ಕಾಂಗ್ರೆಸ್‌ 3ನೇ ಗ್ಯಾರಂಟಿ 10 ಕೇಜಿ ಫ್ರೀ ಅಕ್ಕಿ..!

Published : Feb 25, 2023, 04:39 AM IST
ಕಾಂಗ್ರೆಸ್‌ 3ನೇ ಗ್ಯಾರಂಟಿ 10 ಕೇಜಿ ಫ್ರೀ ಅಕ್ಕಿ..!

ಸಾರಾಂಶ

ಪ್ರಸ್ತುತ ಅಕ್ಕಿ ನೀಡಲು 4-5 ಸಾವಿರ ಕೋಟಿ ರು. ಖರ್ಚಾಗುತ್ತಿದ್ದು, ಈಗ 10 ಕೆ.ಜಿ.ಗೆ ಹೆಚ್ಚಿಸಿದರೆ ಹೆಚ್ಚುವರಿಯಾಗಿ 3-4 ಸಾವಿರ ಕೋಟಿ ರು. ಹೆಚ್ಚು ವೆಚ್ಚ ತಗುಲಬಹುದು. ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು, ಹಸಿವಿನಿಂದ ಮಲಗಬಾರದು ಎಂಬುದು ನಮ್ಮ ಉದ್ದೇಶ. ಹೀಗಾಗಿ ಅದನ್ನು ನಮ್ಮ ಸರ್ಕಾರದ ವತಿಯಿಂದಲೇ ಭರಿಸುತ್ತೇವೆ: ಸಿದ್ದರಾಮಯ್ಯ

ಬೆಂಗಳೂರು(ಫೆ.25): ರಾಜ್ಯ ಕಾಂಗ್ರೆಸ್‌ ಪಕ್ಷವು ‘ಗೃಹ ಲಕ್ಷ್ಮೇ’, ‘ಗೃಹ ಜ್ಯೋತಿ’ ಘೋಷಣೆ ಬಳಿಕ ಇದೀಗ ಅನ್ನಭಾಗ್ಯ ಅಕ್ಕಿ ಪ್ರಮಾಣವನ್ನು ಪ್ರತಿ ವ್ಯಕ್ತಿಗೆ ಮಾಸಿಕ 10 ಕೆ.ಜಿ.ಗೆ ಹೆಚ್ಚಳ ಮಾಡುವ ಮೂರನೇ ಗ್ಯಾರಂಟಿ ಯೋಜನೆಯನ್ನು ಅಧಿಕೃತವಾಗಿ ಘೋಷಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಅವರು ಶುಕ್ರವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್‌ನ 3ನೇ ಗ್ಯಾರಂಟಿ ಯೋಜನೆ ಪ್ರಕಟಿಸಿದರು.

‘ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಬದ್ಧತೆಯೊಂದಿಗೆ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಿಸುತ್ತಿದ್ದೇವೆ. ಪ್ರತಿ ಮನೆಯೊಡತಿಗೆ ಮಾಸಿಕ 2 ಸಾವಿರ ರು. ನೀಡುವ ‘ಗೃಹ ಲಕ್ಷ್ಮೇ’ ಯೋಜನೆ, ಬಿಪಿಎಲ್‌ ಕುಟುಂಬಗಳಿಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ‘ಗೃಹ ಜ್ಯೋತಿ’ ಭರವಸೆ ಬಳಿಕ ಇದೀಗ ಅನ್ನಭಾಗ್ಯ ಅಕ್ಕಿ ಹೆಚ್ಚಳದ ಘೋಷಣೆ ಮಾಡಿದ್ದೇವೆ. ಈ ಮೂರು ಗ್ಯಾರಂಟಿ ಯೋಜನೆಗಳ ಕುರಿತು ಪ್ರತಿ ಮನೆಗೂ ಗ್ಯಾರಂಟಿ ಕಾರ್ಡ್‌ಗಳನ್ನೂ ಹಂಚಲಾಗುವುದು ಎಂದು ಹೇಳಿದರು.

KARNATAKA ELECTION 2023: ಅಮಿತ್‌ ಶಾ ಭಾಷಣ 8ನೇ ಅದ್ಭುತ: ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯ

ಯಾರೂ ಹಸಿವಿನಿಂದ ಮಲಗಬಾರದು​-ಸಿದ್ದು:

