
ನವದೆಹಲಿ (ಫೆ.27): ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ ಹೆಚ್ಚಾಗಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ರಾಜ್ಯದ ರಾಜಕೀಯ ವಿದ್ಯಮಾನ್ಯಗಳ ಕುರಿತು ಚರ್ಚೆ ನಡೆಸಿದ್ದಾರೆ. ನಗರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರೊಂದಿಗೆ ಡಿಕೆಶಿ ಮುಕ್ಕಾಲು ಗಂಟೆ ಮಾತುಕತೆ ನಡೆಸಿದ್ದು, ಕೆಪಿಪಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸಚಿವರು ಹೇಳಿಕೆ ನೀಡುವುದರ ಮೂಲಕ ಪಕ್ಷದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ಹೈಕಮಾಂಡ್ ಗಮನಹರಿಸಿ ಸಚಿವರಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರನ್ನೂ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಚರ್ಚಿಸಿದ್ದಾರೆ.
ಪರಮೇಶ್ವರ ಅಧ್ಯಕ್ಷತೆಯಲ್ಲಿಯೇ ಪ್ರಣಾಳಿಕೆ ತಯಾರಿ: ಗ್ಯಾರಂಟಿ ಯೋಜನೆಗಳು ರಾಜ್ಯ ಸರ್ಕಾರಕ್ಕೆ ಹೊರೆಯಾಗಿವೆ ಎನ್ನುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು, ಪರಮೇಶ್ವರ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ವಿಧಾನಸಭೆ ಚುನಾವಣೆ ವೇಳೆ ಅವರ ಅಧ್ಯಕ್ಷತೆಯಲ್ಲಿಯೇ ಕಾಂಗ್ರೆಸ್ ಪ್ರಣಾಳಿಕೆ ತಯಾರಿಸಲಾಗಿತ್ತು ಎಂದು ಹೇಳಿದರು.
ನಗರ ದುರಸ್ತಿ ಅಸಾಧ್ಯ: ಆ ಭಗವಂತ ಬಂದರೂ ಎರಡ್ಮೂರು ವರ್ಷದಲ್ಲಿ ಬೆಂಗಳೂರನ್ನು ಸರಿಪಡಿಸಲು ಸಾಧ್ಯವಿಲ್ಲ. ಭವಿಷ್ಯದ ಬೆಂಗಳೂರಿಗಾಗಿ ಈಗಿನಿಂದಲೇ ಉತ್ತಮ ಯೋಜನೆ ರೂಪಿಸಿದರೆ ಮಾತ್ರ ಸರಿಪಡಿಸಲು ಸಾಧ್ಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಡಾ। ರಾಜಕುಮಾರ್ ಗಾಜಿನ ಮನೆಯಲ್ಲಿ ಆಯೋಜಿಸಿರುವ ಮೂರು ದಿನಗಳ ನಮ್ಮ ರಸ್ತೆ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನ ರಸ್ತೆಗಳು ಭವಿಷ್ಯದಲ್ಲಿಯೂ ಉತ್ತಮವಾಗಿರಬೇಕು. ಆ ರೀತಿಯ ಯೋಜನೆ ರೂಪಿಸಬೇಕು. ರಸ್ತೆ, ಪಾದಚಾರಿ ಮಾರ್ಗ, ಹಸಿರು ವಲಯ ಸೇರಿದಂತೆ ಎಲ್ಲಾ ಕಡೆಯೂ ಶಿಸ್ತು ಹಾಗೂ ಏಕರೂಪತೆ ಸಾಧಿಸಬೇಕು. ಇಲ್ಲದಿದ್ದರೆ ಬೆಂಗಳೂರಿಗೆ ನಾವು ಮೋಸ ಮಾಡಿದಂತೆ ಎಂದರು.
ರಾಮನಗರದ ಹೆಸರು ಬದಲಾವಣೆಗೆ ಕುಮಾರಸ್ವಾಮಿಯಿಂದ ಅಡ್ಡಗಾಲು: ಡಿಕೆಶಿ ಕಿಡಿ
ನಗರದಲ್ಲಿ ಏಕ ರೂಪ ವ್ಯವಸ್ಥೆ ಇರಬೇಕು ಎಂಬ ಕಾರಣಕ್ಕೆ ರಸ್ತೆ ಕೈಪಿಡಿ ರಚನೆಗೆ ಸೂಚಿಸಲಾಗಿತ್ತು. ಅದರಂತೆ ಇದೀಗ ರೂಪಿಸಲಾಗಿದ್ದು, ಈ ಕೈಪಿಡಿ ರಸ್ತೆ ಬದಿ ಸಸಿಗಳನ್ನು ಎಲ್ಲಿ ನೆಡಬೇಕು, ಕಂಬಗಳು ಎಲ್ಲಿರಬೇಕು, ಮುಖ್ಯರಸ್ತೆ ಹೇಗಿರಬೇಕು, ವಾರ್ಡ್ ರಸ್ತೆಗಳು ಹೇಗಿರಬೇಕು, ಪಾದಚಾರಿ ಮಾರ್ಗಗಳನ್ನು ಹೇಗೆ ನಿರ್ಮಾಣ ಮಾಡಬೇಕು. ಬಸ್ ನಿಲ್ದಾಣಗಳ ವಿನ್ಯಾಸ, ಮೆಟ್ರೋ ಪಿಲ್ಲರ್‌ಗಳು, ವೃತ್ತಗಳ ಸೌಂದರ್ಯೀಕರಣದ ಬಗ್ಗೆ ಹೊಸ ಆಲೋಚನೆಗಳನ್ನು ಇಲ್ಲಿ ನೋಡಬಹುದು ಎಂದು ತಿಳಿಸಿದರು. ಎಂಜಿನಿಯರ್‌ಗಳು, ರಾಜಕಾರಣಿಗಳು, ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು ಇಂದು ಅಧಿಕಾರದಲ್ಲಿ ಇರುತ್ತಾರೆ, ನಾಳೆ ಹೋಗುತ್ತಾರೆ. ಅಧಿಕಾರ ಸಿಕ್ಕಾಗ ಅವರದೇ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಯಾರೂ ಇಲ್ಲದೇ ಇದ್ದರೂ ‘ನಮ್ಮ ರಸ್ತೆʼ ಎನ್ನುವ ಕೈಪಿಡಿ ಕೆಲಸ ಮಾಡಲು ಮಾರ್ಗದರ್ಶನ ನೀಡುತ್ತದೆ. ಕೈಪಿಡಿಯಲ್ಲಿ ಇರುವ ನಿಯಮಗಳ ಅನುಸಾರವೇ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.