ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಹಿತ ಎಲ್ಲ ಹಿಂದೂ ಧರ್ಮ, ಜನಾಂಗದವರಿಗೆ ಸೌಲಭ್ಯ ನೀಡಿದ ರೀತಿಯಲ್ಲಿಯೇ ಅಲ್ಪಸಂಖ್ಯಾತರಿಗೂ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಸೌಲಭ್ಯ ನೀಡಿದ್ದೇನೆ.
ಶಿಕಾರಿಪುರ (ಏ.03): ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಹಿತ ಎಲ್ಲ ಹಿಂದೂ ಧರ್ಮ, ಜನಾಂಗದವರಿಗೆ ಸೌಲಭ್ಯ ನೀಡಿದ ರೀತಿಯಲ್ಲಿಯೇ ಅಲ್ಪಸಂಖ್ಯಾತರಿಗೂ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಸೌಲಭ್ಯ ನೀಡಿದ್ದೇನೆ. ಒಂದು ವೇಳೆ ಮುಸ್ಲಿಮರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡಿಲ್ಲ ಎಂದು ತಿಳಿಸಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಪಟ್ಟಣದ ಕುಮದ್ವತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಸೋಮವಾರ ನಡೆದ ತಾಲೂಕು ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವಿಜಯೇಂದ್ರ ಅವರನ್ನು ರಾಜ್ಯದ ಯಾವುದೇ ಮೂಲೆಯಲ್ಲಿ ಕಣಕ್ಕೆ ಇಳಿಸಿದರೂ ಗೆಲ್ಲುವಂತಹ ನಾಯಕತ್ವ ಅವರಲ್ಲಿದೆ. ಆದರೂ ವರುಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕೆಂಬ ಕಾರ್ಯಕರ್ತರ ಅಪೇಕ್ಷೆ ಹಾಗೂ ನಾಯಕರ ಒತ್ತಡಕ್ಕೆ ನಾನು ಸ್ಪಷ್ಟೀಕರಣ ನೀಡಿದ್ದೇನೆ ಎಂದರು. ವಿಜಯೇಂದ್ರ ನನ್ನ ಕರ್ಮಭೂಮಿಯಾದ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದ್ದೇನೆ. ಯಾವುದೇ ಜಾತಿ, ಮತ, ಧರ್ಮ ಎನ್ನದೇ ಎಲ್ಲ ಸಮುದಾಯಗಳಿಗೂ ಕಾರ್ಯಕ್ರಮಗಳನ್ನು ನೀಡಿದ್ದೇನೆ. ನಿಮ್ಮ ಅಪೇಕ್ಷೆಯಂತೆ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ. ತಾಲೂಕಿನ ಜನತೆ ಆಶೀರ್ವಾದದಿಂದ ಅವರ ಅಪೇಕ್ಷೆಯಂತೆ ಶಿವಶರಣರ ನಾಡಿನ ಸರ್ವಾಂಗೀಣ ಅಭಿವೃದ್ಧಿ ಹಾಗೂ ನೀರಾವರಿ ಕಾರ್ಯಗಳನ್ನು ಮಾಡಿದ ತೃಪ್ತಿ ನನಗಿದೆ ಎಂದು ತಿಳಿಸಿದರು.
undefined
ಅನಧಿಕೃತ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿ ಎನ್.ಎಂ.ನಾಗರಾಜು
ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿದ್ದ ನಾನು ಆ ಪಟ್ಟಿಯನ್ನು ವರಿಷ್ಠರಿಗೆ ಇಂದು ತಲುಪಿಸಬೇಕಿತ್ತು. ಅನಿವಾರ್ಯವಾಗಿ ಬರಬೇಕಾದ ಪ್ರಸಂಗ ಬಂತು. ರಾಜ್ಯದಲ್ಲಿ ಬಿಜೆಪಿ ಬಲಪಡಿಸುವ ನಿಟ್ಟಿನಲ್ಲಿ ವಿಜಯೇಂದ್ರ ಅವರು ಪ್ರತಿ ಜಿಲ್ಲೆ ತಾಲೂಕುಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಆದಕಾರಣ ತಾಲೂಕಿನ ಜನತೆ ನನಗೆ ಹಾಗೂ ರಾಘವೇಂದ್ರ ಅವರಿಗೆ ಯಾವ ರೀತಿಯಲ್ಲಿ ಆಶೀರ್ವಾದ ಮಾಡಿ, ವಿಧಾನಸಭೆಗೆ ಕಳಿಸಿದ್ದೀರೋ ಅದೇ ರೀತಿಯಲ್ಲಿ ನಿಮ್ಮ ಮಗನೆಂದು ವಿಜಯೇಂದ್ರ ಅವರಿಗೆ 50 