ಪಕ್ಷದ ಕಷ್ಟಕಾಲದಲ್ಲಿ ಶೆಟ್ಟರ್‌ ಕೈ ಹಿಡಿದಿದ್ದಾರೆ, ಅವರನ್ನು ನಾವು ಕೈಬಿಡಲ್ಲ: ಡಿ.ಕೆ.ಶಿವಕುಮಾರ್‌

By Kannadaprabha News  |  First Published Jun 1, 2023, 3:20 AM IST

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಮನೆಗೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬುಧವಾರ ಭೇಟಿ ನೀಡಿದ್ದರು. ಶೆಟ್ಟರ್‌ ಅವರೊಂದಿಗೆ ಗೌಪ್ಯವಾಗಿ ಸಭೆ ನಡೆಸಿರುವ ಅವರು, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಕುರಿತು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 


ಹುಬ್ಬಳ್ಳಿ (ಜೂ.01): ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಮನೆಗೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬುಧವಾರ ಭೇಟಿ ನೀಡಿದ್ದರು. ಶೆಟ್ಟರ್‌ ಅವರೊಂದಿಗೆ ಗೌಪ್ಯವಾಗಿ ಸಭೆ ನಡೆಸಿರುವ ಅವರು, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಕುರಿತು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ, ಶೆಟ್ಟರ್‌ ಜತೆಗೆ ಪಕ್ಷ ಯಾವಾಗಲೂ ಇರುತ್ತದೆ. ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ಈ ಬಗ್ಗೆ ಸಂಶಯಬೇಡ ಎಂಬ ಸಂದೇಶವನ್ನು ಶೆಟ್ಟರ್‌ ಅವರಿಗೆ ರವಾನಿಸಿದರು. ಬೆಳಗಾವಿಯಿಂದ ನೇರವಾಗಿ ಹುಬ್ಬಳ್ಳಿಗೆ ವಿಶೇಷ ವಿಮಾನದ ಮೂಲಕ ಆಗಮಿಸಿದ ಡಿ.ಕೆ.ಶಿವಕುಮಾರ್‌, ಶೆಟ್ಟರ್‌ ನಿವಾಸಕ್ಕೆ ತೆರಳಿದರು.

ಅಲ್ಲಿ ಉಪಾಹಾರ ಸೇವಿಸಿ ಕುಶಲೋಪರಿ ವಿಚಾರಿಸಿ ಮಾತನಾಡಿ, ಬಳಿಕ ಕೆಲಕಾಲ ಶೆಟ್ಟರ್‌ ಹಾಗೂ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಗೌಪ್ಯ ಸಭೆ ನಡೆಸಿದರು. ಪಕ್ಷ ಸಂಘಟನೆ, ಲೋಕಸಭೆ ಚುನಾವಣೆ ಕುರಿತು ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಶೆಟ್ಟರ್‌ ಅವರಿಗೆ ಸ್ಥಾನಮಾನ ನೀಡುವ ಕುರಿತು ಭರವಸೆಯನ್ನೂ ಡಿಕೆಶಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ, ಶೆಟ್ಟರ್‌ ಅವರು ಪಕ್ಷಕ್ಕೆ ಬಂದಿರುವುದರಿಂದ ಈ ಭಾಗದಲ್ಲಿ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ. ಶೆಟ್ಟರ್‌, ಲಕ್ಷ್ಮಣ ಸವದಿ, ಗುಬ್ಬಿ ಶ್ರೀನಿವಾಸ, ಶಿವಲಿಂಗೇಗೌಡರು ಇವರೆಲ್ಲರೂ ಪಕ್ಷಕ್ಕೆ ದೊಡ್ಡ ಶಕ್ತಿಯನ್ನು ತಂದುಕೊಟ್ಟಿದ್ದಾರೆ ಎಂದರು.

Tap to resize

Latest Videos

ಮೋದಿ, ಶಾ ದಂಡೆತ್ತಿ ಬಂದು ಬಿಜೆಪಿಯನ್ನು ಮುಳುಗಿಸಿದರು: ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹೈಕಮಾಂಡ್‌ ಸೂಚನೆ ಮೇರೆಗೆ ಶೆಟ್ಟರ್‌ ಹಾಗೂ ಸವದಿ ಅವರನ್ನು ಭೇಟಿಯಾಗಲು ಬಂದಿದ್ದೆ. ಹೈಕಮಾಂಡ್‌ ಸಂದೇಶವನ್ನು ಶೆಟ್ಟರ್‌ ಅವರಿಗೆ ನೀಡಿದ್ದೇನೆ ಎಂದ ಅವರು, ಏನು ಸಂದೇಶ ಎಂಬುದನ್ನು ಮಾತ್ರ ತಿಳಿಸಲಿಲ್ಲ. ಶೆಟ್ಟರ್‌ ಅವರಿಗೆ ಬಿ ಫಾರಂ ಕೊಟ್ಟಮೇಲೆ ಮಾತನಾಡುವುದಕ್ಕೆ ಆಗಿರಲಿಲ್ಲ. ನಾನೂ ಪ್ರಚಾರದಲ್ಲಿ ಬ್ಯುಜಿಯಾಗಿದ್ದೆ. ಅವರೂ ಬ್ಯುಜಿಯಾಗಿದ್ದರು. ಹೀಗಾಗಿ ಮಾತನಾಡಿಸಿಕೊಂಡು, ಹೈಕಮಾಂಡ್‌ ಸಂದೇಶ ನೀಡಲು ಬಂದಿದ್ದೆ. ಬರೀ ಶೆಟ್ಟರ್‌ ಅವರನ್ನು ಭೇಟಿ ಕಾರ್ಯಕ್ರಮವೊಂದನ್ನು ಇಟ್ಟುಕೊಂಡು ಬಂದಿದ್ದೆ ಎಂದರು.

