ರಾಜ್ಯದಲ್ಲಿ ಮುಂಗಾರು ವೈಫಲ್ಯ, ಬಿತ್ತನೆ ಪ್ರಮಾಣ ಕುಸಿತ, ಮಳೆ ಕೊರತೆಯಿಂದಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ, ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣದ ಬಗ್ಗೆ ಸರ್ಕಾರದ ಗಮನ ಸೆಳೆಯಲು ಮುಂದಾಗಿರುವ ವಿಪಕ್ಷಗಳು ಈ ಕುರಿತು ಕಾಲಾವಕಾಶ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿವೆ.
ವಿಧಾನ ಮಂಡಲ (ಜು.19): ರಾಜ್ಯದಲ್ಲಿ ಮುಂಗಾರು ವೈಫಲ್ಯ, ಬಿತ್ತನೆ ಪ್ರಮಾಣ ಕುಸಿತ, ಮಳೆ ಕೊರತೆಯಿಂದಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ, ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣದ ಬಗ್ಗೆ ಸರ್ಕಾರದ ಗಮನ ಸೆಳೆಯಲು ಮುಂದಾಗಿರುವ ವಿಪಕ್ಷಗಳು ಈ ಕುರಿತು ಕಾಲಾವಕಾಶ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿವೆ. ಇದಕ್ಕೆ ಸರ್ಕಾರ ಕೂಡ ಸ್ಪಂದಿಸಿದ್ದು ಬುಧವಾರವೇ ಉಭಯ ಸದನಗಳಲ್ಲೂ ಅವಕಾಶದ ಭರವಸೆ ನೀಡಿದೆ. ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಬಸವರಾಜ ಬೊಮ್ಮಾಯಿ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಒಳನಾಡು ಭಾಗದಲ್ಲಿ ಮಳೆ ಕೊರತೆ ಹೆಚ್ಚಾಗಿದೆ.
ಮಳೆ ಅಭಾವದಿಂದಾಗಿ ಬಿತ್ತನೆ ಕಾರ್ಯ ಚುರುಕಾಗಿಲ್ಲ. ಹಲವು ಕಡೆ ಬಿತ್ತನೆಯಾಗಿದ್ದರೂ ಮಳೆ ಕೊರತೆಯಿಂದ ಅವೆಲ್ಲವೂ ನಾಶವಾಗಿದೆ. ಈವರೆಗೆ 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನಡೆಯಬೇಕಿದ್ದ ಬಿತ್ತನೆ ಬದಲು ಕೇವಲ 1.14 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಕೃಷಿ ವಿಷಯಕ್ಕಾದರೂ ರಾಜ್ಯ ಸರ್ಕಾರ ಬರ ಪೀಡಿತ ತಾಲೂಕುಗಳನ್ನು ಘೋಷಿಸಬೇಕು. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನು ಕೋರಿದರು. ಜೊತೆಗೆ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ಪ್ರತಿ ಜಿಲ್ಲೆಗೆ 1 ಕೋಟಿ ರು. ಹಣ ಮೀಸಲಿಟ್ಟಿರುವುದು ಸಾಕಾಗುವುದಿಲ್ಲ.
ಸರ್ಕಾರಕ್ಕೆ ರೈತರ ಜೀವಕ್ಕಿಂತ ರಾಜಕೀಯ ಮುಖ್ಯ: ಬೊಮ್ಮಾಯಿ
ಹೀಗಾಗಿ ಪ್ರತಿ ಕ್ಷೇತ್ರ ಅಥವಾ ತಾಲೂಕಿಗೆ 1 ಕೋಟಿ ರು. ನೀಡುವಂತೆ ಒತ್ತಾಯಿಸಿದರು. ಅಲ್ಲದೆ ರೈತರ ಆತ್ಮಹತ್ಯೆ ವಿಚಾರವಾಗಿ ಕೃಷಿ ಸಚಿವ ಚಲುವರಾಯ ಸ್ವಾಮಿ ಲಘುವಾಗಿ ಮಾತನಾಡುತ್ತಿದ್ದಾರೆ. ಹಿಂದಿನ ವರ್ಷಗಳ ಅಂಕಿ ಅಂಶ ನೀಡಿ ರೈತರ ಆತ್ಮಹತ್ಯೆಯನ್ನು ಕಡೆಗಣಿಸುತ್ತಿದ್ದಾರೆ. ಅವರ ಹೇಳಿಕೆಗಳು ರೈತ ಸಮೂಹದ ಆತ್ಮಸ್ಥೈರ್ಯ ಕುಸಿಯುವಂತೆ ಮಾಡುತ್ತಿದೆ. ಇನ್ನಾದರೂ ಮಳೆ ಕೊರತೆ, ರೈತರ ಆತ್ಮಹತ್ಯೆ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬೊಮ್ಮಾಯಿ ಅವರ ಮಾತಿಗೆ ದನಿಗೂಡಿಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ಸದಸ್ಯರು, ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಸದನದಲ್ಲಿ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಕೋರಿದರು.
