ಏಕೆ ಚಡಪಡಿಸ್ತೀಯ ಅಣ್ಣಾ?: ಸವದಿಗೆ ರಮೇಶ್‌ ಜಾರಕಿಹೊಳಿ ಟಾಂಗ್‌

Published : Apr 10, 2023, 10:40 AM IST
ಏಕೆ ಚಡಪಡಿಸ್ತೀಯ ಅಣ್ಣಾ?: ಸವದಿಗೆ ರಮೇಶ್‌ ಜಾರಕಿಹೊಳಿ ಟಾಂಗ್‌

ಸಾರಾಂಶ

ಏಕೆ ಇಷ್ಟು ಚಡಪಡಿಸುತ್ತಿದ್ದೀಯಾ? ಲಕ್ಷ್ಮಣ ಅಣ್ಣಾ...ಅರಾಮಾಗಿರು.. ಅಥಣಿ ಮತ ಕ್ಷೇತ್ರದ ಟಿಕೆಟ್‌ ವಾರ್‌ ಸಂಬಂಧಪಟ್ಟಂತೆ ಬಿಜೆಪಿಯ ಪ್ರಬಲ ಟಿಕೆಟ್‌ ಆಕಾಂಕ್ಷಿ ಲಕ್ಷ್ಮಣ ಸವದಿ ಅವರಿಗೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೀಗೆ ಟಾಂಗ್‌ ಕೊಟ್ಟಿದ್ದಾರೆ. 

ಬೆಳಗಾವಿ (ಏ.10): ಏಕೆ ಇಷ್ಟು ಚಡಪಡಿಸುತ್ತಿದ್ದೀಯಾ? ಲಕ್ಷ್ಮಣ ಅಣ್ಣಾ...ಅರಾಮಾಗಿರು.. ಅಥಣಿ ಮತ ಕ್ಷೇತ್ರದ ಟಿಕೆಟ್‌ ವಾರ್‌ ಸಂಬಂಧಪಟ್ಟಂತೆ ಬಿಜೆಪಿಯ ಪ್ರಬಲ ಟಿಕೆಟ್‌ ಆಕಾಂಕ್ಷಿ ಲಕ್ಷ್ಮಣ ಸವದಿ ಅವರಿಗೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೀಗೆ ಟಾಂಗ್‌ ಕೊಟ್ಟಿದ್ದಾರೆ. ಮಹಾರಾಷ್ಟ್ರದ ಶಿನ್ನೊಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೋಲು, ಗೆಲುವು ದೇವರ ಇಚ್ಛೆ. 

ಲಕ್ಷ್ಮಣ ಸವದಿ ಹತಾಶೆ ಆಗುತ್ತಿರೋದೇಕೆ? ಗೊತ್ತಾಗುತ್ತಿಲ್ಲ. ನಮಗೆ ವರಿಷ್ಠರಿದ್ದಾರೆ. ಅವರ ಮುಂದೆ ನಾನು ಮತ್ತು ಲಕ್ಷ್ಮಣ ಸವದಿ ಗಿಡದ ತಪ್ಪಲು ಅಷ್ಟೇ ಎಂದೂ ವ್ಯಾಖ್ಯಾನಿಸಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕರು ಹೆಮ್ಮರವಾಗಿದ್ದಾರೆ. ಅಥಣಿ ಕ್ಷೇತ್ರದ ಟಿಕೆಟ್‌ ಹಂಚಿಕೆ ಸಂಬಂಧಪಟ್ಟಂತೆ ಅವರೇ ಸೂಕ್ತ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಅಥಣಿ ಕ್ಷೇತ್ರದಲ್ಲಿ ಮಹೇಶ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲ ಸೇರಿದಂತೆ ಬಿಜೆಪಿ ಸೇರಿದ ಎಲ್ಲರಿಗೂ ಬಿಜೆಪಿ ಟಿಕೆಟ್‌ ಸಿಗಲಿದೆ. 

