ಸಿದ್ದರಾಮಯ್ಯ ಸೋಲಿಸಲು ಕಾಂಗ್ರೆಸ್‌ನವರೇ ಸಜ್ಜಾಗಿದ್ದಾರೆ. ಎರಡಲ್ಲ, ರಾಜ್ಯದ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಸಿದ್ದರಾಮಯ್ಯ ಗೆಲ್ಲಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ಶಿವಮೊಗ್ಗ (ಜ.15): ಸಿದ್ದರಾಮಯ್ಯ ಸೋಲಿಸಲು ಕಾಂಗ್ರೆಸ್‌ನವರೇ ಸಜ್ಜಾಗಿದ್ದಾರೆ. ಎರಡಲ್ಲ, ರಾಜ್ಯದ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಸಿದ್ದರಾಮಯ್ಯ ಗೆಲ್ಲಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರದೇ ಪಕ್ಷದ ಡಾ.ಪರಮೇಶ್ವರ್ ಅವರ ಸೋಲಿಗೆ ಇದೇ ಸಿದ್ದರಾಮಯ್ಯ ಕಾರಣ. ಇನ್ನು ಮಲ್ಲಿಕಾರ್ಜುನ ಖರ್ಗೆ ಸೋಲುವಂತೆ ನೋಡಿಕೊಂಡಿದ್ದಾರೆ. ಇನ್ನೂ ಕೆಲವರ ಸೋಲಿನಲ್ಲೂ ಇವರ ಪಾತ್ರ ಇದೆ. ಅದೇ ಕಾರಣಕ್ಕೆ ಬಾದಾಮಿ ಕ್ಷೇತ್ರವನ್ನು ಬಿಟ್ಟು ಹೊರಟಿದ್ದಾರೆ. ಕೋಲಾರದಲ್ಲಿ ಮುನಿಯಪ್ಪ ಅವರನ್ನು ಸೋಲಿಸಿದ್ದನ್ನು ಮುನಿಯಪ್ಪ ಅವರ ಕಡೆಯವರು ಮರೆತಿಲ್ಲ.
ಅಲ್ಲಿಯೇ ಮುನಿಯಪ್ಪ ಮತ್ತು ರಮೇಶ್‌ಕುಮಾರ್ ಬಣಗಳ ನಡುವೆ ಜಟಾಪಟಿ ಇದೆ. ಹಾಗಾಗಿ, ಕೋಲಾರದಲ್ಲಿ ಸಿದ್ದರಾಮಯ್ಯ ಗೆಲ್ಲಲ್ಲ ಎಂದು ಭವಿಷ್ಯ ನುಡಿದರು. ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ, ಮಂತ್ರಿ ಸ್ಥಾನ ಕಳೆದುಕೊಂಡ ನಂತರ ತಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿ ಆಗಿದ್ದರು. ಅದಾದ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಇವರೆಲ್ಲ ಸ್ಥಾನ, ಅಧಿಕಾರ ಅನುಭವಿಸುತ್ತಿದ್ದಾರಲ್ಲ ಎಂಬ ನೋವು ಸಿದ್ದರಾಮಯ್ಯರಿಗೆ ಕಾಡತೊಡಗಿದೆ. ಇಷ್ಟುದಿನ ನಮ್ಮದು ಜಹಗೀರದಾರ್. ನಾವೇ ಅಧಿಕಾರ ನಡೆಸುವವರು ಎಂದುಕೊಂಡಿದ್ದರು.
ಶ್ರೀಮಂತರಿಗೆ ಮೀಸಲಾತಿ ನೀಡುವುದನ್ನು ನಾನು ಒಪ್ಪಲ್ಲ: ಕೆ.ಎಸ್.ಈಶ್ವರಪ್ಪ
ಆದರೆ, ಇದೀಗ ಎಲ್ಲೆಡೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಇದನ್ನು ತಡೆದುಕೊಳ್ಳಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ ಎಂದು ಛೇಡಿಸಿದರು. ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅದನ್ನು ಬಿಟ್ಟು ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಸಿದರೆ ಮೀಸಲಾತಿ ದೊರಕುತ್ತದೆ ಎಂದು ಯಾರಾದರೂ ಅಂದುಕೊಂಡರೆ ಹೋರಾಟ ನಡೆಸಿಕೊಳ್ಳಲಿ. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಹೋರಾಟದಿಂದ ಮೀಸಲಾತಿ ದೊರಕುವುದಾದರೆ ಎಲ್ಲ ಸಮಾಜದವರೂ ಹೋರಾಟ ನಡೆಸುತ್ತಾರೆ. ಮೀಸಲಾತಿ ಬೇಕು ಎನ್ನುತ್ತಾರೆ. ನ್ಯಾಯಾಲಯ ನೀಡಿದ ತೀರ್ಪನ್ನು ನಾವೆಲ್ಲರೂ ಗೌರವಿಸಬೇಕು.
