Karnataka election 2023: ಉದಾಸಿ ಇಲ್ಲದ ಹಾನಗಲ್ಲಿನಲ್ಲೀಗ ಹೊಸ ಗಾಳಿ!

By Kannadaprabha News  |  First Published Apr 6, 2023, 9:51 AM IST

ಹಾನಗಲ್ಲ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಇಣುಕಿದರೆ ಮೊದಲಿಗೆ ಕಾಣುವುದು ಸಿ.ಎಂ. ಉದಾಸಿ ಅವರ ಹೆಸರು. ನಾಲ್ಕು ದಶಕಗಳಿಂದೀಚೆಗೆ ಅಣ್ಣಾವ್ರು ಇಲ್ಲದ ಮೊದಲ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಅವರೊಂದಿಗೆ ಕಾಯಂ ಪ್ರತಿಸ್ಪರ್ಧಿಯಾಗಿದ್ದ ಮನೋಹರ ತಹಶೀಲ್ದಾರ್‌ ಈ ಸಲ ಕಾಂಗ್ರೆಸ್ಸಿನಿಂದಲೇ ಹೊರಬಿದ್ದಿದ್ದಾರೆ೧ ಹಾನಗಲ್ಲನಲ್ಲೀಗ ಹೊಸ ಗಾಳಿ ಬೀಸಿದೆ.


(ಕ್ಷೇತ್ರ ದರ್ಶನ)

ನಾರಾಯಣ ಹೆಗಡೆ

Tap to resize

Latest Videos

undefined

ಹಾವೇರಿ (ಏ.6) : ಹಾನಗಲ್ಲ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಇಣುಕಿದರೆ ಮೊದಲಿಗೆ ಕಾಣುವುದು ಸಿ.ಎಂ. ಉದಾಸಿ ಅವರ ಹೆಸರು. ನಾಲ್ಕು ದಶಕಗಳಿಂದೀಚೆಗೆ ಅಣ್ಣಾವ್ರು ಇಲ್ಲದ ಮೊದಲ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಅವರೊಂದಿಗೆ ಕಾಯಂ ಪ್ರತಿಸ್ಪರ್ಧಿಯಾಗಿದ್ದ ಮನೋಹರ ತಹಶೀಲ್ದಾರ್‌ ಈ ಸಲ ಕಾಂಗ್ರೆಸ್ಸಿನಿಂದಲೇ ಹೊರಬಿದ್ದಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದು ಬೀಗಿದ್ದ ಶ್ರೀನಿವಾಸ ಮಾನೆಗೆ ಕಾಂಗ್ರೆಸ್‌ ಟಿಕೆಟ್‌ ಫೈನಲ್‌ ಆಗಿದ್ದರೆ, ಬಿಜೆಪಿಯಿಂದ ಅಣ್ಣಾವ್ರ ಉತ್ತರಾಧಿಕಾರಿ ಯಾರು? ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ಹಾನಗಲ್ಲ ಕ್ಷೇತ್ರ(Hanagalla assembly election)ವೆಂದರೆ ಸಿ.ಎಂ. ಉದಾಸಿ(CM Udasi) ಹಾಗೂ ಮನೋಹರ ತಹಶೀಲ್ದಾರ(Manohar tahsildar) ಅವರ ನಡುವಿನ ನೇರಾನೇರ ಪೈಪೋಟಿಗೆ ಹೆಸರುವಾಸಿ. 2018ರ ಚುನಾವಣೆಯಲ್ಲಿ ಗೆದ್ದಿದ್ದ ಸಿ.ಎಂ. ಉದಾಸಿ ನಿಧನರಾದ ಹಿನ್ನೆಲೆಯಲ್ಲಿ 2021ರ ನವೆಂಬರ್‌ನಲ್ಲಿ ಕ್ಷೇತ್ರವು ಉಪಚುನಾವಣೆ ಎದುರಿಸುವಂತಾಯಿತು. ಅದರಲ್ಲಿ ಶ್ರೀನಿವಾಸ ಮಾನೆ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಹೊಸ ಇತಿಹಾಸ ಬರೆದರು. ನಾಲ್ಕು ದಶಕಗಳ ಕಾಲ ಕಾಂಗ್ರೆಸ್ಸಿನ ಕಾಯಂ ಅಭ್ಯರ್ಥಿಯಾಗುತ್ತಿದ್ದ ಮನೋಹರ ತಹಶೀಲ್ದಾರ್‌ಗೆ 2018ರಲ್ಲಿ ಮೊದಲ ಬಾರಿಗೆ ಟಿಕೆಟ್‌ ಕೈತಪ್ಪಿತು. ಉಪಚುನಾವಣೆಯಲ್ಲೂ ತಹಶೀಲ್ದಾರ್‌ ಕೈಕಟ್ಟಿಕೂರುವಂತಾಯಿತು. ಇದರಿಂದ ಅಸಮಾಧಾನಗೊಂಡಿರುವ ಅವರು ಕೈ ಬಿಟ್ಟು ತೆನೆ ಹೊರಲು ಸಿದ್ಧರಾಗಿದ್ದಾರೆ. ಉದಾಸಿ ಇಲ್ಲದ ಕ್ಷೇತ್ರದಲ್ಲಿ ರಾಜಕೀಯ ಸ್ಥಿತ್ಯಂತರ ಶುರುವಾಗಿದೆ. ಬಿಜೆಪಿಯಿಂದ ಇನ್ನೂ ಸರ್ವ ಸಮ್ಮತ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ.

