ಪಂಚರತ್ನ ಯೋಜನೆ ಜಾರಿಯಾದರೆ ರಾಜ್ಯ ಸ್ವರ್ಗ ಸದೃಶ್ಯವಾಗಲಿದೆ: ಎಚ್‌.ಡಿ.ಕುಮಾರಸ್ವಾಮಿ

By Kannadaprabha NewsFirst Published Apr 6, 2023, 10:23 AM IST
Highlights

ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಲು ಒಂದು ಪೈಸೆ ತೆರಿಗೆ ಹಾಕುವುದಿಲ್ಲ ಮತ್ತು ಒಂದು ರೂ. ಸಾಲ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಬೆಂಗಳೂರು (ಏ.06): ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಲು ಒಂದು ಪೈಸೆ ತೆರಿಗೆ ಹಾಕುವುದಿಲ್ಲ ಮತ್ತು ಒಂದು ರೂ. ಸಾಲ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಬುಧವಾರ ಚಾಮರಾಜಪೇಟೆಯಲ್ಲಿ ಪಂಚರತ್ನ ರಥಯಾತ್ರೆ ವೇಳೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬಡತನ ನಿವಾರಿಸುವ ನಿಟ್ಟಿನಲ್ಲಿ ರೂಪಿಸಿರುವ ಪಂಚರತ್ನ ಯೋಜನೆಗಳು ಸಂಜೀವಿನಿಯಾಗಿ ಕೆಲಸ ಮಾಡುತ್ತವೆ. ಜಾಗತಿಕವಾಗಿ ಹೆಸರು ಮಾಡಿರುವ ಮಹಾನಗರದಲ್ಲಿ ಬಡತನ ಇನ್ನೂ ತಾಂಡವವಾಡುತ್ತಿರುವುದು ಅತ್ಯಂತ ನೋವಿನ ಸಂಗತಿ. ಈ ಬಡತನಕ್ಕೆ ಪರಿಹಾರ ಪಂಚರತ್ನಗಳಲ್ಲಿ ಇದೆ ಎಂದು ತಿಳಿಸಿದರು.

ಒಂದು ಬಾರಿ ನನಗೆ ಅವಕಾಶ ಕೊಡಿ. ನಾನು ಇನ್ನೂ 25 ವರ್ಷ ಅಧಿಕಾರ ಕೊಡಿ ಎಂದು ಕೇಳುವುದಿಲ್ಲ. ಅಮೃತಕಾಲ ತರುತ್ತೇವೆ ಎಂದು ಬಿಜೆಪಿಯವರು ಹೇಳುತ್ತಾರೆ. ಯಾರಿಗೆ ಅಮೃತ ಕಾಲ ತರುತ್ತಾರೆ. ಈವರೆಗೆ ಅಧಿಕಾರದಲ್ಲಿದ್ದ ಅಲ್ಪ ಸಮಯದಲ್ಲಿ ಕೊಟ್ಟಭರವಸೆಗಳನ್ನು ಈಡೇರಿಸಿದ್ದೇನೆ. ಪಂಚರತ್ನ ಯೋಜನೆಗಳ ಜಾರಿ ನನ್ನ ಜೀವಿತಾವಧಿಯ ಕನಸು. ಈ ಯೋಜನೆಗಳು ಜಾರಿಗೆ ಬಂದರೆ ಎಲ್ಲರ ಬದುಕು ಹಸನಾಗುತ್ತದೆ. ಪಂಚರತ್ನ ಯೋಜನೆಗಳು ಜಾತಿ ಧರ್ಮ ಮೀರಿದ ಉದಾತ್ತ ಕಾರ್ಯಕ್ರಮಗಳು. ನಿತ್ಯ ಬೆಳಗಾದರೆ ನನ್ನ ಮನೆಯ ಹತ್ತಿರ ಬರುವ ಜನರ ನೋವನ್ನು ಕಂಡು ರೂಪಿಸಿದ ಕಾರ್ಯಕ್ರಮ. ಈ ಯೋಜನೆಗಳು ಜಾರಿಯಾದರೆ ಕರ್ನಾಟಕ ಸ್ವರ್ಗ ಸದೃಶ್ಯ ರಾಜ್ಯವಾಗಲಿದೆ ಎಂದು ಮಾಧ್ಯಮಗಳೇ ಬರೆದಿವೆ. ಈ ಹಿನ್ನೆಲೆಯಲ್ಲಿ ಒಮ್ಮೆ ನಮಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

