ಬಿಜೆಪಿ ಸರ್ಕಾರವಿದ್ದರೂ ಅಭಿವೃದ್ಧಿಗೆ ಶಾಸಕನಾಗಿ ದುಡಿದಿದ್ದೇನೆ: ಟಿ.ಡಿ.ರಾಜೇಗೌಡ

By Govindaraj S  |  First Published Jan 16, 2023, 8:25 PM IST

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದರೂ ಕ್ಷೇತ್ರದಲ್ಲಿ ನಾನು ಶಾಸಕನಾಗಿ ಪ್ರಾಮಣಿಕವಾಗಿ ದುಡಿದಿದ್ದೇನೆ. ಅಭಿವೃದ್ಧಿಗೆ ಎಂದಿಗೂ ಹಿಂದೇಟು ಹಾಕಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.


ಶೃಂಗೇರಿ (ಜ.16): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದರೂ ಕ್ಷೇತ್ರದಲ್ಲಿ ನಾನು ಶಾಸಕನಾಗಿ ಪ್ರಾಮಣಿಕವಾಗಿ ದುಡಿದಿದ್ದೇನೆ. ಅಭಿವೃದ್ಧಿಗೆ ಎಂದಿಗೂ ಹಿಂದೇಟು ಹಾಕಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ತಾಲೂಕಿನ ಮರ್ಕಲ್‌ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್‌ ಬೂತ್‌ ಮಟ್ದದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರಕ್ಕೆ ಅಗತ್ಯ ಅನುದಾನ ತಂದು ಮೂಲಭೂತ ಸೌಕರ್ಯ ಒದಗಿಸಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಸರ್ಕಾರ ಬಿಡುಗಡೆ ಮಾಡಿದ ಅನುದಾನ,ಶಾಸಕರ ಅನುದಾನ ಸೇರಿದಂತೆ ಎಲ್ಲಾ ಅನುದಾನಗಳನ್ನು ಬಳಸಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.

ಹಿಂದಿನ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷನಾದ ಅಲ್ಪಾವಧಿಯಲ್ಲಿಯೇ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. ಆದರೆ ಅದು ಕಾರ್ಯಗತವಾಗುವ ಹಂತದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಕಾಮಗಾರಿಯನ್ನು ಕಾನೂನು ಬಾಹಿರವಾಗಿ ಸ್ಥಗಿತಗೊಳಿಸಿತು.ಇದರಿಂದ ಕ್ಷೇತ್ರದ ಜನರಿಗೆ ಅನ್ಯಾಯ ಮಾಡಲಾಯಿತು ಎಂದು ಆರೋಪಿಸಿದರು.

Tap to resize

Latest Videos

ಸಿದ್ದರಾಮರ ಚಿಂತನೆಯಂತೆ ಬಿಜೆಪಿ ಕೆಲಸ: ಸಿಎಂ ಬೊಮ್ಮಾಯಿ

ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್‌.ಜೀವರಾಜ್‌ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕೈಗೆತ್ತಿಕೊಳ್ಳದಂತೆ ಮಾಡಿದ್ದರಿಂದ ಉದ್ದೇಶಿತ ಅನೇಕ ಕಾಮಗಾರಿಗಳು ಸ್ಥಗಿತ ಗೊಂಡಿದೆ.ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಕಾರಣ ಮಾಡದೇ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಜನರು ಇದಕ್ಕೆ ಉತ್ತರ ನೀಡಲಿದ್ದಾರೆ ಎಂದರು. ಮರ್ಕಲ್‌ ಗ್ರಾಪಂ ಅಧ್ಯಕ್ಷೆ ಪ್ರಿಯಾ, ಮುಖಂಡರಾದ ಕೆಂಬಳಗೆದ್ದೆ ಮಂಜುನಾಥ್‌,ನಟರಾಜ್‌,ವಿಜಯ್‌ಕುಮಾರ್‌,ಕೃಷ್ಣಮೂರ್ತಿ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಕೆಲ ಕಾರ್ಯಕರ್ತರು ಕಾಂಗ್ರೇಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು.

ಅನುದಾನ ನೀಡುವಲ್ಲಿ ಸರ್ಕಾರ ತಾರತಮ್ಯ: ವಿರೋಧ ಪಕ್ಷದ ಶಾಸಕ ಎನ್ನುವ ಕಾರಣದಿಂದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅನುದಾನ ನೀಡುವುದರಲ್ಲಿ ತಾರತಮ್ಯ ಮಾಡುತ್ತಿದೆ. ಅದಲ್ಲದೇ ಕ್ಷೇತ್ರದ ಬಿಜೆಪಿ ನಾಯಕರು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವುದು ದುರಂತ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಹೇರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಚುನಾವಣಾ ಬಹಿಷ್ಕಾರದ ಕೂಗೆಬ್ಬಿಸಿರುವ ಹಾಡುಗಾರು ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಾಗೂ ನಾನು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷನಾದ ಒಂದು ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಯಿತು. 

