ಜಾತಿ- ಜಾತಿಗಳಲ್ಲಿ, ಧರ್ಮ-ಧರ್ಮಗಳಲ್ಲಿ ವೈಷಮ್ಯ ಮೂಡಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದು ಬಿಜೆಪಿ. ಮತ್ತೆ ಕೋಮುಗಲಭೆ ಸೃಷ್ಟಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಆರೋಪಿಸಿದರು.
ಮೈಸೂರು (ಜು.17): ಜಾತಿ- ಜಾತಿಗಳಲ್ಲಿ, ಧರ್ಮ-ಧರ್ಮಗಳಲ್ಲಿ ವೈಷಮ್ಯ ಮೂಡಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದು ಬಿಜೆಪಿ. ಮತ್ತೆ ಕೋಮುಗಲಭೆ ಸೃಷ್ಟಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಆರೋಪಿಸಿದರು. ಕಾಂಗ್ರೆಸ್ ಕಚೇರಿಯಲ್ಲಿ ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿಯವರು ಚುನಾವಣೆ ವೇಳೆ ನೀಡಿದ ಒಂದೇ ಒಂದು ಭರವಸೆಗಳನ್ನು ಕೂಡ ಈಡೇರಿಸಿಲ್ಲ. ಕಾಂಗ್ರೆಸ್ ಗ್ಯಾರಂಟಿಗಳನ್ನು ಸಹಿಸಲಾಗದ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.
ಅದಕ್ಕಾಗಿ ನಾವು ಜಾಗೃತರಾಗಬೇಕಿದೆ ಎಂದರು. ರಾಜ್ಯದಲ್ಲಿ ಬಡತನ ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನೀಡಿದ 5 ಗ್ಯಾರಂಟಿ ಯೋಜನೆಗಳಿಗೆ ಸುಮಾರು . 52 ಸಾವಿರ ಕೋಟಿ ಅನುದಾನವನ್ನು ಮೀಸಲಿಟ್ಟು ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಶಕ್ತಿ ಯೋಜನೆ ಜಾರಿಯಾಗಿದ್ದು, ಇದರಿಂದ ಪ್ರತಿದಿನ 50 ಲಕ್ಷ ಮಹಿಳೆಯರು ಸಾರಿಗೆ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.
ಚಂದ್ರಯಾನದ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು ವಿಜ್ಞಾನಿಗಳು
200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಅನ್ನ ಭಾಗ್ಯ ಯೋಜನೆಗೆ ಬಡವರ ವಿರೋಧಿ ನೀತಿ ಅನುಸರಿಸಿ ಕೇಂದ್ರದ ಬಿಜೆಪಿ ಸರ್ಕಾರ ಅಕ್ಕಿ ಕೋಡುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಎಲ್ಲಿಯವರೆಗೆ ಅಕ್ಕಿ ವ್ಯವಸ್ಥೆ ಆಗುವುದಿಲ್ಲವೋ ಅಲ್ಲಿಯವರೆಗೆ ನೇರ ವರ್ಗಾವಣೆಯ ಮೂಲಕ ಬಡ ಜನರ ಖಾತೆಗೆ ಹಣ ಜಮಾ ಆಗುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಅವರು ವಿವರಿಸಿದರು. 5 ಗ್ಯಾರಂಟಿಗಳಲ್ಲಿ ಈಗಾಗಲೇ 3 ಯೋಜನೆಗಳು ಪ್ರಾರಂಭವಾಗಿವೆ.
ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜು.17 ರಿಂದ 20ರ ಒಳಗೆ ಭಾಗ್ಯಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಿದ್ದು, ಆಗಸ್ಟ್‌ನಲ್ಲಿ ಕುಟುಂಬದ ಯಜಮಾನಿಗೆ . 2000 ನೀಡುತ್ತೇವೆ. ಯುವನಿಧಿ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು. ಮೈಸೂರಿನ 11 ವಿಧಾನಸಭಾ ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಇದಕ್ಕೆ ಕಾರಣ ಪಕ್ಷದ ಕಾರ್ಯಕರ್ತರು. ಇದೇ ರೀತಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಹೆಚ್ಚಿನ ಬಹುಮತಗಳಲ್ಲಿ ಗೆಲ್ಲಬೇಕು. ಅದಕ್ಕೆ ಕಾರ್ಯಕರ್ತರು ಈಗಿನಿಂದಲೇ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಕಟ್ಟುನಿಟ್ಟಾಗಿ ತೆರಿಗೆ ವಸೂಲಿ ಮಾಡಲು ಸೂಚನೆ: ಶಾಸಕಿ ರೂಪಕಲಾ
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ, ಮಾಜಿ ಮೇಯರ್ ದಕ್ಷಿಣಾಮೂರ್ತಿ, ಮುಖಂಡರಾದ ಎಂ. ಶಿವಣ್ಣ, ಈಶ್ವರ್ ಚಕ್ಕಡಿ, ಗಿರೀಶ್, ಭಾಸ್ಕರ್ ಗೌಡ, ರಮೇಶ್, ತಿವಾರಿ, ಗೋಪಿನಾಥ್ ಮೊದಲಾದವರು ಇದ್ದರು.