ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಬಿಜೆಪಿ ನಾಯಕರು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 9 ವರ್ಷಗಳೇ ಆಗಿದೆ. ಜನರ ಅಕೌಂಟ್‌ಗೆ 15 ಲಕ್ಷ ಹಾಕಿದ್ದಾರೆ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಿದ್ದಾರಾ?
ಶಿವಮೊಗ್ಗ (ಜೂ.29): ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಬಿಜೆಪಿ ನಾಯಕರು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 9 ವರ್ಷಗಳೇ ಆಗಿದೆ. ಜನರ ಅಕೌಂಟ್‌ಗೆ 15 ಲಕ್ಷ ಹಾಕಿದ್ದಾರೆ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಿದ್ದಾರಾ? ಇದರ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಿಡಿಕಾರಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸಲು ಸ್ವಲ್ಪ ವಿಳಂಬ ಆಗಿದೆ. ಇದನ್ನೇ ಇಟ್ಟುಕೊಂಡು ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ.
ಆದರೆ, ಕೇಂದ್ರ ಸರ್ಕಾರ ಕಳೆದ 9 ವರ್ಷಗಳ ಹಿಂದೆಯೇ ಹಲವು ಭರವಸೆಗಳನ್ನು ನೀಡಿತ್ತು. ಸ್ವಿಸ್ ಬ್ಯಾಂಕ್ ಹಣ ಎಲ್ಲಿಗೆ ಹೋಯಿತು? ಇದರ ಬಗ್ಗೆ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಪ್ರತಾಂಪ್ ಸಿಂಹ, ಸಿ.ಟಿ.ರವಿ ಏನ್ ಹೇಳ್ತಾರೆ ಎಂದು ಪ್ರಶ್ನಿಸಿದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಅದರಂತೆ 9 ವರ್ಷದಲ್ಲಿ 18 ಕೋಟಿ ಉದ್ಯೋಗಗಳನ್ನು ನೀಡಬೇಕಿತ್ತು. ಕೊಟ್ಟಿದ್ದಾರಾ? ಕೇಂದ್ರ ಸರ್ಕಾರ ನೀಡಿದ್ದ ಭವರಸೆ ಬಗ್ಗೆ ಪ್ರಶ್ನೆ ಮಾಡಿದರೆ ಬಿಜೆಪಿಯವರು ಅವರೇನು ಗ್ಯಾರಂಟಿ ಬರೆದುಕೊಟ್ಟಿದ್ದಾರಾ ಎಂದು ಹೇಳುತ್ತಿದ್ದಾರೆ ಬರೆದುಕೊಟ್ಟರೆ ಮಾತ್ರ ಕೊಡಬೇಕೆ? ಮಾತು ಕೊಟ್ಟರೆ ಕೊಡಬಾರದೇ ಎಂದು ಹರಿಹಾಯ್ದರು.
ಕೊಡಗಿನಲ್ಲಿ ಬೆಟ್ಟ ಕುಸಿಯುವ ಆತಂಕ: ತೋರಾ ಗ್ರಾಮದ 20 ಕುಟುಂಬಗಳಿಗೆ ನೋಟಿಸ್!