ಬಿಜೆಪಿ ದುರಾಡಳಿತ ತಿಂಗಳಲ್ಲಿ ಅಂತ್ಯ: ಸಂಸದ ಶಶಿ ತರೂರ್‌

ಈ ಹಿಂದೆ ಬಿಜೆಪಿ ಸೇರಿದ 17 ಶಾಸಕರಿಗೂ ಬಿಜೆಪಿ ಹೈಕಮಾಂಡ್‌ ಆಶೀರ್ವಾದ ಮಾಡಲಿದೆ ಎಂದು ಹೇಳಿದರು. ಮಹೇಶ ಕುಮಟಳ್ಳಿ ಬದಲು ಬಿಜೆಪಿ ಟಿಕೆಟ್‌ ನನಗೆ ಕೊಡಬೇಕು, ಮಹೇಶ ಕುಮಟಳ್ಳಿ ಸೋತರೆ ಅದರ ಹಣೆಪಟ್ಟಿನನಗೆ ಕಟ್ಟಲು ಷಡ್ಯಂತ್ರ ನಡೆದಿದೆ ಎಂಬ ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಕ್ರಿಯಿಸಿದ ರಮೇಶ ಜಾರಕಿಹೊಳಿ, ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ, ಮಹೇಶ ಕುಮಟಳ್ಳಿಗೆ ಬಿಜೆಪಿ ಟಿಕೆಟ್‌ ಸಿಗುವ ಬಗ್ಗೆ ನನಗೆ ನೂರಕ್ಕೆ ನೂರರಷ್ಟುವಿಶ್ವಾಸವಿದೆ ಎಂದು ಹೇಳಿದರು.

ಮಹಾರಾಷ್ಟ್ರ ಗಡಿಯಲ್ಲಿ ಜಾರಕಿಹೊಳಿ ಬೆಂಬಲಿಗರ ಸಭೆ: ಚುನಾವಣಾ ನೀತಿಸಂಹಿತೆ ಭೀತಿ ಹಿನ್ನೆಲೆಯಲ್ಲಿ ರಮೇಶ ಜಾರಕಿಹೊಳಿ ಮಹಾರಾಷ್ಟ್ರದ ಗಡಿ ಗ್ರಾಮವಾದ ಶಿನ್ನೊಳ್ಳಿಯಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ. ಶಿನ್ನೊಳ್ಳಿಯ ಖಾಸಗಿ ಕಾರ್ಖಾನೆ ಕಟ್ಟಡದಲ್ಲಿ ರಮೇಶ್‌ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೆಂಬಲಿಗರ ಸಭೆ ನಡೆದಿದೆ. ವಿಷಯ ಗೊತ್ತಾಗಿ ವರದಿಗೆ ತೆರಳಿದ್ದ ಮಾಧ್ಯಮದವರನ್ನು ಕಂಡ ಜಾರಕಿಹೊಳಿ ಮಾಧ್ಯಮದವರನ್ನು ಹೊರಗಿಟ್ಟೇ ಸಭೆ ಆರಂಭಿಸಿದ್ದಾರೆ. 

ರಾಜಕಾರಣ ನಿಂತ ನೀರಲ್ಲ, ನಾನೆಂದೂ ಭ್ರಷ್ಟಾಚಾರ ಮಾಡಿಲ್ಲ: ರಘು ಆಚಾರ್‌

ಸಭೆಗೆ ರಮೇಶ್‌ ಜಾರಕಿಹೊಳಿ ಆಗಮಿಸುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲು ಹಾಗೂ ಸಭೆಯ ವರದಿ ಮಾಡದಂತೆ ಬೆಂಬಲಿಗರು ಅಡ್ಡಿಪಡಿಸಿದರು. ಗೇಟ್‌ ಮೇಲೆ ಹತ್ತಿ ಚಿತ್ರೀಕರಣ ಆಗದಂತೆ ಕಾಮೆರಾಗಿ ಅಡ್ಡಿಪಡಿಸಿದರು. ಬಳಿಕ ಹೊರಗೆ ಬಂದ ರಮೇಶ್‌, ಮಾಧ್ಯಮದವರೊಂದಿಗೆ ಸ್ವಲ್ಪ ಗರಂ ಆಗಿಯೇ ಮಾತನಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!