ಇಂದಿನಿಂದ ನೈತಿಕ ಪೊಲೀಸ್‌ಗಿರಿ ಖತಂ! ಪೊಲೀಸರಿಗೆ ಖಡಕ್‌ ಸೂಚನೆ ನೀಡಿದ ಸಿಎಂ

Published : May 24, 2023, 10:33 AM IST
ಇಂದಿನಿಂದ ನೈತಿಕ ಪೊಲೀಸ್‌ಗಿರಿ ಖತಂ! ಪೊಲೀಸರಿಗೆ ಖಡಕ್‌ ಸೂಚನೆ ನೀಡಿದ ಸಿಎಂ

ಸಾರಾಂಶ

‘ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯ ಕದಡದಂತೆ ಪೊಲೀಸ್‌ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು. ಶಾಂತಿ-ಸುವ್ಯವಸ್ಥೆ ಹದಗೆಟ್ಟರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಜತೆಗೆ ರಾಜ್ಯಾದ್ಯಂತ ಇಂದಿನಿಂದಲೇ ನೈತಿಕ ಪೊಲೀಸ್‌ಗಿರಿ ಅಂತ್ಯವಾಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಂಗಳೂರು (ಮೇ.24): ‘ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯ ಕದಡದಂತೆ ಪೊಲೀಸ್‌ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು. ಶಾಂತಿ-ಸುವ್ಯವಸ್ಥೆ ಹದಗೆಟ್ಟರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಜತೆಗೆ ರಾಜ್ಯಾದ್ಯಂತ ಇಂದಿನಿಂದಲೇ ನೈತಿಕ ಪೊಲೀಸ್‌ಗಿರಿ ಅಂತ್ಯವಾಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಸಚಿವರೊಂದಿಗೆ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ಅವರು, ಜನ ಬದಲಾವಣೆಯ ನಿರೀಕ್ಷೆಯೊಂದಿಗೆ ಹೊಸ ಸರ್ಕಾರ ಚುನಾಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಮರಸ್ಯವನ್ನು ಕದಡುವಂತಹ, ತೇಜೋವಧೆ ಮಾಡುವ, ಪ್ರಚೋದನಕಾರಿ ಪೋಸ್ಟ್‌ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಬೇಕು. ಹೊಯ್ಸಳ ಗಸ್ತುವಾಹನ ಸದಾ ಜಾಗೃತವಾಗಿರುವ ಮೂಲಕ ಅಪರಾಧಗಳನ್ನು ತಡೆಗಟ್ಟಬೇಕು ಎಂದು ಸೂಚಿಸಿದರು.

ಮೊದಲ ಸಭೆಯಲ್ಲೇ ಅಧಿಕಾರಿಗಳಿಗೆ ಡಿಸಿಎಂ ಡಿಕೆಶಿ ಫುಲ್‌ ಚಾರ್ಜ್‌!

ನೈತಿಕ ಪೊಲೀಸ್‌ಗಿರಿ ಅಂತ್ಯ: ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ನೈತಿಕ ಪೊಲೀಸ್‌ಗಿರಿ ಇರಬಾರದು. ನಾವು ಈ ದಿನದಿಂದಲೇ ನೈತಿಕ ಪೊಲೀಸ್‌ಗಿರಿಗೆ ಅಂತ್ಯವಾಡುತ್ತೇವೆ. ಇನ್ನು ರಾಜ್ಯದಲ್ಲಿ ಜನಸ್ನೇಹಿ ಪೊಲೀಸ್‌ ಆಡಳಿತ ನೀಡಬೇಕು. ದೂರು ನೀಡಲು ಬಂದವರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು, ಅಪರಾಧಗಳು ನಡೆದರೂ ಪೊಲೀಸ್‌ ಠಾಣೆ ಮುಖ್ಯಸ್ಥರ ಜತೆಗೆ ಡಿಸಿಪಿ ಕೂಡ ಜವಾಬ್ದಾರಿ ಆಗುತ್ತಾರೆ. 

ಕಾನೂನು ಪಾಲನೆ ವೇಳೆ ಎಲ್ಲಾ ಜನರನ್ನೂ ಸಮಾನವಾಗಿ ನೋಡಬೇಕು. ಯಾವುದೇ ಕಾರಣಕ್ಕೂ ಧರ್ಮ, ಜಾತಿಗಳ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದು ಹೇಳಿದರು. ಉತ್ತಮವಾಗಿ ಕೆಲಸ ಮಾಡುವವರಿಗೆ ಶಹಬ್ಬಾಸ್‌ಗಿರಿ ನೀಡುತ್ತೇವೆ. ಕರ್ತವ್ಯಲೋಪ ಎಸಗಿದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇವೆ. ಹೀಗಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ಕೆಲಸ ಮಾಡಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದರು.