ಶೆಟ್ಟರ್‌ ಅವರಿಗೆ ಸ್ಥಾನಮಾನ ನೀಡುವ ಕುರಿತು ಕೇಳಿದ ಪ್ರಶ್ನೆಗೆ, ಇದಕ್ಕೆ ನನ್ನದು ಒಂದೇ ಮಾತು. ನಮ್ಮ ಕಷ್ಟಕಾಲದಲ್ಲಿ ನಮ್ಮ ಕೈ ಶೆಟ್ಟರ್‌ ಹಿಡಿದಿದ್ದಾರೆ. ಅವರ ಕೈಯನ್ನು ನಾವು ಹಿಡಿಯುತ್ತೇವೆ. ಪಕ್ಷ ಯಾವಾಗಲೂ ಅವರೊಂದಿಗೆ ಇರುತ್ತದೆ ಎಂದು ಸ್ಪಷ್ಟಪಡಿಸಿದರು. ಶೆಟ್ಟರ್‌ ಅವರು ನಮಗೆ ಮಾರ್ಗದರ್ಶನ, ಶಕ್ತಿ ಕೊಟ್ಟಿದ್ದಾರೆ. ಅದರಿಂದ ರಾಜ್ಯದಲ್ಲಿ ಬದಲಾವಣೆಯಾಯಿತು. ನಾವು ಪ್ರತಿ ಹಂತದಲ್ಲೂ ಸರ್ಕಾರದ ತಪ್ಪು ಮುಂದಿಟ್ಟಿದ್ದೇವೆ. ದೇವರು ವರವನ್ನೂ ಕೊಡುವುದಿಲ್ಲ. ಶಾಪವನ್ನೂ ಕೊಡುವುದಿಲ್ಲ. ಆದರೆ ಅವಕಾಶವನ್ನೂ ಕೊಡುತ್ತಾನೆ. ಆ ಅವಕಾಶ ಈ ಸಲ ಕಾಂಗ್ರೆಸ್ಸಿಗೆ ಸಿಕ್ಕಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇವೆ ಎಂದರು. ಗೌಪ್ಯಸಭೆ ನಡೆಸುವ ಉದ್ದೇಶವೇನು ಎಂಬ ಪ್ರಶ್ನೆಗೆ, ಇಲ್ಲ ನಾನು ಗೌಪ್ಯಸಭೆಯನ್ನೇನೂ ನಡೆಸಿಲ್ಲ ಎಂದರು.

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ: ಶಾಸಕ ಕೆ.ಎಂ.ಉದಯ್‌ ಸೂಚನೆ

ಗ್ಯಾರಂಟಿ: ಇವತ್ತು ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರೆ. ನಾಳೆ ಸಚಿವ ಸಂಪುಟ ಸಭೆಯಿದೆ. ನಾವು ನುಡಿದಂತೆ ನಡೆಯುತ್ತೇವೆ ಎಂದಷ್ಟೇ ಹೇಳುತ್ತೇನೆ ಎಂದು ಕಾಂಗ್ರೆಸ್‌ ಗ್ಯಾರಂಟಿ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೇ ಹೆಬ್ಬಾಳಕರ್‌, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಶಾಸಕ ಎನ್‌.ಎಚ್‌. ಕೋನರಡ್ಡಿ, ಪಕ್ಷದ ಜಿಲ್ಲಾಧ್ಯಕ್ಷರಾದ ಅಲ್ತಾಫ ಹಳ್ಳೂರ, ಅನಿಲಕುಮಾರ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶಗೌಡ ಪಾಟೀಲ, ಸದಾನಂದ ಡಂಗನವರ, ಮುಖಂಡರಾದ ಸತೀಶ ಮೆಹರವಾಡೆ ಸೇರಿದಂತೆ ಹಲವರಿದ್ದರು. ಈ ವೇಳೆ ಶೆಟ್ಟರ್‌ ಅವರು ಡಿ.ಕೆ. ಶಿವಕುಮಾರ, ಜಾರಕಿಹೊಳಿ ಹಾಗೂ ಹೆಬ್ಬಾಳಕರ್‌ ಅವರನ್ನು ಗೌರವಿಸಿದರು.

click me!