ಭಗೀರಥ ಅಂತ ಹೇಳಿಕೊಳ್ಳದೆ ಚುನಾವಣೆ ಎದುರಿಸಲಿ: ಯೋಗೇಶ್ವರ್‌ಗೆ ಡಿವಿಎಸ್ ಸವಾಲು

By Kannadaprabha News  |  First Published Oct 26, 2024, 9:38 PM IST

ನಿಜವಾಗಿ ಭಗೀರಥದ ಕ್ರೆಡಿಟ್ ಬಿಜೆಪಿ ಪಕ್ಷಕ್ಕೆ ಬರಬೇಕು. ಯೋಗೇಶ್ವರ್ ಅವರಿಗೆ ಮಾನಮರ್ಯಾದೆ ಇದ್ದರೆ ಭಗೀರಥ ಎಂದು ಹೇಳಿಕೊಳ್ಳದೆ ಉಪಚುನಾವಣೆ ಎದುರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಸವಾಲು ಹಾಕಿದರು. 


ರಾಮನಗರ (ಅ.26): ಚನ್ನಪಟ್ಟಣ ತಾಲೂಕಿನಲ್ಲಿನ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದು ಬಿಜೆಪಿ ಸರ್ಕಾರ. ಹೀಗಾಗಿ ನಿಜವಾಗಿ ಭಗೀರಥದ ಕ್ರೆಡಿಟ್ ಬಿಜೆಪಿ ಪಕ್ಷಕ್ಕೆ ಬರಬೇಕು. ಯೋಗೇಶ್ವರ್ ಅವರಿಗೆ ಮಾನಮರ್ಯಾದೆ ಇದ್ದರೆ ಭಗೀರಥ ಎಂದು ಹೇಳಿಕೊಳ್ಳದೆ ಉಪಚುನಾವಣೆ ಎದುರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದಾಗ ಚನ್ನಪಟ್ಟಣದ ಆರು ಕೆರೆಗಳನ್ನು ತುಂಬಿಸಿದ್ದು ಮಾತ್ರವಲ್ಲದೆ ಕ್ಷೇತ್ರದ ಅಭಿವೃದ್ಧಿಗಾಗಿ 150 ಕೋಟಿ ಅನುದಾನ ನೀಡಿದೆ. ನಿಜವಾದ ಭಗೀರಥ ಬಿಜೆಪಿ ಸರ್ಕಾರವೇ ಹೊರತು ಯೋಗೇಶ್ವರ್ ಅಲ್ಲ. ಇವತ್ತು ಭಗೀರಥ ಅಂತ ಹೇಳಿಕೊಂಡು ಚುನಾವಣೆ ಎದುರಿಸಲು ಮುಂದಾಗಿರುವ ಯೋಗೇಶ್ವರ್ ಗೆ ನಾಚಿಕೆ ಆಗಬೇಕು ಎಂದರು.

ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದ ಅವಧಿಯಲ್ಲಿ ಯೋಗೇಶ್ವರ್ ಕೆರೆಗಳನ್ನು ತುಂಬಿಸುವ ಕೆಲಸ ಏಕೆ ಮಾಡಲಿಲ್ಲ. ಬಿಜೆಪಿ ಸರ್ಕಾರದ ಲಾಭ ಪಡೆಯುತ್ತಿರುವ ಯೋಗೇಶ್ವರ್, ಅದರ ಆಧಾರದ ಮೇಲೆಯೇ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಕೇವಲ ಬಾಯಿಂದ ಭಗೀರಥ ಅಂತ ಹೇಳಿಕೊಳ್ಳುವ ಅವರು ಆ ಕ್ರೆಡಿಟ್ ತೆಗೆದುಕೊಳ್ಳಲು ಅರ್ಹರಲ್ಲ. ಎಂದಿಗೂ ಭಗೀರಥ ಆಗಲು ಸಾಧ್ಯವೂ ಇಲ್ಲ ಎಂದು ಕಿಡಿಕಾರಿದರು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ನಾಯಕತ್ವ ಬೆಳೆಸುವ ಪ್ರಯತ್ನ ಮಾಡಿದೆವು. ಒಬ್ಬ ವ್ಯಕ್ತಿ ಮೇಲೆ ವಿಶ್ವಾಸ ಇಟ್ಟಿದ್ದೆವು. ಆ ವ್ಯಕ್ತಿಯೇ ಪಕ್ಷ ದ್ರೋಹ ಮಾಡಿ ಹೋಗಿದ್ದಾರೆ. ಅತಿಯಾದ ವಿಶ್ವಾಸವೇ ಇಷ್ಟೆಲ್ಲ ವ್ಯತ್ಯಾಸಗಳಿಗೆ ಕಾರಣವಾಗಿದೆ. 

