ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಅಲ್ಲದೇ ಇದೀಗ ಸಿದ್ದರಾಮಯ್ಯನವರ ಸಿದ್ದರಾಮೋತ್ಸವ ಕಾರ್ಯಕ್ರಮ ಡಿಕೆಶಿ ಕಣ್ಣು ಕೆಂಪಾಗಿಸಿದೆ. ಇದರ ಮಧ್ಯೆ ಡಿಕೆ ಶಿವಕುಮಾರ್ ದಿಢೀರ್ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಟಿಫನ್ ಮೀಟಿಂಗ್ ಮಾಡಿದ್ದಾರೆ. ಹಾಗಾದ್ರೆ, ಸಭೆಯಲ್ಲಿ ಏನೆಲ್ಲಾ ಚರ್ಚೆ ನಡೆದಿದೆ ಎನ್ನುವ ಒಂದು ವಿಶ್ಲೇಷಣೆ ಇಲ್ಲಿದೆ ನೋಡಿ..
ಆನಂದ ಪರಮೇಶ್ವರ್ ಬೈದನಮನೆ.
ಬೆಂಗಳೂರು, (ಜುಲೈ.08): ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಜೊತೆಗೆ ಡಿಕೆಶಿ ಕಾಂಪ್ರಮೈಸ್ ಮಾಡ್ಕೊಂಡ್ರಾ ಅನ್ನೋ ಸುದ್ಧಿಗೆ ಜೀವ ಬಂದಿದೆ. ತಮ್ಮ ಹುಟ್ಟುಹಬ್ಬದ ನೆಪದಲ್ಲಿ ಬೃಹತ್ ಸಮಾವೇಶ ಮಾಡ್ಕೊಂಡು ರಾಜಕೀಯ ಸಂದೇಶ ಕೊಡಲು ರೆಡಿಯಾಗಿರುವ ಸಿದ್ಧರಾಮಯ್ಯ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಧಾನ ಮಾಡ್ಕೊಂಡ್ರು ಅನ್ನೋ ಮಾತು ಕಾಂಗ್ರೆಸ್ ಪಾಳಯದಲ್ಲಿ ಜೋರಾಗಿದೆ. ಅದಕ್ಕೆ ಪೂರಕವಾಗಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಕೊಟ್ಟ ಹೇಳಿಕೆಗಳು ಕಾಂಗ್ರೆಸ್ ನಲ್ಲಿ ಇಂತಹದೊಂದು ಸಂದೇಶವನ್ನ ನೀಡಿದೆ.
ಸಿದ್ಧರಾಮಯ್ಯ ಅವರು 75 ನೇ ವರ್ಷದ ಹುಟ್ಟುಹಬ್ಬದ ನೆಪದಲ್ಲಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡಲು ಸಿದ್ಧು ಆಪ್ತರು ತಿರ್ಮಾನ ಮಾಡಿದಾದ ಸಿಟ್ಟಾದ ಮೊದಲ ನಾಯಕನೇ ಡಿ.ಕೆ.ಶಿವಕುಮಾರ್... ಪಕ್ಷ ಪೂಜೆ ಮಾಡಬೇಕು, ವ್ಯಕ್ತಿ ಪೂಜೆ ಮಾಡಬೇಕು ಅಂತ ಹೇಳಿದ್ದ ಡಿಕೆಶಿ ಧೀಡೀರ್ ಆಗಿ ನಿನ್ನೆ ಮಹತ್ವದ ಹೇಳಿಕೆ ಕೊಟ್ಟು ಬಿಟ್ಟಿದ್ದಾರೆ. ಸಿದ್ಧರಾಮಯ್ಯನವರು ನಮ್ಮ ನಾಯಕರು - ಅವರ ಹುಟ್ಟುಹಬ್ಬದ ಸಮಯದಲ್ಲಿ ದೊಡ್ಡ ಸಮಾವೇಶ ಮಾಡಲು ತಿರ್ಮಾನವಾಗಿದೆ. ಅದು ನಮ್ಮ ಪಕ್ಷದ ವತಿಯಿಂದಲೇ ಆಗೋದು - ನಾನು ಕೂಡ ಈ ಸಮಾವೇಶದಲ್ಲಿ ಭಾಗಿಯಾಗ್ತೇನೆ ಅಂತ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನನಗೆ ಸಿದ್ದರಾಮೋತ್ಸವಕ್ಕಿಂತ ಸ್ವಾತಂತ್ರ್ಯ ಅಮೃತ ಮಹೋತ್ಸವ ಮುಖ್ಯ: ಡಿಕೆಶಿ
ಇಷ್ಟಕ್ಕೂ ಡಿ.ಕೆ.ಶಿವಕುಮಾರ್ ಇಂತಹದೊಂದು ಹೇಳಿಕೆ ನೀಡಲು ಕಾರಣಗಳು ಇಲ್ಲವೆಂದಲ್ಲ. ಮಹತ್ವಾಕಾಂಕ್ಷೆಯ ರಾಜಕೀಯ ನಾಯಕನಾಗಿರುವ ಡಿ.ಕೆ.ಶಿವಕುಮಾರ್, ಎಲ್ಲಾ ಆಳ ಅಗಲವನ್ನು ಯೋಚನೆ ಮಾಡಿಯೇ ಇಂತಹದೊಂದು ತಿರ್ಮಾನ ಮಾಡಿದ್ದಾರೆ. ಜೊತೆಗೆ ಭವಿಷ್ಯದ ರಾಜಕೀಯ ಲೆಕ್ಕಾಚಾರ ಹಾಕಿಯೇ ಸಂದೇಶವೊಂದನ್ನು ಕೊಟ್ಟಿರುವುದು ಸ್ಪಷ್ಟ..ಅಂದ ಹಾಗೆ ಡಿ.ಕೆ.ಶಿವಕುಮಾರ್ ಸಿದ್ಧರಾಮೋತ್ಸವ ಸಮಾವೇಶಕ್ಕೆ ಡಿಕೆಶಿ ಜೈ ಅಂದಿದ್ದೇಕೆ...? ಇದಕ್ಕೆ ನೀಡುವ ಕಾರಣಗಳು ಸಹ ಹೀಗಿವೆ..
