ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ: ಸ್ಟಾರ್‌ವಾರ್ ಮಾತ್ರವಲ್ಲ ಕುಟುಂಬ ಕದನಕ್ಕೂ ಸಿದ್ಧ!

By Kannadaprabha News  |  First Published Oct 26, 2024, 10:05 PM IST

ರಾಜಕೀಯವೇ ಉಸಿರಾಗಿರುವ ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಸ್ಟಾರ್ ವಾರ್ ಮಾತ್ರವಲ್ಲ ರಾಜಕೀಯವಾಗಿ ಬದ್ಧವೈರಿಯಾಗಿರುವ ಎರಡು ಕುಟುಂಬಗಳ ನಡುವಿನ ಕದನವಾಗಿಯೂ ಮಾರ್ಪಟ್ಟಿದೆ. 


ರಾಮನಗರ (ಅ.26): ರಾಜಕೀಯವೇ ಉಸಿರಾಗಿರುವ ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಸ್ಟಾರ್ ವಾರ್ ಮಾತ್ರವಲ್ಲ ರಾಜಕೀಯವಾಗಿ ಬದ್ಧವೈರಿಯಾಗಿರುವ ಎರಡು ಕುಟುಂಬಗಳ ನಡುವಿನ ಕದನವಾಗಿಯೂ ಮಾರ್ಪಟ್ಟಿದೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹುರಿಯಾಳಾಗಿರುವ ಸಿ.ಪಿ.ಯೋಗೇಶ್ವರ್ ಹಾಗೂ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅಧಿಕೃತವಾಗಿ ಉಮೇದುವಾರಿಕೆ ಸಲ್ಲಿಸಿದ್ದು, ಮದಗಜಗಳ ನಡುವಿನ ನೇರ ಹಣಾಹಣಿಗೆ ಚನ್ನಪಟ್ಟಣ ಅಖಾಡ ಸಿದ್ಧವಾಗಿದೆ.

ಕೈ ಪಾಳಯದ ಯೋಗೇಶ್ವರ್ ಮತ್ತು ದಳಪತಿ ನಿಖಿಲ್ ಕುಮಾರಸ್ವಾಮಿ ಸ್ಯಾಂಡಲ್ ವುಡ್ ಸ್ಟಾರ್ ನಟರು. ಯೋಗೇಶ್ವರ್ ಉತ್ತರದೃವದಿಂದ ದಕ್ಷಿಣ ದೃವಕು, ಸೈನಿಕ, ಬದ್ರಿ ಸೇರಿದಂತೆ ಪ್ರಮುಖ ಚಿತ್ರಗಳಲ್ಲಿ ನಟಿಸಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರೆ, ನಿಖಿಲ್ ಕುಮಾರಸ್ವಾಮಿ ಜಾಗ್ವಾರ್, ಸೀತಾರಾಮ ಕಲ್ಯಾಣ, ಕುರುಕ್ಷೇತ್ರ, ರೈಡರ್ ಚಿತ್ರಗಳಲ್ಲಿ ನಟಿಸಿ ಯುವರಾಜ ಎನಿಸಿಕೊಂಡವರು. ಈ ಇಬ್ಬರು ನಟರ ಸ್ಪರ್ಧೆಯಿಂದಾಗಿ ಸ್ಟಾರ್ ವಾರ್ ಶುರವಾಗಿ ಚುನಾವಣಾ ಕಣ ರಂಗೇರಿದೆ.

Latest Videos

undefined

ಭಗೀರಥ ಅಂತ ಹೇಳಿಕೊಳ್ಳದೆ ಚುನಾವಣೆ ಎದುರಿಸಲಿ: ಯೋಗೇಶ್ವರ್‌ಗೆ ಡಿವಿಎಸ್ ಸವಾಲು

ಸಿಪಿವೈ- ಎಚ್ಡಿಕೆ ಕುಟುಂಬದ ನಡುವೆ 5ನೇ ಕದನ: ಇಷ್ಟೇ ಅಲ್ಲದೆ ಯೋಗೇಶ್ವರ್ ಮತ್ತು ಕುಮಾರಸ್ವಾಮಿ ನಡುವಿನ ಕದನ ಹೊಸದೇನಲ್ಲ. ಮೊದಲಿನಿಂದಲೂ ರಾಜಕೀಯವಾಗಿ ಬದ್ಧವೈರಿ ಆಗಿದ್ದವರು. ಕೆಲ ಚುನಾವಣೆಗಳಲ್ಲಿ ಎರಡು ಕುಟುಂಬದವರು ಮುಖಾಮುಖಿಯಾಗಿದ್ದು ಇದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಿದ್ದರಿಂದ ಉಭಯ ನಾಯಕರು ರಾಜಕೀಯ ವೈರತ್ವ ಮರೆತು ಒಗ್ಗೂಡಿದ್ದರು.

ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಮೇಲೆ ತೆರವಾದ ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಯೋಗೇಶ್ವರ್ ಬಿಜೆಪಿ ಚಿಹ್ನೆಯಡಿ ಎನ್‌ಡಿಎ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಇಲ್ಲದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದರು. ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸುವಂತೆ ದಳಪತಿ ನೀಡಿದ ಆಫರ್ ಅನ್ನು ಯೋಗೇಶ್ವರ್ ನಯವಾಗಿಯೇ ತಿರಸ್ಕರಿಸಿದರು. ಕೊನೆಗೆ ಎನ್‌ಡಿಎ ಟಿಕೆಟ್‌ಗಾಗಿ ಹಗ್ಗಜಗ್ಗಾಟ ನಡೆದು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯ ಮುನ್ಸೂಚನೆ ಸಿಕ್ಕಿದ ಹಿನ್ನೆಲೆಯಲ್ಲಿ ಆಪರೇಷನ್ ಹಸ್ತಕ್ಕೊಳಗಾದ ಯೋಗೇಶ್ವರ್ ಕೈ ಪಾಳಯ ಸೇರಿಕೊಂಡರು.

ಈ ಹಿಂದೆ 2009ರ ಲೋಕಸಭಾ ಚುನಾವಣೆ, 2018, 2023ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಹಾಗೂ 2013ರ ವಿಧಾನಸಭಾ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಸೆಣಸಾಡಿದ್ದರು. ಈಗ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಸ್ಪರ್ಧೆಗೆ ಅಣಿಯಾಗಿದ್ದು, ಎರಡು ಕುಟುಂಬಗಳ ನಡುವಿನ 5ನೇ ಕದನ ಇದಾಗಿದೆ. 2013ರಲ್ಲಿ ಸಮಾಜವಾದಿ ಪಾರ್ಟಿಯಿಂದ ಯೋಗೇಶ್ವರ್ ಗೆಲುವು ಸಾಧಿಸಿದ್ದು ಹೊರತುಪಡಿಸಿದರೆ ಉಳಿದ 3 ಚುನಾವಣೆಗಳಲ್ಲಿ ಕುಮಾರಸ್ವಾಮಿ ಎದುರು ಸೋಲು ಕಂಡಿದ್ದಾರೆ. ಇದೀಗ ನಿಖಿಲ್ ರಣರಂಗ ಪ್ರವೇಶ ಮಾಡಿರುವುದರಿಂದ ಗೆಲುವಿಗಾಗಿ ಯೋಗೇಶ್ವರ್ ಸಾಕಷ್ಟು ಬೆವರು ಸುರಿಸಬೇಕಾಗಿದೆ.

ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳಲು ಸೆಣಸಾಟ: 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಯೋಗೇಶ್ವರ್ 2018 ಮತ್ತು 2023ರ ಚುನಾವಣೆಯಲ್ಲಿ ಕ್ರಮವಾಗಿ ಕುಮಾರಸ್ವಾಮಿ ಎದುರು ಸೋಲು ಕಂಡವರು. ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ 2019ರ ಮಂಡ್ಯ ಸಂಸತ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ, ನಟಿ ಸುಮಲತಾಅಂಬರೀಷ್, 2023ರ ರಾಮನಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಇಕ್ಬಾಲ್ ಹುಸೇನ್ ವಿರುದ್ಧ ಪರಾಭವಗೊಂಡವರು. ಈಗ ಇಬ್ಬರು ನಾಯಕರ ರಾಜಕೀಯ ಭವಿಷ್ಯವನ್ನು ಉಪಚುನಾವಣೆ ನಿರ್ಧರಿಸುವ ಕಾರಣ ಚನ್ನಪಟ್ಟಣ ಕಣ ಎಲ್ಲರ ಗಮನ ಸೆಳೆದಿದೆ.

