ಸಚಿವ ಸಂಪುಟ ಪುನರ್ ರಚನೆ ಕುರಿತು ಅಂತಿಮ ಪ್ರಯತ್ನಗಳು ನಡೆಯುತ್ತಿವೆ. ಸಂಪುಟದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬುದನ್ನು ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯಿಸಿದರು.
ರಾಮನಗರ (ಜ.16): ಸಚಿವ ಸಂಪುಟ ಪುನರ್ ರಚನೆ ಕುರಿತು ಅಂತಿಮ ಪ್ರಯತ್ನಗಳು ನಡೆಯುತ್ತಿವೆ. ಸಂಪುಟದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬುದನ್ನು ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯಿಸಿದರು. ನಗರದ ಪಂಚಮುಖಿ ಬಾಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಕಡಲೆ ಕಾಯಿ ಮತ್ತು ಅವರೆಕಾಯಿ ಪರಿಷೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಪೂರ್ಣವಾಗಿ ಸಚಿವ ಸಂಪುಟ ಆಗಿಲ್ಲ ಎಂಬುದು ಮುಖ್ಯಮಂತ್ರಿಗಳಿಗೂ ಗೊತ್ತಿದೆ. ಪುನರ್ ರಚನೆಗೆ ಬಹಳ ದಿನಗಳಿಂದ ಪ್ರಯತ್ನ ನಡೆಯುತ್ತಿತ್ತು. ಈಗ ಅಂತಿಮ ಪ್ರಯತ್ನ ನಡೆಯುತ್ತಿದೆ ಎಂದರು.
ಸಂಕ್ರಾಂತಿ ನಂತರ ಪ್ರಾಕೃತಿಕವಾಗಿ ಬದಲಾವಣೆ ಅಗುವುದು ಸಹಜ. ಹೀಗಾಗಿ ಸಂಕ್ರಾಂತಿ ನಂತರವೇ ಸಂಪುಟ ಪುನರ್ ರಚನೆಯ ಆಲೋಚನೆ ನಡೆದಿತ್ತು. ಪಕ್ಷದಲ್ಲಿಯೂ ಏನಾದರು ಒಂದಷ್ಟುಬದಲಾವಣೆ ಆಗಬೇಕಿದೆ ಎಂದು ಹೇಳಿದರು. ಹಳೇ ಮೈಸೂರು ಭಾಗದಲ್ಲಿ ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿ ಪಕ್ಷಕ್ಕೆ ಹಿನ್ನಡೆ ಆಗುತ್ತಿತ್ತು. ದೀಪದ ಕೆಳಗೆ ಕತ್ತಲು ಎಂಬಂತೆ ಬೆಂಗಳೂರು ಮತ್ತು ಸುತ್ತಮುತ್ತ ಏಕೆ ಬಿಜೆಪಿ ಬೆಳೆದಿಲ್ಲ ಎಂಬುದರ ಅರಿವು ಪಕ್ಷಕ್ಕೆ ಆಗಿದೆ. ಇದೆಲ್ಲವನ್ನು ಪಕ್ಷದ ವರಿಷ್ಠರ ಗಮನಕ್ಕೆ ಬಂದಿದೆ. ಹೊಂದಾಣಿಕೆ ರಾಜಕಾರಣದ ವಿರುದ್ಧ ನಾನು ಹತ್ತಾರು ಬಾರಿ ಪಕ್ಷದ ವೇದಿಕೆಯಲ್ಲಿಯೇ ಆಕ್ಷೇಪಣೆ ಎತ್ತಿದ್ದೇನೆ.
