Prajadhwani yatre: ಡಬಲ್ ಇಂಜಿನ್ ಸರ್ಕಾರದಿಂದ ಅಚ್ಛೇದಿನ್ ಇಲ್ಲ: ಡಿಕೆಶಿ ವಾಗ್ದಾಳಿ

By Kannadaprabha News  |  First Published Feb 7, 2023, 8:10 AM IST

ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿರುವ ಡಬಲ್‌ ಇಂಜಿನ್‌ ಸರ್ಕಾರ ಅಭಿವೃದ್ಧಿಯನ್ನು ಕಡೆಗಣಿಸಿದ್ದು, ಯಾವ ಪ್ರಜೆಗೂ ಅಚ್ಛೇದಿನಗಳು ಬರಲಿಲ್ಲ. ಪ್ರಸ್ತುತ ಸರ್ಕಾರದಲ್ಲಿ ಪ್ರತಿ ಉದ್ಯೋಗ, ಕಾಮಗಾರಿಗೆ ಲಂಚ ನೀಡಲೇಬೇಕು. ಇಂತಹ ಭ್ರಷ್ಟಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ವಾಗ್ದಾಳಿ ನಡೆಸಿದರು.


ಚಳ್ಳಕೆರೆ (ಫೆ.7) : ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿರುವ ಡಬಲ್‌ ಇಂಜಿನ್‌ ಸರ್ಕಾರ ಅಭಿವೃದ್ಧಿಯನ್ನು ಕಡೆಗಣಿಸಿದ್ದು, ಯಾವ ಪ್ರಜೆಗೂ ಅಚ್ಛೇದಿನಗಳು ಬರಲಿಲ್ಲ. ಪ್ರಸ್ತುತ ಸರ್ಕಾರದಲ್ಲಿ ಪ್ರತಿ ಉದ್ಯೋಗ, ಕಾಮಗಾರಿಗೆ ಲಂಚ ನೀಡಲೇಬೇಕು. ಇಂತಹ ಭ್ರಷ್ಟಸರ್ಕಾರವನ್ನು ಅಧಿಕಾರದಿಂದ ದೂರವಿಡಲು ಮತದಾರರು ಸಹಕಾರ ನೀಡಬೇಕು. ದೇಶದ ಜನರಿಗೆ ಎಲ್ಲಾ ಸೌಲಭ್ಯ, ಸೌಕರ್ಯ ಒದಗಿಸುವ ಏಕೈಕ ಪಕ್ಷ ಕಾಂಗ್ರೆಸ್‌ ಪಕ್ಷ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಸೋಮವಾರ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಪ್ರಜಾಧ್ವನಿ ಯಾತ್ರೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಸಾರ್ವಜನಿಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ನಾನು ಹಿಂದೆ ಶಾಸಕನಾದಾಗ ಈ ಕ್ಷೇತ್ರದಲ್ಲಿ ದಿ.ಎನ್‌.ಜಯಣ್ಣ ಶಾಸಕರಾಗಿದ್ದರು. ನಂತರ ಡಿ.ಸುಧಾಕರ್‌ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಶಾಸಕರಾಗಿರುವ ಈ ಭಾಗದ ಜನರ ಮನ್ನಣೆ ಗಳಿಸಿರುವ, ಅಭಿವೃದ್ಧಿಗೆ ತಮ್ಮನ್ನೇ ತಾವು ಸಮರ್ಪಿಸಿಕೊಂಡ ರಘುಮೂರ್ತಿಯವರೂ ಒಬ್ಬರಾಗಿದ್ದು, ಅವರೂ ಸಹ ಉತ್ತಮ ಸೇವೆ ಮೂಲಕ ಮತದಾರರ ಭಾವನೆಗೆ ಸ್ಪಂದಿಸಿದ್ದಾರೆಂದರು.

