ನಾವು ಹೋರಾಟ ಶುರು ಮಾಡಿದ್ರೆ ಸಿಎಂ ಓಡಾಡೋಕೆ ಆಗಲ್ಲ, ಕಾರಿಗೆ ಮೊಟ್ಟೆ ಎಸೆದ ಕೃತ್ಯಕ್ಕೆ ಸಿದ್ದರಾಮಯ್ಯ ಕಿಡಿ
ಮಡಿಕೇರಿ(ಆ.19): ಬಿಜೆಪಿ ಕಾರ್ಯಕರ್ತರು ತಮ್ಮ ಕಾರಿಗೆ ಮೊಟ್ಟೆಎಸೆದ ಘಟನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೂ ಮೊಟ್ಟೆಎಸೆಯಲು ಬರಲ್ವಾ?, ನಾವು ಹೋರಾಟ ಶುರು ಮಾಡಿದರೆ ಮುಖ್ಯಮಂತ್ರಿ ಎಲ್ಲೂ ಓಡಾಡೋಕೆ ಆಗಲ್ಲ ಎಂದು ಬಿಜೆಪಿ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಡಿಕೇರಿಯ ಸಕ್ರ್ಯೂಟ್ ಹೌಸ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿ ನಡೆದಿರುವ ಕಳಪೆ ಕಾಮಗಾರಿಗಳನ್ನು ನಾನು ಬಂದು ನೋಡುತ್ತೇನೆಂದು ಕಾರ್ಯಕರ್ತರನ್ನು ಬಿಟ್ಟು ಪ್ರತಿಭಟನೆ ಮಾಡಿಸುತ್ತಿದ್ದಾರೆ. ಈ ಬಾರಿ ಕೊಡಗಿನಲ್ಲಿ ಎರಡೂ ಕಡೆ ಕಾಂಗ್ರೆಸ್ ಗೆಲ್ಲಲಿದೆ ಅಂತ ಬಿಜೆಪಿಯವರು ಹತಾಶರಾಗಿದ್ದಾರೆ. ಹೀಗಾಗಿ ಪ್ರತಿಭಟನೆ ಮಾಡಿದ್ದಾರೆ. ನಮ್ಮ ಕಾರ್ಯಕರ್ತರು ಬೀದಿಗಿಳಿದರೆ ಬಿಜೆಪಿಯವರಿಗೆ ಕೊಡಗಿನಲ್ಲೇ ತಿರುಗಾಡಲು ಆಗುವುದಿಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತದ ವಿರುದ್ದ ಡಿಕೆಶಿ ಹಾಗೂ ಹೆಚ್‌ಡಿಕೆ ಗರಂ
ಟಿಪ್ಪು ಬೆಂಬಲಿಸಿದ್ದಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆಂಬ ಆರೋಪವನ್ನು ತಳ್ಳಿಹಾಕಿದ ಅವರು, ಟಿಪ್ಪು ವಿಚಾರನೂ ಇಲ್ಲ, ಏನೂ ಇಲ್ಲ. ಟಿಪ್ಪು ಜಯಂತಿ ಆದ ಮೇಲೆ ನಾನು ಕೊಡಗಿಗೆ ಬಂದಿಲ್ವಾ? ಕೊಡಗಿನಲ್ಲಿ ಅವರು ಮಾಡಿರುವ ಕಳಪೆ ಕೆಲಸ ನನಗೆ ಗೊತ್ತಾಗದಿರಲಿ ಎಂದಷ್ಟೇ ಪ್ರತಿಭಟನೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಆ.26ರಂದು ಎಸ್‌ಪಿ ಕಚೇರಿಗೆ ಮುತ್ತಿಗೆ: ಸಿದ್ದರಾಮಯ್ಯ
ಸೋಮವಾರಪೇಟೆ: ನೆರೆ ಸಂತ್ರಸ್ತರ ಸಮಸ್ಯೆ ಆಲಿಸಲು ಕೊಡಗಿಗೆ ಭೇಟಿ ನೀಡಿದ್ದ ವೇಳೆ ಸೂಕ್ತ ಭದ್ರತೆ ನೀಡಲು ವಿಫಲರಾದ ಪೊಲೀಸ್ ಇಲಾಖೆ ವಿರುದ್ಧ ಆ.26ರಂದು ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಪೊಲೀಸರು ಆರ್‌ಎಸ್‌ಎಸ್‌ನವರೊಂದಿಗೆ ಶಾಮೀಲಾಗಿ ತಮ್ಮ ವಿರುದ್ಧ ಪಿತೂರಿ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆ ಇಡೀ ಜಿಲ್ಲೆಯಲ್ಲಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಪೊಲೀಸ್ ವೈಫಲ್ಯ ಖಂಡಿಸಿ ಆ.26ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು. ಮುಂದಿನ ಏಳು ತಿಂಗಳಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈಗ ನಿರ್ಲಕ್ಷ್ಯ ವಹಿಸಿದ ಪೊಲೀಸ್ ಇಲಾಖೆಗೆ ಏನು ಕ್ರಮ ಕೈಗೊಳ್ಳಬೇಕೆಂದು ಚೆನ್ನಾಗಿ ತಿಳಿದಿದೆ ಎಂದರು.
ಮೊಟ್ಟೆ ಎಸೆತ: ಇಂದು ಸಿದ್ದು ಪರ ಪ್ರತಿಭಟನೆ
ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಡಗಿಗೆ ಭೇಟಿ ನೀಡಿದ ವೇಳೆ ಅವರ ಕಾರಿನ ಮೇಲೆ ಮೊಟ್ಟೆಎಸೆದು ಪ್ರತಿಭಟನೆ ನಡೆಸಿರುವವರನ್ನು ಬಂಧಿಸುವಂತೆ ಆಗ್ರಹಿಸಿ ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಕೊಡಗಿನಲ್ಲಿ ಮೊಟ್ಟೆ ಎಸೆತ ಘಟನೆ ಖಂಡಿಸಿ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ ಪ್ರತಾಪ್ ಸಿಂಹ!
ಫ್ರೀಡಂ ಪಾರ್ಕ್ನಲ್ಲಿ ಬೆಳಗ್ಗೆ ಸಮಾವೇಶಗೊಳ್ಳಲಿರುವ ಅವರ ಬೆಂಬಲಿಗರು ಹಾಗೂ ಕಾರ್ಯಕರ್ತರು ತಮ್ಮ ನಾಯಕರ ಕಾರಿನ ಮೇಲೆ ಮೊಟ್ಟೆಎಸೆದು ಪ್ರತಿಭಟಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಿದ್ದಾರೆ. ಈ ಕೃತ್ಯ ಎಸಗಿರುವವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಲು ಸರ್ಕಾರವನ್ನು ಆಗ್ರಹಿಸಲಿದ್ದಾರೆ.
ಗುರುವಾರ ಕೊಡಗಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಕೊಡಗು ವಿರೋಧಿ ಸಿದ್ದರಾಮಯ್ಯ, ಕೊಡವರ ವಿರೋಧಿ ಸಿದ್ದರಾಮಯ್ಯ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಕಾರಿಗೆ ಕೆಲವರು ಮೊಟ್ಟೆಎಸೆದ ಘಟನೆ ನಡೆದಿದೆ. ಈ ಕೃತ್ಯಕ್ಕೆ ಬಿಜೆಪಿಯ ಹಲವು ನಾಯಕರಿಂದಲೂ ಖಂಡನೆ ವ್ಯಕ್ತವಾಗಿದೆ.