
ಶಿವಮೊಗ್ಗ (ಡಿ.01): ರಾಜ್ಯದಲ್ಲಿ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ರಾಜ್ಯ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಮುಂದೆಯೂ ಉತ್ತಮ ಆಡಳಿತ ನೀಡುತ್ತೇವೆ. ಸಿದ್ದರಾಮಯ್ಯ ಜನನಾಯಕರಾಗಿದ್ದು, ಕೊಟ್ಟ ಮಾತನ್ನು ಉಳಿಸಿಕೊಂಡು ನಡೆಸಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ, ವಿಪಕ್ಷಗಳು ಬೇಕೆಂತಲೇ ಆರೋಪ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೇವಲ ಅರ್ಧಂಬರ್ಧ ತಿಳಿದುಕೊಂಡು ಮಾತನಾಡುತ್ತಾರೆ. ಎಲ್ಲಾ ಇಲಾಖೆಗಳಲ್ಲಿ ಅಭಿವೃದ್ಧಿ ಕುಸಿತ ಎಂದಿರುವುದು ಸತ್ಯಕ್ಕೆ ದೂರವಾದುದು. ಅವರ ಬಳಿ ಯಾವುದೇ ದಾಖಲೆಗಳಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಇದಕ್ಕೆ ಉತ್ತರ ನೀಡುತ್ತೇವೆ ಎಂದು ಕುಟುಕಿದರು.
ಕಾಂಗ್ರೆಸ್‌ನ ಎಲ್ಲಾ ಶಾಸಕರು ಶಿಸ್ತಿನಿಂದ ವರ್ತಿಸಿದ್ದಾರೆ. ಯಾರೂ ಕೂಡ ರೆಸಾರ್ಟ್ ಗೆ ಹೋಗಿಲ್ಲ. ಬಿಜೆಪಿ ಅವಧಿಯಲ್ಲಿ ಕಿತ್ತಾಟ ಎಲ್ಲರೂ ನೋಡಿದ್ದಾರೆ. ಬಿಜೆಪಿ ಹಾಗೇ ರೆಸಾರ್ಟ್ ರಾಜಕೀಯ ನಮ್ಮಲ್ಲಿ ಮಾಡಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಹೈಕಮಾಂಡ್ ತೀರ್ಮಾನಕ್ಕೆ ಸಿಎಂ ಸೇರಿದಂತೆ ಎಲ್ಲರೂ ಬದ್ಧರಾಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲಿ ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎಲ್ಲಾ ತಾಲೂಕು ಆಸ್ಪತ್ರೆಯಲ್ಲಿ ಸ್ತ್ರೀರೋಗ, ಅರವಳಿಕೆ ತಜ್ಞರ ನಿಯೋಜನೆ ಮಾಡಲಾಗುತ್ತಿದೆ. ಅಧಿವೇಶನದ ಬಳಿಕ ಎರೆಡೆರೆಡು ಸ್ತ್ರೀರೋಗ, ಮಕ್ಕಳ ಹಾಗೂ ಅರವಳಿಕೆ, ಪ್ರಸೂತಿ ತಜ್ಞರನ್ನು ನೇಮಿಸಲಾಗುವುದು. ವೈಜ್ಞಾನಿಕವಾಗಿ ಬಾಣಂತಿ ಸಾವು ಪ್ರಕರಣ ಇಳಿಸಲಾಗುವುದು ಎಂದರು. 2028ರ ಹೊತ್ತಿಗೆ ಶೇ. 58 ರಲ್ಲಿರುವ ಶೇ. 40 ಕ್ಕೆ ಇಳಿಸಬೇಕೆಂದುಕೊಂಡಿದ್ದೇವೆ. 2030 ರ ಹೊತ್ತಿಗೆ ಶೇ. 20 ಕ್ಕೆ ಇಳಿಸಲಾಗುವುದು.
ಪ್ರತಿಯೊಂದು ಬಾಣಂತಿ ಸಾವು ಆಡಿಟ್ ಮಾಡಿಸುತ್ತೇವೆ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವುದು. ಎಲ್ಲ ವೈದ್ಯರ ವಿರುದ್ಧ ಕ್ರಮ ತೆಗೆದುಕೊಂಡರೆ ವೈದ್ಯರು ಯಾರೂ ಉಳಿಯೋದಿಲ್ಲ ಎಂದು ಪ್ರತಿಕ್ರಿಯಿಸಿದರು. ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಲಸಿಕೆ ಸಿದ್ಧವಾಗಿ ಪ್ರಯೋಗ ಮಾಡಲಾಗುತ್ತಿದೆ. ಮುಂದಿನ ವರ್ಷ ಲಸಿಕೆ ಲಭ್ಯವಾಗಲಿದೆ. ಈ ವರ್ಷ ಕೆ.ಎಫ್.ಡಿ. ಕಾಯಿಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗದುಕೊಳ್ಳಲಾಗುವುದು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.