ವಿದ್ಯುತ್ ಕಳವು: 68526 ರು. ದಂಡ ಕಟ್ಟಿ ಕರೆಂಟ್‌ ಕಳ್ಳ ಎನ್ನುವುದನ್ನು ನಿಲ್ಲಿಸಿ ಎಂದ ಎಚ್‌ಡಿಕೆ

By Kannadaprabha News  |  First Published Nov 18, 2023, 5:43 AM IST

ದೀಪಾವಳಿ ಹಬ್ಬದ ವೇಳೆ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಆರೋಪದ ಹಿನ್ನೆಲೆಯಲ್ಲಿ ಬೆಸ್ಕಾಂ ವಿಚಕ್ಷಣಾ ದಳ ವಿಧಿಸಿದ್ದ 68,526 ರು. ದಂಡವನ್ನು ಪಾವತಿ ಮಾಡಿದ್ದೇನೆ. ಇನ್ನು ಮುಂದೆ ಕರೆಂಟ್‌ ಕಳ್ಳ ಎನ್ನುವುದನ್ನು ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 


ಬೆಂಗಳೂರು (ನ.18): ದೀಪಾವಳಿ ಹಬ್ಬದ ವೇಳೆ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಆರೋಪದ ಹಿನ್ನೆಲೆಯಲ್ಲಿ ಬೆಸ್ಕಾಂ ವಿಚಕ್ಷಣಾ ದಳ ವಿಧಿಸಿದ್ದ 68,526 ರು. ದಂಡವನ್ನು ಪಾವತಿ ಮಾಡಿದ್ದೇನೆ. ಇನ್ನು ಮುಂದೆ ಕರೆಂಟ್‌ ಕಳ್ಳ ಎನ್ನುವುದನ್ನು ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇದೇ ವೇಳೆ ಬೆಸ್ಕಾಂ ವಿಧಿಸಿರುವ ದಂಡದ ಮೊತ್ತ ಲೋಪದಿಂದ ಕೂಡಿದ್ದು, ಈ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದೂ ಒತ್ತಾಯ ಮಾಡಿದ್ದಾರೆ. 

ಶುಕ್ರವಾರ ಜೆಡಿಎಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ದಂಡ ಪಾವತಿಯ ರಸೀದಿ ಪ್ರದರ್ಶಿಸಿ ಮಾತನಾಡಿದ ಅವರು, ದೀಪಾವಳಿ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ನಡೆದ ಅಚಾತುರ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದೇನೆ. ಈಗಾಗಲೇ ನನಗೆ ಕರೆಂಟ್ ಕಳ್ಳ ಎನ್ನುವ ಲೇಬಲ್ ಅನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಅವರ ಪಟಾಲಂ ಸೇರಿ ಇಟ್ಟಿದ್ದಾರೆ. ನನ್ನನ್ನು ಕರೆಂಟ್ ಕಳ್ಳ ಎನ್ನುವ ಇವರ ಆರೋಪಗಳಿಗೆಲ್ಲ ನಾನು ಹೆದರಲ್ಲ. ನಿಮ್ಮಷ್ಟು ಕಳ್ಳತನ ನಾನು ಮಾಡಿಲ್ಲ. ಬೆಸ್ಕಾಂ ನೀಡಿರುವ ಬಿಲ್ ಹಾಗೂ ದಂಡ ಕಟ್ಟಿದ್ದೇನೆ. ಇನ್ನು ಮುಂದೆ ಕರೆಂಟ್ ಕಳ್ಳ ಎನ್ನುವುದನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದರು.

Tap to resize

Latest Videos

ವಿದ್ಯುತ್‌ ಕಳ್ಳತನ ಪ್ರಕರಣ: ಕುಮಾರಸ್ವಾಮಿ-ಶಿವಕುಮಾರ್‌ ವಾಕ್ಸಮರ

ನಾನು ಬಳಕೆ ಮಾಡಿರುವುದು 71 ಯೂನಿಟ್. ಅದಕ್ಕೆ ಮೂರು ಪಟ್ಟು ದಂಡವೆಂದರೂ 2,526 ರು. ಆಗುತ್ತದೆ. ಆದರೆ ಬೆಸ್ಕಾಂನವರು ನನ್ನ ಮನೆಗೆ ಅನುಮತಿ ಪಡೆದಿರೋ 33 ಕಿಲೋವ್ಯಾಟ್‌ಗೂ (ಕೆವಿ) 66 ಸಾವಿರ ರು. ಬಿಲ್ ಹಾಕಿ, ಒಟ್ಟು 68,526 ರು.ಗಳ ಬಿಲ್ ಹಾಕಿದೆ. ನಿಯಮದ ಪ್ರಕಾರ ಬಿಲ್ ಹಾಕದೇ ಹೆಚ್ಚುವರಿ ಬಿಲ್ ಹಾಕಿದೆ. ಮಾಜಿ ಮುಖ್ಯಮಂತ್ರಿಗೇ ಹೀಗಾದರೆ ಸಾಮಾನ್ಯ ಜನರ ಕಥೆ ಏನು ಎಂದು ವಾಗ್ದಾಳಿ ನಡೆಸಿದರು. ದಂಡ ವಿಧಿಸಿರುವ ಬಗ್ಗೆ ಬೆಸ್ಕಾಂ ನವರಿಗೆ ಮರು ಪರಿಶೀಲನಾ ಪತ್ರ ಬರೆದಿದ್ದೇನೆ ಮತ್ತು ದಂಡವನ್ನೂ ಕಟ್ಟಿದ್ದೇನೆ. 

ಎಚ್‌ಡಿಕೆ ಮಾತು ನಂಬಲು ನಾನು ದಡ್ಡನೆ?: ಡಿ.ಕೆ.ಶಿವಕುಮಾರ್

ಇಷ್ಟು ಬಿಲ್ ಯಾಕೆ ಎಂಬುದರ ವಿವರಣೆ ಕೊಡಿ ಎಂದು ಆಕ್ಷೇಪಣೆ ವ್ಯಕ್ತಪಡಿಸಿ ಪತ್ರ ಬರೆದಿದ್ದೇನೆ. ಬೆಸ್ಕಾಂ ವಿಚಕ್ಷಣಾ ದಳ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದು ಗೊತ್ತಿದೆ. ನನ್ನ ಮನೆಗೆ 33 ಕೆವಿ ಅನುಮತಿ ಪಡೆದಿದ್ದೇನೆ. ವಿದ್ಯುತ್ ಕಳವು ಆರೋಪದಲ್ಲಿ 2.5 ಕೆವಿ ವಿದ್ಯುತ್ ಪಡೆಯಲಾಗಿದೆ ಎಂದು ಬೆಸ್ಕಾಂ ಹೇಳಿದೆ. ಅಸಲಿಗೆ 1 ಕೆವಿ ವಿದ್ಯುತ್ ಮಾತ್ರ ನಮ್ಮ ಮನೆಯ ಲೈಟಿಂಗ್ ಗೆ ಬಳಕೆ ಮಾಡಲಾಗಿತ್ತು. ಆದರೂ ಬೆಸ್ಕಾಂ ಅಧಿಕಾರಿಗಳು 2.5 ಕೆವಿ ಅಂತ ಸುಳ್ಳು ಲೆಕ್ಕ ತೋರಿಸಿದ್ದಾರೆ. ಯಾರದ್ದೋ ಒತ್ತಡಕ್ಕೆ ಮಣಿದು ಹೀಗೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

click me!