ರಾಮನಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಕಲ್ಪನೆಯಲ್ಲಿಟ್ಟುಕೊಂಡು ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ರಾಮನಗರ (ಜ.21): ರಾಮನಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಕಲ್ಪನೆಯಲ್ಲಿಟ್ಟುಕೊಂಡು ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ನಗರದಲ್ಲಿ ಜೆಡಿಎಸ್ ನಗರ ಘಟಕ ಆಯೋಜಿಸಿದ್ದ ಎಸ್ಸಿ -ಎಸ್ಟಿಮುಖಂಡರ ಮತ್ತು ಕಾರ್ಯಕರ್ತರ ಸಭೆ ಉದ್ಘಾಟಿಸಿದ ಅವರು, ರಾಮನಗರ ಕ್ಷೇತ್ರ 30 ವರ್ಷಗಳ ಹಿಂದೆ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ನೋಡಿದ್ದೀರಿ. 30 ವರ್ಷಗಳಿಂದ ಕ್ಷೇತ್ರದ ಜನರು ನಮ್ಮ ಕುಟುಂಬದ ಕೈಬಿಟ್ಟಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿನ ಜನರ ಪ್ರೀತಿ ವಿಶ್ವಾಸವನ್ನು ನನ್ನ ಕುಟುಂಬ ಗಳಿಸಿದೆ.
ಯಾರಿಗೂ ಅನ್ಯಾಯ, ಮೋಸ ಮಾಡಿಲ್ಲ. ಪ್ರಾಮಾಣಿಕ ಕೆಲಸ ಮಾಡಿದ್ದು, ಕಷ್ಟಬಂದವರಿಗೆ ಸ್ಪಂದಿಸಿದ್ದಾರೆ. ರಾಮನಗರ ಜಿಲ್ಲೆಯಾದ ಮೇಲೆ ಯಾವ ರೀತಿ ಅಭಿವೃದ್ಧಿ ಕಂಡಿದೆ ಎಂಬುದನ್ನು ಅವಲೋಕನ ಮಾಡಬೇಕು ಎಂದರು. ಪ್ರತಿಸ್ಪರ್ಧಿಗಳು ಮತದಾರರಿಗೆ ಕುಕ್ಕರ್, ತವಾ ಹಂಚುತ್ತಿದ್ದಾರೆ ಎಂದು ಆತಂಕ ಪಡಬೇಕಿಲ್ಲ. ಕ್ಷೇತ್ರದ ಮತದಾರರು ತಾತ್ಕಾಲಿಕ ಪರಿಹಾರಗಳಿಗೆ ಮಾರು ಹೋಗಲ್ಲ ಎಂಬ ವಿಶ್ವಾಸವಿದೆ. ಮತ ಪಡೆಯಲು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವುದು ನಮ್ಮ ಕುಟುಂಬದ ಸಂಸ್ಕೃತಿ ಮತ್ತು ಪದ್ಧತಿ ಅಲ್ಲ. ಶಾಶ್ವತ ಪರಿಹಾರಗಳು ಪ್ರತಿ ಬಡ ಕುಟುಂಬಕ್ಕೂ ಸಿಗುವಂತಾಗಬೇಕು.