Latest Videos

undefined

ಡಿಕೆಶಿ ಕುಟುಂಬದ ಬಗ್ಗೆ ವಿಡಿಯೋ: 2 ಯುಟ್ಯೂಬ್‌ ಚಾನಲ್‌ಗೆ ಕೇಸ್‌ ಬಿಸಿ

ಅಗತ್ಯ ವಸ್ತು ಹಾಗೂ ಡಿಸೇಲ್‌, ಪೆಟ್ರೋಲ್‌ ಬೆಲೆ ಗಗನಕ್ಕೇರುತ್ತಿದ್ದು, ಬಡವರು, ಕಾರ್ಮಿಕರು ಮತ್ತು ಮಧ್ಯಮ ವರ್ಗದ ಜನರಿಗೆ ಅಚ್ಚೇದಿನ್‌ ಬರಲಿಲ್ಲ. ಬದಲಾಗಿ ಶ್ರೀಮಂತರ ಪಾಲಿಗೆ ಮಾತ್ರ ಅಚ್ಚೇದಿನ್‌ ಬಂದವು. ರಾಜ್ಯದಲ್ಲಿ 2018ರಲ್ಲಿ ರಾಜ್ಯದ ಜನತೆ ನಮ್ಮ ಪಕ್ಷಕ್ಕೆ ಬಹುಮತ ನೀಡದ ಕಾರಣ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಸ್ಥಾನ ನೀಡಿದ್ದೇವು, ಅವರೂ ಸಹ ಜನರಿಗೆ ಸ್ಪಂದಿಸಲಿಲ್ಲ. ಈ ಸಂದರ್ಭದಲ್ಲಿ ನಮ್ಮ ಪಕ್ಷದ 17 ಶಾಸಕರನ್ನು ವಾಮಮಾರ್ಗವಾಗಿ ಕರೆದೊಯ್ದು ಬಿಜೆಪಿ ಅಪವಿತ್ರ ಸರ್ಕಾರ ನಡೆಸುತ್ತಿದೆ ಎಂದರು. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ 140 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲಿದ್ದು, ಪ್ರತಿ ಮನೆಯ ಮಹಿಳೆಗೆ ಮಾಸಿಕ ಎರಡು ಸಾವಿರ, 200 ಯುನಿಟ್‌ ಉಚಿತ ವಿದ್ಯುತ್‌ ನೀಡುವ ಗ್ಯಾರಂಟಿ ಕಾರ್ಡ್‌ನ್ನು ಮನೆ,ಮನೆಗೂ ವಿತರಣೆ ಮಾಡಲಾಗುವುದು. ನಿಮ್ಮ ಆಶೀರ್ವಾದಿಂದ ಮತ್ತೊಮ್ಮೆ ರಘುಮೂರ್ತಿಯವರು ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಲಿದ್ದು, ನಿಮ್ಮೆಲ್ಲರ ಸಹಕಾರ ಮುಖ್ಯವೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳಿಗೆ ಗೌರವ ನೀಡಿ, ಸರ್ಕಾರಿ ಹುದ್ದೆ ತ್ಯಜಿಸಿ ಜನಸೇವೆಗಾಗಿ 2008ರಲ್ಲಿ ರಾಜಕೀಯ ಕ್ಷೇತ್ರಕ್ಕೆ ಬಂದೆ. ಪಕ್ಷ ನನಗೆ ಟಿಕೇಟ್‌ ನೀಡದೇ ಇದ್ದರೂ ಕ್ಷೇತ್ರದಲ್ಲಿ ಜನಪರವಾಗಿ ಕಾರ್ಯನಿರ್ವಹಿಸಿದೆ. 2013ರಲ್ಲಿ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನನಗೆ ಸ್ಪರ್ಧಿಸಲು ಅವಕಾಶ ನೀಡಿ ಶಾಸಕನಾಗಲು ಸಹಕರಿಸಿದರು. 2013ರಿಂದ 18ರ ತನಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಎಚ್‌.ಆಂಜನೇಯ ಸಹಕಾರದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಯಿತು. ಆದರೆ ಬಿಜೆಪಿ ಆಡಳಿತ ಸರ್ಕಾರ ತಾರತಮ್ಯವೆಸಗುವ ಮೂಲಕ ನನಗೆ ಹೆಚ್ಚು ಅನುದಾನ ನೀಡಲಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ ಅನುಷ್ಠಾನವಾಗದೇ ಇದ್ದರೂ, ಜನರ ಸಮಸ್ಯೆಗಳಿಗೆ ನಿರಂತರ ಶ್ರಮಿಸಿದ ತೃಪ್ತಿ ನನಗಿದೆ. ಇಂದಿನ ಈ ಸಭೆಯಲ್ಲಿ ನಿರೀಕ್ಷೆಗೂ ಮೀರಿ ಜನಸಾಗರ ಸೇರಿದ್ದು, ನಿಮ್ಮೆಲ್ಲರ ಆಶೀರ್ವಾದ ಮತದಾನವಾಗಿ ಪರಿವರ್ತನೆಯಾಗಿ ನಾನು ಮತ್ತೆ ಈ ಕ್ಷೇತ್ರದ ಹ್ಯಾಟ್ರಿಕ್‌ ಶಾಸಕವೆಂಬ ಸಾಧನೆಗೆ ತಾವೆಲ್ಲರೂ ಕಾರಣ ಕರ್ತರಾಗಬೇಕು ಎಂದರು.

ಕಾಂಗ್ರೆಸ್‌ ಪಕ್ಷದ ಚುನಾವಣೆ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ, ರಾಜ್ಯಸಭಾ ಸದಸ್ಯ ಚಂದ್ರಶೇಖರ್‌, ಮಾಜಿ ಸಚಿವ ಎಚ್‌.ರೇವಣ್ಣ ಮಾತನಾಡಿದರು. ಸಭೆಯಲ್ಲಿ ಮಾಜಿ ಸಚಿವರಾದ ಎಚ್‌.ಸಿ.ಮಹದೇವಪ್ಪ, ಡಿ.ಸುಧಾಕರ್‌, ಆರ್‌.ಮಂಜುನಾಥ, ಶಿವಮೂರ್ತಿನಾಯ್ಕ, ಜಿ.ಎಸ್‌.ಮಂಜುನಾಥ, ಹಾಲೇಶ್‌, ಸಿದ್ದರಾಜು, ಸೇವಾದಳದ ರಾಜ್ಯಾಧ್ಯಕ್ಷ ರಾಮಚಂದ್ರ, ಜಿಲ್ಲಾಧ್ಯಕ್ಷ ತಾಜ್‌ಪೀರ್‌, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಗೀತಾನಂದಿನಿ ಗೌಡ, ನಗರಸಭೆ ಅಧ್ಯಕ್ಷ ಸುಮಕ್ಕ, ಉಪಾಧ್ಯಕ್ಷೆ ಆರ್‌. ಮಂಜುಳಾ ಮುಂತಾದವರು ಉಪಸ್ಥಿತರಿದ್ದರು.

