ರಾಜ್ಯದ ಆರೂವರೆ ಕೋಟಿ ಜನರ ಕಷ್ಟಗಳನ್ನು ದೂರಮಾಡಲು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರು ಜೆಡಿಎಸ್ ಪಕ್ಷಕ್ಕೆ ಬಹುಮತದ ಸರ್ಕಾರ ರಚನೆ ಮಾಡಲು ಅವಕಾಶ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬಸವನಬಾಗೇವಾಡಿ (ಜ.21): ರಾಜ್ಯದ ಆರೂವರೆ ಕೋಟಿ ಜನರ ಕಷ್ಟಗಳನ್ನು ದೂರಮಾಡಲು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರು ಜೆಡಿಎಸ್ ಪಕ್ಷಕ್ಕೆ ಬಹುಮತದ ಸರ್ಕಾರ ರಚನೆ ಮಾಡಲು ಅವಕಾಶ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಎಂ.ಜಿ.ಕೋರಿ ಹಾಗೂ ಡಾ.ಬಿ.ಜಿ.ಬ್ಯಾಕೋಡ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪಂಚರತ್ನ ರಥಯಾತ್ರೆ ಅಂಗವಾಗಿ ಗುರುವಾರ ರಾತ್ರಿ ಜರುಗಿದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕೆನ್ನುವ ಮಹಾದಾಸೆಯೊಂದಿಗೆ ಪಂಚರತ್ನ ಯೋಜನೆಗಳನ್ನು ಜನರ ಮುಂದಿಟ್ಟುಕೊಂಡು ರಾಜ್ಯದಲ್ಲಿ ಪಂಚರತ್ನ ರಥಯಾತ್ರೆಯ ಹಮ್ಮಿಕೊಳ್ಳಲಾಗಿದೆ.
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಬಂದರೇ ಪಂಚರತ್ನ ಯೋಜನೆಗಳಾದ ವಸತಿ ಆಸರೆ, ಆರೋಗ್ಯವೇ ಸಂಪತ್ತು, ಶಿಕ್ಷಣವೇ ಆಧುನಿಕ ಶಕ್ತಿ, ರೈತ ಚೈತನ್ಯ, ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ ಜಾರಿಗೆ ತರುವ ಮೂಲಕ ಸಮಸ್ತ ನಾಡಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತೇನೆ ಎಂದರು. ಕೇಂದ್ರದಲ್ಲಿ ಮೋದಿ ಸರ್ಕಾರ ಪೆಟ್ರೋಲ್, ಡಿಸೇಲ್, ಗ್ಯಾಸ್, ಗೊಬ್ಬರ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳ ಮಾಡುವ ಮೂಲಕ ಜನರನ್ನು ಸಂಕಷ್ಟಕ್ಕೆ ದೂಕುತ್ತಿದೆ. ರೈತ ಬಾಂಧವರ ಬದುಕು ಡಬಲ್ ಮಾಡುವುದಾಗಿ ಹೇಳಿದ ಮೋದಿ ಸರ್ಕಾರ ಕೃಷಿಗೆ ಹಾಕುವ ಗೊಬ್ಬರದ ಬೆಲೆ ಡಬಲ್ ಮಾಡಿದ್ದು ಅವರ ಕೊಡುಗೆ.
ದೇವೇಗೌಡರ ಕಾಲಿನ ಧೂಳಿಗೂ ನಳಿನ್ ಕಟೀಲ್ ಸಮನಲ್ಲ: ಎಚ್.ಡಿ.ಕುಮಾರಸ್ವಾಮಿ
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಖಂಡಿತ ರೈತ ಬಾಂಧವರು ಸಾಲಗಾರರು ಆಗುವ ಪ್ರಮೇಯ ಬರುವುದಿಲ್ಲ. ಪ್ರತಿವರ್ಷ ರೈತರ ಪ್ರತಿ ಎಕರೆಗೆ .10 ಸಾವಿರ ಸರ್ಕಾರದಿಂದ ಆರ್ಥಿಕ ನೆರವು ನೀಡುವ ಮೂಲಕ ಅವರು ಸಾಲ ಪಡೆಯದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು ನಾನು ಕಳೆದ ಎರಡು ದಿನಗಳಿಂದ ಇಂಡಿ, ಸಿಂದಗಿ ಮತಕ್ಷೇತ್ರದಲ್ಲಿ ಸಂಚಾರ ಮಾಡಿದ್ದೇನೆ. ಅಲ್ಲಿ ರಸ್ತೆಗಳು ಸುಧಾರಣೆಯಾಗದೇ ಇರುವುದರಿಂದ ಜನರು ದೂಳಿನಿಂದ ಸಹಿಸಿಕೊಂಡಿರುವುದನ್ನು ನೋಡಿದರೇ ಅಲ್ಲಿನ ಜನರ ತಾಳ್ಮೆ ಶಕ್ತಿ ದೊಡ್ಡದ್ದು. ನಮ್ಮ ಸರ್ಕಾರ ಬಂದರೆ ಖಂಡಿತ ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಜನರಿಗೆ ಕೊಡಲು ಸದಾ ಬದ್ಧ. ದೇವರಹಿಪ್ಪರಗಿ ಮತಕ್ಷೇತ್ರದಲ್ಲಿಯೂ ನೀರಾವರಿ ಸೇರಿದಂತೆ ಹಲವು ಸೌಲಭ್ಯ ನೀಡುವುದಾಗಿ ಭರವಸೆ ನೀಡಿದರು.
