ಜನತೆಗೆ ಗ್ಯಾರಂಟಿ ಯೋಜನೆಗಳ ರುಚಿ ತೋರಿಸಿ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಗ್ಯಾರಂಟಿಗಳ ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದರು.
ಶಿವಮೊಗ್ಗ (ಸೆ.12): ಜನತೆಗೆ ಗ್ಯಾರಂಟಿ ಯೋಜನೆಗಳ ರುಚಿ ತೋರಿಸಿ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಗ್ಯಾರಂಟಿಗಳ ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದು ಕೂಡ ಜನರಿಗೆ ಸಮಾಧಾನ ತರುವ ರೀತಿಯಲ್ಲಿ ಅನುಷ್ಠಾನವಾಗಿಲ್ಲ. 200 ಯುನಿಟ್ ವಿದ್ಯುತ್ ಫ್ರೀ ಎಂದರು, ಈಗ ದುಡ್ಡು ಕೊಡುತ್ತೇವೆ ಎಂದರೂ ಕರೆಂಟ್ ಸಿಗುತ್ತಿಲ್ಲ ಎಂದರು.
ಶಕ್ತಿ ಯೋಜನೆ ವಿರುದ್ಧ ಜನರೇ ಬೀದಿಗಳಿದಿದ್ದಾರೆ. 10 ಕೆಜಿ ಅಕ್ಕಿ ಎಂದು 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಗೃಹಲಕ್ಷಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಇಲ್ಲ, ಯಾವಾಗ ಬೇಕಾದರೂ ಸಲ್ಲಿಸಬಹುದು ಎಂದು ಈಗ ಅರ್ಜಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಇನ್ನು ನಿರುದ್ಯೋಗ ಯುವಕರಿಗೆ ಯುವನಿಧಿ ಡಿಸೆಂಬರ್‌ಗೆ ಅನ್ನುತ್ತಿದ್ದಾರೆ. ಆದರೆ, ಅಲ್ಲಿಯವರೆಗೆ ಈ ಸರ್ಕಾರ ಇರತ್ತೊ, ಇಲ್ಲವೋ ಗೊತ್ತಿಲ್ಲ ಎಂದು ಹರಿಹಾಯ್ದರು.
ಹಿಂದುತ್ವಕ್ಕಾಗಿ ರಾಜಕೀಯಕ್ಕೆ ಬಂದ ನನ್ನ ಹೋರಾಟಕ್ಕೆ ಸೋಲಿಲ್ಲ: ಸಿ.ಟಿ.ರವಿ
ರೈತರಿಗೆ ಅಪಮಾನ: ಜಿಲ್ಲೆಯಲ್ಲಿ ಮಳೆ, ಬೆಳೆ ಇಲ್ಲದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ಸಚಿವರು ಪರಿಹಾರ ಸಿಗುತ್ತದೆ ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಹೇಳುವ ಮೂಲಕ ರೈತರಿಗೆ ಅಪಮಾನ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಒಬ್ಬ ರೈತನನ್ನೂ ಭೇಟಿ ಆಗುತ್ತಿಲ್ಲ. ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದರೂ ಇನ್ನೂ ಸರ್ವೆ ಕಾರ್ಯವೇ ಆಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದನೆಲ್ಲ ನೋಡುತ್ತಿದ್ದರೆ ರಾಜ್ಯದಲ್ಲಿ ಸಚಿವರು ಇದ್ದಾರೋ, ಇಲ್ಲವೋ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಛೇಡಿಸಿದರು.
ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ 150ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಎಷ್ಟು ಜನರಿಗೆ ಸರ್ಕಾರ ಪರಿಹಾರ ಕೊಟ್ಟಿದೆ. ಎಷ್ಟು ರೈತರಿಗೆ ಬೆಳೆ ಪರಿಹಾರ ಸಿಕ್ಕಿದೆ? ಬರಪೀಡಿತ ತಾಲೂಕು ಘೋಷಣೆಗೆ ವಿಳಂಬ ಯಾಕೆ? ಕಂದಾಯ ಇಲಾಖೆ ಸತ್ತು ಹೋಗಿದೆಯೇ ಎಂದು ಪ್ರಶ್ನಿಸಿದರು.
