ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಶಿವಮೊಗ್ಗ (ಅ.01): ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಕಳ್ಳತನದಿಂದ ಬಿಡದೇ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕಳ್ಳತನದಿಂದ ನೀರು ಬಿಟ್ಟಿರುವುದೇ ದೊಡ್ಡ ತಪ್ಪು. ಜನರು ಆಕ್ರೋಶಗೊಂಡ ಮೇಲೆ ಯಾರನ್ನೂ ಕೇಳದೇ ತಮಿಳುನಾಡಿಗೆ ನೀರು ಬಿಟ್ಟ ಕಳ್ಳರಿಗೆ ಬುದ್ಧಿ ಬಂದಂತೆ ಕಾಣುತ್ತಿದೆ.
ಈಗ ವಕೀಲರು, ತಜ್ಞರು ಹಾಗೂ ಹಲವರನ್ನು ಕರೆದು ಮಾತುಕತೆ ನಡೆಸಿದ್ದಾರೆ. ಮೊದಲು ಕಳ್ಳ ಎಂದಿದ್ದೆ, ಈಗ ದಡ್ಡರು ಎನ್ನಬೇಕಾಗಿದೆ ಎಂದು ಲೇವಡಿ ಮಾಡಿದರು. ಕಾವೇರಿ ವಿಚಾರವಾಗಿ ಮಾತುಕತೆ ನಡೆಸಿದ್ದರೆ ರಾಜ್ಯದ ಜನರು ಅವರ ಜೊತೆ ಇರುತ್ತಿದ್ದರು. ಸ್ಟಾಲಿನ್ ಎಂಬ ಪುಣ್ಯಾತ್ಮನಿಗೆ ಒಪ್ಪಿಸಲು, ಇಂಡಿಯಾ ಸಂಸ್ಥೆ ಓಲೈಸಲು ಡಿ.ಕೆ. ಶಿವಕುಮಾರ್ ನೀರು ಬಿಟ್ಟಿದ್ದಾರೆ. ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ರಾಜ್ಯದ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ಹರಿಹಾಯ್ದರು. ಎಲ್ಲ ಆದ ಮೇಲೆ ನಾವು ಜನರ ಜೊತೆ ಇದ್ದೆವೆ ಎಂದು ಈಗ ಹೇಳುತ್ತಿದ್ದಾರೆ.
ಪ್ರಧಾನಿ ಮೋದಿ ಜಗತ್ತೇ ಮೆಚ್ಚುವಂತಹ ನಾಯಕ: ಸಂಸದ ರಮೇಶ ಜಿಗಜಿಣಗಿ
ಇದಕ್ಕಿಂತ ಅನ್ಯಾಯ ಮತ್ತೇನಿದೆ. ಹಿಂದೆ ನೀರು ಬಿಟ್ಟಿದ್ದರೂ ರೈತರು, ವಕೀಲರು ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಟ್ಟಿದ್ದಾರೆ, ಆದರೆ, ಇವರು ಮೊದಲು ನೀರು ಬಿಟ್ಟು ಆಮೇಲೆ ಸಭೆ ನಡೆಸುತ್ತಿದ್ದಾರೆ. ಇದರ ಉಪಯೋಗವೇನು ?, ಯಾರನ್ನೂ ಕೇಳದೇ ನೀರು ಬಿಟ್ಟಿದ್ದೇ ತಪ್ಪು, ಯಾರನ್ನು ಕೇಳದೆ ನೀರು ಬಿಟ್ಟು ಈಗ ಅವರು ಬರಲಿಲ್ಲ, ಇವರು ಬರಲಿಲ್ಲ ಎಂದರೆ ಹೇಗೆ? ಮೊದಲು ಚಲನಚಿತ್ರ ನಟರು ಬರಲಿಲ್ಲ ಎಂದು ಬೊಬ್ಬೆ ಹೊಡೆದರು. ಈಗ ಮೋದಿ ಬರುತ್ತಿಲ್ಲ ಎನ್ನುತ್ತಿದ್ದಾರೆ. ಪ್ರಧಾನಮಂತ್ರಿ ಮೇಲೆ ಆರೋಪ ಮಾಡುವುದೇ ಇವರ ಕೆಲಸವಾಗಿದೆ ಎಂದು ಹರಿಹಾಯ್ದರು.