ಸಿದ್ದರಾಮಯ್ಯ ಮಾತನಾಡಿ, ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದು 3 ರು.ಗೆ ಕೇಜಿ ಅಕ್ಕಿ ನೀಡಲು ನಿರ್ಧರಿಸಿತ್ತು. ಬಳಿಕ 2013ರಲ್ಲಿ ನಾವು ಅಧಿಕಾರಕ್ಕೆ ಬಂದ ಬಳಿಕ 24 ಗಂಟೆಗಳಲ್ಲಿ ‘ಅನ್ನಭಾಗ್ಯ’ ಯೋಜನೆ ಘೋಷಿಸಿದೆವು. ಪ್ರತಿ ಕೆ.ಜಿ.ಗೆ 1 ರು.ಗಳಂತೆ ಪ್ರತಿ ವ್ಯಕ್ತಿಗೆ 5 ಕೆ.ಜಿ.ಯಂತೆ ಕುಟುಂಬಕ್ಕೆ 30 ಕೆ.ಜಿ. ನೀಡಲಾಗುತ್ತಿತ್ತು. ಬಳಿಕ ಅದನ್ನೂ ಉಚಿತ ಮಾಡಿ ಪ್ರತಿ ಸದಸ್ಯರಿಗೆ 7 ಕೆ.ಜಿ.ಗೆ ಹೆಚ್ಚಿಸಲಾಗಿತ್ತು. ಇಂದು ಬಿಜೆಪಿ ಸರ್ಕಾರ ಅದನ್ನು 5 ಕೆ.ಜಿ.ಗೆ ಇಳಿಸಿದ್ದು, ನಾವು ಅಧಿಕಾರಕ್ಕೆ ಬಂದರೆ ಜನ ಅಪೇಕ್ಷೆಯಂತೆ ಒಬ್ಬರಿಗೆ 10 ಕೆ.ಜಿ. ಅಕ್ಕಿ ನೀಡುತ್ತೇವೆ ಎಂದು ಭರವಸೆ ನೀಡಿದರು.

ಪ್ರಸ್ತುತ ಅಕ್ಕಿ ನೀಡಲು 4-5 ಸಾವಿರ ಕೋಟಿ ರು. ಖರ್ಚಾಗುತ್ತಿದ್ದು, ಈಗ 10 ಕೆ.ಜಿ.ಗೆ ಹೆಚ್ಚಿಸಿದರೆ ಹೆಚ್ಚುವರಿಯಾಗಿ 3-4 ಸಾವಿರ ಕೋಟಿ ರು. ಹೆಚ್ಚು ವೆಚ್ಚ ತಗುಲಬಹುದು. ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು, ಹಸಿವಿನಿಂದ ಮಲಗಬಾರದು ಎಂಬುದು ನಮ್ಮ ಉದ್ದೇಶ. ಹೀಗಾಗಿ ಅದನ್ನು ನಮ್ಮ ಸರ್ಕಾರದ ವತಿಯಿಂದಲೇ ಭರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಬೊಮ್ಮಾಯಿ ಸುಳ್ಳುಗಾರ:

ಅನ್ನಭಾಗ್ಯ ಸಿದ್ದರಾಮಯ್ಯ ಕಾರ್ಯಕ್ರಮ ಅಲ್ಲ, ಮೋದಿ ಕಾರ್ಯಕ್ರಮ ಎಂದು ಬಸವರಾಜ ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ. ಇದು ಮೋದಿ ಕಾರ್ಯಕ್ರಮವಾದರೆ ಗುಜರಾತ್‌, ಉತ್ತರ ಪ್ರದೇಶದಲ್ಲಿ ಉಚಿತ ಅಕ್ಕಿ ಯಾಕೆ ನೀಡುತ್ತಿಲ್ಲ? ದೇಶದಲ್ಲಿ ಆಹಾರ ಭದ್ರತಾ ಕಾಯ್ದೆಯನ್ನು ಮೋದಿ ಜಾರಿಗೆ ತಂದರೇ? ಇವರು ಮಹಾನ್‌ ಸುಳ್ಳಗಾರ ಎಂಬ ಕಾರಣಕ್ಕಾಗಿಯೇ ಆರ್‌ಎಸ್‌ಎಸ್‌ ಇವರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಟೀಕಿಸಿದರು.

ಗ್ಯಾರಂಟಿ ಯೋಜನೆ ಜಾರಿಗೆ ಬದ್ಧ- ಡಿಕೆಶಿ:

ಡಿ.ಕೆ. ಶಿವಕುಮಾರ್‌ ಮಾತನಾಡಿ, ಪ್ರಜಾಧ್ವನಿ ಯಾತ್ರೆ ವೇಳೆ ಅನ್ನಭಾಗ್ಯವನ್ನು ಜನ ನೆನೆದು ಕೊಂಡಾಡುತ್ತಿದ್ದಾರೆ. ಕೊರೋನಾ ವೇಳೆ ಅನ್ನಭಾಗ್ಯ ಯೋಜನೆ ಇರದಿದ್ದರೆ ನಮ್ಮ ಬದುಕು ಏನಾಗುತ್ತಿತ್ತು ಎಂದು ಅವರೇ ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅನ್ನಭಾಗ್ಯ ಅಕ್ಕಿಯನ್ನು ಹೆಚ್ಚಿಸಿ 3ನೇ ಗ್ಯಾರಂಟಿ ಯೋಜನೆ ಪ್ರಕಟಿಸಿದ್ದೇವೆ. ಜತೆಗೆ ಮೂರೂ ಗ್ಯಾರಂಟಿ ಯೋಜನೆ ಜಾರಿಗೆ ಬದ್ಧವಾಗಿದ್ದೇವೆ ಎಂದು ಹೇಳಿದರು.

