ಚುನಾವಣೆಯಲ್ಲಿ ಹಣದ ಹೊಳೆ ತಡೆಯದಿದ್ದರೆ ಪ್ರಜಾಪ್ರಭುತ್ವ ವ್ಯರ್ಥ: ಎಸ್‌.ಎಂ.ಕೃಷ್ಣ

By Kannadaprabha NewsFirst Published Jun 7, 2023, 11:39 AM IST
Highlights

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಣದ ಹೊಳೆ ಹರಿಸಿ ಚುನಾವಣೆ ಗೆಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ನಾಡಿನ ಹಿತಚಿಂತಕರು ಪ್ರಜಾಪ್ರಭುತ್ವ ವ್ಯವಸ್ಥೆ ಸರಿಪಡಿಸುವ ಕಡೆ ಅಲೋಚಿಸುವ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೇಳಿದ್ದಾರೆ. 

ಬೆಂಗಳೂರು (ಜೂ.07): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಣದ ಹೊಳೆ ಹರಿಸಿ ಚುನಾವಣೆ ಗೆಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ನಾಡಿನ ಹಿತಚಿಂತಕರು ಪ್ರಜಾಪ್ರಭುತ್ವ ವ್ಯವಸ್ಥೆ ಸರಿಪಡಿಸುವ ಕಡೆ ಅಲೋಚಿಸುವ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೇಳಿದ್ದಾರೆ. ಗಂಗಮ್ಮ ಸೋಮಪ್ಪ ಬೊಮ್ಮಾಯಿ ಎಜುಕೇಶನಲ್‌ ಮತ್ತು ವೆಲ್‌ ಫೇರ್‌ ಫೌಂಡೇಶನ್‌ ವತಿಯಿಂದ ಮಂಗಳವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌.ಆರ್‌.ಬೊಮ್ಮಾಯಿ ಅವರ ಜನ್ಮ ಶತಮಾನೋತ್ಸವ ಆಚರಣೆ ಉದ್ಘಾಟನಾ ಸಮಾರಂಭದಲ್ಲಿ ಬೊಮ್ಮಾಯಿ ಅವರ ಬದುಕು-ಸಾಧನೆ ಕುರಿತ ‘ದಿ ರಾರ‍ಯಡಿಕಲ್‌ ಹ್ಯೂಮನಿಸ್ಟ್‌’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇಂದು ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ ಎಂಬುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಹಣದ ಪ್ರಭಾವ ಪ್ರಮುಖ ಪಾತ್ರ ವಹಿಸುತ್ತಿದೆ. ಇತ್ತೀಚಿನ ಚುನಾವಣೆ ನೋಡಿದರೆ ಈ ಹಣದ ಪ್ರಭಾವವನ್ನು ನೋಡಬಹುದು. ಈ ಹಣದ ಪ್ರವಾಹ ತಡೆಯಲು ಪ್ರಯತ್ನಿಸದಿದ್ದಲ್ಲಿ ಪ್ರಜಾಪ್ರಭುತ್ವ ಅರ್ಥ ಕಳೆದುಕೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ದೇಶದಲ್ಲಿ ಚುನಾವಣಾ ಆಯೋಗವಿದ್ದು, ಟಿ.ಎನ್‌.ಶೇಷನ್‌ ಕಾಲದಲ್ಲಿ ಆಯೋಗವು ಗುರುತರ ಜವಾಬ್ದಾರಿಯಿಂದ ಕೆಲಸ ಮಾಡಿತು. ನಂತರ ಚುನಾವಣಾ ಆಯೋಗವು ಸಮರ್ಪಕವಾಗಿ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗಿದೆ. ದಿವಂಗತ ಎಸ್‌.ಆರ್‌.ಬೊಮ್ಮಾಯಿ ಅವರಂತಹ ಮಹನಿಯರ ಕಾರ್ಯಗಳಿಂದ ಸ್ಫೂರ್ತಿ ಪಡೆದು ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಬೇಕಿದೆ ಎಂದು ಕೃಷ್ಣ ಸಲಹೆ ನೀಡಿದರು.

