
ಚನ್ನಪಟ್ಟಣ(ಅ.27): ಯೋಗೇಶ್ವರ್ 9 ಬಾರಿ ಚುನಾವಣೆ ಎದುರಿಸಿ ಐದು ಬಾರಿ ಶಾಸಕರಾಗಿದ್ದಾರೆ. ಕುಮಾರಸ್ವಾಮಿ ತಮ್ಮ ಮಗನನ್ನು ಚುನಾವಣೆಯಲ್ಲಿ ನಿಲ್ಲಿಸಲು ತಂತ್ರಗಾರಿಕೆ ಮಾಡಿ ಯೋಗೇಶ್ವರ್ ಅವರನ್ನು ಆಚೆ ಕಳಿಸಿದ್ದಾರೆ. ಅವರನ್ನು ನೀವೇ ಆಚೆ ಹಾಕಿ ಈಗ ಕಾಂಗ್ರೆಸ್ ಮೇಲೆ ದೂಷಣೆ ಮಾಡಬೇಡಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಮಾಜಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಇಲ್ಲದ ಕಾರಣ ಯೋಗೇಶ್ವರ್‌ರನ್ನು ಹೈಜಾಕ್ ಮಾಡಲಾಗಿದೆ ಎಂಬ ಆರೋಪಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದರು. ಷಡ್ಯಂತ್ರ ಮಾಡಿ ಒಟ್ಟಾಗಿ ಸೋಲಿಸುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಷಡ್ಯಂತ್ರ ಮಾಡುತ್ತಿರುವವರು ಬಿಜೆಪಿಯವರು. ಯಡಿಯೂರಪ್ಪ ಅವರ ಮನೆಯಲ್ಲಿ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಹೇಳಲೇ? ಅವರು ಯಡಿಯೂರಪ್ಪ ಅವರ ಮನೆಗೆ ಹೋಗಿದ್ದು ಏಕೆ? ಷಡ್ಯಂತ್ರ ಮಾಡಲು ಅಲ್ಲವೇ? ಇದೆಲ್ಲವೂ ರಾಜಕಾರಣದ ಪ್ರಕ್ರಿಯೆ. ಅವರ ಕೆಲಸ ಅವರು ಮಾಡುತ್ತಾರೆ. ನಮ್ಮ ಕೆಲಸ ನಾವು ಮಾಡುತ್ತೇವೆ. ರಾಜಕಾರಣದಲ್ಲಿ ಮಗನ ಪ್ರವೇಶಕ್ಕಾಗಿ ಪ್ರವಾಸ ಮಾಡಿಸಿ ಈಗ ಚುನಾವಣೆಗೆ ನಿಲ್ಲಿಸಿದ್ದಾರೆ. ನಾವು ನಮ್ಮ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕುಮಾರಸ್ವಾಮಿ ಮಗನ ಆಸ್ತಿ 113.40 ಕೋಟಿ: ತಂದೆ, ತಾಯಿಗೇ ಸಾಲ ಕೊಟ್ಟ ನಿಖಿಲ್!
ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಅಸಮಾಧಾನ ಇದೆಯೇ ಎಂಬ ಪ್ರಶ್ನೆಗೆ, ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಪಕ್ಷದಿಂದ ಯಾರೇ ಅಭ್ಯರ್ಥಿ ಮಾಡಿದರೂ ನಾನೇ ಅಭ್ಯರ್ಥಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈಗಲೂ ನಾವು ಅದನ್ನೇ ಹೇಳುತ್ತಿದ್ದೇವೆ. ಇಲ್ಲಿ ಯೋಗೇಶ್ವರ್ ಅಭ್ಯರ್ಥಿಯಲ್ಲ ಡಿ.ಕೆ. ಶಿವಕುಮಾರ್ ಅಭ್ಯರ್ಥಿ. ಹೀಗಾಗಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.
ನೀವೇ ಸಂಪೂರ್ಣ ಜವಾಬ್ದಾರಿ ತೆಗೆದು ಕೊಂಡಿದ್ದೀರಾ ಎಂಬ ಪ್ರಶ್ನೆಗೆ, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ನಾವೆಲ್ಲರೂ ಚುನಾವಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ಜನರನ್ನು ಕರೆತಂದ ಬಸ್‌ಗಳನ್ನು ಸೀಜ್ ಮಾಡಿ ಎನ್‌ಸಿಆರ್ ಹಾಕಿಸಲಾಗಿದೆ ಎಂಬ ಎಚ್‌ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿ, ಸಾಮಾನ್ಯ ಪರಿಜ್ಞಾನ ಇಲ್ಲದೆ ಕೇಂದ್ರ ಮಂತ್ರಿಯಾಗಿರುವ ಕುಮಾರಸ್ವಾಮಿ ಅವರು ಆರೋಪ ಮಾಡುವುದನ್ನು ಬಿಟ್ಟು ಚುನಾವಣೆ ಮಾಡಲಿ. ಕುಮಾರಸ್ವಾಮಿ ಅನೇಕ ಚುನಾವಣೆಗಳನ್ನು ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಬಗ್ಗೆ ಅವರಿಗೂ ಜ್ಞಾನವಿದೆ. ನೀತಿ ಸಂಹಿತೆ ಸಮಯದಲ್ಲಿ ಯಾರು ಯಾವ ಪಾತ್ರ ವಹಿಸುತ್ತಾರೆ. ಪ್ರಕ್ರಿಯೆ ಹೇಗಿ ಎಂದು ಎಲ್ಲರಿಗೂ ಗೊತ್ತಿದೆ. ನೀತಿ ಸಂಹಿತೆ ಉಲ್ಲಂಘನೆ ಆಗಿದ್ದರೆ ಅದು ಚುನಾವಣಾದಿಕಾರಿಗೆ ಸಂಬಂಧಪಟ್ಟ ವಿಚಾದ ಅದು ನಮಗೆ ಸಂಬಂದಿಸುವುದಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.