
ಪಿಟಿಐ ನವದೆಹಲಿ (ಏ.11) : ಬಂಧಿತ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರಿಗೆ ಕೋರ್ಟ್‌ನಲ್ಲಿ ಭಾರೀ ಹಿನ್ನಡೆಯಾಗಿದ್ದು, ತಮ್ಮ ಬಂಧನ ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಅದರ ಬೆನ್ನಲ್ಲೇ ದೆಹಲಿ ಹೈಕೋರ್ಟ್‌ನ ಆದೇಶದ ವಿರುದ್ಧ ಕೇಜ್ರಿವಾಲ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ತ್ವರಿತವಾಗಿ ವಿಚಾರಣೆಗೆ ಎತ್ತಿಕೊಳ್ಳುವಂತೆ ಅವರು ಮನವಿ ಮಾಡಿದ್ದು, ಅದನ್ನು ಪರಿಶೀಲಿಸುತ್ತೇನೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ಭ್ರಷ್ಟಾಚಾರಕ್ಕೆ ‘ಬೇಸತ್ತು’ ದೆಹಲಿ ಮಂತ್ರಿ ರಾಜೀನಾಮೆ
ತಮ್ಮನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿರುವುದು ಕಾನೂನುಬಾಹಿರವಾಗಿದೆ. ದೆಹಲಿಯ ಅಬಕಾರಿ ನೀತಿಯಲ್ಲಿ ಹಗರಣ ನಡೆದಿದೆ ಎಂದು ಒಪ್ಪಿಕೊಂಡಿರುವ ಇಬ್ಬರು ಉದ್ಯಮಿಗಳು ಬಿಜೆಪಿಗೆ ಭಾರೀ ಪ್ರಮಾಣದಲ್ಲಿ ದೇಣಿಗೆ ನೀಡಿದವರಾಗಿದ್ದಾರೆ. ಹೀಗಾಗಿ ತಮ್ಮನ್ನು ಬಿಡುಗಡೆ ಮಾಡಬೇಕು ಎಂದು ಕೇಜ್ರಿವಾಲ್ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದನ್ನು ಮಂಗಳವಾರ ಹೈಕೋರ್ಟ್ ವಜಾಗೊಳಿಸಿತು. ಬಳಿಕ ಅವರು ಬುಧವಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು.
ಇ.ಡಿ. ಬಳಿ ಸಾಕಷ್ಟು ದಾಖಲೆಯಿದೆ:
‘ದೆಹಲಿ ಅಬಕಾರಿ ಹಗರಣದ ಸಂಬಂಧ ವಿಚಾರಣೆಗೆ ಬರುವಂತೆ ಇ.ಡಿ. ಪದೇಪದೇ ಸಮನ್ಸ್ ನೀಡಿದರೂ ಕೇಜ್ರಿವಾಲ್ ಹಾಜರಾಗಲಿಲ್ಲ. ಹೀಗಾಗಿ ಅವರನ್ನು ಬಂಧಿಸದೆ ಇ.ಡಿ. ಮುಂದೆ ಬೇರೆ ದಾರಿಯಿರಲಿಲ್ಲ. ಕೇಜ್ರಿವಾಲ್ ಮದ್ಯದ ಹಗರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಮತ್ತು ಆಮ್ ಆದ್ಮಿ ಪಕ್ಷವು ಪಡೆದ ಕಿಕ್‌ಬ್ಯಾಕ್ ರೂಪದ ಹಣವನ್ನು ಗೋವಾ ಚುನಾವಣೆ ಸೇರಿದಂತೆ ಬೇರೆ ಬೇರೆ ಕಡೆ ಬಳಸಿದ್ದಾರೆ ಎಂಬುದಕ್ಕೆ ಇ.ಡಿ. ಬಳಿ ಸಾಕಷ್ಟು ದಾಖಲೆಯಿದೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ಕೇಜ್ರಿವಾಲ್‌ಗೆ ಜಡ್ಜ್ ಛೀಮಾರಿ:
‘ಕೇಜ್ರಿವಾಲ್ ತಮ್ಮ ಬಂಧನದ ಸಮಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನ್ಯಾಯಾಂಗದ ಪ್ರಕ್ರಿಯೆಗಳ ಬಗ್ಗೆಯೂ ಶಂಕೆ ವ್ಯಕ್ತಪಡಿಸಿದ್ದಾರೆ. ತನಿಖಾ ಸಂಸ್ಥೆಗಳು ಆರೋಪಿಗಳ ಅನುಕೂಲ ನೋಡಿಕೊಂಡು ವಿಚಾರಣೆ ನಡೆಸುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿದೆ. ತನಿಖೆಯು ‘ಕ್ಲಾಸ್‌ಗಳಿಗೆ ಒಂದು ರೀತಿ, ಮಾಸ್‌ಗಳಿಗೆ ಒಂದು ರೀತಿ’ ಇರಲು ಸಾಧ್ಯವಿಲ್ಲ’ ಎಂದು ಜಡ್ಜ್ ಛೀಮಾರಿ ಹಾಕಿದ್ದಾರೆ.
ಜೈಲ್ ಕಾ ಜವಾಬ್ ವೋಟ್ ಸೆ,ಕೇಜ್ರಿವಾಲ್ ಅರ್ಜಿ ತಿರಸ್ಕರಿಸಿದ ಬೆನ್ನಲ್ಲೇ ವರಸೆ ಬದಲಿಸಿ ಆಪ್!
‘ಅಬಕಾರಿ ಹಗರಣದಲ್ಲಿ ಮಾಫಿ ಸಾಕ್ಷಿಯಾಗಿರುವವರು ಬಿಜೆಪಿಗೆ ಚುನಾವಣಾ ಬಾಂಡ್‌ಗಳ ಮೂಲಕ ದೊಡ್ಡ ಮೊತ್ತದ ದೇಣಿಗೆ ನೀಡಿದ್ದಾರೆ. ನನ್ನನ್ನು ಸಿಲುಕಿಸಲು ಕೇಂದ್ರ ಸರ್ಕಾರ ಮಾಫಿ ಸಾಕ್ಷ್ಯಗಳಿಗೆ ಸಂಬಂಧಿಸಿದ ಕಾಯ್ದೆ ದುರ್ಬಳಕೆ ಮಾಡಿಕೊಂಡಿದೆ’ ಎಂಬ ಕೇಜ್ರಿವಾಲ್ ಆರೋಪಕ್ಕೂ ಕಿಡಿಕಾರಿರುವ ನ್ಯಾಯಮೂರ್ತಿ, ‘ಮಾಫಿ ಸಾಕ್ಷಿಗೆ ಸಂಬಂಧಿಸಿದ ಕಾಯ್ದೆ 100 ವರ್ಷಗಳಷ್ಟು ಹಳೆಯದು. ಅದನ್ನು ಯಾರೋ ಒಬ್ಬ ರಾಜಕಾರಣಿಯನ್ನು ಸಿಲುಕಿಸುವುದಕ್ಕಾಗಿ ಜಾರಿಗೊಳಿಸಿಲ್ಲ’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.