ಕೊರೋನಾ ಕಾಲದಲ್ಲಿ ಸರ್ಕಾರಿ ನೌಕರರ ಸೇವೆ ಶ್ಲಾಘನೀಯ: ಡಿ.ಕೆ.ಶಿವಕುಮಾರ್
ಗೃಹ ಸಚಿವ ಅಮಿತ್ ಶಾ ಭೇಟಿಯಿಂದ ಬಿಜೆಪಿ ಸಂಘಟನೆಗೆ ಹೆಚ್ಚಿನ ಬಲ ಸಿಕ್ಕಿದೆ. ರಾಮನಗರ ಜಿಲ್ಲೆಯಲ್ಲಿ ಮೂರು ಸ್ಥಾನ ಸೇರಿ ಹಳೇ ಮೈಸೂರು ಭಾಗದಲ್ಲಿಯೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ತಿಳಿಸಿದರು. ಸಂಸದೆ ಸುಮಲತಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯೋಗೇಶ್ವರ್, ಈ ಬಗ್ಗೆ ವರಿಷ್ಠರ ಮಟ್ಟದಲ್ಲಿ ಮಾತನಾಡಿದ್ದೇವೆ. ಸುಮಲತಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಈ ಭಾಗದ ಮುಖಂಡರೆಲ್ಲ ಮನವಿ ಮಾಡಿದ್ದೇವೆ. ಇನ್ನೇನು ತೀರ್ಮಾನ ಆಗಲಿದೆ. ಈಗಾಗಲೇ ಸುಮಲತಾ ಅವರಿಗೂ ಬಿಜೆಪಿ ಪಕ್ಷಕ್ಕೆ ಬರುವಂತೆ ಮನವಿ ಮಾಡಿದ್ದೇವೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ದ್ವಂದ್ವ ನಿಲುವಿನ ಬಗ್ಗೆ ಸುಮಲತಾ ಅವರಿಗೂ ಗೊತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಡ್ಯದಲ್ಲಿ ಸಾಕಷ್ಟುಅಭಿವೃದ್ಧಿ ಕೆಲಸಗಳು ಆಗಿವೆ ಎಂದು ಹೇಳಿದರು. ಮಾಜಿ ಸಿಎಂ ಕುಮಾರಸ್ವಾಮಿ ನನ್ನ ಕ್ಷೇತ್ರಕ್ಕೆ ಬಂದರೆ ನಾನು ಸ್ಪರ್ಧಿಸುತ್ತೇನೆಂಬ ಸಚಿವ ಅಶ್ವತ್ಥ ನಾರಾಯಣ ಹೇಳಿಕೆಗೆ ಉತ್ತರಿಸಿದ ಅವರು, ಸಚಿವರು ಹೇಳಿರುವುದು ಸತ್ಯ. ಕುಮಾರಸ್ವಾಮಿ ಒಂದು ರೀತಿ ವಲಸೆ ಹಕ್ಕಿ ಇದ್ದಂತೆ. ಅವರಿಗೆ ಪರ್ಮನೆಂಟ್ ಕ್ಷೇತ್ರ ಅಂತಾ ಯಾವುದು ಇಲ್ಲ ಎಂದು ವ್ಯಂಗ್ಯವಾಡಿದರು. ಕುಮಾರಸ್ವಾಮಿ ಚುನಾವಣೆಯಲ್ಲಿ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುತ್ತಾರೆ.
ಈ ಹಿಂದೆ ಸಾತನೂರು, ಕನಕಪುರ, ರಾಮನಗರ, ಚಿಕ್ಕಬಳ್ಳಾಪುರ, ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ದರು. ನಾಳೆ ಬೇಕಾದರೆ ಮಂಡ್ಯದಲ್ಲೂ ಸ್ಪರ್ಧೆ ಮಾಡುತ್ತಾರೆ. ರಾಮನಗರದಲ್ಲಿ ಮಗನನ್ನು ಬೆಳೆಸಬೇಕು ಅಂತಾ ಚನ್ನಪಟ್ಟಣಕ್ಕೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಏನು ಆಗುತ್ತದೆ ಅಂತ ಕಾದು ನೋಡೋಣ ಎಂದು ಮಾರ್ಮಿಕವಾಗಿ ನುಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಜಿ.ಕೆ.ಗೋವಿಂದರಾಜು, ಮಂಜು , ಪಿ.ಶಿವಾನಂದ, ಶಬರಿ, ರಾಮಾಂಜನೇಯ, ದೂ.ರಾ.ಸುರೇಶ್, ಗಿರಿಗೌಡ, ನಾಗೂ, ದೇವಿಕಾ, ಚಂದ್ರಕಲಾ ಇದ್ದರು.
