Karnataka Congress: ಡಿಕೆಶಿ ದಿಲ್ಲಿಗೆ: ಪದಾಧಿಕಾರಿಗಳ ನೇಮಕ ಫೈನಲ್‌?

Published : Mar 13, 2022, 05:52 AM IST
Karnataka Congress: ಡಿಕೆಶಿ ದಿಲ್ಲಿಗೆ: ಪದಾಧಿಕಾರಿಗಳ ನೇಮಕ ಫೈನಲ್‌?

ಸಾರಾಂಶ

*  300 ಕಾಂಗ್ರೆಸ್‌ ಪದಾಧಿಕಾರಿಗಳ ಪಟ್ಟಿ ಜತೆ ಡಿಕೆಶಿ ದಿಲ್ಲಿಗೆ *  ಕಾಂಗ್ರೆಸ್‌ನ ಪ್ರಮುಖ ಹುದ್ದೆಗಳಿಗೆ ನೇಮಕಾತಿ ಕಸರತ್ತು *  ಮುಂದಿನ ವಾರದೊಳಗೆ ಅಂತಿಮ ಘೋಷಣೆ ಸಾಧ್ಯತೆ  

ಬೆಂಗಳೂರು(ಮಾ.13):  ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಂಗ್ರೆಸ್‌(Congress) ಪದಾಧಿಕಾರಗಳ ನೇಮಕಕ್ಕೆ ಕಡೆಗೂ ಕಾಲ ಕೂಡಿ ಬಂದಿದೆ. ಕೆಪಿಸಿಸಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಸುಮಾರು 300 ಹೆಸರುಗಳ ಪರಿಷ್ಕೃತ ಪಟ್ಟಿಯೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಶನಿವಾರ ತಡರಾತ್ರಿ ದೆಹಲಿಗೆ ತೆರಳಿದರು.

ಪದಾಧಿಕಾರಿಗಳ ಪಟ್ಟಿ ಮಾತ್ರವಲ್ಲದೆ, ಸುಮಾರು 20 ಜಿಲ್ಲಾ ಘಟಕಗಳ ಅಧ್ಯಕ್ಷರ ಬದಲಾವಣೆ ಮತ್ತು ಮಹಿಳಾ ಕಾಂಗ್ರೆಸ್‌, ಹಿಂದುಳಿದವರ ಘಟಕ, ಪರಿಶಿಷ್ಟ ಜಾತಿ- ಪಂಗಡ ಘಟಕ ಸೇರಿದಂತೆ ಹಲವು ಮುಂಚೂಣಿ ಘಟಕಗಳ ಅಧ್ಯಕ್ಷರ ಬದಲಾವಣೆಯ ಪ್ರಸ್ತಾವನೆ ಸಹಿತ ಅಧ್ಯಕ್ಷರು ದೆಹಲಿಗೆ(Delhi) ತೆರಳಿದ್ದು, ಮಾ. 13 ಹಾಗೂ ಮಾ. 14 ರಂದು ಈ ಪಟ್ಟಿಗಳ ಕುರಿತು ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ(Ranadeep Singh Surjewala) ಅವರೊಂದಿಗೆ ಚರ್ಚಿಸಿ ಪಟ್ಟಿ ಅಂತಿಮಗೊಳಿಸಲಿದ್ದಾರೆ. ಮೂಲಗಳ ಪ್ರಕಾರ ಮುಂದಿನ ವಾರದೊಳಗೆ ಪದಾಧಿಕಾರಗಳ ನೇಮಕ ಆದೇಶ ಹೊರ ಬೀಳುವ ಸಾಧ್ಯತೆಯಿದೆ.

ಸರ್ಕಾರ ರಚಿಸಲು ಕಾಂಗ್ರೆಸ್‌ ತಯಾರಿ, ಡಿಕೆ ಶಿವಕುಮಾರ್‌ಗೆ ಎಐಸಿಸಿ ಹೊಸ ಜವಾಬ್ದಾರಿ

ಸುರ್ಜೇವಾಲಾ ಅವರ ಭೇಟಿಯ ನಂತರ ಶಿವಕುಮಾರ್‌ ಅವರು ವರಿಷ್ಠ ರಾಹುಲ್‌ ಗಾಂಧಿ(Rahul Gandhi) ಅವರ ಭೇಟಿಗೂ ಸಮಯ ಕೇಳಿದ್ದಾರೆ. ಅದು ಸಾಧ್ಯವಾದರೆ ಅವರೊಂದಿಗೂ ರಾಜ್ಯದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರು ತಿಂಗಳ ಪ್ರಹಸನ:

ರಾಜ್ಯ ಕಾಂಗ್ರೆಸ್‌ 2019ರಿಂದ ಪದಾಧಿಕಾರಿಗಳಲ್ಲದೆ ಕಾರ್ಯ ನಿರ್ವಹಿಸುತ್ತಿದೆ. ಪದಾಧಿಕಾರಿಗಳ ನೇಮಕಕ್ಕೆ ಹಲವು ಬಾರಿ ಪ್ರಯತ್ನ ನಡೆದರೂ ಆಕಾಂಕ್ಷಿಗಳ ಸಂಖ್ಯೆಯ ಕಾರಣಕ್ಕೆ ನೇಮಕ ಮುಂದಕ್ಕೆ ಹಾಕಲಾಗುತ್ತಿತ್ತು. ಆದರೆ, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಅವರು ನೇಮಕಗೊಂಡ ನಂತರ ಹೊಸ ಟೀಮ್‌ ರಚಿಸಿಕೊಳ್ಳಲು ಮುಂದಾಗಿದ್ದರು. ಹೀಗಾಗಿ ಕಳೆದ ಆರು ತಿಂಗಳಿನಿಂದ ಪದಾಧಿಕಾರಿಗಳ ಆಯ್ಕೆ ಕಸರತ್ತು ನಡೆದಿತ್ತು.