ಜಿಲ್ಲೆಯ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಮೊದಲ ಬಾರಿಗೆ ಸಚಿವರಾಗಿದ್ದಾರೆ. ಅವರಿಗೆ ಅನುಭವ ಕಮ್ಮಿ. ಕೂಡಲೆ ಅವರು ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಲಿ. ರೈತರ ಆತ್ಮಹತ್ಯೆ, ಬೆಳೆ ಪರಿಹಾರ ಕುರಿತು ಮಾಹಿತಿ ಪಡೆದು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ನೀವಾದರೂ ಸಚಿವರು ರಾಜ್ಯದಲ್ಲಿದ್ದಾರೆ ಎನ್ನುವುದನ್ನು ತೋರ್ಪಡಿಸಿ. ರೈತರ ಶಾಪ ನಿಮಗೆ ತಟ್ಟದಿರಲಿ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಜನ ನಂಬುತ್ತಾರೆ. ಇಲ್ಲದಿದ್ದರೆ ಮೋಸಗಾರ ಸರ್ಕಾರವೆಂದು ಜನ ಬೀದಿಗಿಳಿಯುತ್ತಾರೆ ಎಂದು ಸಲಹೆ ನೀಡಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಸೊನ್ನೆ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ನನಗೆ ಕರೆ ಮಾಡಿದ್ದರು. ಅವರು ಮೈತ್ರಿಯಿಂದ ಖುಷಿಯಾಗಿದ್ದಾರೆ, ನಮಗೂ ಸಂತಸವಿದೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ. ಕಳೆದ ಬಾರಿ ನಾವು 25 ಸ್ಥಾನಗಳಲ್ಲಿ ಗೆದ್ದಿದ್ದೆವು. ಈ ಬಾರಿ 28 ಕ್ಷೇತ್ರದಲ್ಲಿ ಗೆಲ್ಲಬೇಕು ಎಂದು ವರಿಷ್ಠರು ಮೈತ್ರಿಗೆ ಕರೆ ಕೊಟ್ಟಿದ್ದರು. ಅದರಂತೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸುತ್ತುವುದು ಗ್ಯಾರಂಟಿ ಎಂದು ಭವಿಷ್ಯ ನುಡಿದರು.
ಈ ಮೈತ್ರಿಕೂಟದಿಂದ ಕಾಂಗ್ರೆಸ್ ನಾಯಕರಿಗೆ ಹೊಟ್ಟೆ ನೋವು ಶುರುವಾಗಿದೆ. ಬಿಜೆಪಿ ಕೋಮುವಾದಿ ಪಕ್ಷ ಎಂದು ಟೀಕಿಸುತ್ತಿದ್ದಾರೆ. ಬಿಜೆಪಿ ಯಾವತ್ತೂ ಕೋಮುವಾದಿ ಅಲ್ಲ. ಕಾಂಗ್ರೆಸ್ಸೇತರ ಸರ್ಕಾರ ರಾಜ್ಯದಲ್ಲಿ ಬಂದಾಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದರು. ಆಗ ಇದೇ ಸಿದ್ದರಾಮಯ್ಯ ಅವರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದು, ಗೂಟದ ಕಾರನ್ನು ನೀಡಿದ್ದು ಬಿಜೆಪಿಯೇ. ಅದನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂದು ಕುಟುಕಿದರು.
ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸಿದ ಪ್ರಕಾಶ್ ರಾಜ್!
ಇಂದು ಸರ್ಕಾರ ವಿರುದ್ಧ ಧರಣಿ: ರೈತವಿರೋಧ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಕೇಂದ್ರದಲ್ಲಿ ಸೆ. 12ರಂದು ಬೆಳಿಗ್ಗೆ 10.30ಕ್ಕೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರು, ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಅಂಗವಾಗಿ ಸೆ.17ರಿಂದ ಅ.2ರವರೆಗೆ ಬಿಜೆಪಿ ಸೇವಾಪಾಕ್ಷಿಕ ಆಚರಣೆ ಹಮ್ಮಿಕೊಂಡಿದೆ. ಇದರ ಅಂಗವಾಗಿ ರಕ್ತದಾನ ಶಿಬಿರ, ಆಯುಷ್ಮಾನ್ ಕಾರ್ಡ್ ವಿತರಣೆ, ದೀನದಯಾಳ್ ಜನ್ಮ ದಿನಾಚರಣೆ ಸೇರಿದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ.2ರಂದು ಗಾಂಧಿ ಜಯಂತಿ ದಿನದಂದು ಸ್ವಚ್ಛತಾ ಆಂದೋಲನದ ಮೂಲಕ ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.