ಪರಿಷತ್ತಿನಲ್ಲೂ ಒತ್ತಾಯ: ಮಳೆ ಕೊರತೆಯಿಂದ ಆಗಿರುವ ಜನ-ಜಾನುವಾರುಗಳಿಗೆ ಆಗಿರುವ ತೊಂದರೆ ಹಾಗೂ ಬರ ಪರಿಸ್ಥಿತಿ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ನಿಲುವಳಿ ಸೂಚನೆ ಮಂಡಿಸಿದರು. ರಾಜ್ಯದಲ್ಲಿ ಸಕಾಲದಲ್ಲಿ ಮಳೆಯಾಗದೆ ಬಿತ್ತನೆ ವಿಫಲವಾಗುತ್ತಿದ್ದು, ಸಾಲ ತೀರಿಸಲಾಗದೇ ರೈತರು ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಾವೇರಿ ಜಿಲ್ಲೆಯೊಂದರಲ್ಲೇ 18 ರೈತರು ಸೇರಿದಂತೆ ಕಳೆದ ಎರಡು ತಿಂಗಳಲ್ಲಿ 42ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಕಳವಳಕಾರಿಯಾಗಿದೆ.
ಶಿಗ್ಗಾಂವಿ ಕ್ಷೇತ್ರ ಶಿಕ್ಷಣ ಕಾಶಿಯಾಗಿಸುವೆ: ಮಾಜಿ ಸಿಎಂ ಬೊಮ್ಮಾಯಿ
ಮಳೆ ಇಲ್ಲದೇ ಅಂತರ್ಜಲ ಕುಸಿದಿದ್ದು, ಕೆರೆಗಳು ಒಣಗಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದರೂ ಸರ್ಕಾರ ಯಾವುದೇ ಪರ್ಯಾಯ ವ್ಯವಸ್ಥೆ ಕೈಗೊಂಡಿಲ್ಲ. ಜಾನುವಾರುಗಳಿಗಾಗಿ ಮೇವು ಬ್ಯಾಂಕ್, ಗೋಶಾಲೆ ತೆರೆಯಲು ಕ್ರಮ ಕೈಗೊಂಡಿಲ್ಲ. ಸರ್ಕಾರ ತಕ್ಷಣ ಮಳೆ ಇಲ್ಲದ ಜಿಲ್ಲೆಗಳನ್ನು ಬರಗಾಲ ಜಿಲ್ಲೆಗಳೆಂದು ಘೋಷಿಸಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸಬೇಕು. ಜೊತೆಗೆ ಆತ್ಮಹತ್ಯೆ ಹಾದಿ ಹಿಡಿಯುತ್ತಿರುವ ಸಂಕಷ್ಟಕ್ಕೆ ಒಳಗಾದ ರೈತರಿಗೆ ಭರವಸೆ ತುಂಬುವ ಕೆಲಸ ಮಾಡಬೇಕು ಹಾಗೂ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಕ್ಕೆ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದರು. ಸಭಾಪತಿ ಬಸವರಾಜ ಹೊರಟ್ಟಿಅವರು ಈ ಬಗ್ಗೆ ನಿಯಮ 68 ಅಡಿ ಚರ್ಚಿಸಲು ಬುಧವಾರ ಅವಕಾಶ ನೀಡುವುದಾಗಿ ಹೇಳಿದರು.