ಗಣಿ ಕೇಸ್‌: ಎಚ್‌.ಡಿ.ಕುಮಾರಸ್ವಾಮಿಗೆ ಮತ್ತೆ ಪ್ರಾಸಿಕ್ಯೂಷನ್ ಸಂಕಷ್ಟ

Published : Feb 26, 2025, 11:48 AM IST
ಗಣಿ ಕೇಸ್‌: ಎಚ್‌.ಡಿ.ಕುಮಾರಸ್ವಾಮಿಗೆ ಮತ್ತೆ ಪ್ರಾಸಿಕ್ಯೂಷನ್ ಸಂಕಷ್ಟ

ಸಾರಾಂಶ

ಜೆಡಿಎಸ್‌ ರಾಜ್ಯಾಧ್ಯಕ್ಷಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮತ್ತೆ ಅಭಿಯೋಜನೆ (ಪ್ರಾಸಿ ಕ್ಯೂಷನ್) ಸಂಕಷ್ಟ ಎದುರಾಗಿದೆ.   

• ಗಿರೀಶ್ ಮಾದೇನಹಳ್ಳಿ

ಬೆಂಗಳೂರು (ಫೆ.26): ಜೆಡಿಎಸ್‌ ರಾಜ್ಯಾಧ್ಯಕ್ಷಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮತ್ತೆ ಅಭಿಯೋಜನೆ (ಪ್ರಾಸಿ ಕ್ಯೂಷನ್) ಸಂಕಷ್ಟ ಎದುರಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅವರ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ರಾಜ್ಯಪಾಲರಿಗೆ 5000ಕ್ಕೂ ಅಧಿಕ ಪುಟಗಳ ಭಾಷಾಂತರ ವರದಿ ಮೂಲಕ ಲೋಕಾಯುಕ್ತ ವಿಶೇಷ ತನಿಖಾ ತಂಡವು (ಎಸ್‌ಐಟಿ) ಮನವಿ ಮಾಡಿದೆ. ತನ್ಮೂಲಕ ಬಳ್ಳಾರಿ ಗಣಿ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಬಳಿಕ ಕುಮಾ ರಸ್ವಾಮಿ ಅವರ ವಿರುದ್ಧದ ಪ್ರಾಸಿಕ್ಯೂಷನ್ ವಿವಾದದ ಚೆಂಡು ಮತ್ತೆ ರಾಜಭವನ ಅಂಗಳಕ್ಕೆ ಬಿದ್ದಿದ್ದು, ತಮ್ಮ ಸೂಚನೆ ಮೇರೆಗೆ ಸಲ್ಲಿಸಿರುವ ಅನುವಾದಿತ ವರದಿಯನ್ನು ರಾಜ್ಯಪಾಲರು ಒಪ್ಪುವರೇ ಅಥವಾ ಇಲ್ಲವೇ ಎಂಬುದು ಭಾರೀ ಕುತೂಹಲ ಮೂಡಿಸಿದೆ. 

ಅಲ್ಲದೆ, ರಾಜಕೀಯವಾಗಿ ಕೂಡ ಪ್ರಾಸಿಕ್ಯೂಷನ್ ಸಂಬಂಧ ರಾಜ್ಯಪಾಲರ ಥಾವರ್‌ಚಂದ್ ಗೆಹಲೋತ್ ನಿರ್ಧಾರ ಮಹತ್ವದ್ದಾಗಿದೆ. ಏಳು ತಿಂಗಳ ಹಿಂದೆ ಕುಮಾರಸ್ವಾಮಿ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಲೋಕಾಯುಕ್ತದ ವಿಶೇಷ ತನಿಖಾ ದಳ (ಎಸ್ ಐಟಿ) ಹಾಗೂ ಜನಾರ್ದನ ರೆಡ್ಡಿ ವಿರುದ್ದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಪ್ರಾಸಿಕ್ಯೂಷನ್‌ಗೆ ಅನುಮತಿಗೆ ಮನವಿ ಮಾಡಿದ್ದರು. ಆಗ ಕನ್ನಡದ ಬದಲು ಆಂಗ್ಲ ಭಾಷೆಯಲ್ಲಿ ಅನು ವಾದಿತ ವರದಿ ಸಲ್ಲಿಸುವಂತೆ ಸೂಚಿಸಿ ಪ್ರಾಸಿ ಕ್ಯೂಷನ್ ಕೋರಿಕೆಯನ್ನು ತನಿಖಾಧಿಕಾರಿಗಳಿಗೆ ರಾಜ್ಯಪಾಲರು ಮರಳಿಸಿದ್ದರು. ಈಗ ರಾಜ್ಯ ಸರ್ಕಾರದ ಅಧಿಕೃತ ಭಾಷಾ ತಜ್ಞರಿಂದಲೇ ದಾಖಲೆಗಳನ್ನು ಅನುವಾದಿಸಿ ರಾಜ್ಯಪಾಲರಿಗೆ ಎಸ್‌ಐಟಿ ಸಲ್ಲಿಸಿದೆ.

