24 ಹಿಂದೂ ಕಾರ್ಯಕರ್ತರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹತ್ಯೆ ಮಾಡಿದ್ದಾರೆಂದು ತುಳುವಿನಲ್ಲಿ ಮಾಡಿದ ಭಾಷಣದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿ ಯಡವಟ್ಟು ಮಾಡಿಕೊಂಡಿದ್ದಾರೆ.
ಬೆಳ್ತಂಗಡಿ (ಮೇ.24): 24 ಹಿಂದೂ ಕಾರ್ಯಕರ್ತರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹತ್ಯೆ ಮಾಡಿದ್ದಾರೆಂದು ತುಳುವಿನಲ್ಲಿ ಮಾಡಿದ ಭಾಷಣದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿ ಯಡವಟ್ಟು ಮಾಡಿಕೊಂಡಿದ್ದಾರೆ. ಬೆಳ್ತಂಗಡಿಯ ಕಾರ್ಯಕ್ರಮವೊಂದರಲ್ಲಿ ನಡೆದ ಘಟನೆಯಲ್ಲಿ ಸಿಎಂ ವಿರುದ್ಧ ಕೊಲೆ ಆರೋಪವನ್ನು ಶಾಸಕ ಹರೀಶ್ ಪೂಂಜಾ ಮಾಡಿದ್ದಾರೆ.
ಕಾಂಗ್ರೆಸ್ ಪರ ಪ್ರಚಾರ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಶಾಸಕ ಪೂಂಜಾ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ನಾಯಕರ ಬಗ್ಗೆ ಗರಂ ಆಗಿದ್ದರು. ಸತ್ಯಜಿತ್ ಸುರತ್ಕಲ್ ಎಂಬ ಹಿಂದೂ ನಾಯಕ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ. 24 ಹಿಂದೂ ಕಾರ್ಯಕರ್ತರನ್ನ ಹತ್ಯೆ ಮಾಡಿದ ಸಿದ್ದರಾಮಯ್ಯಗೆ ನೀವು ವೋಟ್ ಕೇಳಿದ್ದೀರ. ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದ ಕಾಂಗ್ರೆಸ್ ಪರ ವೋಟ್ ಕೇಳಿದ್ದೀರ. ನಿಮ್ಮದು ಯಾವ ರೀತಿಯ ಹಿಂದುತ್ವ ಎಂದು ಜನ ಕೇಳುತ್ತಿದ್ದಾರೆ ಎಂದಿದ್ದರು. ಇದೀಗ ಬಿಜೆಪಿ ಶಾಸಕನ ಆರೋಪ ವಿವಾದಕ್ಕೆ ಕಾರಣವಾಗಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದಾರೆ.
ಜೆಡಿಎಸ್ ಯುವಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬದಲಾವಣೆ?
