
ಬೆಂಗಳೂರು (ಫೆ.26): ಕಾಂಗ್ರೆಸ್ ಪಕ್ಷ ನನ್ನನ್ನು ಉಪಮುಖ್ಯಮಂತ್ರಿ ಮಾಡಿದೆ. 90ನೇ ಇಸವಿಯಿಂದಲೇ ಮಂತ್ರಿ ಮಾಡಿ ಬೆಳೆಸಿದೆ. ಇಷ್ಟೆಲ್ಲ ಬೆಳೆಸಿ ನನ್ನ ಮುಖ ತೋರಿಸಿ, ನನಗೆ ಲೀಡರ್ ಶಿಪ್ ಕೊಡಲಿಲ್ಲ ಅಂದ್ರೆ ಹೇಗೆ? ನಾನು ಮನೆಯಲ್ಲಿ ಕೂರುವುದಕ್ಕಾ..? ಕಾಂಗ್ರೆಸ್ ನನಗೆ ಶಕ್ತಿ ಕೊಟ್ಟಿರುವುದು. ನಾನು ಯಾವುದೇ ಸ್ಥಾನದಲ್ಲಿದ್ದರೂ ನಾಯಕತ್ವ ವಹಿಸುತ್ತೇನೆ. ಪಕ್ಷ ಇಷ್ಟೆಲ್ಲ ನಾಯಕತ್ವ ಕೊಟ್ಟಾಗ ನನ್ನ ಲೀಡರ್ ಶಿಪ್‌ನಲ್ಲಿ ಹಾಗೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿಬಂದ ಬಳಿಕ ನನ್ನ ನಾಯಕತ್ವದಲ್ಲೇ ಚುನಾವಣೆ ಎಂಬ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದ್ದಾರೆ. ಹೌದ್ರೀ, ನಾನು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಇದ್ದೇನೆ. ಪಕ್ಷ ನನ್ನ ಡೆಪ್ಯುಟಿ ಸಿಎಂ ಮಾಡಿದೆ. 90ನೇ ಇಸವಿಯಿಂದಲೇ ಮಂತ್ರಿ ಮಾಡಿ ಬೆಳೆಸಿದೆ. ಇಷ್ಟೆಲ್ಲ ಬೆಳೆಸಿ ನನ್ನ ಮುಖ ತೋರಿಸಿ ನನಗೆ ಲೀಡರ್ ಶಿಪ್ ಕೊಡಲಿಲ್ಲ ಅಂದ್ರೆ. ನಾನು ಮನೆಯಲ್ಲಿ ಕೂರುವುದಕ್ಕಾ? ಕಾಂಗ್ರೆಸ್ ಶಕ್ತಿ ಕೊಟ್ಟಿರುವುದು. ಏನೇ ಸ್ಥಾನದಲ್ಲಿ ನಾನು ಇದ್ದರೂ ನಾಯಕತ್ವ ವಹಿಸುತ್ತೇನೆ ಎಂದರು.
ಇದನ್ನೂ ಓದಿ: ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂವಾಗಿಯೇ ಸಾಯುತ್ತೇನೆ; ಶಿವಭಕ್ತ ಡಿ.ಕೆ. ಶಿವಕುಮಾರ್!
ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗ ಕ್ಯಾಂಪೇನ್ ಕಮಿಟಿ ಅಧ್ಯಕ್ಷ ಆಗಿದ್ದೆ. ಕಳೆದ ಚುನಾವಣೆ ವೇಳೆ ಅಧ್ಯಕ್ಷ ಆಗಿದ್ದೆ. ಈಗ ಡಿಸಿಎಂ ಆಗಿದ್ದೇನೆ. ಪಕ್ಷ ನನಗೆ ಹಲವು ಜವಾಬ್ದಾರಿ ಕೊಟ್ಟು ನಾಯಕನಾಗಿ ಮಾಡಿದೆ. ನನಗೆ ಫೇಸ್ ಇದೆ ವೈಬ್ರೇಷನ್ ಇದೆ. ನನ್ನನ್ನು ದೆಹಲಿಗೂ ಕರಿತಾರೆ, ಬಿಹಾರಕ್ಕೆ ಕರಿತಾರೆ, ಕೇರಳಕ್ಕೂ ಕರಿತಾರೆ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೂ ಕರಿತಾರೆ. ನನಗೆ ಲೀಡರ್ ಶಿಪ್ ಇದೆ ಅಂತ ಬೇರೆ ಬೇರೆ ರಾಜ್ಯಕ್ಕೆ ಕರಿತಾರೆ. ನಿಮ್ಮನ್ನ ಕರಿತಾರಾ? ಬೇರೆಯವ್ರನ್ನ ಕರಿತಾರಾ? ನನಗೆ ಇರುವ ಅನುಭವ ಶಕ್ತಿ ಹಾಗೂ ವೈಬ್ರೇಷನ್ ಅನ್ನು ಪಾರ್ಟಿಗೆ ಬಳಸಬೇಕು. ಎಲ್ಲರನ್ನೂ ಬಳಸಿಕೊಳ್ಳಬೇಕು. ಪಕ್ಷ ಇಷ್ಟೆಲ್ಲ ನಾಯಕತ್ವ ಕೊಟ್ಟಾಗ ನನ್ನ ನಾಯಕತ್ವದಲ್ಲಿ ಅಥವಾ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತೇವೆ. ಸಿದ್ದರಾಮಯ್ಯನವರ ನಾಯಕತ್ವ ಕೂಡ ಇರುತ್ತದೆ. ಸಿದ್ದರಾಮಯ್ಯ ಕೂಡ ಇರುತ್ತಾರ, ಸಾಮೂಹಿಕ ನಾಯಕತ್ವ ಇರುತ್ತದೆ ಎಂದು ಹೇಳಿದರು.