Latest Videos

undefined

ಪಾಪರ್ ಆಗಿರುವ ಕಾಂಗ್ರೆಸ್ ಸರ್ಕಾರ: ಆರ್.ಅಶೋಕ್ ವಾಗ್ದಾಳಿ

ಯೋಗೇಶ್ವರ್ ಅವರೊಂದಿಗೆ ಹಿಂಬಾಲಕರು ಮಾತ್ರ ಹೋಗಿದ್ದು, ನಿಷ್ಠಾವಂತ ಕಾರ್ಯಕರ್ತರು ಬಿಜೆಪಿಯಲ್ಲಿಯೇ ಇದ್ದಾರೆ. ಇನ್ನು ಕೆಲವರು ಏನು ಮಾಡುವುದೆಂದು ಗೋಡೆ ಮೇಲೆ ಕುಳಿತಿದ್ದು, ಅವರೆಲ್ಲರ ಮನವೊಲಿಸಿ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ ಸವಾಲಿನಿಂದ ಕೂಡಿದೆ. ಒಬ್ಬ ವ್ಯಕ್ತಿ ಪಕ್ಷ ಅಂತ ಹೇಳಿಕೊಂಡು ಪ್ರತಿ ಚುನಾವಣೆಗಳಲ್ಲಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಲೇ ಇದ್ದಾರೆ. ಈಗ 7ನೇ ಬಾರಿ ಪಕ್ಷಾಂತರ ಮಾಡಿದ್ದಾರೆ. ಸ್ವಾರ್ಥಕ್ಕಾಗಿ ರಾಜಕಾರಣ ಮಾಡುವ ವ್ಯಕ್ತಿ, ಮುಂದೆ ಜನಪ್ರತಿನಿಧಿಯಾಗಿ ಇರಬೇಕೋ ಬೇಡವೋ ಎನ್ನುವ ಸವಾಲಿನ ಚುನಾವಣೆ ಇದಾಗಿದೆ. ಇದು ಎನ್‌ಡಿಎ ಮತ್ತು ಕಾಂಗ್ರೆಸ್ ನಡುವೆ ಅನ್ನುವುದಕ್ಕಿಂತ ವಿಚಾರ ಆಧಾರಿತ ಚುನಾವಣೆ ಆಗಲಿದೆ. 

ಒಬ್ಬ ವ್ಯಕ್ತಿಯನ್ನು ಹೇಗೆ ಬೆಳೆಸಬೇಕು, ಎಲ್ಲಿ ಇಡಬೇಕು ಅಂತ ಕಲಿಯಲು ಎಲ್ಲ ಪಕ್ಷಗಳಿಗೂ ಯೋಗೇಶ್ವರ್ ಒಳ್ಳೆಯ ನಿದರ್ಶನ ಎಂದು ಸದಾನಂದ ಗೌಡ ಕಿಡಿಕಾರಿದರು. ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೆಲ್ಲ ರಾಮನಗರ ಜಿಲ್ಲೆ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ಅಶ್ವತ್ಥ ನಾರಾಯಣ ಜಿಲ್ಲಾ ಉಸ್ತುವಾರಿ ಆಗಿದ್ದಾಗ ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ನೋಡಿ ರೋಸಿ ಹೋಗಿರುವ ಜನರು ಎನ್‌ಡಿಎ ಸರ್ಕಾರದ ಸಾಧನೆಗಳನ್ನು ಮೆಚ್ಚಿ ನಿಖಿಲ್ ಅವರನ್ನು ಗೆಲ್ಲಿಸುವುದರಲ್ಲಿ ಸಂಶಯವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ಹುಲುವಾಡಿ ದೇವರಾಜು ಇತರರಿದ್ದರು.

ಮೃತ ಕಾಡಾನೆಗೆ ಅಂತಿಮ ನಮನ ಸಲ್ಲಿಸಿದ 17 ಕಾಡಾನೆಗಳು: ಟ್ರ್ಯಾಪ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಫೋಟೋ!

ಯೋಗಿಯಿಂದ ಮತ್ತೊಂದು ಹಗರಣ ಬಯಲಿಗೆ: ಬಿಜೆಪಿ ಕಾರ್ಯಕರ್ತರಿಗೆ ಗೌರವ ಕೊಡದೆ ಯೋಗೇಶ್ವರ್ ಕಾಂಗ್ರೆಸ್ ಗೆ ಹೋಗಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿದ್ದ ಕಾರಣ ಅವರಿಗೆ ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ಹಗರಣಗಳ ಸರ್ಕಾರವಾಗಿದ್ದು, ಯೋಗೇಶ್ವರ್ ಹೋಗಿರುವುದರಿಂದ ಆದಷ್ಟು ಬೇಗ ಮತ್ತೊಂದು ಹಗರಣ ಬಯಲಿಗೆ ಬರಲಿದೆ. ಹಗರಣಗಳ ಪಕ್ಷದಲ್ಲಿ ಯೋಗೇಶ್ವರ್ ಸೇರಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಈಗಾಗಲೇ ಯೋಗೇಶ್ವರ್ ಅವರನ್ನು ಹಿಂದಕ್ಕೆ ಹಾಕಿದ್ದಾರೆ. ಶಾಸಕರಾದರೂ ಹಿಂದಿನ ಸಾಲಿನಲ್ಲಿ ಜಾಗ ಅಂತ ನಾಮಪತ್ರ ಸಲ್ಲಿಕೆ ವೇಳೆಯೇ ತೋರಿಸಿಕೊಟ್ಟಿದ್ದಾರೆ. ಈ ಭಾಗದಲ್ಲಿ ಗೂಂಡಾ ರಾಜಕಾರಣ ಮಾಡುತ್ತಿರುವ ದೊಡ್ಡ ರಾಜಕಾರಣಿಯನ್ನು ಸುಮ್ಮನೆ ಕೂರಿಸಿದ್ದಾರೆ. ಅವರ ಸಾಲಿಗೆ ಯೋಗೇಶ್ವರ್ ಸೇರುತ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸದಾನಂದಗೌಡ ಟೀಕಿಸಿದರು.

click me!