
ಹುಬ್ಬಳ್ಳಿ (ಸೆ.06): ರಾಜ್ಯದಲ್ಲಿ ಬಿಜೆಪಿಯು ಪ್ರತಿಪಕ್ಷದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಅಭಿವೃದ್ಧಿ, ನಿರುದ್ಯೋಗ, ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ಮಾತನಾಡದೇ ಬೇರೆಯದೇ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಭ್ರಷ್ಟಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ. ಇದು ಬಾಲಿಶತನದ ಹೇಳಿಕೆ. ನಿಮ್ಮ ಅಧಿಕಾರದ ಅವಧಿಯಲ್ಲಿ ನೀವು ಏನು ಮಾಡಿ ಬಂದಿದ್ದೀರಾ? ನಿಮ್ಮ ಮನವ ಸಂತೈಸಿಕೊಳ್ಳಿ ಎಂದು ಇಬ್ರಾಹಿಂ ಲೇವಡಿ ಮಾಡಿದರು.
ಮುಡಾ ಪ್ರಕರಣ ಈಗ ಕೋರ್ಟ್ನಲ್ಲಿದೆ. ಬಿಜೆಪಿಯವರು ಏನಾದರೂ ದಾಖಲೆಗಳಿದ್ದರೆ ಕೋರ್ಟ್ ಮುಂದೆ ಇಡಬೇಕು. ಕೋರ್ಟ್ ತೀರ್ಮಾನ ಮಾಡುತ್ತದೆ. ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದೇ ಕಾಂಗ್ರೆಸ್ ಟೀಕೆ ಮಾಡುವುದೇ ಬಿಜೆಪಿಯವರ ಕೆಲಸವಾಗಿದೆ ಎಂದರು. ರಾಜ್ಯದ ಸಂಸದರು ಏನು ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಬಾಯ್ಬಿಟ್ಟು ಮಾತನಾಡುವ ಧೈರ್ಯ ಇಲ್ಲದವರು ರಾಜ್ಯದ ಅಭಿವೃದ್ಧಿ ಬಗ್ಗೆ ಏನು ಮಾಡಲು ಸಾಧ್ಯ? ಬಿಜೆಪಿ ಹಾಗೂ ಕಾಂಗ್ರೆಸ್ನವರು ಒಟ್ಟುಗೂಡಿ ನಮ್ಮ ರಾಜ್ಯದ ಹಕ್ಕು ನಮಗೆ ಕೊಡಿ ಎಂದು ಹೋರಾಟ ಮಾಡುವಂತೆ ಸಲಹೆ ನೀಡಿದರು.
ಇಬ್ರಾಹಿಂ ಪುತ್ರ ಫಯಾಜ್, ಮಾಜಿ ಸಚಿವ ಶಂಕರ್ ಕಾಂಗ್ರೆಸ್‌ಗೆ ಸೇರ್ಪಡೆ
ಸಿಎಂ ನೈತಿಕತೆಯಿಂದ ರಾಜೀನಾಮೆ ಕೊಡಬೇಕು ಎಂಬ ಬಿಜೆಪಿಗರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಇಬ್ರಾಹಿಂ, ಏಕೆ ರಾಜೀನಾಮೆ ಕೊಡಬೇಕು. ಎಲ್ಲಿದೆ ನೈತಿಕತೆ? ಮೋದಿಯವರು ನೈತಿಕತೆಯಿಂದ ರಾಜೀನಾಮೆ ನೀಡಿದ್ದಾರೆಯೇ? ಅದೆಷ್ಟೋ ರೈಲು ಅಪಘಾತಗಳಾಗಿವೆ, ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೇಂದ್ರದ ಬಿಜೆಪಿ ನಾಯಕರು ನೈತಿಕತೆಯಿಂದ ರಾಜೀನಾಮೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು. ಟಗರು ಮೇಲೆ ಪ್ರೀತಿ ಅಂತ ಅಲ್ಲ. ಸಿದ್ದರಾಮಯ್ಯ ಒಳ್ಳೆಯ ಮನುಷ್ಯ. ಭ್ರಷ್ಟಾಚಾರ ಮಾಡಿದವರಲ್ಲ. ದುಡ್ಡು ಮಾಡಬೇಕಿದ್ದರೆ ಈ ಹಿಂದೆ ಅಧಿಕಾರದ ಅವಧಿಯಲ್ಲಿಯೇ ಸಾಕಷ್ಟು ಮಾಡುತ್ತಿದ್ದರು. ಆದರೆ, ಅಂತಹ ಕಾರ್ಯಕ್ಕೆ ಕೈ ಹಾಕಿಲ್ಲ. ಅವರ ಒಳ್ಳೆಯತನವನ್ನು ಹೊಗಳುಭಟ್ಟರು ಹಾಳು ಮಾಡಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.