
ವಿಧಾನಸಭೆ (ಜು.19): ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ಮಾದರಿಯ ನ್ಯಾಯಾಲಯಗಳಲ್ಲೂ ಸಣ್ಣ, ಅತಿ ಸಣ್ಣ ರೈತರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸೇರಿದ ವ್ಯಾಜ್ಯಗಳನ್ನು (ಬಾಕಿ ಇರುವ ಪ್ರಕರಣಗಳೂ ಸೇರಿ) ಆರು ತಿಂಗಳ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕೆಂಬ ಅಂಶಗಳನ್ನೊಳಗೊಂಡ ‘ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ 2023’ನ್ನು ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿತು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಸದನದಲ್ಲಿ ಈ ವಿಧೇಯಕ ಮಂಡಿಸಿದರು. ವಿಧೇಯಕದಲ್ಲಿ ಪ್ರಮುಖವಾಗಿ, ಯಾವುದೇ ನ್ಯಾಯಾಲಯದಲ್ಲಿ ಸಣ್ಣ ರೈತರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸೇರಿದ ವ್ಯಕ್ತಿಗಳ ಪ್ರಕರಣಗಳನ್ನು ಆಯಾ ದಿನದ ವಿಚಾರಣೆಯಲ್ಲಿ ಆದ್ಯತೆಯ ಮೇಲೆ ತೆಗೆದುಕೊಳ್ಳಬೇಕು. ಅವುಗಳನ್ನು ಆರು ತಿಂಗಳ ಕಾಲಮಿತಿಯಲ್ಲಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಬೇಕು. ಬಾಕಿ ಇರುವ ಇಂತಹ ಪ್ರಕರಣಗಳಿಗೆ ವಿಧೇಯಕ ಜಾರಿಗೆ ಬಂದ ನಂತರ ವಿಚಾರಣೆಗೆ ನಿಗದಿಯಾದ ದಿನಾಂಕದಿಂದ ನಂತರ ಕಾಲಮಿತಿ ಅನ್ವಯಿಸುತ್ತದೆ. ಇಂತಹ ಪ್ರಕರಣಗಳಲ್ಲಿ ಪ್ರಯೋಜನ ಪಡೆಯಲು ಸಂಬಂಧಿಸಿದ ಸಣ್ಣ ರೈತರು, ಆರ್ಥಿಕವಾಗಿ ಹಿಂದುಳಿದವರು ನ್ಯಾಯಾಲಯಕ್ಕೆ ತಮ್ಮ ಸ್ಥಿತಿಗತಿಯ ರುಜುವಾತಿನ ರೂಪದಲ್ಲಿ ಅಫಿಡವಿಟ್ ಸಲ್ಲಿಸಬಹುದು ಎಂಬ ಅಂಶವನ್ನು ಕೂಡ ಸೇರಿಸಲಾಗಿದೆ.
ಆರ್‌ಎಸ್‌ಎಸ್ ಸಂಸ್ಥೆಗೆ ಜಮೀನು ಮಂಜೂರಿಗೆ ತಡೆ: ಬೊಮ್ಮಾಯಿ ಆಕ್ರೋಶ
ಮುಂದೂಡಿಕೆಗೆ 3ರ ಮಿತಿ: ಅಲ್ಲದೆ, ಇಂತಹ ಪ್ರಕರಣಗಳಲ್ಲಿ ಮೂರು ಸಲಕ್ಕಿಂತ ಹೆಚ್ಚಿನ ಬಾರಿ ವಿಚಾರಣೆ ಮುಂದೂಡುವ ಅವಕಾಶ ನೀಡಬಾರದು. ಒಂದು ವೇಳೆ ಇಂತಹ ಪ್ರಕರಣದಲ್ಲಿ ಪಕ್ಷಕಾರರು ವಿಚಾರಣೆಗೆ ಹಾಜರಾಗದಿದ್ದಾಗ ನ್ಯಾಯಾಲಯ ದಾವೆಯನ್ನು ಯಾವುದಾದರೊಂದು ರೀತಿ ವಿಲೇವಾರಿ ಮಾಡಬಹುದು ಅಥವಾ ತಾನು ಸೂಕ್ತವೆಂದು ಭಾವಿಸುವ ಆದೇಶ ಮಾಡಬಹುದು.
ಸರ್ಕಾರಕ್ಕೆ ರೈತರ ಜೀವಕ್ಕಿಂತ ರಾಜಕೀಯ ಮುಖ್ಯ: ಬೊಮ್ಮಾಯಿ
ಮಸೂದೆ ಏಕೆ? ಯಾರು ಅರ್ಹರು?: ನ್ಯಾಯಾಲಯಗಳಲ್ಲಿ ದೀರ್ಘಕಾಲ ವ್ಯಾಜ್ಯವನ್ನು ಎದುರಿಸಲು ಸಾಮರ್ಥ್ಯ ಹೊಂದಿರದ ವ್ಯಕ್ತಿಗಳ ಪ್ರಕರಣಗಳ ಶೀಘ್ರ ವಿಲೇವಾರಿ ಹಾಗೂ ಅಂತಹ ವ್ಯಕ್ತಿಗಳಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ಈ ವಿಧೇಯಕ ತರಲಾಗಿದ್ದು, ಸಣ್ಣ ಮತ್ತು ದುರ್ಬಲ ರೈತರು ಎಂದರೆ ಸರ್ಕಾರ ನಿಗದಿಪಡಿಸಿದ ಭೂಮಿಗಿಂತ ಹೆಚ್ಚು ಭೂಮಿ ಹೊಂದಿಲ್ಲದ ರೈತ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಸೇರಿದ ವ್ಯಕ್ತಿಗಳು ಎಂದರೆ ವಾರ್ಷಿಕ ಎಲ್ಲಾ ಮೂಲಗಳಿಂದ 50 ಸಾವಿರ ರು. ಗಿಂತ ಹೆಚ್ಚು ವರಮಾನ ಹೊಂದಿಲ್ಲದ ವ್ಯಕ್ತಿ ಎಂದು ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.