ಎಲ್ಲದಕ್ಕಿಂತ ದೊಡ್ಡದು ಪಕ್ಷ ಇದೆ. ಪಕ್ಷ ನಿರ್ಧಾರ ಮಾಡಿದ್ದನ್ನು ಪಾಲಿಸಬೇಕು ಎಂದ ಅವರು, ಸದ್ಯ ರಾಜ್ಯದಲ್ಲಿ ಒಬ್ಬರು ಮುಖ್ಯಮಂತ್ರಿಗಳಿದ್ದಾರೆ. ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಈ ಬಗ್ಗೆ ಚರ್ಚೆ ಅಗತ್ಯವಿಲ್ಲ. ಯಾರೇ ಮುಖ್ಯಮಂತ್ರಿ ಇದ್ದಾಗಲೂ ಈ ತರಹ ಮಾತುಗಳು ಕೇಳಿ ಬರುತ್ತದೆ. ಅವುಗಳನ್ನು ಪಕ್ಷವೇ ಪರಿಹರಿಸುತ್ತದೆ: ಸಚಿವ ಸತೀಶ್ ಜಾರಕಿಹೊಳಿ
ಹುಬ್ಬಳ್ಳಿ(ಸೆ.13): ಪರಮೇಶ್ವರ ಮುಖ್ಯಮಂತ್ರಿ, ಸತೀಶ್ ಜಾರಕಿಹೊಳಿ ಉಪಮುಖ್ಯಮಂತ್ರಿ ಆಗಬೇಕೆಂಬ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ, ಅವರು ಸಾಂದರ್ಭಿಕವಾಗಿ ಹೇಳಿರಬಹುದು. ಆದರೆ ಮುಂದೊಂದು ದೀನ-ದಲಿತರಿಗೆ ಅವಕಾಶ ಸಿಕ್ಕೇ ಸಿಗುತ್ತದೆ. ಕಾಯಬೇಕಷ್ಟೇ ಎಂದು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ಅವರು ಒಳ್ಳೆಯ ದೃಷ್ಟಿಯಿಂದ ಹೇಳಿದ್ದಾರೆ. ಹೇಳಿದ ತಕ್ಷಣ ಯಾವುದು ಆಗುವುದಿಲ್ಲ. ಈ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಎಲ್ಲದಕ್ಕಿಂತ ದೊಡ್ಡದು ಪಕ್ಷ ಇದೆ. ಪಕ್ಷ ನಿರ್ಧಾರ ಮಾಡಿದ್ದನ್ನು ಪಾಲಿಸಬೇಕು ಎಂದ ಅವರು, ಸದ್ಯ ರಾಜ್ಯದಲ್ಲಿ ಒಬ್ಬರು ಮುಖ್ಯಮಂತ್ರಿಗಳಿದ್ದಾರೆ. ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಈ ಬಗ್ಗೆ ಚರ್ಚೆ ಅಗತ್ಯವಿಲ್ಲ. ಯಾರೇ ಮುಖ್ಯಮಂತ್ರಿ ಇದ್ದಾಗಲೂ ಈ ತರಹ ಮಾತುಗಳು ಕೇಳಿ ಬರುತ್ತದೆ. ಅವುಗಳನ್ನು ಪಕ್ಷವೇ ಪರಿಹರಿಸುತ್ತದೆ ಎಂದರು.
ಹರಿಪ್ರಸಾದ್ ನನ್ನ ಹೆಸರು ಎಲ್ಲೂ ಹೇಳಿಲ್ಲ; ನಾನು ಆ ಬಗ್ಗೆ ಮಾತಾಡಲ್ಲ: ಸಿಎಂ ಸಿದ್ದರಾಮಯ್ಯ
ಸಚಿವ ಡಿ.ಸುಧಾಕರ ಅವರ ಮೇಲೆ ದಾಖಲಾದ ಎಫ್ಐಆರ್ ಕುರಿತು ಮಾತನಾಡಿ, ಎಲ್ಲರಿಗೂ ಸಮಾನ ಕಾನೂನು ಇದೆ. ಕಾನೂನು ಅಡಿಯಲ್ಲಿ ಕ್ರಮ ಆಗುತ್ತದೆ. ಎಲ್ಲದಕ್ಕೂ ರಾಜೀನಾಮೆ ಕೊಡಬೇಕು ಎಂದೇನೂ ಇಲ್ಲ. ಸಮಸ್ಯೆ ಗಂಭೀರತೆಯ ಮೇಲೆ ರಾಜೀನಾಮೆ ನೀಡಲಾಗುತ್ತದೆ. ಅದರಂತೆ ಸದ್ಯದ ಪ್ರಕರಣ ಗಂಭೀರವಾಗಿದ್ದರೆ ರಾಜೀನಾಮೆ ಕೊಡಬಹುದು ಎಂದರು.
