
ರಾಮನಗರ (ಜ.12): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಬಿಜೆಪಿ ನಾಯಕರು ಭೇಟಿ ಮಾಡಿ ಚರ್ಚೆ ನಡೆಸಿದರು. ಬಿಡದಿ ಸಮೀಪದ ಕೇತಗಾನಹಳ್ಳಿಯ ತೋಟದ ಮನೆಗೆ ಬೆಳಗ್ಗೆ ಆಗಮಿಸಿದ ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಕುಮಾರಸ್ವಾಮಿಯವರ ಕಾಲು ಮುಟ್ಟಿ ಆಶೀರ್ವಾದ ಪಡೆದರು. ಇಬ್ಬರು ನಾಯಕರು ಒಂದು ಗಂಟೆಗೂ ಹೆಚ್ಚು ಕಾಲ ಗೌಪ್ಯವಾಗಿ ಮಾತುಕತೆ ನಡೆಸಿದರು.
ಮರ ಕಡಿದ ಪ್ರಕರಣದಲ್ಲಿ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಪರವಾಗಿ ಕುಮಾರಸ್ವಾಮಿ ಬ್ಯಾಟಿಂಗ್ ಮಾಡಿದ್ದರು. ಹಾಗಾಗಿ ಖುದ್ಧು ಭೇಟಿಯಾಗಿ ಪ್ರತಾಪ್ ಸಿಂಹ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ, ನೂತನ ಸಂಸತ್ ಭವನದಲ್ಲಿ ದುಷ್ಕರ್ಮಿಗಳು ಸ್ಮೋಕ್ ಬಾಂಬ್ ಎಸೆದ ಪ್ರಕರಣ ಹಾಗೂ ಮೈಸೂರು - ಕೊಡಗು ಕ್ಷೇತ್ರ ಟಿಕೆಟ್ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ಪ್ರತಾಪ ಸಿಂಹ, ‘ಕಷ್ಟಕಾಲದಲ್ಲಿ ಸತ್ಯಸಂಗತಿಯನ್ನು ಜನರ ಮುಂದಿಟ್ಟು ಬೆನ್ನಿಗೆ ನಿಂತ ಕುಮಾರಣ್ಣನಿಗೆ ಧನ್ಯವಾದ ತಿಳಿಸಿದೆ ಎಂದು ಬರೆದುಕೊಂಡಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಚ್‌ಡಿಕೆ ಭೇಟಿ ಮಾಡುತ್ತಿರುವ ಬಿಜೆಪಿ ಪ್ರಮುಖರು: ಯಾಕೆ?
ಮಧ್ಯಾಹ್ನದ ವೇಳೆಗೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರೊಂದಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ಮತ್ತು ಜೀವರಾಜ್ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮುಂದಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ. ಜೆಡಿಎಸ್, ಎನ್ ಡಿಎ ಮೈತ್ರಿಕೂಟದ ಭಾಗವಾಗಿದೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಬಿಜೆಪಿ ನಾಯಕರಾದ ವಿ.ಸೋಮಣ್ಣ, ಸಿ.ಟಿ.ರವಿ ಸೇರಿದಂತೆ ಇತರೆ ನಾಯಕರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಮಂಡ್ಯ ಜೆಡಿಎಸ್ ನಾಯಕರ ಸಭೆ ನಡೆಸಿದ ನಿಖಿಲ್: ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿಯಾದ ಬಳಿಕ ಜೆಡಿಎಸ್ ಕ್ರಿಯಾಶೀಲವಾಗಿದ್ದು, ಪಕ್ಷದಲ್ಲಿ ಒಡಕು ಮೂಡದಂತೆ ಎಚ್ಚರಿಕೆ ವಹಿಸಿ ನಾಯಕರ ಸಭೆಗಳನ್ನು ಆರಂಭಿಸಿದೆ.ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆಗೆ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹ ಪಕ್ಷದ ಸಂಘಟನೆಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಕೋಲಾರ ಜಿಲ್ಲೆಯ ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ಮಂಡ್ಯ ಜಿಲ್ಲೆಯ ನಾಯಕರ ಜತೆ ಸಮಾಲೋಚನೆ ನಡೆಸಿ ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ಚರ್ಚಿಸಿದ್ದಾರೆ.
ಶ್ರೀಕಾಂತ್ ಪೂಜಾರಿ ಒಬ್ಬನೇನ ಹಿಂದೂ?: ಸಚಿವ ಪರಮೇಶ್ವರ್
ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಮಂಡ್ಯ ಜಿಲ್ಲೆಯ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಮಂಡ್ಯ ಕ್ಷೇತ್ರಕ್ಕೆ ಪಕ್ಷದ ವರಿಷ್ಠರು ಯಾರನ್ನೇ ಅಭ್ಯರ್ಥಿಯಾಗಿ ಪ್ರಕಟಿಸಿದರೂ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಯಾವುದೇ ರೀತಿಯಲ್ಲೂ ಭಿನ್ನಮತಕ್ಕೆ ಆಸ್ಪದ ನೀಡಬಾರದು. ಜಿಲ್ಲೆಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಯ ಗೆಲುವಿಗೆ ಕೆಲಸ ಮಾಡಬೇಕು ಎಂಬುದಾಗಿ ಸೂಚಿಸಿದರು ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.