Latest Videos

ಚಿತ್ರ ನಟರ ಮುಖ ತೋರಿಸಿ ಬಿಜೆಪಿ ಮತಭಿಕ್ಷೆ: ಎಚ್‌.ಡಿ.ಕುಮಾರಸ್ವಾಮಿ

ಕೇಂದ್ರ ಸರ್ಕಾರ ಉಜ್ವಲ ಯೋಜನೆ ಜಾರಿಗೆ ತಂದು ಅಡುಗೆ ಅನಿಲ ಸಿಲಿಂಡರ್‌ ಉಚಿತ ಎಂದು ಹೇಳಿತ್ತು. ಆದರೆ, ಈಗ 1150 ರು.ಗೆ ಸಿಲಿಂಡರ್‌ ಮಾರುತ್ತಿದೆ. ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಸಿಲಿಂಡರ್‌ ಒಂದಕ್ಕೆ ಶೇ.50ರಷ್ಟು ಸಬ್ಸಿಡಿ ಕೊಡುತ್ತೇವೆ. ಅಲ್ಲದೇ,60 ವರ್ಷ ಮೀರಿದ ಹಿರಿಯರಿಗೆ ಮಾಸಿಕ ಐದು ಸಾವಿರ ರು., ವಿಧವೆಯರು, ವಿಕಲಚೇತನರಿಗೆ ಮಾಸಿಕ 2500 ರು. ನೀಡಲಾಗುವುದು. ಆಟೋ ಚಾಲಕರಿಗೆ ಮಾಸಿಕ ಎರಡು ಸಾವಿರ ರು. ಸಹಾಯಧನ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೂ ಮುನ್ನ ಗಾಂಧಿನಗರ ಕ್ಷೇತ್ರದಲ್ಲಿ ಯಾತ್ರೆ ನಡೆಸಿದ ಎಚ್‌.ಡಿ.ಕುಮಾರಸ್ವಾಮಿ, ಮಾಗಡಿ ರಸ್ತೆ, ಓಕಳಿಪುರ, ಶ್ರೀರಾಮಪುರ, ಗಾಂಧಿನಗರ ಕ್ಷೇತ್ರದಲ್ಲಿ ಸಂಚರಿಸಿ ಜೆಡಿಎಸ್‌ಗೆ ಮತ ನೀಡುವಂತೆ ಪ್ರಚಾರ ಕೈಗೊಂಡರು. ಸಂಜೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಯಾತ್ರೆ ನಡೆಸಿದರು.

ನಂಜನಗೂಡು ಹುಂಡಿ ಲೂಟಿಗೆ ಸರ್ಕಾರ ಯತ್ನ: ರಾಜ್ಯ ಬಿಜೆಪಿ ಸರ್ಕಾರವು ನಂಜನಗೂಡಿನ ದೇವಾಲಯದ ಹುಂಡಿಯ ಹಣವನ್ನು ಲಪಟಾಯಿಸಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ. ನಂಜನಗೂಡು ಶಾಸಕರು ದೇವಾಲಯದ ಹುಂಡಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಕಿಡಿಕಾರಿರುವ ಅವರು ಈ ಕುರಿತು ದೇವರ ಹುಂಡಿಗೆ ಬಿಜೆಪಿ ಕನ್ನ ಎಂದು ಹ್ಯಾಷ್‌ಟ್ಯಾಗ್‌ ಹಾಕಿ ಸರಣಿ ಟ್ವಿಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಯಂ ಘೋಷಿತ ಧರ್ಮೊದ್ದಾರಕರು, ಹಿಂದೂ ಧರ್ಮವನ್ನು ಗುತ್ತಿಗೆ ಪಡೆದುಕೊಂಡವರೆಂದು ಬೀಗುವವರಿಗೆ ಧರ್ಮವೆಂದರೆ ಅಧಿಕಾರಕ್ಕಿರುವ ರಾಜಮಾರ್ಗವಾಗಿದೆ. ದೇವರ ಹುಂಡಿ ಎಂಬುದು ಲಜ್ಜೆಗೆಟ್ಟು ಹೊಡೆದುಕೊಳ್ಳುವ ನಿಧಿ. ಇವರಿಗೆ ನಾಚಿಕೆ, ಸಂಕೋಚ ಎನ್ನುವುದು ಕನಿಷ್ಠಕ್ಕಿಂತ ಕಡಿಮೆ ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ಕೊಟ್ಟಮಾತು ಉಳಿಸಿಕೊಳ್ಳುವ ನಾಯಕ ಎಚ್‌ಡಿಕೆ: ರೇವಣ್ಣ ಗುಣಗಾನ

ಪಾಪದ ಪಕ್ಷಕ್ಕೆ ಪಾಯಶ್ಚಿತ್ತ ತಪ್ಪದು. ಶ್ರೀನಂಜುಂಡೇಶ್ವರನ ಶಾಪವೂ ತಟ್ಟದೆ ಇರದು ಎಂದು ಎಚ್ಚರಿಕೆ ನೀಡಿದ್ದಾರೆ. ನಾಡಿಗೆ ನಾಡೇ ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುವ ನಂಜನಗೂಡಿನ ಶ್ರೀನಂಜುಂಡೇಶ್ವರ ದೇವರ ಹುಂಡಿಕೆ ಬಿಜೆಪಿ ಶಾಸಕ ಬಿ.ಹರ್ಷವರ್ಧನ್‌ ಕೈ ಹಾಕಿರುವುದು ದೈವಕ್ಕೆ ಎಸಗಿದ ಅಪಮಾನ. ಇದು ಯೋಜನೆಗಳ ಹೆಸರಿನಲ್ಲಿ ದೇವರ ಹುಂಡಿಗೂ ಕನ್ನ ಕೊರೆಯುವ ಬಿಜೆಪಿಯ ನೈಜ ಜಾಯಮಾನ. ಕಮಲ ಪಕ್ಷ ಮತ್ತೊಮ್ಮೆ ಬೆತ್ತಲಾಗಿದೆ. ಮುಜರಾಯಿ ದೇವಾಲಯದ ಆದಾಯ ಆಯಾ ದೇಗುಲದ ಅಭಿವೃದ್ಧಿಗೆ ಬಳಸಬೇಕು ಎನ್ನುವುದು ಕಾನೂನು. ರಾಜ್ಯ ಬಿಜೆಪಿ ಸರ್ಕಾರ ಕಾನೂನನ್ನು ಗಾಳಿಗೆ ಬಿಟ್ಟು ಶೇ.40 ಪರ್ಸೆಂಟ್‌ಗಾಗಿ ದೇವರ ದುಡ್ಡನ್ನೇ ನುಂಗಿನೀರು ಕುಡಿದು, ಆ ಹಣವನ್ನೂ ಚುನಾವಣೆಗೆ ಸುರಿಯಲು ಹೊರಟಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!