ಹೊಸ ಟೀಮ್‌ ರಚನೆಗೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ಹೈಕಮಾಂಡ್‌ಗೆ ಪಟ್ಟಿಯೊಂದನ್ನು ಕಳುಹಿಸಿದ್ದರು. ಇದರ ಬೆನ್ನಲ್ಲೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ತಮ್ಮದೇ ಆದ ಪ್ರತ್ಯೇಕ ಪಟ್ಟಿಯನ್ನು ಹೈಕಮಾಂಡ್‌ ಅವಗಾಹನೆಗೆ ಕಳುಹಿಸಿದ್ದರು. ಈ ಬೆಳವಣಿಗೆ ನಡೆದ ನಂತರ ಪಕ್ಷದ ಇತರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್‌, ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಹಲವು ನಾಯಕರು ತಮ್ಮ ಶಿಫಾರಸುಗಳ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನಿಸಿದ್ದರು.

ಪ್ರಹ್ಲಾದ್ ಜೋಶಿ ಹೇಳಿಕೆಯಿಂದ ವಿದ್ಯಾರ್ಥಿಗಳ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ: ಡಿಕೆ ಶಿವಕುಮಾರ್

ಹೀಗೆ ಸುಮಾರು 500ಕ್ಕೂ ಹೆಚ್ಚು ಹೆಸರುಗಳು ಹೈಕಮಾಂಡ್‌ಗೆ(High Command) ಶಿಫಾರಸುಗೊಂಡಿತ್ತು. ಪದಾಧಿಕಾರಿಗಳ ಹುದ್ದೆಗೆ ಈ ಗಜ ಗಾತ್ರದ ಪಟ್ಟಿ ಪರಿಷ್ಕರಿಸಲಾಗದೆ ಹೈಕಮಾಂಡ್‌, ಶಾಸಕಾಂಗ ಪಕ್ಷದ ನಾಯಕರೂ ಸೇರಿದಂತೆ ರಾಜ್ಯದ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸುವಂತೆ ಸೂಚನೆ ನೀಡಿತ್ತು. ಅನಂತರ ಡಿ.ಕೆ. ಶಿವಕುಮಾರ್‌ ಅವರು ಹಿರಿಯ ನಾಯಕರೊಂದಿಗೆ ಹಲವು ಸುತ್ತುಗಳ ಮಾತುಕತೆ ನಡೆಸಿದರು. ಈ ಪ್ರಕ್ರಿಯೆ ಕಳೆದ ಆರು ತಿಂಗಳಿನಿಂದ ನಡೆದಿತ್ತು. ಇದೀಗ ಸುಮಾರು 300 ಹೆಸರುಗಳ ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ಅದನ್ನು ಭಾನುವಾರ ಹೈಕಮಾಂಡ್‌ ಅವಗಾಹನೆಗೆ ನೀಡಲಾಗುತ್ತಿದೆ. ಮೂಲಗಳ ಪ್ರಕಾರ ಈ ಪಟ್ಟಿಯನ್ನು ಹೈಕಮಾಂಡ್‌ ಮತ್ತಷ್ಟು ಪರಿಷ್ಕರಿಸಲಿದ್ದು, ಸುಮಾರು 200 ರಿಂದ 250 ಮಂದಿ ಪದಾಧಿಕಾರಿಗಳನ್ನು ನೇಮಕ, 15ರಿಂದ 20 ಜಿಲ್ಲೆಗಳ ಅಧ್ಯಕ್ಷರ ಬದಲಾವಣೆ ಹಾಗೂ ಹಲವು ಮುಂಚೂಣಿ ಘಟಕಗಳಿಗೆ ಹೊಸ ಅಧ್ಯಕ್ಷರ ನೇಮಕ ಮಾಡುವ ಸಾಧ್ಯತೆಯಿದೆ.

ಸಮಸ್ಯೆ ಏನಾಗಿತ್ತು?

ಹೊಸ ಟೀಮ್‌ ರಚನೆಗೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ಹೈಕಮಾಂಡ್‌ಗೆ ಪಟ್ಟಿಯೊಂದನ್ನು ಕಳುಹಿಸಿದ್ದರು. ಇದರ ಬೆನ್ನಲ್ಲೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಪಕ್ಷದ ಇತರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್‌, ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಹಲವು ನಾಯಕರು ತಮ್ಮ ಶಿಫಾರಸುಗಳ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನಿಸಿದ್ದರು. ಹೀಗಾಗಿ ಗೊಂದಲ ಉಂಟಾಗಿತ್ತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!