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಶಿಕಾರಿಪುರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ, ಪಕ್ಷಾತೀತ, ಜಾತ್ಯತೀತವಾಗಿ ಎಲ್ಲ ಸಮುದಾಯದ ಏಳಿಗೆಗೆ ಶ್ರಮಿಸಿದ್ದಾರೆ. ಅವರು ನೀಡಿದ ಹಲವಾರು ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಜನರಿಗೆ ತಿಳಿಸುವ ಮೂಲಕ ವಿಜಯೇಂದ್ರ ಅವರಿಗೆ 50 ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನಡೆ ಸಾಧಿಸುವ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ನಂಜುಂಡಪ್ಪ ವರದಿಯಲ್ಲಿ ಅತ್ಯಂತ ಹಿಂದುಳಿದ ತಾಲೂಕು ಎಂದು ನಮೂದಾಗಿದ್ದ ಶಿಕಾರಿಪುರ ಇಂದು ರಾಜ್ಯದಲ್ಲಿಯೇ ಮಾದರಿ ತಾಲೂಕಾಗಿದೆ. ಇದಕ್ಕೆ ಕಾರಣ ತಾವು ಯಡಿಯೂರಪ್ಪ ಅವರನ್ನು ಇಲ್ಲಿಂದ ಶಾಸಕರನ್ನಾಗಿ ಆಯ್ಕೆ ಮಾಡಿ, ವಿರೋಧ ಪಕ್ಷದ ನಾಯಕರನ್ನಾಗಿ, ಮುಖ್ಯಮಂತ್ರಿಯಾಗಿಸಿದ್ದು. ಮುಂದೆ ತಂದೆಯವರ ಆಶಯದಂತೆ ಈ ತಾಲೂಕಿನ ಇನ್ನಷ್ಟುಅಭಿವೃದ್ಧಿ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ನನಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. ರಂಜಾನ್ ತಿಂಗಳ ಈ ಸಂದರ್ಭದಲ್ಲಿ ತಾವು ಉಪವಾಸ ಇದ್ದಾಗ್ಯೂ ಯಡಿಯೂರಪ್ಪ ಅವರನ್ನು ಕಾಣಲು ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ. ಅದಕ್ಕೆ ನಾವು ಆಭಾರಿಗಳಾಗಿದ್ದೇವೆ ಎಂದರು.
ಭಾವೈಕ್ಯತೆ ಸಾರುವ ವದ್ದಿಕೆರೆ ಸಿದ್ದಪ್ಪನ ಅದ್ದೂರಿ ರಥೋತ್ಸವ ಆಚರಣೆ: ಕಣ್ತುಂಬಿಕೊಂಡ ಭಕ್ತಗಣ
ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮವಾಗಿ .6 ಸಾವಿರ ಹಾಗೂ .4 ಸಾವಿರ ಸಹಾಯಧನವನ್ನು ರೈತರಿಗೆ ನೀಡುತ್ತಿದೆ. ಒಟ್ಟು .53 ಲಕ್ಷ ರೈತರ ಖಾತೆಗೆ ಜಮಾ ಆಗುತ್ತದೆ. ಇದು ಬಿಜೆಪಿಯ ಕೊಡುಗೆ. .1250 ರೈತಶಕ್ತಿ ಯೋಜನೆ ಅಡಿಯಲ್ಲಿ ಡೀಸೆಲ್ ಸಹಾಯಧನವಾಗಿ ನೀಡುತ್ತಿದ್ದು, ಇದು ಬಿಜೆಪಿ ಸರ್ಕಾರದ ಹೆಮ್ಮೆ ಎಂದರು. ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ರಾಜೀವ್ ಕುಡುಚಿ ಮಾತನಾಡಿ, ತಾಲೂಕಿನ ಪ್ರತಿ ಮತದಾರನು ವಿಜಯೇಂದ್ರ ಅವರಿಗೆ ನೀಡುವ ಮತವು ಬಿಎಸ್ವೈ ಅವರ 45 ವರ್ಷಗಳ ಅವಿರತ ಹೋರಾಟದ ಪ್ರತಿಫಲವನ್ನು ನೀಡುತ್ತಿರುವುದು, ಈ ನೆಲದ ಅಸ್ಮಿತೆಯನ್ನು ಕಾಪಾಡುವ ಜವಾಬ್ದಾರಿ ಈ ನೆಲದ ಮತದಾರರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಬಣಜಾರ್ ಸಮುದಾಯದ ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು. ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ವಿಪ ಸದಸ್ಯ ರುದ್ರೇಗೌಡ, ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಉಗ್ರಾಣ ನಿಗಮದ ಅಧ್ಯಕ್ಷ ಎಚ್.ಟಿ. ಬಳಿಗಾರ್, ಹಾಲಪ್ಪ, ಬಿ.ಡಿ.ಭೂಕಾಂತ್, ಎಂ.ಬಿ.ಚನ್ನವೀರಪ್ಪ, ವಸಂತಗೌಡ ಮತ್ತಿತರರು ಉಪಸ್ಥಿತರಿದ್ದರು.