ಮಾಧ್ಯಮಗಳು ಸ್ವಾಭಾವಿಕವಾಗಿ ಆಡಿರುವ ಮಾತುಗಳನ್ನು ಬಿತ್ತರಿಸಿವೆ: ಆಡಿಯೋದಲ್ಲಿರುವುದು ನಾನು ಅಧಿಕೃತವಾಗಿ ಆಡಿದ ಮಾತುಗಳಲ್ಲ. ಖಾಸಗಿಯಾಗಿ ಆಡಿರುವ ಮಾತುಗಳು ಇರಬಹುದು. ಅದು ನನ್ನ ಧ್ವನಿಯೇ ಎಂಬುದು ಗೊತ್ತಾಗುತ್ತಿಲ್ಲ. ವೈಯಕ್ತಿಕವಾಗಿ, ಸ್ವಾಭಾವಿಕವಾಗಿ ಮಾತನಾಡಿರುವುದನ್ನು ಮಾಧ್ಯಮಗಳು ಬಿತ್ತರಿಸಿವೆ. ನನ್ನ ವಿಚಾರ ಮಾಧ್ಯಮದ ಮುಂದೆ ಹಿಂದೆ ಒಂದೇ ಆಗಿರುತ್ತದೆ. ಏನೇ ಇದ್ದರೂ ನಾನು ಪಕ್ಷ ಸಂಘಟನೆ ಬಗ್ಗೆ ಮಾತನಾಡಿದ್ದೇನೆ. ಗ್ರಾಮೀಣ ಭಾಷೆಗಳಲ್ಲಿ ಕೆಲವೊಂದು ವಿಚಾರಗಳನ್ನು ಮಾತಾನಾಡಿದ್ದೇನೆ. ಏನೇ ಇದ್ದರೂ ನನ್ನ ಮನಸ್ಸಿನಲ್ಲಿ ಬಿಜೆಪಿ ಪಕ್ಷ ಸಂಘಟನೆ ಮಾರಡುವ ಉದ್ದೇಶ ಇದೆ. ಆ ದೃಷ್ಟಿಯಲ್ಲಿ ನಾನು ಮಾತನಾಡಿರಬಹುದು ಅಷ್ಟೆ. ಯಾವುದೇ ದುರುದ್ದೇಶದಿಂದ ಆಡಿದ ಮಾತುಗಳಲ್ಲ ಎಂದು ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯೆ ನೀಡಿದರು.
ಕಡಲೆ ಮತ್ತು ಅವರೆಕಾಯಿ ಪರಿಷೆ: ರಾಮನಗರದಲ್ಲಿ ಇದೇ ಮೊದಲ ಬಾರಿಗೆ ಕಡಲೆಕಾಯಿ ಮತ್ತು ಅವರೆಕಾಯಿ ಪರಿಷೆಯನ್ನು ಶ್ರೀ ಚಂದ್ರಮೌಳೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೆ.ಜಿ.ಗೋವಿಂದರಾಜು ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ನಗರದ ಡೀಸಿ ಕಚೇರಿ ಎದುರಿನ ಪಂಚಮುಖಿ ಬಾಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪರಿಷೆ ನಡೆಯಿತು. ಟ್ರಸ್ಟ್ ವತಿಯಿಂದಲೇ 3 ಟನ್ ಕಡಲೆಕಾಯಿ, 3 ಟನ್ ಅವರೆಕಾಯಿ ಮತ್ತು 3 ಟನ್ ಕಬ್ಬನ್ನು ಬಾಲಾಂಜನೇಯಸ್ವಾಮಿಯನ್ನು ದರ್ಶಿಸಿದ ಸುಮಾರು 3 ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರಿಗೆ ಉಚಿತವಾಗಿ ವಿತರಿಸಲಾಯಿತು. ಪಂಚಮುಖಿ ಆಂಜನೇಯಸ್ವಾಮಿಯನ್ನು ದರ್ಶಿಸಿದ ನಂತರ ನೆರೆದಿದ್ದ ಭಕ್ತರೊಂದಿಗೆ ಹಬ್ಬದ ಶುಭಾಷಯಗಳನ್ನು ವಿನಿಮಯಿಸಿಕೊಂಡರು.
ನಾನು ಉಡಾಫೆ ರಾಜಕಾರಣಿಯಲ್ಲ: ಶಾಸಕ ಮಂಜುನಾಥ್
ಇದು ರಾಜಕೀಯ. ಎಲ್ಲ ಪಕ್ಷಗಳಲ್ಲು ಷಡ್ಯಂತ್ರಗಳು ಇರುತ್ತವೆ. ಚಾಣಕ್ಯನ ಕಾಲದಿಂದಲೂ ಇದೆಲ್ಲವೂ ನಡೆಯುತ್ತಿದೆ. ನಮ್ಮ ಉದ್ದೇಶ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದು ಅಷ್ಟೆ. ಷಡ್ಯಂತ್ರ ಅನ್ನುವುದು ರಾಜಕೀಯದಲ್ಲಿ ಸಾಮಾನ್ಯ. ಅದೆಲ್ಲದಕ್ಕೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ.
- ಸಿ.ಪಿ.ಯೋಗೇಶ್ವರ್ , ವಿಧಾನ ಪರಿಷತ್ ಸದಸ್ಯರು.