Ticket fight: ಕೊಪ್ಪಳದಲ್ಲಿ ಬಿಜೆಪಿ ಟಿಕೆಟ್‌ ಟೆನ್ಶನ್‌: ಬೆಂಗಳೂರಲ್ಲಿ ಬೀಡುಬಿಟ್ಟಆಕಾಂಕ್ಷಿಗಳು

1978ರಿಂದ ಇಲ್ಲಿಯವರೆಗೆ ಅಂದರೆ ಬರೋಬ್ಬರಿ 45 ವರ್ಷಗಳ ಕಾಲ ಕ್ಷೇತ್ರದ ಜನತೆ ಒಮ್ಮೆ ಉದಾಸಿಯವರನ್ನು ಮತ್ತೊಮ್ಮೆ ಮನೋಹರ ತಹಶೀಲ್ದಾರ ಅವರನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸುತ್ತ ರಾಜಕೀಯ ಜಾಣ್ಮೆ ಪ್ರದರ್ಶಿಸುತ್ತಿದ್ದಾರೆ. ಅರೆಮಲೆನಾಡು ಪ್ರದೇಶ ಹೊಂದಿರುವ ಹಾನಗಲ್ಲ ತಾಲೂಕು ರಾಜಕೀಯ ಮುತ್ಸದ್ದಿಗಳನ್ನು ಪರಿಚಯಿಸಿದೆ. ಪಕ್ಷಕ್ಕಿಂತ ಹೆಚ್ಚಾಗಿ ವ್ಯಕ್ತಿ ರಾಜಕಾರಣಕ್ಕೆ ಜನ ಮನ್ನಣೆ ನೀಡುತ್ತ ಬಂದಿದ್ದಾರೆ. ಈ ಕ್ಷೇತ್ರ ಜಿಲ್ಲೆಯ ರಾಜಕಾರಣದ್ಲಲಿಯೇ ಅತ್ಯಂತ ವೈಶಿಷ್ಟ್ಯತೆ ಮೆರೆದ ಕ್ಷೇತ್ರವಾಗಿದೆ. ಹಾನಗಲ್ಲ ಕೃಷಿ ಪ್ರಧಾನ ತಾಲೂಕಾಗಿದ್ದು, 700ಕ್ಕೂ ಹೆಚ್ಚು ಕೆರೆಗಳಿವೆ. ಈ ಕೆರೆಗಳೇ ಇಲ್ಲಿಯ ಕೃಷಿಕರಿಗೆ ಜೀವಾಳ.

ಇದುವರೆಗೆ ಗೆದ್ದವರು:

1957ರಲ್ಲಿ ಬಿ.ಆರ್‌. ಪಾಟೀಲ ಪಕ್ಷೇತರ, 1962 ಜಿ.ಎಸ್‌. ದೇಸಾಯಿ ಕಾಂಗ್ರೆಸ್‌, 1967 ಬಿ.ಆರ್‌. ಪಾಟೀಲ ಪಕ್ಷೇತರರಾಗಿ, ಬಿ.ಆರ್‌. ಪಾಟೀಲ ಅವರ ನಿಧನದಿಂದ 1968ರಲ್ಲಿ ನಡೆದ ಉಪಚುನಾವಣೆಯಲ್ಲಿ ಜಿ.ಎಸ್‌. ದೇಸಾಯಿ ಕಾಂಗ್ರೆಸ್ಸಿನಿಂದ ಆಯ್ಕೆ. 1972 ಪಿ.ಸಿ. ಶೆಟ್ಟರ್‌ ಕಾಂಗ್ರೆಸ್‌, 1978 ಮನೋಹರ ತಹಶೀಲ್ದಾರ ಕಾಂಗ್ರೆಸ್‌, 1983 ಸಿ.ಎಂ. ಉದಾಸಿ ಪಕ್ಷೇತರ, 1985 ಸಿ.ಎಂ. ಉದಾಸಿ ಜನತಾ ಪಕ್ಷ, 1989 ಮನೋಹತರ ತಹಶೀಲ್ದಾರ ಕಾಂಗ್ರೆಸ್‌, 1994 ಸಿ.ಎಂ. ಉದಾಸಿ ಜನತಾದಳ, 1999 ಮನೋಹರ ತಹಶೀಲ್ದಾರ ಕಾಂಗ್ರೆಸ್‌, 2004 ಬಿಜೆಪಿಯಿಂದ ಸಿ.ಎಂ. ಉದಾಸಿ, 2008 ಸಿ.ಎಂ. ಉದಾಸಿ ಬಿಜೆಪಿ, 2013 ಮನೋಹರ ತಹಶೀಲ್ದಾರ ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದಾರೆ. ಆ ವರ್ಷ ಉದಾಸಿ ಅವರು ಕೆಜೆಪಿಯಿಂದ ಸ್ಪರ್ಧಿಸಿದ್ದರು.

