ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು (ಆ.20): ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಸಂಬಂಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ವಿರೋಧ ಪಕ್ಷದ ನಾಯಕರಿಗೆ ಹೆಚ್ಚಿನ ಭದ್ರತೆ ನೀಡಲು ಸೂಚಿಸಲಾಗಿದೆ.
ಯಾರೂ ಸಹ ಕಾನೂನು ಸುವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಸಮಾಜ ವಿರೋಧಿ ಕೃತ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲು ಹೇಳಿದ್ದೇನೆ ಎಂದರು. ಸಿದ್ದರಾಮಯ್ಯ ಅವರೊಂದಿಗೆ ತಾವು ಮಾತನಾಡಿದ್ದು, ತಮಗೆ ಅಥವಾ ತಮ್ಮ ಕಚೇರಿಯ ಸಿಬ್ಬಂದಿಗೆ ಯಾವುದಾದರೂ ಬೆದರಿಕೆ ಕರೆಗಳು ಬಂದಿದ್ದರೆ ವಿವರ ನೀಡುವಂತೆ ಕೋರಿದ್ದೇನೆ ಎಂದು ತಿಳಿಸಿದರು.
ಸಿಎಂ ಬೊಮ್ಮಾಯಿಗೆ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಗಡುವು ನೆನಪಿಸಿದ ಕಾಶಪ್ಪನವರ
ಪ್ರಚೋದನಾಕಾರಿ ಹೇಳಿಕೆ ಬೇಡ: ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು. ಇದು ಒಂದು ಕಡೆ ನಡೆಯುತ್ತಿಲ್ಲ. ಎರಡೂ ಕಡೆಯೂ ನಡೆಯುತ್ತಿದೆ. ಯಾರೂ ಸಹ ಇನ್ನೊಬ್ಬರ ಮನ ನೋಯಿಸುವ ಪ್ರಚೋದನಾಕಾರಿ ಹೇಳಿಕೆ ನೀಡಬಾರದು. ಒಂದೊಮ್ಮೆ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಧರ್ಮ ವಿಭಜನೆಯ ಬಗ್ಗೆ ಸಿದ್ದರಾಮಯ್ಯ ಪಶ್ಚಾತ್ತಾಪದ ಮಾತುಗಳನ್ನಾಡಿರುವ ಬಗ್ಗೆ ಹಾಗೂ ಹೈಕೋರ್ಟ್ ಎಸಿಬಿ ರದ್ದು ಮಾಡಿರುವ ಬಗ್ಗೆ ಶನಿವಾರ ಪ್ರತಿಕ್ರಿಯಿಸುವುದಾಗಿ ಹೇಳಿದರು.
ನಮಗೂ ಮೊಟ್ಟೆ ಎಸೆಯಲು ಬರಲ್ವಾ: ಬಿಜೆಪಿ ಕಾರ್ಯಕರ್ತರು ತಮ್ಮ ಕಾರಿಗೆ ಮೊಟ್ಟೆಎಸೆದ ಘಟನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೂ ಮೊಟ್ಟೆಎಸೆಯಲು ಬರಲ್ವಾ?, ನಾವು ಹೋರಾಟ ಶುರು ಮಾಡಿದರೆ ಮುಖ್ಯಮಂತ್ರಿ ಎಲ್ಲೂ ಓಡಾಡೋಕೆ ಆಗಲ್ಲ ಎಂದು ಬಿಜೆಪಿ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಡಿಕೇರಿಯ ಸಕ್ರ್ಯೂಟ್ ಹೌಸ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿ ನಡೆದಿರುವ ಕಳಪೆ ಕಾಮಗಾರಿಗಳನ್ನು ನಾನು ಬಂದು ನೋಡುತ್ತೇನೆಂದು ಕಾರ್ಯಕರ್ತರನ್ನು ಬಿಟ್ಟು ಪ್ರತಿಭಟನೆ ಮಾಡಿಸುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ಸಮಾಧಿ ಅಭಿವೃದ್ಧಿ; ಸಿಎಂ ಭೇಟಿ ಮಾಡಿದ ರಾಘಣ್ಣ, ಅಶ್ವಿನಿ
ಈ ಬಾರಿ ಕೊಡಗಿನಲ್ಲಿ ಎರಡೂ ಕಡೆ ಕಾಂಗ್ರೆಸ್ ಗೆಲ್ಲಲಿದೆ ಅಂತ ಬಿಜೆಪಿಯವರು ಹತಾಶರಾಗಿದ್ದಾರೆ. ಹೀಗಾಗಿ ಪ್ರತಿಭಟನೆ ಮಾಡಿದ್ದಾರೆ. ನಮ್ಮ ಕಾರ್ಯಕರ್ತರು ಬೀದಿಗಿಳಿದರೆ ಬಿಜೆಪಿಯವರಿಗೆ ಕೊಡಗಿನಲ್ಲೇ ತಿರುಗಾಡಲು ಆಗುವುದಿಲ್ಲ ಎಂದು ಕಿಡಿಕಾರಿದರು. ಟಿಪ್ಪು ಬೆಂಬಲಿಸಿದ್ದಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆಂಬ ಆರೋಪವನ್ನು ತಳ್ಳಿಹಾಕಿದ ಅವರು, ಟಿಪ್ಪು ವಿಚಾರನೂ ಇಲ್ಲ, ಏನೂ ಇಲ್ಲ. ಟಿಪ್ಪು ಜಯಂತಿ ಆದ ಮೇಲೆ ನಾನು ಕೊಡಗಿಗೆ ಬಂದಿಲ್ವಾ? ಕೊಡಗಿನಲ್ಲಿ ಅವರು ಮಾಡಿರುವ ಕಳಪೆ ಕೆಲಸ ನನಗೆ ಗೊತ್ತಾಗದಿರಲಿ ಎಂದಷ್ಟೇ ಪ್ರತಿಭಟನೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.