ಬಿಜೆಪಿ ಸರ್ಕಾರ ಹಗರಣಗಳ ತನಿಖೆಗೆ ಆಗ್ರಹ: ಬಿಜೆಪಿಯ ಅಧಿಕಾರಾವಧಿಯಲ್ಲಿ ನಡೆದ ಎಲ್ಲ ಹಗರಣಗಳನ್ನು ತನಿಖೆ ಮಾಡಲು ಈಗಾಗಲೇ ಸರ್ಕಾರ ನಿರ್ಧರಿಸಿದೆ. ಪಿಎಸ್‌ಐ ಹಗರಣವನ್ನು ತನಿಖೆ ಮಾಡಬೇಕು. ಈ ಹಗರಣದಲ್ಲಿಯೇ ದುಡ್ಡು ಮಾಡಿಕೊಂಡವರು ತೀರ್ಥಹಳ್ಳಿಯ ಚುನಾವಣೆಗೆ ಸುರಿದಿದ್ದರು. ದಿವ್ಯ ಹಾಗರಗಿ ಆರತಿ, ಸ್ಯಾಂಟ್ರೋ ರವಿ, ಆರ್.ಜೆ.ಪಾಟೀಲ್ ತೀರ್ಥಹಳ್ಳಿಯಲ್ಲಿ 70 ಕೋಟಿ ಹಣ ಖರ್ಚು ಮಾಡಿದ್ದಾರೆ. ಇದೇ ಕಾರಣಕ್ಕೆ ನಾನು ಸೋತಿದ್ದೇನೆ. ಶೇ.40ರ ಕಮಿಷನ್ ಹಗರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯಲ್ಲಿ ನಡೆದ ಎಲ್ಲ ಹಗರಣಗಳನ್ನು ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಾನು ಪ್ರತ್ಯೇಕವಾಗಿಯೇ ಒತ್ತಾಯಿಸಿದ್ದೇನೆ ಎಂದರು.
ಕೇಂದ್ರ ಸರ್ಕಾರ ಧೋರಣೆಗೆ ಸುಮ್ಮನಿರಬೇಕೇ?: ದೇಶದ ಎಲ್ಲ ರಾಜ್ಯಗಳನ್ನು ಒಕ್ಕೂಟ ವ್ಯವಸ್ಥೆಯಲ್ಲಿ ನೋಡಿಕೊಳ್ಳಬೇಕಾದ್ದು ಪ್ರಧಾನಿ ಜವಾಬ್ದಾರಿ. ಈಗ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡಲ್ಲ ಎಂದು ಹೇಳುತ್ತಿದ್ದಾರೆ. ನಾಳೆ ವಿದ್ಯುತ್ ಕೊಡಲ್ಲ ಎನ್ನುತ್ತಾರೆ. ಮುಂದೆ ಏನೂ ಕೊಡಲ್ಲ ಎನ್ನುತ್ತಾರೆ. ಇದನ್ನು ನೋಡಿಕೊಂಡು ಕೂರಬೇಕಾ? ಅಕ್ಕಿ ಕೊಡಲಿಲ್ಲ ಎಂದು ಪ್ರತಿಭಟನೆ ಮಾಡುತ್ತೇವೆ ಎನ್ನುತ್ತಿರುವ ಬಿಜೆಪಿ ನಾಯಕರು ಬಡವರ್ಗದ ಜನರ ಪರವಾಗಿ ನಿಂತು ಕೇಂದ್ರ ಸರ್ಕಾರವನ್ನು ಒಪ್ಪಿಸಿ ಅಕ್ಕಿ ಕೊಡುವ ಕೆಲಸ ಮಾಡಲಿ ಎಂದು ಕುಟುಕಿದರು. ರಾಜ್ಯ ಬಿಜೆಪಿ ಮುಖಂಡರಿಗೆ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಪ್ರಶ್ನೆ ಮಾಡುವ ನೈತಿಕ ಹಕ್ಕೇ ಇಲ್ಲ. ಪ್ರಶ್ನೆ ಮಾಡುವ ರೀತಿ ಕೂಡ ಸರಿಯಿಲ್ಲ. ಅಶೋಕ್ ಅಂತವರು ಸಗಣಿ ತಲೆಯಲ್ಲಿ ಇಟ್ಟುಕೊಂಡಿದ್ದಾರಾ ಎಂದು ಕೇಳುತ್ತಾರೆ.
