Latest Videos

ಚನ್ನಪಟ್ಟಣ ಉಪ ಚುನಾವಣೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಸ್ಪರ್ಧೆ?

By Sathish Kumar KHFirst Published Jun 27, 2024, 11:41 AM IST
Highlights

ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಈಗ ಡಿಸಿಎಂ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುಳಿವು ಲಭ್ಯವಾಗಿದೆ.

ರಾಮನಗರ (ಜೂ.27): ರಾಜ್ಯದಲ್ಲಿ ವಿಧಾನಸಭಾ ಉಪ ಚುನಾವಣೆ ಘೋಷಣೆಯಾಗುವ ಮುನ್ನವೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿರ ರಾಜಕೀಯ ಬೆಳವಣಿಗೆಗಳು ಭಾರಿ ಚುರುಕು ಪಡೆದುಕೊಂಡಿವ. ಚನ್ನಪಟ್ಟಣಕ್ಕೆ ಮೂರ್ನಾಲ್ಕು ಬಾರಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಮತದಾರರನ್ನು ವಿಶ್ವಾಸಕ್ಕೆ ಪಡೆಯಲು ಕಸರತ್ತು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಸ್ಪರ್ಧೆ ಮಾಡುತ್ತಾರೆಂಬ ಸುಳಿವು ಸಿಕ್ಕಿತ್ತು. ಆದರೆ, ಈಗ ಡಿಕೆಶಿ ಅವರ ಬದಲಿಗೆ ಅವರ ಪುತ್ರಿ ಐಶ್ವರ್ಯಾ ಅವರು ಸ್ಪರ್ಧೆ ಮಾಡುತ್ತಾರೆಂಬ ಸುಳಿವು ಲಭ್ಯವಾಗುತ್ತಿದೆ.

ಲೋಕಸಭಾ ಚುನಾವಣೆ ಮುಕ್ತಾಯದ ಬೆನ್ನಲ್ಲಿಯೇ ಶಾಸಕ ಸ್ಥಾನದಿಂದ ತೆರವಾದ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಾದ ರಾಮನಗರ ಜಿಲ್ಲೆಯ ಚನ್ನಪಟ್ಟಣ (ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ತೆರವು), ಬಳ್ಳಾರಿ ಜಿಲ್ಲೆಯ ಸಂಡೂರು (ಸಂಸದ ತುಕಾರಾಂ ಅವರಿಂದ ತೆರವು) ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ (ಮಾಜಿ ಸಿಎಂ ಹಾಗೂ ಹಾಲಿ ಸಂಸದ ಬಸವರಾಜ ಬೊಮಮಾಯಿ ಅವರಿಂದ ತೆರವು) ಈ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯ ಕಾವು ಹೆಚ್ಚಾಗಿದೆ. ಅದರಲ್ಲಿಯೂ ಚನ್ನಪಟ್ಟಣ ಕ್ಷೇತ್ರವನ್ನು ಪ್ರತಿಷ್ಠೆ ಕಣವಾಗಿ ಸ್ವೀಕರಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪಕ್ಷಗಳ ಬಲಾಬಲ ಪ್ರದರ್ಶನಕ್ಕೆ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ.

ಡಿಕೆಶಿ ಚನ್ನಪಟ್ಟಣ ಬೈ ಎಲೆಕ್ಷನ್‌ನಲ್ಲಿ ಸ್ಪರ್ಧಿಸುವ ವಿಚಾರ ನನ್ನ ಮುಂದೆ ಚರ್ಚೆ ಆಗಿಲ್ಲ: ಡಿಕೆ ಸುರೇಶ್‌

ಚನ್ನಪಟ್ಟಣ ಕ್ಷೇತ್ರಕ್ಕೆ ಅಪರೂಪವೆಂಬಂತೆ ಹೋಗುತ್ತಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಕಳೆದೊಂದು ತಿಂಗಳಲ್ಲಿ ಮೂರ್ನಾಲ್ಕು ಬಾರಿ ಭೇಟಿ ನೀಡಿದ್ದಾರೆ. ಒಮ್ಮೆ ದೇವರ ದರ್ಶನಕ್ಕೆ, ಮತ್ತೊಮ್ಮೆ ರಾಜಕೀಯ ನಾಯಕರ ಭೇಟಿಗೆ ಹಾಗೂ ಮತ್ತೊಮ್ಮೆ ಚನ್ನಪಟ್ಟಣದಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸೇರಿ ಮೂರು ಬಾರಿ ಹೋಗಿ ಬಂದಿದ್ದಾರೆ. ಇನ್ನು ಪ್ರತಿಬಾರಿ ಹೋದಾಗಲೂ ರಾಜಕೀಯ ದಾಳಗಳನ್ನು ಉರುಳಿಸಿ ಬಂದಿದ್ದಾರೆ. ಜೊತೆಗೆ, ರಾಜ್ಯ ಸರ್ಕಾರದಿಂದ ವಿಶೇಷ ಅನುದಾನವನ್ನು ಕೊಡುವುದಾಗಿಯೂ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವ ಸುಳಿವನ್ನು ಕೊಟ್ಟಿದ್ದರು.

ಉಪಚುನಾವಣೆ ತಾಲೀಮು: ನಾನು ಚನ್ನಪಟ್ಟಣ ಬಿಟ್ಟು ಹೋಗುವವನಲ್ಲ, ಬಡವರಿಗೆ ಸೈಟ್ ಹಂಚುತ್ತೇನೆ, ಡಿಕೆಶಿ

ಆದರೆ, ಈಗ ಚನ್ನಪಟ್ಟಣದಲ್ಲಿ ಡಿ.ಕೆ. ಶಿವಕುಮಾರ್ ಅವರ ಸ್ಪರ್ಧೆಯ ಬದಲಾಗಿ ಅವರ ಮಗಳು ಐಶ್ವರ್ಯಾ ಅವರನ್ನು ಸ್ಪರ್ಧೆಗೆ ಇಳಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈವರೆಗೂ ಉದ್ಯಮ, ಶಿಕ್ಷಣ ಸಂಸ್ಥೆಗಳನ್ನು ನಿರ್ವಹಣೆ ಮಾಡುತ್ತಾ ಬಂದಿರುವ ಐಶ್ವರ್ಯಾ ಅವರು ಈಗ ರಾಜಕೀಯ ಪ್ರವೇಶಕ್ಕೂ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಐಶ್ವರ್ಯಾ ಅವರ ಸ್ಪರ್ಧೆಗೆ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಅಪಸ್ವರಗಳು ಕೇಳಿ ಬರುತ್ತಿವೆ ಎಂಬ ಸುಳಿವು ಸಿಕ್ಕಿದೆ. ಅವರನ್ನು ಮನವೊಲಿಕೆ ಮಾಡಿ ಡಿ.ಕೆ. ಶಿವಕುಮಾರ್ ತಮ್ಮ ಪುತ್ರಿಯನ್ನು ಕಣಕ್ಕಿಳಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

click me!