ಏನಿದು ಪ್ರಕರಣ?: 2007ರಲ್ಲಿ ಅಂದು ಸಿಎಂ ಆಗಿದ್ದಾಗ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿ ನಲ್ಲಿ 550 ಎಕರೆ ಭೂಮಿಯನ್ನು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಕಾನೂನು ಬಾಹಿರವಾಗಿ ಗಣಿ ಗುತ್ತಿಗೆ ಮಂಜೂರಾತಿ ನೀಡಿದ ಆರೋಪದ ಮೇರೆಗೆ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಮುಕ್ತಾಯಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು 20230 ನವೆಂಬರ್‌ನಲ್ಲಿ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಅನುಮತಿ ಕೋರಿಲೋಕಾಯುಕ್ತ ಎಸ್‌ಐಟಿ ಅಧಿಕಾರಿಗಳು ಪತ್ರ ಬರೆದಿದ್ದರು. ಆದರೆ ಈ ಪ್ರಕರಣದಲ್ಲೂ ಸ್ಪಷ್ಟಿಕರಣ ಕೇಳಿದ್ದ ರಾಜ್ಯಪಾಲರು, ಕೊನೆಗೆ ಭಾಷಾ ತೊಡಕಿನ ತಾಂತ್ರಿಕ ಕಾರಣ ನೀಡಿ ಕಡತವನ್ನು ವಾಪಸ್ ಕಳುಹಿಸಿದ್ದರು. ಎನ್‌ಡಿಎ ನಾಯಕರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿಕೆಯಲ್ಲಿ ರಾಜ್ಯಪಾಲರ ನಡೆ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮಧ್ಯೆ ವಾಕ್ಸಮರಕ್ಕೂ ಕಾರಣವಾಗಿತ್ತು.

ವರದಿ ಹಿಡಿದು ಅಳ್ಳಾಡಿಸುತ್ತಿದ್ದೀರಾ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಟಾಂಗ್‌

ಭಾಷಾಂತರಕ್ಕೆ ಏಳು ತಿಂಗಳು: ಕೇಂದ್ರ ಮಂತ್ರಿ ಕುಮಾರಸ್ವಾಮಿಯವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಪಡೆಯಲು ದೋಷಾರೋಪಟ್ಟಿ ಮಾತ್ರವಲ್ಲದೆ ಕೆಲ ದಾಖಲೆಗಳನ್ನು ಎಸ್‌ಐಟಿ ಭಾಷಾಂತರಿಸಿ ದ್ದಾರೆ. ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆಯ ಅನುವಾದಕರನ್ನು ಬಳಸಿ ಕೊಂಡು ಸುಮಾರು 5 ಸಾವಿರಕ್ಕೂ ಅಧಿಕ ದಾಖಲೆಗಳನ್ನು ಎಸ್‌ಐಟಿ ತರ್ಜುಮೆ ಮಾಡಿದೆ. ಈ ಭಾಷಾಂತರ ಕರಡನ್ನು 2 ಬಾರಿ ಖುದ್ದು ಎಸ್‌ಐಟಿ ಮುಖ್ಯಸ್ಥ ಹಾಗೂ ಎಡಿಜಿಪಿ ಚಂದ್ರಶೇಖರ್ ಪರಿಶೀಲಿಸಿದ್ದಾರೆ. ಕಾಗುಣಿತ ದೋಷ ಕಂಡು ಬಂದಾಗ ಮತ್ತೆ ಕರಡನ್ನು ಎಡಿಜಿಪಿ ಪರಿಷ್ಕರಿಸಿದ್ದರು. ಹೀಗೆ ಸತತ 7 ತಿಂಗಳ ಕಾಲ ಪ್ರತಿ ಪುಟವನ್ನು ತಿದ್ದಿ ತೀಡಿ ರಾಜ್ಯಪಾಲರಿಗೆ ಭಾಷಾಂತರ ವರದಿ ಯನ್ನು ಸಲ್ಲಿಸಲಾಗಿದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