ದೇವರಹಿಪ್ಪರಗಿ ಮತಕ್ಷೇತ್ರದ ನಮ್ಮ ಅಭ್ಯರ್ಥಿ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಎರಡು ಸಲ ಪರಾಭವಗೊಂಡಿದ್ದಾರೆ. ಅವರು ಹಣ ಬಲದಿಂದ ಪರಾಭವಗೊಂಡಿದ್ದಾರೆ ಎಂದು ಜನರಿಂದ ಕೇಳಿದ್ದೇನೆ. ಈ ಸಲ ಅವರ ಚುನಾವಣೆಯನ್ನು ನಾನೇ ಮುಂದೇ ನಿಂತು ಮಾಡುತ್ತೇನೆ. ಜನ ಶಕ್ತಿಯ ಮುಂದೆ ಯಾವ ಹಣದ ಶಕ್ತಿ ಕೆಲಸ ಮಾಡಲಾರದು. ಜನರು ಅವರನ್ನು ಈ ಸಲ ಖಂಡಿತ ಆಯ್ಕೆ ಮಾಡುವ ವಿಶ್ವಾಸವಿದೆ. ಜನರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗಬಾರದು. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಬಡವರ ಪರ ಇಲ್ಲ. ಅದನ್ನು ಜನರು ಅರಿತುಕೊಂಡು ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರಬೇಕು ಎಂದು ಕೋರಿದರು.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ರಾಜ್ಯದ ಅಭಿವೃದ್ಧಿಗಾಗಿ ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಸುಂದರ ಮತ್ತು ಸದೃಢವಾದ ಉಚಿತ ಮನೆ, ಪ್ರತಿ ಗ್ರಾಪಂಗೊಂದು ಹೈಟೆಕ್ ಆಸ್ಪತ್ರೆ ನಿರ್ಮಾಣ, ಹೈಟೆಕ್ ಮಾದರಿ ಸರ್ಕಾರಿ ಶಾಲೆ, ಕೃಷಿ ಪಂಪುಸೆಟ್ಟುಗಳಿಗೆ ಗುಣಮಟ್ಟದ ಉಚಿತ ವಿದ್ಯುತ್, ಕೃಷಿ ಆಧಾರಿತ ಉದ್ಯೋಗ ಸೃಷ್ಟಿ, ಯಾಂತ್ರಿಕೃತ ಹೈನುಗಾರಿಕೆ, ಕೌಶಲ ತಂತ್ರಜ್ಞಾನ ಆಧಾರಿತ ಉಚಿತ ತರಬೇತಿ, ಸೇರಿದಂತೆ ಹಲವಾರು ಯೋಜನೆಗಳು ಅವರ ಮುಂದಿವೆ. ಈ ಯೋಜನೆಗಳು ಸಾಕಾರವಾಗಬೇಕಾದರೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಅವರ ಕೈಬಲಪಡಿಸಬೇಕು ಎಂದು ಮನವಿ ಮಾಡಿದರು.
ಸಿಂಧನೂರ ಶಾಸಕ ವೆಂಕಟರಾವ ನಾಡಗೌಡ ಮಾತನಾಡಿ, ಜೆಡಿಎಸ್ ಪಕ್ಷವು ಬಡವರ ಪಕ್ಷವಾಗಿದೆ. ಯಾವಾಗಲೂ ಬಡವರ,ನಾಡಿನ ಅಭಿವೃದ್ಧಿ ಚಿಂತನೆ ಮಾಡುವ ಪಕ್ಷವಾಗಿದೆ. ಇದಕ್ಕೆ ಎಲ್ಲರೂ ಬೆಂಬಲಿಸಿ ಅಧಿಕಾರಕ್ಕೆ ತರಬೇಕಿದೆ ಎಂದರು. ದೇವರಹಿಪ್ಪರಗಿ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಸರ್ವರನ್ನು ಸ್ವಾಗತಿಸಿ ಮಾತನಾಡಿ, ಕಳೆದೆರಡು ಸಲ ಕ್ಷೇತ್ರದ ಜನರು ನನ್ನನ್ನು ಪರಾಭವಗೊಳಿಸಿದರೂ ನಾನು ಜನರ ಸೇವೆಯಿಂದ ದೂರ ಉಳಿದುಕೊಂಡಿಲ್ಲ. ಸದಾ ಜನರ ಸೇವೆ ಮಾಡುತ್ತ ಬಂದಿದ್ದೇನೆ. ರಾತ್ರಿ 11 ಗಂಟೆಗೆಯಾದರೂ ಕ್ಷೇತ್ರದ ಜನರು ಇಷ್ಟೊಂದು ಸಂಖ್ಯೆಯಲ್ಲಿ ಜಮಾಯಿಸಿರುವುದು ನೋಡಿದರೇ ಅವರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಸದಾ ನಾನು ಚಿರಋುಣಿ.