ಬಿಜೆಪಿ ಸರ್ಕಾರ ಬಂದ ನಂತರ ಶೃಂಗೇರಿ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿದ್ದಲ್ಲದೆ, ಮಲೆನಾಡು ಅಭಿವೃದ್ಧಿ ಮಂಡಳಿ ಮೂಲಕ ಮಂಜೂರು ಮಾಡಿಸಿದ್ದ 15 ಕೋಟಿ ರು.ಗಳ ಅನುದಾನವನ್ನು ಶಿಕಾರಿಪುರಕ್ಕೆ ವರ್ಗಾವಣೆ ಮಾಡಿ ಇಲ್ಲಿನ ಜನರಿಗೆ ಅನ್ಯಾಯ ಮಾಡಿತು. ಇದರಿಂದಾಗಿ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ಈ ಪರಿಸ್ಥಿತಿಯಲ್ಲೂ ಹಾಡುಗಾರು ಗ್ರಾಮದ ಅಭಿವೃದ್ಧಿಗೆ ರು.1 ಕೋಟಿಗೂ ಹೆಚ್ಚಿನ ಅನುದಾನ ನೀಡಿದ್ದೇನೆ ಎಂದರು. ಕ್ಷೇತ್ರದ ಶಾಸಕನಾಗಿ ನಿಮ್ಮ ಚುನಾವಣಾ ಬಹಿಷ್ಕಾರದ ನಿಲುವನ್ನು ಕೈಬಿಡಬೇಕು ಎನ್ನುವ ಮನವಿ ಮಾಡುತ್ತೇನೆ. ಹಾಡುಗಾರು ರಸ್ತೆ ಮತ್ತು ಮೂಲ ಸೌಲಭ್ಯ ಹೋರಾಟ ಸಮಿತಿಯ ಪ್ರಮುಖ ಬೇಡಿಕೆಗಳಾದ ರಸ್ತೆ ,ಸೇತುವೆ ನಿರ್ಮಾಣಕ್ಕೆ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.

ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ: ಸಚಿವ ಕೆ.ಗೋಪಾಲಯ್ಯ

ಶೃಂಗೇರಿ ಕ್ಷೇತ್ರ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಸ್‌.ರವಿಂದ್ರ ಮಾತನಾಡಿ, ಕರೋನಾ ಕಾರಣದಿಂದ, ಸರ್ಕಾರದ ತಾರತಮ್ಯದಿಂದ ಅನುದಾನ ಬಿಡುಗಡೆಯಾಗದ ಕಾರಣ ಇಲ್ಲಿನ ಅಗತ್ಯ ಕಾಮಗಾರಿಗಳನ್ನು ಮಾಡಲಾಗಿಲ್ಲ. ಮುಂದಿನ ದಿನಗಳಲ್ಲಿ ಅಗತ್ಯ ಕಾಮಗಾರಿಗಳನ್ನು ನಡೆಸುವ ಭರವಸೆಯನ್ನು ಶಾಸಕರು ನೀಡಿದ್ದು, ಕೆಲಸ ಪ್ರಾರಂಭವಾಗಲಿದೆ ಎಂದರು. ಸಭೆಯಲ್ಲಿ ಹಾಡುಗಾರು ರಸ್ತೆ ಮತ್ತು ಮೂಲ ಸೌಲಭ್ಯ ಹೋರಾಟ ಸಮಿತಿಯ ಅಧ್ಯಕ್ಷ ವೆಂಕಟರಮಣ ಭಟ್‌, ಪ್ರಧಾನ ಕಾರ್ಯದರ್ಶಿ ಕಿಬ್ಳಿ ಪ್ರಸನ್ನ ಕುಮಾರ್‌, ಕಾಂಗ್ರೆಸ್‌ ಮುಖಂಡರಾದ ಎನ್‌.ಎ.ಸಂಜೀವ, ಚಂದ್ರೇಗೌಡ, ಅಶ್ವಥ್‌, ಗ್ರಾಮಸ್ಥರಾದ ಮಹೇಶ್‌, ವಾಸು ಪೂಜಾರಿ, ಹೂವಪ್ಪಗೌಡ, ರಂಗಪ್ಪಗೌಡ, ದಿನೇಶ್‌ ಭಟ್‌, ಲಕ್ಷ್ಮೀನಾರಾಯಣ ಭಟ್‌ ಮತ್ತಿತರರು ಇದ್ದರು.

click me!