1 - ಸಮಾವೇಶ ಯಶಸ್ವಿಯಾದ ನಂತರ ಆಗುವ ಮುಜುಗರದಿಂದ ತಪ್ಪಿಸಿಕೊಳ್ಳಲು ಪ್ಲಾನ್
2 - ಪಕ್ಷದ ಬಹುತೇಕ ವರ್ಗದಿಂದ ಸಿದ್ಧರಾಮಯ್ಯ ಪರವಾದ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆ..
3 - ಹೈಕಮಾಂಡ್ ನಿಂದಲೂ ಸಿದ್ಧರಾಮೋತ್ಸವಕ್ಕೆ ಸಹಮತ ವ್ಯಕ್ತವಾಗಿರುವುದು..
4 - ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಭಾಗಿಯಾಗ್ತಿರುವುದು..
5 - ಸಮಾವೇಶದಿಂದ ದೂರ ಉಳಿದರೆ ರಾಜಕೀಯ ಕಪ್ಪುಚುಕ್ಕೆಯಾಗುವ ಆತಂಕ.
6 - ಎಲ್ಲಾ ಸಮೂದಾಯದ ನಾಯಕರಿಂದಲೂ ಸಮಾವೇಶಕ್ಕೆ ಹೋಗುವಂತೆ ಸಲಹೆ..
7 - ಸಂಸದ ಡಿ.ಕೆ.ಸುರೇಶ್ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಿರುವುದರಿಂದ ಅನಿವಾರ್ಯತೆ ಸೃಷ್ಟಿ.
8 - ಸಮಾವೇಶದಲ್ಲಿ ಭಾಗಿಯಾದರೆ ಆಗುವ ಲಾಭಕ್ಕಿಂತ ಹೋಗದಿದ್ದರೆ ಆಗುವ ನಷ್ಟವೇ ಹೆಚ್ಚು..
9 - ಸಿದ್ಧರಾಮಯ್ಯ ಜೊತೆಗೆ ಹೊಂದಾಣಿಕೆಯಿಂದ ಇದ್ದೇವೆ ಅನ್ನೋ ಸಂದೇಶ ಕೊಡುವುದು..
10 - ಪಕ್ಷದ ವೇದಿಕೆ ಮೂಲಕ ಸಮಾವೇಶ ನಡೆಸುವ ಮೂಲಕ ಒಳಗೊಳ್ಳುವಿಕೆಯ ಸೂತ್ರ ಜಾರಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಕರೆದ ತಕ್ಷಣವೇ ಪ್ರತಿಪಕ್ಷ ನಾಯಕರ ಸರ್ಕಾರಿ ನಿವಾಸಕ್ಕೆ ದೌಡಾಯಿಸಿ ಬಂದಿದ್ದು ಸಹ ವಿಶೇಷ. ಒಂದು ಗಂಟೆಗಳ ಕಾಲ ಸಿದ್ಧರಾಮಯ್ಯ ಅವರೊಂದಿಗೆ ಚರ್ಚೆ ಮಾಡುವ ಜೊತೆಗೆ ಟಿಫನ್ ಮಾಡಿದ್ರು. ಒಂದಷ್ಟು ರಾಜಕೀಯ ಸಮಾಲೊಚನೆ ಮಾಡಿ ಸ್ಪಷ್ಟವಾದ ಸಂದೇಶವನ್ನು ಸಹ ಡಿಕೆಶಿ ನೀಡಿದ್ದಾರೆ. ತಾವಿಬ್ಬರೂ ಜೊತೆಯಿದ್ದೇವೆ ಅನ್ನೋ ಸಂದೇಶವನ್ನು ರಾಜಕೀಯ ವಿರೋಧಿಗಳಿಗೂ ಮತ್ತು ಪಕ್ಷದೊಳಗಿರುವವರಿಗೂ ನೀಡಿದ್ಧಾರೆ.
ಕೆಪಿಸಿಸಿ ಅಧ್ಯಕ್ಷರಾದ ಅವರೊಂದಿಗೆ ಬೆಳಗಿನ ಉಪಹಾರ ಸೇವಿಸುತ್ತಾ, ಪಕ್ಷದ ಕಾರ್ಯಚಟುವಟಿಕೆಗಳು ಹಾಗೂ ಮುಂದಿನ ಹೋರಾಟಗಳ ಬಗ್ಗೆ ಸಮಾಲೋಚನೆ ನಡೆಸಿದೆ. pic.twitter.com/Mk6Zz1nldI
— Siddaramaiah (@siddaramaiah)ಈ ಬೆಳವಣಿಗೆ ಕಾಂಗ್ರೆಸ್ ಅಂಗಳದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ್ದು, ಇಬ್ಬರು ಕಾಂಪ್ರಮೈಸ್ ಮಾಡ್ಕೊಂಡ್ರಾ ಅನ್ನೋ ಮಾತು ಶುರುವಾಗುವಂತೆ ಮಾಡಿದೆ.