ಕ್ಷೇತ್ರದ ಜನರ ಋುಣವನ್ನು ತೀರಿಸಲು ಸದಾ ಬದ್ಧ. ನಾನು ಕ್ಷೇತ್ರದ ಅಭಿವೃದ್ಧಿಗೆ, ಜನರ ಸೇವೆ ಮಾಡಲು ಸದಾ ಬದ್ಧ. ಈ ಸಲ ಕ್ಷೇತ್ರದ ಜನರು ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದರು. ವೇದಿಕೆಯಲ್ಲಿ ಬಿ.ಜಿ.ಪಾಟೀಲ, ಮಲ್ಲಿಕಾರ್ಜುನ ಯಂಡಿಗೇರಿ, ಬಸವರಾಜ ಡೆಂಗಿ, ಯಲಗೂರಪ್ಪ ವಾಲೀಕಾರ, ಇಬ್ರಾಹಿಂ ಮುಲ್ಲಾ, ಬಸನಗೌಡ ಪಾಟೀಲ, ಮಾಂತೇಶ ತಾಳಿಕೋಟಿ, ಹಣಮಂತ ಗಂಡನ್ನವರ, ಆರ್.ಎಂ.ಕೋರಿ, ಜಿ.ಎಂ.ಹಳ್ಳೂರ, ನಿಂಗಪ್ಪ ಶಿವಯೋಗಿ, ಖಾದ್ರಿ ಇನಾಮದಾರ, ಸಿದ್ದು ಹಾದಿಮನಿ ಸೇರಿದಂತೆ ಇತರರು ಇದ್ದರು. ಬಸವರಾಜ ಬಾಗೇವಾಡಿ, ಸಿದ್ದು ಮೇಟಿ ನಿರೂಪಿಸಿದರು.
ರೈತರ ಹಣ ಲೂಟಿ ಮಾಡುತ್ತಿದೆ ಡಬಲ್ ಎಂಜಿನ್ ಸರ್ಕಾರ: ಎಚ್‌ಡಿಕೆ
ಮೆರವಣಿಗೆ: ಗ್ರಾಮದ ತಾಳಿಕೋಟಿ ರಸ್ತೆಯಲ್ಲಿರುವ ರಾಣಿ ಚನ್ನಮ್ಮ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಕುಮಾರಸ್ವಾಮಿಯವರು ತೆರೆದ ವಾಹನದಲ್ಲಿ ಜನರತ್ತ ಕೈಬೀಸುತ್ತ ಸಾಗಿದರು. ರಾತ್ರಿ 10 ಗಂಟೆಗೆ ಬಂದರೂ ಜನರು ಉತ್ಸಾಹದಿಂದ ಅವರನ್ನು ಬರಮಾಡಿಕೊಂಡರು. 11 ಗಂಟೆಗೆ ವೇದಿಕೆ ಹತ್ತಿದ ಅವರು ಕಾರ್ಯಕ್ರಮ 12 ಗಂಟೆ ಮುಗಿದರೂ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು. ರಸ್ತೆಯಲ್ಲಿ ಪುಷ್ಪಾರ್ಚನೆ ಮಾಡಿದರು. ವೇದಿಕೆಯಲ್ಲಿ ಕಾರ್ಯಕರ್ತರು ಬಾಳೆಗೊನೆ ನೀಡಿ ಸನ್ಮಾನಿಸಿದರು. ನಂತರ ಹೂವಿನಹಿಪ್ಪರಗಿಯಲ್ಲಿಯೇ ಅವರು ಗ್ರಾಮ ವಾಸ್ತವ್ಯ ಮಾಡಿದರು.
ಈಗಾಗಲೇ ನಾನು ಎರಡು ಸಲ ಮುಖ್ಯಮಂತ್ರಿಯಾಗಿದ್ದೇನೆ. ನಾನು ಮುಖ್ಯಮಂತ್ರಿಯಾಗಲು ಹೊರಟಿಲ್ಲ. ರಾಜ್ಯದ ಜನರ ಬದುಕನ್ನು ಶಾಶ್ವತವಾಗಿ ಭದ್ರತೆ ಪಡಿಸುವ ಸಲುವಾಗಿ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಸಿಗಲು ನಾನು ರಥಯಾತ್ರೆ ಹಮ್ಮಿಕೊಂಡಿದ್ದೇನೆ. ನಾಡಿನ ಬಡಕುಟುಂಬಗಳಿಗೆ, ರೈತ ಬಾಂಧವರಿಗೆ ಆರ್ಥಿಕ ನೆರವು ಸೇರಿದಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು.
-ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