ಮಹದಾಯಿ ವಿಚಾರವಾಗಿ ರಾಜ್ಯಕ್ಕೆ ಕೇಂದ್ರದಿಂದ ಫಾರೆಸ್ಟ್ ಕ್ಲಿಯರೆನ್ಸ್ ಸಿಕ್ಕಿಲ್ಲ. ಅದು ಬಂದ ತಕ್ಷಣ ರಾಜ್ಯ ಸರ್ಕಾರ ಸಮರ್ಥವಾಗಿದ್ದು, ಯೋಜನೆ ಆರಂಭಿಸಲಾಗುವುದು ಎಂದರು.
ಕಾವೇರಿ ನೀರು ಬಿಡುಗಡೆಗೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಹತ್ತಿರ ಇದ್ದಷ್ಟು ಬಿಟ್ಟಿದ್ದೇವೆ. ಇನ್ನೂ ಹೆಚ್ಚು ಬಿಡುವುದಕ್ಕೆ ಆಗಲ್ಲ ಅಂತ ಸಿಎಂ, ಸಚಿವರು ಹೇಳಿದ್ದಾರೆ. ಸಿಎಂ, ಸಚಿವರು ಕಾನೂನಿನ ಅಡಿಯಲ್ಲಿ ನಿರ್ಧಾರ ಮಾಡುತ್ತಾರೆ ಎಂದರು.
ಜಾತ್ಯಾತೀತ ಹೆಸರಿಟ್ಟುಕೊಂಡು ಕೋಮುವಾದಿಗಳೊಂದಿಗೆ ಸೇರಿಕೊಂಡ ಜೆಡಿಎಸ್: ಸಿಎಂ ಸಿದ್ದರಾಮಯ್ಯ
ಸನಾತನ ಧರ್ಮದ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಸ್ಫೋಟ ಆಗಿದ್ದು ತಮಿಳುನಾಡಲ್ಲಿ. ಅದರಲ್ಲಿ ಕರ್ನಾಟಕಕ್ಕೇನು ಸಂಬಂಧ ಎಂದು ಪ್ರಶ್ನಿಸಿದರು. ಬೆಳಗಾವಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಈಗಾಗಲೇ ಕ್ಷೇತ್ರದಲ್ಲಿ ಚರ್ಚೆ ಆರಂಭವಾಗಿದೆ. ಅಂತಿಮವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಬೇಕಾದರೂ ಮೈತ್ರಿ ಮಾಡಿಕೊಳ್ಳಲಿ. ಆದರೆ ಹೆಚ್ಚು ಸೀಟು ಗೆಲ್ಲುವುದು ಕಾಂಗ್ರೆಸ್ ಎಂದರು.
ನಿಜಗುಣಾನಂದ ಸ್ವಾಮೀಜಿಗೆ ಕೊಲೆ ಬೆದರಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೇಶದಲ್ಲಿ ರಾಜ್ಯದಲ್ಲಿ ಇದು ಹೊಸದೇನಲ್ಲ. ಅದನ್ನೆಲ್ಲ ಮೀರಿ ಕೆಲಸ ಮಾಡಬೇಕಿದೆ. ಹೋರಾಟಗಾರರಿಗೆ ಬೆದರಿಕೆ ಇದ್ದೆ ಇದೆ. ಅವರ ರಕ್ಷಣೆಗೆ ನಮ್ಮ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಇದೆ ಎಂದರು.