ಈ ಬಾರಿ ಬಿಜೆಪಿಗೆ 150 ಸ್ಥಾನ: ನಳಿನ್ ಕುಮಾರ್ ಕಟೀಲ್ ವಿಶ್ವಾಸ
ಸ್ವಾಭಿಮಾನದಿಂದ ದುಡಿಯುವ ಕೈಗಳಿಗೆ ಕೆಲಸ ನೀಡಲು ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕು. ಯುವಕರು ಮಾತ್ರವಲ್ಲದೆ ಹೆಣ್ಣು ಮಕ್ಕಳಿಗೂ ರಕ್ಷಣೆ ಕೊಡಬೇಕಿದೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಶಕ್ತಿ ತುಂಬುವ ಶಾಶ್ವತ ಕಾರ್ಯಕ್ರಮ ನೀಡಬೇಕಿದೆ. ಅದು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು. ದಲಿತರು, ರೈತರು, ಬಡವರು, ಮಹಿಳೆಯರು, ಯುವಕರನ್ನು ಗಮನದಲ್ಲಿಟ್ಟುಕೊಂಡು ಪಂಚರತ್ನ ಯೋಜನೆ ರೂಪಿಸಲಾಗಿದೆ. ಎಲ್ಲರಿಗೂ ಉತ್ತಮ ಬದುಕು ಕಟ್ಟಿಕೊಡುವ ಉದ್ದೇಶ. ಬಿಜೆಪಿ - ಕಾಂಗ್ರೆಸ್ ಪಕ್ಷದವರಂತೆ ಸ್ಟ್ರಾಟರ್ಜಿ ಮಾಸ್ಟರ್‌ಗಳನ್ನು ಕರೆತಂದು ಯೋಜನೆ ರೂಪಿಸಿಲ್ಲ.
ಕುಮಾರಸ್ವಾಮಿ 25 ವರ್ಷಗಳ ಸುಧೀರ್ಘ ರಾಜಕಾರಣದ ಅನುಭವದ ಕಾರ್ಯಕ್ರಮಗಳು ಇದಾಗಿವೆ ಎಂದರು. ಮಳವಳ್ಳಿ ಕ್ಷೇತ್ರ ಶಾಸಕ ಡಾ.ಕೆ.ಅನ್ನದಾನಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ನಗರಸಭೆ ಸದಸ್ಯ ಶಿವಸ್ವಾಮಿ, ಮುನಜಿಲ ಆಗಾ, ಮಾಜಿ ಸದಸ್ಯ ರವಿ, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಮುಖಂಡರಾದ ನರಸಿಂಹ ಮೂರ್ತಿ, ರೈಡ್ ನಾಗರಾಜ, ಸುಹೇಲ , ಮರಲಿಂಗ, ವೆಂಕಟೇಶ್, ಹರೀಶ್ ಬಾಲು ಮತ್ತಿತರರು ಹಾಜರಿದ್ದರು.
ಕೋಲಾರದಲ್ಲಿ ಯಾರೇ ಬಂದರೂ ಏನೇ ಮಾಡಿದರು ನಾನು ಗೆಲ್ಲುತ್ತೇನೆ: ಸಿದ್ದರಾಮಯ್ಯ
ನಾನೆಂದು ಪ್ರತಿಸ್ಪರ್ಧಿಗಳನ್ನು ಗುರಿಯಾಗಿಟ್ಟುಕೊಂಡು ಮಾತನಾಡುವುದಿಲ್ಲ. 2019ರ ಸಂಸತ್ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿಯೂ ಪ್ರತಿಸ್ಪರ್ಧಿ ಬಗ್ಗೆ ಮಾತನಾಡಲಿಲ್ಲ. ಆದರೆ, ಹಿರಿಯ ಮುಖಂಡರು ಲಘುವಾಗಿ ಮಾತನಾಡಿದರು. ಅವರ ಉದ್ದೇಶ ಏನಿತ್ತು ಎಂಬುದು ಗೊತ್ತಿಲ್ಲ. ಪ್ರತಿಸ್ಪರ್ಧಿ(ಸುಮಲತಾ) ವಿರುದ್ಧ ಲಘುವಾಗಿ ಮಾತನಾಡಿರುವುದನ್ನು ತೋರಿಸಿದರೆ ತಲೆ ಬಾಗುತ್ತೇನೆ. ಈಗಲೂ ನನ್ನ ಪ್ರತಿಸ್ಪರ್ಧಿಗಳ ಬಗ್ಗೆ ಚರ್ಚೆ ಮಾಡುವುದಿಲ್ಲ.
-ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷರು, ಜೆಡಿಎಸ್ ಯುವ ಘಟಕ