕೆ ತನಿಖೆ ನಡೆಸಿಲ್ಲ ಎಂದು ಪ್ರಶ್ನಿಸಿ, ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡ್ತೀವಿ ಎಂದು ಹೇಳುವ ಬಿಜೆಪಿಯವರು ಸ್ಯಾಂಟ್ರೂ ರವಿಯನ್ನು ಬಂಧಿಸಿ ರಾಜಾತೀತ್ಯ ನೀಡುತ್ತಿದ್ದಾರೆ ಎಂದೂ ಟೀಕಿಸಿದರು.