ಸೋಲಿನ ಬೆನ್ನಲ್ಲೇ ನಿಖಿಲ್‌ ಕುಮಾರಸ್ವಾಮಿಗೆ ಮತ್ತೊಂದು ಶಾಕ್?

By Kannadaprabha News  |  First Published May 24, 2023, 9:34 AM IST

ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ಥಾನ ಗಳಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಪಕ್ಷದ ಯುವಘಟಕದ ಅಧ್ಯಕ್ಷ ಸೇರಿದಂತೆ ಹಲವು ಘಟಕಗಳ ಪದಾಧಿಕಾರಿಗಳನ್ನು ಬದಲಿಸಲು ಜೆಡಿಎಸ್‌ ಪಾಳೆಯದಲ್ಲಿ ಚಿಂತನೆ ಆರಂಭವಾಗಿದೆ. 


ಬೆಂಗಳೂರು (ಮೇ.24): ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ಥಾನ ಗಳಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಪಕ್ಷದ ಯುವಘಟಕದ ಅಧ್ಯಕ್ಷ ಸೇರಿದಂತೆ ಹಲವು ಘಟಕಗಳ ಪದಾಧಿಕಾರಿಗಳನ್ನು ಬದಲಿಸಲು ಜೆಡಿಎಸ್‌ ಪಾಳೆಯದಲ್ಲಿ ಚಿಂತನೆ ಆರಂಭವಾಗಿದೆ. ಚುನಾವಣೆಯಲ್ಲಿ ಪರಾಭವಗೊಂಡ ಕಾರಣ ರಾಜಕೀಯದಿಂದ ಸ್ವಲ್ಪ ಅಂತರ ಕಾಯ್ದುಕೊಂಡು ಸಿನಿಮಾ ಕ್ಷೇತ್ರದತ್ತ ಹೆಚ್ಚಿನ ಗಮನಹರಿಸುವ ಬಗ್ಗೆ ನಿಖಿಲ್‌ ಕುಮಾರಸ್ವಾಮಿ ಗಂಭೀರವಾಗಿ ಚಿಂತನೆ ನಡೆಸಿದ್ದಾರೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹ ಸಮ್ಮತಿ ಸೂಚಿಸಿದ್ದಾರೆ. 

ಹೀಗಾಗಿ ಪಕ್ಷದ ಯುವಘಟಕದ ಅಧ್ಯಕ್ಷ ಸ್ಥಾನವನ್ನು ಬೇರೆಯೊಬ್ಬರಿಗೆ ವಹಿಸಿ, ಆ ಜವಾಬ್ದಾರಿಯಿಂದ ಮುಕ್ತಿಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಯುವಘಟಕವನ್ನು ಸಮರ್ಥವಾಗಿ ಕೊಂಡೊಯ್ಯುವ ನಾಯಕರನ್ನು ಜೆಡಿಎಸ್‌ ಸದ್ದಿಲ್ಲದೆ ಹುಡುಕುತ್ತಿದೆ ಎನ್ನಲಾಗಿದೆ. ಗುರುವಾರ ಆತ್ಮಾವಲೋಕನ ಸಭೆ ನಡೆಯಲಿದೆ. ಈ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದೆ. ಪಕ್ಷದ ಯುವಘಟಕ ಅಧ್ಯಕ್ಷ ಸ್ಥಾನದಿಂದ ನಿಖಿಲ್‌ ಕುಮಾರಸ್ವಾಮಿ ಅವರನ್ನು ಬದಲಿಸಿದ ಬಳಿಕ ಆ ಸ್ಥಾನಕ್ಕೆ ಯಾರು ಸೂಕ್ತ ಎಂಬ ಪ್ರಶ್ನೆಗಳು ಸಹ ಉದ್ಭವವಾಗಿದೆ. 

Tap to resize

Latest Videos

ಇಂದಿನಿಂದ ನೈತಿಕ ಪೊಲೀಸ್‌ಗಿರಿ ಅಂತ್ಯ: ಸಿಎಂ ಸಿದ್ದರಾಮಯ್ಯ

ಸಂಸದ ಪ್ರಜ್ವಲ್‌ ರೇವಣ್ಣ ಹೆಸರು ಪ್ರಬಲವಾಗಿ ಕೇಳಿ ಬಂದಿದೆಯಾದರೂ ಕುಮಾರಸ್ವಾಮಿ ಇದಕ್ಕೆ ಸಮ್ಮತಿ ಸೂಚಿಸುವರೇ ಎಂಬುದು ಯಕ್ಷಪ್ರಶ್ನೆಯಾಗಿದೆ. ಕುಟುಂಬ ರಾಜಕಾರಣ ಇದಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಕುಟುಂಬ ರಾಜಕಾರಣವನ್ನು ಬದಿಗಿಟ್ಟು ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುವುದಾದರೆ ಪ್ರಜ್ವಲ್‌ ರೇವಣ್ಣಗೆ ಯುವ ಘಟಕ ಹೊಣೆ ಒಲಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. 

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಸೋದರ ಸಂಬಂಧಿ ಖುಲಾಸೆ ರದ್ದು: ಹೈಕೋರ್ಟ್‌

ಒಂದು ವೇಳೆ ಪ್ರಜ್ವಲ್‌ಗೆ ಯುವಘಟಕ ಅಧ್ಯಕ್ಷ ಸ್ಥಾನ ನೀಡಲು ಕುಮಾರಸ್ವಾಮಿ ಹಿಂದೇಟು ಹಾಕಿದರೆ, ಪಕ್ಷದಲ್ಲಿ ಯುವ ಸಂಘಟಕರಾಗಿ ಓಡಾಡುವ ವ್ಯಕ್ತಿಯನ್ನು ಹುಡುಕುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಯುವ ಘಟಕದ ಅಧ್ಯಕ್ಷ ಸ್ಥಾನದ ಜತೆಗೆ ಇತರೆ ಘಟಕಗಳ ಪದಾಧಿಕಾರಿಗಳನ್ನು ಬದಲಿಸುವ ಸಾಧ್ಯತೆಯೂ ಇದೆ. ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಸ್ಥಳೀಯ ನಾಯಕರಿಗೆ ಮನ್ನಣೆ ದೊರಕುವ ಸಾಧ್ಯತೆ ಇದೆ ಎನ್ನಲಾಗಿದೆ.

click me!