ಕೈಗೆ ಒಳೇಟಿನ ಭೀತಿ, ಕಮಲಕ್ಕೆ ಮೈತ್ರಿ ಧರ್ಮದ ಸಂಕಷ್ಟ: 6ನೇ ಬಾರಿ ಪಕ್ಷಾಂತರದ ಮೂಲಕ ಯೋಗೇಶ್ವರ್ ಕೈ ಗೂಡಿಗೆ ಮತ್ತೆ ವಲಸೆ ಬಂದಿದ್ದು, ಮಾತೃ ಪಕ್ಷಕ್ಕೆ ಮರಳಿರುವುದಾಗಿ ಹೇಳಿಕೊಂಡಿದ್ದಾರೆ. ಬಿಜೆಪಿಯಲ್ಲಿದ್ದ ಅವರ ಬೆಂಬಲಿಗರೆಲ್ಲರು ಕಾಂಗ್ರೆಸ್ ಬಂದಿದ್ದಾಗಿದೆ. ಆದರೆ, ಇದು ಮೂಲ ಕಾಂಗ್ರೆಸ್ಸಿಗರನ್ನು ಸಿಟ್ಟಿಗೇಳುವಂತೆ ಮಾಡಿದೆ. ಈ ಕಾರಣದಿಂದಾಗಿಯೇ ಡಿಸಿಎಂ ಡಿ.ಕೆ.ಶಿವಕುಮಾರ್ ಮೂಲ ಕಾಂಗ್ರೆಸ್ಸಿರ ಸಭೆ ಕರೆದು ಅಸಮಾಧಾನ ಬಿಟ್ಟು ಕೆಲಸ ಮಾಡುವಂತೆ ಒಗ್ಗಟ್ಟಿನ ಪಾಠ ಮಾಡಿದ್ದಾರೆ. ಆದರೂ ಕೈ ಪಾಳಯಕ್ಕೆ ಒಳೇಟಿನ ಭೀತಿ ಕಾಡುತ್ತಿದೆ. ಇನ್ನು ಎನ್‌ಡಿಎ ಅಭ್ಯರ್ಥಿ ನಿಖಿಲ್ ಪರವಾಗಿ ಕಮಲ ನಾಯಕರು ಎಷ್ಟರ ಮಟ್ಟಿಗೆ ಹೋರಾಟ ನಡೆಸಿ ಮೈತ್ರಿ ಧರ್ಮ ಪಾಲನೆ ಮಾಡುತ್ತಾರೆ ಎನ್ನುವ ಪ್ರಶ್ನೆಯೂ ಕಾಡುತ್ತಿದೆ.

ಪಾಪರ್ ಆಗಿರುವ ಕಾಂಗ್ರೆಸ್ ಸರ್ಕಾರ: ಆರ್.ಅಶೋಕ್ ವಾಗ್ದಾಳಿ

ಕ್ಷೇತ್ರದಲ್ಲಿ ಅಧಿಕ ಮತಗಳನ್ನು ಹೊಂದಿರುವ ಕಾರಣ ಒಕ್ಕಲಿಗರ ಶಕ್ತಿ ಕೇಂದ್ರವೂ ಆಗಿರುವ ಬೊಂಬೆನಾಡಿನಲ್ಲಿ ಗೌಡ್ರ ಗದ್ದಲವೂ ಜೋರಾಗಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳನ್ನು ತಮ್ಮದೇ ಆದ ವೋಟ್ ಬ್ಯಾಂಕ್ ಹೊಂದಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಯೋಗೇಶ್ವರ್ ಮತ್ತು ನಿಖಿಲ್ ನಡುವೆ ಆ ವರ್ಗದ ಮತಗಳು ಹಂಚಿಕೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಇನ್ನುಳಿದಂತೆ ಎಸ್ಸಿ-ಎಸ್ಟಿ, ಮುಸ್ಲಿಂ, ಕುರುಬ, ಬೆಸ್ತರು, ಲಿಂಗಾಯತರು, ಬ್ರಾಹ್ಮಣರು ಸೇರಿದಂತೆ ಇತರೆ ಸಮುದಾಯದ ಮತಗಳನ್ನು ಓಲೈಸಿಕೊಳ್ಳುವ ಕಠಿಣ ಸವಾಲು ಎದುರಾಗಿದೆ. 

click me!