2018ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಉದಾಸಿಯವರನ್ನು ಕ್ಷೇತ್ರದ ಜನತೆ ಆಯ್ಕೆ ಮಾಡಿ ಕಳುಹಿಸಿದ್ದರು. ಆದರೆ, ವಯೋಸಹಜ ಕಾಯಿಲೆಯಿಂದ ನಿಧನರಾದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಯಿತು. ಒಂದೂವರೆ ವರ್ಷದ ಅವಧಿಗಾಗಿ ನಡೆದ ಉಪಕದನ ರಾಜ್ಯದ ಗಮನ ಸೆಳೆಯುವಂತೆ ಮಾಡಿತ್ತು. ಬಿಜೆಪಿ ಸರ್ಕಾರವೇ ಬಂದು ಪ್ರಚಾರ ನಡೆಸಿತು. ಜಿಲ್ಲೆಯವರೇ ಆದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ಎದುರಾದ ಮೊದಲ ಚುನಾವಣೆಯಾದ್ದರಿಂದ ಬಿಜೆಪಿಗೆ ಗೆಲ್ಲಲೇ ಬೇಕಾದ ಅನಿವಾರ್ಯತೆಯಿತ್ತು. ಆದರೆ, ಕೊರೋನಾ ಕಾಲದ ಆಪದ್ಭಾಂದವ ಎಂದು ಕರೆಸಿಕೊಂಡ ಶ್ರೀನಿವಾಸ ಮಾನೆಗೆ ಜನಾಶೀರ್ವಾದ ದೊರೆಯಿತು. ಇದರೊಂದಿಗೆ 2018ರಲ್ಲಿ ಗೆದ್ದಿದ್ದ ಕ್ಷೇತ್ರವು ಬಿಜೆಪಿ ಕೈತಪ್ಪುವಂತಾಯಿತು.

ಸದ್ಯದ ಚಿತ್ರಣ:

ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ಸಿಗೆ ಟಾನಿಕ್‌ ಕೊಟ್ಟಿದ್ದ ಶ್ರೀನಿವಾಸ ಮಾನೆಗೆ ಸಹಜವಾಗಿಯೇ ಪಕ್ಷದ ನಾಯಕರು ಬೆಂಬಲವಾಗಿ ನಿಂತಿದ್ದಾರೆ. ಮತ್ತೊಮ್ಮೆ ಅವರಿಗೆ ಕೈ ಟಿಕೆಟ್‌ ಪಕ್ಕಾ ಆಗಿದೆ. ಆದರೆ, ಇದರಿಂದ ಮುನಿಸಿಕೊಂಡಿರುವ ಮನೋಹರ ತಹಶೀಲ್ದಾರ್‌ ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ ಅಭ್ಯರ್ಥಿಯಾಗಲು ಮುಂದಾಗಿದ್ದಾರೆ. ಉದಾಸಿ ಕುಟುಂಬಕ್ಕೆ ಟಿಕೆಟ್‌ ನೀಡಬೇಕು ಎಂಬ ಒತ್ತಾಯವಿದ್ದರೂ ಸಂಸದ ಶಿವಕುಮಾರ ಉದಾಸಿ ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಬಿಜೆಪಿಯಿಂದ ಶಿವರಾಜ ಸಜ್ಜನರ, ಕೃಷ್ಣ ಈಳಗೇರ, ಕಲ್ಯಾಣಕುಮಾರ ಶೆಟ್ಟರ್‌ ಇತರರು ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಮಲ್ಲಿಕಾರ್ಜುನ ಹಾವೇರಿ ಕೂಡ ತಮ್ಮದೇ ಹಾದಿಯಲ್ಲಿ ಸಾಗಿದ್ದಾರೆ.

ಶಾಸಕ ನೆಹರು ಓಲೇಕಾರ್‌ ಶಿಕ್ಷೆಗೆ ಹೈಕೋರ್ಟ್‌ ತಡೆ: ಚುನಾವಣೆ ಸ್ಪರ್ಧೆ ಸುಗಮ

2021ರ ಉಪಚುನಾವಣೆ ಫಲಿತಾಂಶ

  • ಶ್ರೀನಿವಾಸ ಮಾನೆ 87490 (ಕಾಂಗ್ರೆಸ್‌)
  • ಶಿವರಾಜ ಸಜ್ಜನರ 80117 (ಬಿಜೆಪಿ)

ಮತದಾರರ ವಿವರ

  • ಪುರುಷ ಮತದಾರರು 1,07,842
  • ಮಹಿಳಾ ಮತದಾರರು 1,01,958
  • ಇತರೆ 04
  • ಒಟ್ಟು ಮತದಾರರು 2,09,804
click me!