ಅಪಪ್ರಚಾರದ ನೀಚ ರಾಜಕಾರಣ ಜನತೆಗೆ ಮನವರಿಕೆ: ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿ ಇಲ್ಲಿ ಬಂದು ಅಪಪ್ರಚಾರದ ನೀಚ ರಾಜಕಾರಣ ಮಾಡಿರುವುದು ಇಲ್ಲಿನ ಜನತೆಗೆ ಮನವರಿಕೆಯಾಗಿದೆ. ಕ್ಷೇತ್ರದಲ್ಲಿ ಮೊದಲ ಬಾರಿಗೆ 1 ಲಕ್ಷಕ್ಕಿಂತಲೂ ಹೆಚ್ಚು ಮತವನ್ನು ಬಿಜೆಪಿಗೆ ನೀಡಿ ಗೆಲ್ಲಿಸುವ ಮೂಲಕ ಬೆಂಗಳೂರಿನ ಜಾತಿಯ ರಾಜಕಾರಣ ಇಲ್ಲಿ ನಡೆಯದು ಎಂಬುದನ್ನು ಇಲ್ಲಿನ ಜನತೆ ತೋರಿಸಿಕೊಟ್ಟಿದ್ದಾರೆ ಎಂದು ಶಾಸಕ ಹರೀಶ ಪೂಂಜ ಹೇಳಿದ್ದಾರೆ. ಇಲ್ಲಿನ ಕಿನ್ಯಮ್ಮ ಸಭಾ ಭವನದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರದಲ್ಲಿ ಬೆಳ್ತಂಗಡಿಯಲ್ಲಿ ಹಿಂಬದಿಯ ರಾಜಕಾರಣವನ್ನು ಎಗ್ಗಿಲ್ಲದೆ ನಡೆಸಿತು. ಜಾತಿಯನ್ನು ಎತ್ತಿಕಟ್ಟುವ ಪ್ರಯತ್ನ ನಡೆಯಿತು. ಗೌಡ ಸಮುದಾಯದ ವಿರುದ್ಧವೂ ನನ್ನನ್ನು ಎತ್ತಿಕಟ್ಟಲಾಯಿತು. ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಯು ಇಲ್ಲಿ ಅಭ್ಯರ್ಥಿಯಾಗಿ ನಿಂತು ಏನೆಲ್ಲಾ ರಾಜಕೀಯದ ಆಟಗಳನ್ನು ಆಡಿದರೂ ಬೆಳ್ತಂಗಡಿಯ ಜನತೆ ಬಿಜೆಪಿಯ ಕೈ ಹಿಡಿದಿದೆ ಎಂದರು. ವಿಧಾನ ಪರಿಷತ್ ಪ್ರತಾಪಸಿಂಹ ನಾಯಕ್ ಮಾತನಾಡಿ, ಹಿಂದುತ್ವ ಹಾಗೂ ಸಂಘಟನೆ ಇರುವಲ್ಲಿ ಪಕ್ಷ ಗೆದ್ದಿದೆ. ಪಕ್ಷಕ್ಕೆ ಅಧಿಕಾರ ಎಂಬುದು ಜವಾಬ್ದಾರಿ, ಚುನಾವಣೆ ಎಂಬುದು ಶಿಕ್ಷಣ. ಸೋಲು-ಗೆಲುವು ಅಂತಿಮವಲ್ಲ ಎಂದರು.
ಇಂದಿನಿಂದ ನೈತಿಕ ಪೊಲೀಸ್‌ಗಿರಿ ಅಂತ್ಯ: ಸಿಎಂ ಸಿದ್ದರಾಮಯ್ಯ
ಅಭಿನಂದನಾ ಸಭೆಯಲ್ಲಿ ಚುನಾವಣಾ ಪ್ರಭಾರಿ ಹರಿಕೃಷ್ಣ ಬಂಟ್ವಾಳ, ಅಭ್ಯರ್ಥಿ ಪ್ರಮುಖ್ ಯತೀಶ್ ಆವಾರ್ ಅವರನ್ನು ಮಂಡಲದ ವತಿಯಿಂದ ಅಭಿನಂದಿಸಲಾಯಿತು. ಶಾಸಕ ಹರೀಶ ಪೂಂಜ ಅವರನ್ನು ಬೃಹತ್ ಹಾರ ಹಾಕುವ ಮೂಲಕ ಗೌರವಿಸಲಾಯಿತು. ಮಾಜಿ ಶಾಸಕ ಪ್ರಭಾಕರ ಬಂಗೇರ, ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೊರಗಪ್ಪ ನಾಯ್ಕ, ನ.ಪಂ. ಉಪಾಧ್ಯಕ್ಷ ಜಯಾನಂದ ಗೌಡ, ಶ್ರೀನಿವಾಸ ರಾವ್, ಧನಲಕ್ಷ್ಮೀ, ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಚೆನ್ನಕೇಶವ ನಾಯ್ಕ, ಗಣೇಶ್ ಗೌಡ ಹಾಜರಿದ್ದರು.