ಪೊಲೀಸ್‌ ಇಲಾಖೆ ಕೇಸರೀಕರಣ ಮಾಡುತ್ತಿದ್ದೀರಾ?: ಇದಕ್ಕೂ ಮೊದಲು ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಹಿಂದಿನ ಸರ್ಕಾರದ ಅವಧಿಯಲ್ಲಿ ನಿಮ್ಮ ಇಲಾಖೆ ನಡೆದುಕೊಂಡಿರುವುದನ್ನು ಗಮನಿಸಿದ್ದೇನೆ. ಮಂಗಳೂರು, ವಿಜಯಪುರ, ಬಾಗಲಕೋಟೆಯಲ್ಲಿ ಕೇಸರಿ ಬಟ್ಟೆಹಾಕಿಕೊಂಡು ಇಲಾಖೆಗೆ ಅವಮಾನ ಮಾಡಿದ್ದೀರಿ. ಕೆಳ ಹಂತದ ಅಧಿಕಾರಿಗಳು ಏನೇ ಮಾಡಿದರೂ ನೀವು ಸುಮ್ಮನೆ ನೋಡುತ್ತಾ ಕೂತಿದ್ದೀರಿ. ಪೊಲೀಸ್‌ ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟಿದ್ದಿರಾ? ಎಂದು ತರಾಟೆಗೆ ತೆಗೆದುಕೊಂಡರು.

ನಮ್ಮ ಸರ್ಕಾರದಲ್ಲಿ ಇದಕ್ಕೆ ಅವಕಾಶ ಕೊಡುವುದಿಲ್ಲ. ದೇಶದ ಬಗ್ಗೆ ಗೌರವ ಇದ್ದರೆ ರಾಷ್ಟ್ರಧ್ವಜ ಹಾರಿಸಿ ಕೆಲಸ ಮಾಡಬೇಕು. ಅಷ್ಟೇ ಹೊರತು ಸರ್ಕಾರಿ ಇಲಾಖೆಗಳನ್ನು ಕೇಸರೀಕರಣ ಮಾಡುವುದಲ್ಲ. ಒಬ್ಬ ಎಡಿಜಿಪಿ ಪಿಎಸ್‌ಐ ಹಗರಣ ನಡೆಸಿ ಪೇಪರ್‌ ತಿದ್ದುತ್ತಾರೆ ಎಂದರೆ ಇಲಾಖೆ ಎಷ್ಟುಹಾಳಾಗಿದೆ. ಇದನ್ನು ಬಯಲಿಗೆಳದ ಪ್ರಿಯಾಂಕ್‌ ಖರ್ಗೆಗೆ ಕಾಟ ಕೊಡುತ್ತೀರಾ? ರಾಜ್ಯದಲ್ಲಿ ಪೊಲೀಸ್‌ ಇಲಾಖೆಗೆ ಇದ್ದ ಕೆಟ್ಟಹೆಸರನ್ನು ಹಾಳು ಮಾಡಿದ್ದೀರ. ಎಲ್ಲಿ ನೋಡಿದರೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇನ್ನು ಮುಂದೆ ಪಾರದರ್ಶಕ ಆಡಳಿತ ನಡೆಯಬೇಕು. ಅದು ಪೊಲೀಸ್‌ ಇಲಾಖೆಯಿಂದಲೇ ಶುರುವಾಗಬೇಕು ಎಂದು ಎಂದು ಹೇಳಿದರು.

ಮಳೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ. ಇದು ಸೂಚನೆ ಅಲ್ಲ, ಎಚ್ಚರಿಕೆ: ಸಿದ್ದರಾಮಯ್ಯ

ಟಿಪ್ಪು ಸುಲ್ತಾನ್‌ ಅವರನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಕೊಲೆ ಮಾಡಲು ಒಬ್ಬ ಸಚಿವರು ಕರೆ ನೀಡಿದ್ದರು. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಿಲ್ಲ. ಅದು ಅಪರಾಧವಲ್ಲವೇ? ಇದು ಪೊಲೀಸರು ಕೆಲಸ ಮಾಡುವ ರೀತಿಯೇ? ಇನ್ನು ನಿಮ್ಮ ವರ್ತನೆ ಬದಲಾಗಬೇಕು.
- ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