ಗೂಳಿಹಟ್ಟಿಆರೋಪದ ಬಗ್ಗೆ ತನಿಖೆ ಯಾಕಿಲ್ಲ?

ಚಳ್ಳಕೆರೆ: ಪರಿಶಿಷ್ಟಜಾತಿ ಮೀಸಲಾತಿ ಕ್ಷೇತ್ರ ಚಿತ್ರದುರ್ಗದಿಂದ ಲೋಕಸಭೆಗೆ ಆಯ್ಕೆಯಾದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪರಿಶಿಷ್ಟಸಮುದಾಯಕ್ಕೆ ಮೀಸಲಾತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾಯೋನ್ಮುಖರಾಗದೇ ನಿರ್ಲಕ್ಷ್ಯ ತಾಳಿದ್ದಲ್ಲದೆ, ಲೋಕಸಭೆಯಲ್ಲೂ ಸಹ ಮೀಸಲಾತಿಯ ಬಗ್ಗೆ ಚರ್ಚಿಸಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದರು.

ಬಿಜೆಪಿ ಶಾಸಕ ಗೂಳಿಹಟ್ಟಿಶೇಖರ್‌ 4500 ಕೋಟಿ ಟೆಂಡರ್‌ ಅಕ್ರಮವಾಗಿದೆ ಎಂದು ಸರ್ಕಾರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರೂ ಸಿಎಂ ತನಿಖೆಗೆ ಆದೇಶಿಸದ ಮರ್ಮವೇನು? ರಾಜ್ಯದಲ್ಲಿ ಬಡವರ ಪರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದ ಸರ್ಕಾರವೆಂದರೆ ಅದು ಕಾಂಗ್ರೆಸ್‌ ಮಾತ್ರ. ಜನತೆಗೆ ನಿರಂತರವಾಗಿ ಸೌಲಭ್ಯಗಳನ್ನು ನೀಡಿ ನೆರವಾಗುವ ಕಾಂಗ್ರೆಸ್‌ ಪಕ್ಷಕ್ಕೆ ಜನ ಈ ಬಾರಿ ಆಶೀರ್ವಾದಿಸಬೇಕು. ಭಾರತ್‌ ಜೋಡೋ ಯಾತ್ರೆ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಅತಿಹೆಚ್ಚಿನ ಸಂಖ್ಯೆಯ ಜನರು ಸೇರಿ ಈಯಾತ್ರೆ ಯಶಸ್ವಿಗೊಳಿಸಿದ್ದು, ಜಿಲ್ಲೆಯ ಜನತೆಗೆ ಕೆಪಿಸಿಸಿ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಭ್ರಷ್ಟಾಚಾರದ ಕೂಪವಾಗಿರುವ ಬಿಜೆಪಿ ಸರ್ಕಾರದ ವಿರುದ್ದ ಶೇ.40ರಷ್ಟುಆರೋಪವನ್ನು ರಾಜ್ಯ ಗುತ್ತಿಗೆದಾರರ ಸಂಖ್ಯೆ ಆರೋಪಿಸಿದೆ. ಅದಕ್ಕೆ ಕೆಪಿಸಿಸಿ ಧ್ವನಿಗೂಡಿಸಿದೆ ಅಧಿಕಾರಕ್ಕೆ ಬಂದರೆ ಬಿಜೆಪಿಯ ಟೆಂಡರ್‌ ರದ್ದುಪಡಿಸಿ ತನಿಖೆ ನಡೆಸುವುದಾಗಿ ತಿಳಿಸಿದರು.

Prajadhwani yatre: ಬಿಜೆಪಿ ಸರ್ಕಾರ ರಾಷ್ಟ್ರದಲ್ಲಿ ಸಂಪೂರ್ಣ ವಿಫಲ: ಡಿ.ಕೆ.ಶಿವಕುಮಾರ

2023ರಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ ಪಕ್ಷದ ಅಧಿಕಾರಕ್ಕೆ ಬಂದಕೂಡಲೇ 10 ಕೆ.ಜಿ. ಉಚಿತ ಅಕ್ಕಿ ನೀಡುವುದಲ್ಲದೆ, ನರೇಗಾ ಕಾಮಗಾರಿಗೆ ಪೂರ್ಣಪ್ರಮಾಣದಲ್ಲಿ ಅನುದಾನ ನೀಡುವುದು ಎಂದರು.

click me!