ಇನ್ನು ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್‌ ಹಣ ಎಲ್ಲಿಂದ ತರುತ್ತದೆ ಎಂದು ಬಿಜೆಪಿಯವರು ಪ್ರಶ್ನಿಸುತ್ತಾರೆ. ನೀವು ಅವರ ಪ್ರಣಾಳಿಕೆ ತೆಗೆದು ನೋಡಿ. ರೈತರ 1 ಲಕ್ಷ ರು. ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದ್ದರು. 7 ರಿಂದ 10 ಗಂಟೆ ಉಚಿತ ವಿದ್ಯುತ್‌ ನೀಡುವುದಾಗಿ ಹೇಳಿದ್ದರು. ಅವರು ಅದನ್ನು ಮಾಡಲಿಲ್ಲ. ಬದಲಿಗೆ ರಾಜ್ಯದಲ್ಲಿ ಉತ್ಪಾದನೆಯಾದ ವಿದ್ಯುತ್ತನ್ನು ಬೇರೆ ರಾಜ್ಯಗಳಿಗೆ ಮಾರಿ 4 ಸಾವಿರ ಕೋಟಿ ರು. ಲಾಭ ಮಾಡಿಕೊಂಡರು. ಇಂತಹ ಜನ ವಿರೋಧಿ ಕ್ರಮ ತಡೆದು 200 ಯುನಿಟ್‌ ಉಚಿತ ವಿದ್ಯುತ್‌ ನೀಡುತ್ತೇವೆ ಎಂದರು.

ಮಹಾ ನಿರ್ಗಮನ: ಬಿಎಸ್‌ವೈ ಭಾಷಣಕ್ಕೆ ಪಕ್ಷ ಬೇದವಿಲ್ಲದೇ ಎಲ್ಲರ ಕಣ್ಣಲ್ಲೂ ನೀರು..!

ಕಿವಿಗೆ ಹೂವು ಇಡಲು ಘೋಷಿಸಿದ್ದಾರಾ?:

ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ರು. ನೀಡುತ್ತೇವೆ ಎಂದಿದ್ದೇವೆ. ಇದೀಗ ಬಿಜೆಪಿಯವರು ಬಜೆಟ್‌ನಲ್ಲಿ ಕೃಷಿ ಕಾರ್ಮಿಕ ಮಹಿಳೆಗೆ 500 ರು. ನೀಡುವುದಾಗಿ ಹೇಳಿದ್ದರು. ಅದನ್ನು 1 ಸಾವಿರಕ್ಕೆ ಹೆಚ್ಚಳ ಮಾಡುವುದಾಗಿ ಹೇಳುತ್ತಿದ್ದಾರೆ. ಇದು ಮಾತ್ರ ಹೇಗೆ ಸಾಧ್ಯವಾಗುತ್ತದೆ? ಅನುಷ್ಠಾನ ಮಾಡಲು ಹಣ ಸಿಗುವುದಿಲ್ಲ ಎಂದಾದರೆ ಜನರ ಕಿವಿ ಮೇಲೆ ಹೂವು ಇಡಲು ಘೋಷಣೆ ಮಾಡಿದ್ದಾರಾ? ಎಂದು ತರಾಟೆಗೆ ತೆಗೆದುಕೊಂಡರು.

ಮೊದಲೆರಡು ಗ್ಯಾರಂಟಿ

1. ಗೃಹಲಕ್ಷ್ಮೀ: ಪ್ರತಿ ಮನೆಯೊಡತಿಗೆ ಮಾಸಿಕ 2000 ರು.
2. ಗೃಹಜ್ಯೋತಿ: ಬಿಪಿಎಲ್‌ ಕುಟುಂಬಕ್ಕೆ ಮಾಸಿಕ 200 ಯುನಿಟ್‌ ಉಚಿತ ವಿದ್ಯುತ್‌

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ

ಕಾಂಗ್ರೆಸ್‌ ಪಕ್ಷ ತನ್ನ 3ನೇ ಗ್ಯಾರಂಟಿ ಭರವಸೆಯಾಗಿ ಪ್ರತಿ ಕುಟುಂಬಕ್ಕೆ 10 ಕೇಜಿ ಉಚಿತ ಅಕ್ಕಿ ಘೋಷಿಸಲಿದೆ ಎಂದು ಕನ್ನಡಪ್ರಭ ಜ.19ರಂದೇ ಪ್ರಕಟಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಂಎಸ್ಪಿ ಅಡಿಯಲ್ಲಿ ತೊಗರಿ ಖರೀದಿ ಆರಂಭಿಸಿ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ
ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್