ಇದು ಅವರ ಸಂಸ್ಕೃತಿಯನ್ನು ತಿಳಿಸುತ್ತದೆ. ಕಾಂಗ್ರೆಸ್‌ನವರು ಒಂದೊತ್ತಿನ ಊಟಕ್ಕೂ ಕಷ್ಟಪಡುವವರಿಗಾಗಿ ಅಕ್ಕಿ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಹೊಟ್ಟೆತುಂಬಿದವರು ಅಕ್ಕಿ ಕೊಡಿ ಎಂದು ಮುಗಿಬಿದ್ದಿದ್ದಾರೆ. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನು ಜಾರಿ ಮಾಡದೇ ಬಿಡುವುದಿಲ್ಲ. ಎಲ್ಲದಕ್ಕೂ ಒಂದು ಸಮಯವಿರುತ್ತದೆ. ಸ್ವಲ್ಪ ವಿಳಂಬ ಆಗಿದ್ದಕ್ಕೆ ಈ ರೀತಿಯಲ್ಲಿ ಹುಂಬರಂತೆ ಬಿಜೆಪಿಗರು ವರ್ತಿಸುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪನಂತವರು ಕೂಡ ಪ್ರತಿಭಟನೆ ಮಾಡುವುದಾಗಿ ತಿಳಿಸುತ್ತಾರೆ. ಅವರು ಕೊನೇ ಪಕ್ಷ ಜನವರಿ ತಿಂಗಳವರೆಗೂ ಕಾಯಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಪ್ರಸನ್ನಕುಮಾರ್, ಎನ್.ರಮೇಶ್, ದುಗ್ಗಪ್ಪ ಗೌಡ, ಕಲೀಂ ಪಾಶಾ, ವಿಶ್ವನಾಥಕಾಶಿ, ಇಕ್ಕೇರಿ ರಮೇಶ್, ಮಧುಸೂದನ್, ಚೇತನ್, ಬಾಲಾಜಿ, ನಾಗರಾಜ್, ,ಮಂಜುನಾಥ್, ಸ್ವರೂಪ್ ಮತ್ತಿತರರಿದ್ದರು.
ಅಕ್ಕಿ ವಿಚಾರದಲ್ಲಿ ಸಿ.ಟಿ.ರವಿ ಯಾಕೆ ಮೈ ಪರಿಚಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ: ಸಚಿವ ಎಂ.ಸಿ.ಸುಧಾಕರ್
ರಾಮಭಕ್ತ ಗಾಂಧಿ ಹಿಂದು ವಿರೋಧಿಯೇ?: ತನ್ನ ಕೊನೆ ಉಸಿರಲ್ಲೂ ರಾಮ, ರಾಮ ಎನ್ನುತಿದ್ದ ರಾಮಭಕ್ತ ಮಹಾತ್ಮ ಗಾಂಧಿ ಹಿಂದು ವಿರೋಧಿಯಾಗುತ್ತಾನೆ. ಗಾಂಧಿಯನ್ನು ಕೊಂದ ಗೋಡ್ಸೆ ಹಿಂದುವಾದಿ. ನಾನು ಹಿಂದುವಾಗಿ ಹುಟ್ಟಿದ್ದೇನೆ, ಆದರೆ, ಹಿಂದುವಾಗಿ ಸಾಯಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ. ಗಾಂಧಿಯನ್ನು ವಿರೋಧಿಸುವ ಬಿಜೆಪಿಯವರು ಅಂಬೇಡ್ಕರ್ ಅವರನ್ನು ವಿರೋಧಿಸಲ್ಲ. ಕಾಂಗ್ರೆಸ್‌ನವರು ಅಂಬೇಡ್ಕರ್ ಅವರಿಗೆ ಟಿಕೆಟ್ ಕೊಡದೇ ಅವಮಾನ ಮಾಡಿದ್ದಾರೆ ಎಂದು ಆರೋಪಿಸುತ್ತಾರೆ. ಕಾಂಗ್ರೆಸ್ ಅವರಿಗೆ ಟಿಕೆಟ್ ಕೊಡದೇ ಇರಬಹುದು. ಆದರೆ, ಅವರನ್ನು ಕಾನೂನು ಮತ್ತು ಸಂಸದೀಯ ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್ ಎಂದು ಕಿಮ್ಮನೆ ರತ್ನಾಕರ್ ತಿರುಗೇಟು ನೀಡಿದರು.