ನನ್ನ ಇಡೀ ರಾಜಕಾರಣ ಕೋಮುವಾದಿ ಶಕ್ತಿಗಳ ವಿರುದ್ಧವೇ ನಡೆದಿದೆ. ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.
ಮೈಸೂರು (ಸೆ.12): ನನ್ನ ಇಡೀ ರಾಜಕಾರಣ ಕೋಮುವಾದಿ ಶಕ್ತಿಗಳ ವಿರುದ್ಧವೇ ನಡೆದಿದೆ. ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು. ಮೈಸೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಗೆ ಹೋಗಲು ಯತ್ನಿಸಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿ, ನಾನು ಬಿಜೆಪಿಗೆ ಹೋಗುತ್ತೇನೆ ಅಂದ್ರೆ ಯಾರಾದರೂ ನಂಬುತ್ತಾರಾ. ಯಾರನ್ನೋ ಯಾವುದೊ ಸಂದರ್ಭದಲ್ಲಿ ಭೇಟಿ ಮಾಡಿರುತ್ತೇವೆ. ಅದಕ್ಕೆಲ್ಲ ಪಕ್ಷ ಸೇರುತ್ತಾರೆ ಎಂದು ಹೇಳಲು ಸಾಧ್ಯನಾ? ಇತ್ತೀಚಿಗೆ ಅಮಿತ್ ಶಾ ಭೇಟಿ ಮಾಡಿದ್ದೆ. ಹಿಂದೆ ಯಾವುದೊ ಸಂದರ್ಭದಲ್ಲಿ ಅಡ್ವಾಣಿ ಅವರನ್ನ ಭೇಟಿ ಮಾಡಿದ್ದೆ. ಅದಕ್ಕೆಲ್ಲ ಈ ಅರ್ಥ ಕಟ್ಟುವುದಕ್ಕೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಮುಂದಿನ ಸಂಪುಟ ಸಭೆಯಲ್ಲಿ ಬರದ ಘೋಷಣೆ: ರಾಜ್ಯದಲ್ಲಿ ಬರ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡುತ್ತೇವೆ. ಸದ್ಯಕ್ಕೆ 62 ತಾಲೂಕುಗಳು ಬರಪೀಡಿತ ಮಾನದಂಡದ ವ್ಯಾಪ್ತಿಗೆ ಬರುತ್ತವೆ. ಇನ್ನೂ 136 ತಾಲೂಕುಗಳ ಬರ ಅಧ್ಯಯನ ನಡೆಯುತ್ತಿದೆ ಅದರ ವರದಿ ಬಂದ ನಂತರ ತೀರ್ಮಾನ ಮಾಡುತ್ತೇವೆ ಎಂದರು.
undefined
ಹಿಂದುತ್ವಕ್ಕಾಗಿ ರಾಜಕೀಯಕ್ಕೆ ಬಂದ ನನ್ನ ಹೋರಾಟಕ್ಕೆ ಸೋಲಿಲ್ಲ: ಸಿ.ಟಿ.ರವಿ
ನಾವು ಖುಷಿಯಿಂದ ನೀರು ಬಿಡುತ್ತಿಲ್ಲ: ನಾವು ಖುಷಿಯಿಂದ ತಮಿಳುನಾಡಿಗೆ ನೀರು ಬಿಡುತ್ತಿಲ್ಲ. ಪ್ರಾಧಿಕಾರದ ಆದೇಶ ಇರುವ ಕಾರಣ ಅನಿವಾರ್ಯವಾಗಿ ನೀರು ಬಿಡುತ್ತಿದ್ದೇವೆ. ತಮಿಳುನಾಡು ವಿನಾಕಾರಣ ಖ್ಯಾತೆ ತೆಗೆದಿದೆ. ಸೆ. 21 ರಂದು ಸುಪ್ರೀಂಕೋರ್ಟ್ ನಲ್ಲಿ ನಮ್ಮ ಸಂಕಷ್ಟ ವಿವರಿಸುತ್ತೇವೆ ಎಂದರು. ಮೇಕೆದಾಟು ಯೋಜನೆಗೆ ಅನುಮತಿ ನೀಡದಿರುವುದು ಕೇಂದ್ರ ಬಿಜೆಪಿ ಸರ್ಕಾರ, ಈ ಯೋಜನೆಗೆ ತಕರಾರು ಮಾಡಲು ತಮಿಳುನಾಡಿಗೆ ಯಾವುದೇ ವಿಚಾರವಿಲ್ಲ. ರಾಜ್ಯಕ್ಕೆ ನಿಗದಿಪಡಿಸಿರುವ 177.25 ಟಿಎಂಸಿ ಸಾಮಾನ್ಯ ವರ್ಷಗಳಲ್ಲಿ ನೀರು ಬಿಡಬೇಕು. ಸಂಕಷ್ಟದ ಸಮಯದಲ್ಲಿ ಸಂಕಷ್ಟದ ಸೂತ್ರ ಅನುಸರಿಸಬೇಕು ಎಂದಿದೆ. ಆದರೆ ತಮಿಳುನಾಡಿನವರು ಅನಗತ್ಯವಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ಈ ಯೋಜನೆಗೆ ಸಂಬಂಧಿಸಿದ ಡಿಪಿಆರ್ ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಬಿಜೆಪಿಯವರು ಯೋಜನೆ ಅನುಮತಿ ದೊರಕಿಸಿಸಿಕೊಡಲು ಮನವಿ ಮಾಡಿಕೊಳ್ಳಬೇಕು. ಆದರೆ ರಾಜ್ಯ ಬಿಜೆಪಿಯವರು ಸರ್ವಪಕ್ಷ ಸಭೆಯಲ್ಲಿ ಕಾವೇರಿ ವಿಷಯದಲ್ಲಿ ರಾಜ್ಯಸರ್ಕಾರಕ್ಕೆ ಸಹಕರಿಸುವುದಾಗಿ ತಿಳಿಸಿ, ಇಲ್ಲಿ ಇದೇ ವಿಷಯದ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ. ಮೈಸೂರು, ಬೆಂಗಳೂರು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸುವುದು ನೀರು ನೀತಿಯಂತೆ ಮೊದಲ ಆದ್ಯತೆಯಾಗಿದೆ. ಈ ಮಧ್ಯೆ ರೈತರ ಹಿತ ಕಾಪಾಡಬೇಕು. ಸರ್ವೋಚ್ಛ ನ್ಯಾಯಾಲಯದಲ್ಲಿ ತಮಿಳುನಾಡು ಕೇಸು ದಾಖಲಿಸಿದ್ದು, ರಾಜ್ಯದ ನಿಲುವನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಲಿದೆ. ಯಾವುದೇ ಕಾರಣಕ್ಕೆ ರಾಜ್ಯದ ರೈತರ ಹಿತರಕ್ಷಣೆಯ ವಿಷಯದಲ್ಲಿ ರಾಜಕಾರಣ ಬೇಡ. ಈ ವಿಚಾರವಾಗಿ ಸರ್ವಪಕ್ಷ ನಿಯೋಗದ ಭೇಟಿಗೆ ಪ್ರಧಾನಮಂತ್ರಿಗಳ ಸಮಯ ಕೋರಿದ್ದು, ಯಾವುದೇ ಉತ್ತರ ಬಂದಿಲ್ಲವಾದ್ದರಿಂದ, ರಾಜ್ಯ ಬಿಜೆಪಿ ಸಂಸದರು , ಭೇಟಿಗೆ ಸಮಯ ನಿಗದಿಪಡಿಸಲಿ ಎಂದು ತಿಳಿಸಿದರು.
ಈಡೇರಿಸಲಾಗದ ಬೇಡಿಕೆ ಇಟ್ಟರೆ ಪೂರೈಸಲು ಆಗುತ್ತಾ..?: ಖಾಸಗಿ ವಾಹನ ಮಾಲೀಕ ಚಾಲಕರಿಂದ ಬೆಂಗಳೂರು ಬಂದ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈಡೇರಿಸುವಂತಹ ಬೇಡಿಕೆ ಕೇಳಿದ್ರೆ ಮಾಡಬಹುದು. ಈಡೇರಿಸಲಾಗದ ಬೇಡಿಕೆ ಇಟ್ಟರೆ ಹೇಗೆ. ರಾಜ್ಯದಲ್ಲಿ ಮಹಿಳೆಯರಿಗೆ ಅನುಕೂಲ ಆಗಲು ಶಕ್ತಿ ಯೋಜನೆ ತಂದಿದ್ದೇವೆ. ಇದರಿಂದ ಖಾಸಗಿ ಬಸ್ ಗಳಿಗೆ ಅವರು ಬರುತ್ತಿಲ್ಲ ಎನ್ನುತ್ತಾರೆ. ಹೀಗಾಗಿ ಅವರಿಗೆ ನಷ್ಟ ಆಗುತ್ತಿದೆ ಎನ್ನುವುದು ಅವರ ವಾದ. ನಷ್ಟ ಆಗುವುದು ಬಿಡುವುದು ಬೇರೆ. ನಷ್ಟ ತುಂಬಿಕೊಡಿ ಅಂದ್ರೆ ಆಗುತ್ತಾ? ಅದು ಸಾಧ್ಯವಾಗದ ಮಾತು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶ ಇದೆ. ಅದನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ ಎಂದರು.
ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸಿದ ಪ್ರಕಾಶ್ ರಾಜ್!
ಒಂದು ದೇಶ ಒಂದು ಚುನಾವಣೆ ಎಂಬುದು ಅವೈಜ್ಞಾನಿಕ: ಒಂದು ದೇಶ ಒಂದು ಚುನಾವಣೆ ವಿಚಾರ ಅಸಾಧ್ಯವಾದ ಮಾತು. ಈ ಯೋಚನೆ ಅವೈಜ್ಞಾನಿಕವಾಗಿದೆ. ಒಂದೇ ಚುನಾವಣೆ ಹೇಗೆ ಸಾಧ್ಯ. ಕೆಲವೊಂದು ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಇರುತ್ತೆ. ಕೆಲವು ಕಡೆ ಅರ್ಧ ಸರ್ಕಾರ ನಡೆದಿರುತ್ತದೆ. ಇದು ಆಗದ ಕ್ರಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕದ ಚುನಾವಣೆ ಫಲಿತಾಂಶದಿಂದ ಅವರು ಧೃತಿಗೆಟ್ಟಿದ್ದಾರೆ. ಮೋದಿ ಪ್ರಚಾರ ಮಾಡಿದ ಕಡೆ ಕಾಂಗ್ರೆಸ್ ಗೆದ್ದಿದೆ. ಅವರು ಬಂದು ಗಲ್ಲಿಗಲ್ಲಿಯಲ್ಲಿ ಪ್ರಚಾರ ಮಾಡಿದ್ರು ನಮಗೆ 136 ಸ್ಥಾನಗಳು ಬಂದಿದೆ. ಇದೇ ಒತ್ತಡದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಎಂದು ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.