Delhi MCD Election Result: ಮೇಯರ್‌ ರೇಸ್‌ನಲ್ಲಿ ಮೂವರ ಫೈಟ್‌, ಸಿಸೋಡಿಯಾಗೆ ಪ್ರಮೋಷನ್‌?

By Santosh Naik  |  First Published Dec 7, 2022, 3:53 PM IST

ಚುನಾವಣೋತ್ತರ ಸಮೀಕ್ಷೆಯಂತೆ ದೆಹಲಿಯ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿ ದಿಗ್ವಿಜಯ ಸಾಧಿಸಿದೆ. ಅದರ ನಡುವೆ ಮುಂದಿನ ಮೇಯರ್‌ ಯಾರಾಗಲಿದ್ದಾರೆ ಎನ್ನುವ ಕುತೂಹಲವೂ ಗರಿಗೆದರಿದೆ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ ಸಿಸೋಡಿಯಾಗೆ ಮುಖ್ಯಮಂತ್ರಿಯಾಗಿ ಭಡ್ತಿ ಸಿಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.


ನವದೆಹಲಿ (ಡಿ.7): ದೆಹಲಿ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿ ಬಹುಮತಕ್ಕೆ ಬೇಕಾಗುವಷ್ಟು ಸ್ಥಾನಗಳಿಸಲು ಯಶಸ್ವಿಯಾಗಿದೆ. ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದಲ್ಲಿ ಆಮ್‌ ಆದ್ಮಿ ಪಾರ್ಟಿ ಅಧಿಕಾರ ಹಿಡಿದ ಸಮಯದಲ್ಲಿಯೇ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಆಪ್‌ ಗೆಲುವು ಕಂಡಿರುವುದು ಇದೇ ಮೊದಲ ಬಾರಿಯಾಗಿದೆ.ಒಟ್ಟು 250 ಎಂಸಿಡಿ ಸ್ಥಾನಗಳಲ್ಲಿ ಇದುವರೆಗೆ ಎಎಪಿ 134 ಸ್ಥಾನಗಳನ್ನು ಮತ್ತು ಬಿಜೆಪಿ 104 ಸ್ಥಾನಗಳನ್ನು ಗೆದ್ದಿದೆ. ಈ ಬಾರಿಯ ಚುನಾವಣೆಯೂ ಕಾಂಗ್ರೆಸ್‌ಗೆ ತೀರಾ ಹೀನಾಯವಾಗಿ ಪರಿಣಮಿಸಿದ್ದು, ಕೇವಲ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ದೆಹಲಿ ಎಂಸಿಡಿಯಲ್ಲಿ ಬಿಜೆಪಿಯ 15 ವರ್ಷಗಳ ಅಧಿಕಾರವನ್ನು ಆಪ್‌ ಕೊನೆ ಮಾಡಿದಂತಾಗಿದೆ. ಗುಜರಾತ್ ಮತ್ತು ಹಿಮಾಚಲ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಒಂದು ದಿನ ಮೊದಲು, ಎಎಪಿಯ ಈ ಗೆಲುವು ರಾಷ್ಟ್ರ ರಾಜಕಾರಣಕ್ಕೂ ಹಲವು ಸಂದೇಶಗಳನ್ನು ನೀಡಿದೆ.  ಎಎಪಿಯ ಹಲವು ದೊಡ್ಡ ನಾಯಕರು ಮದ್ಯದ ಹಗರಣದ ಆರೋಪಗಳಿಂದ ಸುತ್ತುವರೆದಿದ್ದಾರೆ. ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಜೈಲಿನಲ್ಲಿದ್ದು, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮೇಲೆ ನಿರಂತರವಾಗಿ ಆರೋಪಗಳು ಕೇಳಿ ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಗೆಲುವು ಪಕ್ಷದಲ್ಲಿ ಮನೀಶ್ ಸಿಸೋಡಿಯಾ ಅವರ ಸ್ಥಾನವನ್ನು ಮತ್ತಷ್ಟು ಭದ್ರ ಮಾಡಿರುವುದಂತೂ ಸ್ಪಷ್ಟವಾಗಿದೆ.

ಆದರೆ, ಸಚಿವ ಸತ್ಯೇಂದ್ರ ಜೈನ್ ಅವರ ಕ್ಷೇತ್ರವಾದ ಶಕುರ್ಬಸ್ತಿಯಲ್ಲಿ ಬಿಜೆಪಿ ಸರಸ್ವತಿ ವಿಹಾರ್, ಪಶ್ಚಿಮ ವಿಹಾರ್ ಮತ್ತು ರಾಣಿ ಬಾಗ್ ಮೂರೂ ಸ್ಥಾನಗಳನ್ನು ಗೆದ್ದಿದೆ. ಮನೀಶ್ ಸಿಸೋಡಿಯಾ ಅವರ ವಿಧಾನಸಭಾ ಕ್ಷೇತ್ರದ 4 ವಾರ್ಡ್‌ಗಳ ಪೈಕಿ 3ರಲ್ಲಿ ಎಎಪಿ ಸೋತಿರುವುದು ಆಘಾತಕಾರಿ ಎಂದು ವಿಶ್ಲೇಷಣೆ ಮಾಡಲಾಗಿದೆ.

