ರಾಜ್ಯದಲ್ಲಿ ಸಂಸದ ಅನಂತ ಕುಮಾರ ಹೆಗಡೆ ಅವರು ಹೇಳಿದಂತೆ ಯಾವುದೇ ಅಹಿತಕರ ಘಟನೆಗಳು ನಡೆದರೆ ಅವರೇ ಜವಾಬ್ದಾರಿ ಆಗುತ್ತಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದರು.
ಬೆಂಗಳೂರು (ಜ.12): ರಾಜ್ಯದ ಒಬ್ಬ ಸಂಸದರಾಗಿರುವ ಹಾಗೂ ಕೇಂದ್ರ ಸರ್ಕಾರ ಮಾಜಿ ಸಚಿವರೂ ಆಗಿರುವ ಅನಂತ ಕುಮಾರ್ ಹೆಗಡೆ ಅವರು ಅವಹೇಳನಕಾರಿಯಾಗಿ, ಬೇರೆಯವರ ಬಗ್ಗೆ ಹೀಯಾಳಿಸಿ, ಅಸಂಬದ್ಧವಾಗಿ ಹಾಗೂ ಪ್ರಚೋದನಕಾರಿಯಾಗಿ ಮಾತನಾಡುವುದನ್ನು ಪೊಲೀಸ್ ಇಲಾಖೆ ಕಾನೂನು ರೀತಿಯಲ್ಲಿ ನೋಡಿ ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಅಹಿತಕರ ಘಟನೆಗಳು ನಡೆದರೆ ಅವರೇ ನೇರ ಜವಾಬ್ದಾರಿ ಆಗುತ್ತಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಸಂಸದ ಅನಂತ್ ಕುಮಾರ್ ಹೆಗಡೆ ಪ್ರಚೋದನಕಾರಿ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಕಾಪಾಡಬೇಕಾದ ಜವಾಬ್ದಾರಿ ನಮ್ಮದು. ಯಾರೇ ಆದರೂ ವೈಯಕ್ತಿಕವಾಗಿ ಏನಾದರೂ ಮಾತನಾಡಿ. ಆದರೆ, ಸಮಾಜದ ಶಾಂತಿ ಕದಡುವಂತಹ ಕೆಲಸ ಮಾಡಬಾರದು. ಪೊಲೀಸ್ ಇಲಾಖೆಯ ಕಾರ್ಯ ಅವರಿಗೆ ಗೊತ್ತಿದೆ. ಮುಖ್ಯಮಂತ್ರಿ ಹಾಗೂ ಇತರೆ ಸರ್ಕಾರದ ಜವಾಬ್ದಾರಿಯುತ ವ್ಯಕ್ತಿಗಳ ಬಗ್ಗೆ ಹಗುರವಾಗಿ ಮಾತನಾಡುವುದು ಅವರ ಸಂಸ್ಕೃತಿಯಾಗಿರುತ್ತದೆ. ಚುನಾವಣೆ ಹತ್ತಿರ ಬಂದಿದ್ದರಿಂದ ಇಂತಹ ಹೇಳಿಕೆಗಳನ್ನು ನಿಡುತ್ತಿದ್ದಾರೆ ಎಂದು ಕಿಡಿಕಾರಿದರು.
ಭಟ್ಕಳ, ಶಿರಸಿ, ಶ್ರೀರಂಗಪಟ್ಟಣದ ಮಸೀದಿಗಳೆಲ್ಲವೂ ಹಿಂದೂ ದೇವಾಲಯಗಳು: ಅನಂತ್ ಕುಮಾರ್ ಹೆಗಡೆ
ಕಳೆದ ಮೂರು ವರ್ಷಗಳಿಂದ ಸೈಲೆಂಟ್ ಆಗಿದ್ದ ಸಂಸದ ಅನಂತ ಕುಮಾರ್ ಹೆಗಡೆ ಅವರು ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪುನಃ ಮಾತನಾಡಲು ಮುಂದಾಗಿದ್ದಾರೆ. ನಾವೆಲ್ಲರೂ ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ಜವಾಬ್ದಾರಿಯುತ ಹೇಳಿಕೆಯನ್ನು ನೀಡಬೇಕು. ಅವರು ಮಾತನಾಡುವುದನ್ನು ಸ್ವತಃ ಜನರೇ ಒಪ್ಪಿಕೊಳ್ಳುವುದಿಲ್ಲ. ಇನ್ನು ಚುನಾವಣಾ ಪೂರ್ವದಲ್ಲಿ ಹೇಳಿದಂತೆ ಕಾಂಗ್ರೆಸ್ ಸರ್ಕಾರ ಬಂದಲ್ಲಿ ದ್ವೇಷ ಭಾಷಣ ಮಾಡುವವರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಹೇಳಲಾಗಿತ್ತು. ಅದರಂತೆ ಪೊಲೀಸ್ ಇಲಾಖೆ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಎಲ್ಲ ಮಾತಿನ ಮೇಲೆ ನಿಗಾ ವಹಿಸುತ್ತಿದ್ದಾರೆ ಎಂದು ಹೇಳಿದರು.
ಗೃಹ ಸಚಿವರು ಸಮುದಾಯ ನೋಡಿ ಕೇಸು ಹಾಕಲು ಸೂಚನೆ ಕೊಟ್ಟಿದ್ದಾರೆ; ಮಾಜಿ ಸಿಎಂ ಬೊಮ್ಮಾಯಿ ಆರೋಪ
ಅಹಿತಕರ ಘಟನೆಗಳಿಗೆ ಅನಂತ್ ಕುಮಾರ್ ಹೆಗಡೆಯೇ ಕಾರಣ: ನಮಗೆ ನಮ್ಮದೇ ಆದಂತ ಭಾವನೆಗಳಿರುತ್ತೆ, ಸಂಸ್ಕೃತಿ ಇರುತ್ತೆ. ಆ ರೀತಿ ಮಾತನಾಡಿದರೆ ಅವರ ಸಂಸ್ಕೃತಿ ಏನು ಅಂತ ತೋರಿಸ್ತಿದೆ ಎಂದು ಜನ ಹೇಳುತ್ತಾರೆ. ಅವರ ಹೇಳಿಕೆಯನ್ನ ಯಾರು ಒಪ್ಪುವುದಿಲ್ಲ. ಇನ್ನು ರಾಮ ಮಂದಿರ ಉದ್ಘಾಟನೆ ವೇಳೆ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೆ ಅವರೇ ಜವಾಬ್ದಾರಿ ಆಗುತ್ತಾರೆ. ಅವರಿಗೆ ಯಾರು ಪ್ರೇರೇಪಣೆ ಮಾಡಿದ್ದಾರೆ ಗೊತ್ತಿಲ್ಲ. ಶ್ರೀರಾಮನೇ ಅವರಿಗೆ ಒಳ್ಳೆ ಮನಸ್ಸು ಕೊಡಬೇಕು. ಇದರಿಂದ ಏನಾದರೂ ಘಟನೆಗಳು ನಡೆದರೆ ಖಂಡಿತ ಅವರೇ ಜವಾಬ್ದಾರಿ ಆಗುತ್ತಾರೆ. ಬೇರೆಯವರನ್ನ ಜವಾಬ್ದಾರಿ ಮಾಡುವುದಿಲ್ಲ ಅವರೇ ಜವಾಬ್ದಾರಿ ಆಗ್ತಾರೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.