ದೇವರು ಬಂದರೂ ಬೆಂಗಳೂರು ಟ್ರಾಫಿಕ್ ಕಂಟ್ರೋಲ್ ಮಾಡಲು ಆಗಲ್ಲ ಎಂದ ಡಿಸಿಎಂ ರಾಜೀನಾಮೆ ನೀಡಲಿ ಎಂಬ ಬಿಜೆಪಿ ಒತ್ತಾಯದ ವಿಚಾರದ ಬಗ್ಗೆ ಮಾತನಾಡಿ, ನನ್ನ ರಾಜೀನಾಮೆಗೆ ಅವರು ಕಾಯಲಿ. ಮೋಹನ್ ದಾಸ್ ಹಿರಿಯರು, ದೊಡ್ಡ ಮನುಷ್ಯ, ಗೌರವ ಇದೆ ನನಗೆ. ಅವರು ಕೂಡ ರಾಜಕೀಯಕ್ಕೆ ಬರಲಿ. ಅವರು ಪೊಲಿಟಿಕಲ್ ಪಾರ್ಟ್ ಪೋರ್ಸ್ ಆಗಿದ್ದಾರೆ. ಸಲಹೆ ಕೊಡುವವರು ಬಹಳ ಜನ ಇದ್ದಾರೆ. ಅವರು ಚುನಾವಣೆಗೆ ಬರಲಿ, ಏನು ಎಂದು ಗೊತ್ತಾಗುತ್ತದೆ. ಒಳ್ಳೆಯ ಕೆಲಸ ಮಾಡುವಾಗ ವಿರೋಧ ಇದ್ದೆ ಇರುತ್ತದೆ ಎಂದರು.
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸೂಕ್ತ ಸಮಯವಲ್ಲ ಎಂದಿದ್ದೇಕೆ ಡಿಕೆಶಿ | Political Updates | Suvarna News
ಸಂಸದರಾಗುವ ಮುನ್ನ ಲಾರಿ ಇಟ್ಟುಕೊಂಡಿದ್ದರು: ಬೆಂಗಳೂರಿನ ಕಸದ ಟೆಂಡರ್ ಮಾಡಲು ಕಿಕ್ ಬ್ಯಾಕ್ ಆರೋಪದ ವಿಚಾರದ ಬಗ್ಗೆ ಮಾತನಾಡಿ, ಯಾವ ಕಿಕ್ ಬ್ಯಾಕ್..? ಹಿಂದೆ ಯಾರು ಕಿಕ್ ಹೊಡೆದಿದ್ದರು, ಯಾರು ಬ್ಯಾಕ್ ಹೊಡಿದ್ದರು ಗೊತ್ತಾ? ಯಾರು ಕಿಕ್ ಬ್ಯಾಕ್ ಕೊಟ್ಟರು ಎಂದು ಹೇಳಬೇಕಲ್ಲ. ಇದನ್ನು ಬೇಕಾದರೆ ಸಿಬಿಐಗೆ ಕೊಡಲಿ. ಪಾಪ ಕುಮಾರಸ್ವಾಮಿಗೆ ಕಸ ಹೊಡೆಯುವ ರೂಡಿ ಇದೆ. ಇಲ್ಲಿ ಕೆಲವರು ಸಂಸದರು ಆಗುವ ಮೊದಲು ಲಾರಿ ಇಟ್ಟುಕೊಂಡಿದ್ದರು ಎಂದು ಡಿ.ಕೆ. ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.