ಸಿಎಂ ಆಗ್ತಾರಾ ಮನೀಶ್‌ ಸಿಸೋಡಿಯಾ: ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಯೊಂದಿಗೆ ಏಕಕಾಲದಲ್ಲಿ ದೆಹಲಿಯ ಪಾಲಿಕೆ ಚುನಾವಣೆ ಕೂಡ ನಿಗದಿಯಾಗಿತ್ತು. ಆ ಕಾರಣಕ್ಕಾಗಿ ಆಪ್‌ಗೆ ಇದು ಸವಾಲಿನ ಚುನಾವಣೆ ಎನಿಸಿತ್ತು. ಗುಜರಾತ್‌ ಚುನಾವಣೆಯ ಪ್ರಚಾರದಲ್ಲಿ ಅರವಿಂದ್‌ ಕೇಜ್ರಿವಾಲ್‌ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರಿಂದ ಪಾಲಿಕೆ ಚುನಾವಣೆಯ ಗೆಲುವಿನ ಎಲ್ಲಾ ಶ್ರೇಯ ಮನೀಶ್‌ ಸಿಸೋಡಿಯಾ ಅವರಿಗೆ ಸಲ್ಲುತ್ತದೆ. ಈ ಗೆಲುವಿನ ಬಳಿಕ ಸಿಸೋಡಿಯಾಗೆ ದೆಹಲಿ ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ಕೂಡ ಸಿಗಬಹುದು ಎಂದು ಅಂದಾಜಿಸಲಾಗಿದ್ದು, ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪೂರ್ಣ ಪ್ರಮಾಣದಲ್ಲಿ ರಾಷ್ಟ್ರ ರಾಜಕಾರಣಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

Tap to resize

Latest Videos

ಆಪ್‌ ತೆಕ್ಕೆಗೆ ದೆಹಲಿ ಪಾಲಿಕೆ: ಬಿಜೆಪಿಯ 15 ವರ್ಷಗಳ ಅಧಿಕಾರ ಕೊನೆಗೊಳಿಸಿದ ಕೇಜ್ರಿವಾಲ್‌..!

ಮನೀಶ್ ಸಿಸೋಡಿಯಾ ಅಲ್ಲದೆ, ರಾಘವ್ ಚಡ್ಡಾ, ಅತಿಶಿ, ಸಂಜಯ್ ಸಿಂಗ್, ಸೌರಭ್ ಭಾರದ್ವಾಜ್ ಅವರಂತಹ ನಾಯಕರು ಕೂಡ ಆಪ್‌ ಗೆಲುವಿಗೆ ಶ್ರಮಿಸಿದ್ದಾರೆ. ಎಂಸಿಡಿ ಗೆಲುವು ಈ ನಾಯಕರನ್ನು ಪಕ್ಷದಲ್ಲಿ ಅಗ್ರಪಂಕ್ತಿಗೆ ನಿಲ್ಲಿಸಿದೆ. ಪಕ್ಷವನ್ನು ರಾಷ್ಟ್ರದಲ್ಲಿ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಆಪ್‌ಗೆ ಹೊಸ ನಾಯಕತ್ವ ಈ ಮೂಲಕ ಸಿಕ್ಕಿದೆ ಎಂದರೂ ತಪ್ಪಾಗಲಾರದು. ಮುಂದಿನ ದಿನಗಳ ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಚುನಾವಣೆಗಳಿದ್ದು, ಪಕ್ಷ ಸಂಘಟನೆಯಲ್ಲಿ ಇವರು ಕೆಲಸ ಮಾಡಲಿದ್ದಾರೆ.

Delhi MCD Election Results: ಎಎಪಿಯಿಂದ ಸಂಭ್ರಮಾಚರಣೆ, ಕಾಂಗ್ರೆಸ್‌ ಕಚೇರಿ ಖಾಲಿ ಖಾಲಿ..!

ಆತಿಶಿ, ನಿರ್ಮಲಾ ಅಥವಾ ಶಾಲಿನಿ ಡೆಲ್ಲಿ ಮೇಯರ್‌: ಪಾಲಿಕೆ ಚುನಾವಣೆಯಲ್ಲಿ ಗೆದ್ದ ಬಳಿಕ ಮೇಯರ್‌ ಯಾರಾಗ್ತಾರೆ ಎನ್ನುವ ಪ್ರಶ್ನೆ ಕೂಡ ಉದ್ಭವಿಸಿದೆ. ಎಎಪಿಯ ವಿಶ್ವಾಸಾರ್ಹ ಮೂಲಗಳ ಪ್ರಕಾರ, ಪಕ್ಷವು ಈಗಾಗಲೇ ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸದ್ಯ ಈ ರೇಸ್‌ನಲ್ಲಿ ಅತಿಶಿ ಮರ್ಲೆನಾ ಹೆಸರು ಮುಂಚೂಣಿಯಲ್ಲಿದೆ. ಆದರೆ, ಇದಕ್ಕಾಗಿ ಅವರು ಶಾಸಕ ಸ್ಥಾನವನ್ನು ತೊರೆಯಬೇಕಾಗುತ್ತದೆ.ಅತಿಶಿ ಅವರಲ್ಲದೆ ಎಎಪಿ ನಾಯಕಿ ನಿರ್ಮಲಾ ದೇವಿ ಅವರನ್ನೂ ಮೇಯರ್ ಮಾಡಬಹುದು. ನಿರ್ಮಲಾದೇವಿ ಪಕ್ಷದ ಮಹಿಳಾ ಘಟಕದ ರಾಜ್ಯ ಸಂಚಾಲಕಿ. ಇದಲ್ಲದೇ ಸಲಹೆಗಾರ್ತಿ ಶಾಲಿನಿ ಸಿಂಗ್ ಹೆಸರೂ ಕೂಡ ಚರ್ಚೆಯಲ್ಲಿದೆ.
 

click me!