ನನಗೆ 91 ವರ್ಷ. ಲೋಕಸಭೆಗೆ ಸ್ಪರ್ಧಿಸುವ ಪ್ರಶ್ನೆ ಬರದು: ಎಚ್‌.ಡಿ.ದೇವೇಗೌಡ

ಹೋರಾಟದಿಂದ ಬೆಳೆದ ನಾಯಕ -ಬಿಎಸ್‌ವೈ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ತುರ್ತು ಪರಿಸ್ಥಿತಿ ಬಳಿಕ ಇಡೀ ದೇಶದಲ್ಲಿ ಕಾಂಗ್ರೆಸ್‌ ನೆಲಕಚ್ಚಿತ್ತು. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ಬಲಿಷ್ಠವಾಗಿತ್ತು. ಕರ್ನಾಟಕದಲ್ಲಿ ಕಾಂಗ್ರೆಸೇತರ ಸರ್ಕಾರ ರಚನೆಯಲ್ಲಿ ಜನತಾ ಪರಿವಾರದ ಎಸ್‌.ಆರ್‌.ಬೊಮ್ಮಾಯಿ ಅವರೂ ಪ್ರಮುಖ ಪಾತ್ರವಹಿಸಿದ್ದರು ಎಂದರು. ಮಾಜಿ ಸಚಿವ ಆರ್‌.ವಿ.ದೇಶಪಾಂಡೆ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾ, ವಿಧಾನ ಪರಿಷತ್‌ ಮಾಜಿ ಸಭಾಪತಿ ಬಿ.ಎಲ್‌.ಶಂಕರ್‌, ಮಹೇಶ್‌ ಬೊಮ್ಮಾಯಿ ಮತ್ತಿತರರಿದ್ದರು. ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಬಿಎಸ್‌ವೈ ನೆರವು ನೆನೆದು ಬೊಮ್ಮಾಯಿ ಕಣ್ಣೀರು: ನನ್ನ ತಂದೆ ಎಸ್‌.ಆರ್‌.ಬೊಮ್ಮಾಯಿ ಗಾಡ್‌ ಫಾದರ್‌ ಇಲ್ಲದೆ ಹೋರಾಟದಿಂದ ರಾಜಕೀಯದಲ್ಲಿ ಬೆಳೆದವರು. ರಾಜಕೀಯದಲ್ಲಿ ಅವರು ರಾಜಿ ಆಗಿದ್ದಲ್ಲಿ ಮುಖ್ಯಮಂತ್ರಿಯಾಗಿ ಹೆಚ್ಚು ಸಮಯ ಮುಂದುವರೆಯುತ್ತಿದ್ದರು. ಆದರೆ, ಅವರು ಅಧಿಕಾರದ ಆಸೆಗಾಗಿ ಹಾಗೆ ಮಾಡಲಿಲ್ಲ. ಮತ್ತೊಮ್ಮೆ ಅವರಿಗೆ ಸಿಎಂ ಆಗುವ ಸನ್ನಿವೇಶ ಬಂದಿತ್ತಾದರೂ ಅದನ್ನೇ ತಿರಸ್ಕರಿಸಿದರು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನನಗೆ ರಾಜಕೀಯದಲ್ಲಿ ತಂದೆಯ ಮಾರ್ಗದರ್ಶನ ಇತ್ತು. ಆದರೆ, ರಾಜಕೀಯವಾಗಿ ಬೆಳೆಸಿ ಗುರುತಿಸಿದವರು ಯಡಿಯೂರಪ್ಪನವರು. ನನಗೆ ಶಕ್ತಿ ತುಂಬಿ ಅವಕಾಶ ಕೊಟ್ಟು ಬೆಳೆಸಿದ್ದಾರೆ. ಹೀಗಾಗಿ ರಾಜಕೀಯದಲ್ಲಿ ಯಡಿಯೂರಪ್ಪ ಅವರಿಗೆ ನಾನು ತಂದೆಯ ಸ್ಥಾನ ನೀಡಿದ್ದೇನೆ ಎಂದು ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟರು. ತಂದೆಯ ಜನ್ಮಶತಮಾನೋತ್ಸವ ಪ್ರಯುಕ್ತ ಈ ವರ್ಷ ನಾಲ್ಕು ಪ್ರಮುಖ ಕಾರ್ಯ ಹಮ್ಮಿಕೊಂಡಿದ್ದೇವೆ. ತಂದೆಯ ಹುಟ್ಟೂರು, ಹುಬ್ಬಳ್ಳಿ, ಬೆಂಗಳೂರು, ದೆಹಲಿಯಲ್ಲಿ ಈ ಕಾರ್ಯಕ್ರಮಗಳು ಜರುಗಲಿವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಪಠ್ಯ ಪರಿಷ್ಕರಣೆ ಗೊಂದಲ ಬಗೆಹರಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ದಿವಂಗತ ಎಸ್‌.ಆರ್‌.ಬೊಮ್ಮಾಯಿ ರಾಜಕೀಯ ಮತ್ಸದ್ದಿ. ಬದುಕಿನಲ್ಲಿ ಸೌಜನ್ಯ, ಸರಳತೆ ರೂಢಿಸಿಕೊಂಡಿದ್ದರು. ಸುತ್ತೂರು ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
-ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ

click me!