ಸ್ಯಾಂಟ್ರೋ ರವಿಗೆ ಶಿಕ್ಷೆಯಾಗಲಿ: ಸ್ಯಾಂಟ್ರೋ ರವಿ ಮಾಡಿದ ಮುಟ್ಠಾಳ ಕೆಲಸಗಳಿಗೆ ಯಾವುದೇ ಶಿಕ್ಷೆ ನೀಡಿದರೂ ಕಡಿಮೆಯೇ. ತನಿಖೆಯಿಂದ ಆತನ ಜೊತೆ ಕುಮಾರಸ್ವಾಮಿ, ಕಾಂಗ್ರೆಸ್, ಬಿಜೆಪಿ ಯಾರೇ ಇದ್ದರೂ ಹೊರಬರುತ್ತೆ. ಹೆಣ್ಣುಮಕ್ಕಳ ಮಾರಾಟದ ದಂಧೆ ಮಾಡುತ್ತಿದ್ದ ದುಷ್ಟಹಾಗೂ ನೀಚನನ್ನ ನಮ್ಮ ರಾಜ್ಯದಲ್ಲಿ ಹಿಂದೆಂದೂ ನೋಡಿರಲಿಲ್ಲ. ಇಡೀ ಕರ್ನಾಟಕ ರಾಜ್ಯದ ಜನರ ಅಪೇಕ್ಷೆ ಇದೆ. ಆತನಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಈಶ್ವರಪ್ಪ ಹೇಳಿದರು.
ಸಿದ್ದು, ವಿಶ್ವನಾಥ ಅಧಿಕಾರದ ಅಲೆಮಾರಿಗಳು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಎಚ್.ವಿಶ್ವನಾಥ ಇಬ್ಬರು ನಾಯಕರು ಅಧಿಕಾರಕ್ಕಾಗಿ ಕಾಲ ಕಾಲಕ್ಕೆ ಪಕ್ಷಗಳಿಗೆ ಅಲೆಯುವ ಅಲೆಮಾರಿಗಳು ಇದ್ದಂತೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದರು. ಪಟ್ಟಣದ ಮಾತೆ ಮಾಣಿಕೇಶ್ವರಿ ಗೋಶಾಲೆಗೆ ಭೇಟಿ ನೀಡಿ ಗೋವುಗಳಿಗೆ ಪೂಜೆ ಸಲ್ಲಿಸಿ ಮಾತನಾಡಿ, ಅಧಿಕಾರದ ದಾಹ ಹೊಂದಿರುವ ಸಿದ್ದರಾಮಯ್ಯನವರು ಅಧಿಕಾರ ಸಿಗುವ ಪಕ್ಷಕ್ಕೆ ಹೋಗುತ್ತಾರೆ. ಕದ ತೊರೆಯುವುದು ಎಚ್.ವಿಶ್ವನಾಥನವರ ಚಾಳಿಯಾಗಿದೆ. ಬಿಜೆಪಿಯಿಂದ ವಿಶ್ವನಾಥ ಅವರನ್ನು ಎಂಎಲ್ಸಿ ಮಾಡಿ ಅಧಿಕಾರ ನೀಡಲಾಗಿತ್ತು.
ಸಿದ್ದರಾಮಯ್ಯ ಲೀಡರ್ ಆಗುವ ಭ್ರಮೆ ಬಿಡಲಿ: ಕೆ.ಎಸ್.ಈಶ್ವರಪ್ಪ ಲೇವಡಿ
ಆದರೆ, ಅವರು ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ, ಆ ಪಕ್ಷಕ್ಕೆ ಅಲೆಯುವ ಅಲೆಮಾರಿಗಳಾಗಿದ್ದಾರೆ ಎಂದು ದೂರಿದರು. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ನನ್ನನ್ನು ಬಿಜೆಪಿ ಕಡೆಗಣಿಸಿಲ್ಲ. ಪಕ್ಷ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ, ಸಚಿವ ಸ್ಥಾನ ನೀಡಿದ್ದಾರೆ. ಅಲ್ಲದೇ, ಅದರ ಜೊತೆಗೆ ಬಿಜೆಪಿ ಸಂಘಟನೆಗಾಗಿ ಹಲವು ಹುದ್ದೆಗಳು ಒದಗಿಸಿದ್ದಾರೆ. ಯುಡಿಯೂರಪ್ಪ ಹಾಗೂ ನನ್ನನ್ನು$ಪಕ್ಷದಿಂದ ಮೂಲೆಗುಂಪು ಮಾಡಲಾಗಿದೆ ಎಂಬುದು ಮಾಧ್ಯಮಗಳ ಸೃಷ್ಠಿಯಾಗಿದೆ. ಸಚಿವ ಸಂಪುಟ ವಿಸ್ತರಣೆ ಆಗಬಹುದು, ಆಗಲಿಕ್ಕಿಲ್ಲ. ಆದರೆ, ನನಗೆ ಯಾವುದೇ ಸ್ಥಾನ ನೀಡಿದರು ಸಂತೋಷ. ಪಕ್ಷದಲ್ಲಿ ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಸಚಿವ ಸ್ಥಾನ ನೀಡದಿದ್ದರೂ ಪಕ್ಷ ಸಂಘಟನೆ ಮಾಡುವುದಾಗಿ ಈಶ್ವರಪ್ಪ ಹೇಳಿದರು.