ಲೋಕಸಭೆ ಚುನಾವಣೆವರೆಗೆ ಮಾತ್ರ ಕಾಂಗ್ರೆಸ್ಸಿನ ಐದೂ ಗ್ಯಾರಂಟಿ: ಮುಖ್ಯಮಂತ್ರಿ ಚಂದ್ರು

By Kannadaprabha NewsFirst Published Sep 13, 2023, 2:57 PM IST
Highlights

ಪಂಜಾಬ್‌, ದೆಹಲಿಯಲ್ಲಿ ಸಾಮಾನ್ಯ ವ್ಯಕ್ತಿಗಳು ಆಮ್ ಆದ್ಮಿ ಪಕ್ಷವನ್ನು ಸದೃಢಗೊಳಿಸಿ, ಜನರ ವಿಶ್ವಾಸ ಗಳಿಸಿ ಜನ ಮೆಚ್ಚುವ ಆಡಳಿತ ನೀಡುತ್ತಿದ್ದಾರೆ. ರಾಜ್ಯದಲ್ಲಿ ಬದಲಾವಣೆ ಬರಬೇಕಿದೆ. ದೆಹಲಿ, ಪಂಜಾಬ್ ಮಾದರಿ ಆಡಳಿತ ರಾಜ್ಯದಲ್ಲೂ ಬರಬೇಕಿದೆ. ಅದಕ್ಕಾಗಿ ಜನ ಸಾಮಾನ್ಯರ ಪ್ರತಿನಿಧಿಯಾಗಿ ಆಮ್ ಆದ್ಮಿ ಪಕ್ಷಕ್ಕೆ ಮತದಾರರು ಆಶೀರ್ವದಿಸಬೇಕು ಎಂದು ಮನವಿ ಮಾಡಿದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು

ದಾವಣಗೆರೆ(ಸೆ.13):  ಕಾಂಗ್ರೆಸ್ ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆವರೆಗಷ್ಟೇ ಇರಲಿದ್ದು, ಆ ನಂತರ ಗ್ಯಾರಂಟಿ ಯೋಜನೆಗಳೇ ಇರುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ್ದ ಐದೂ ಗ್ಯಾರಂಟಿ ಯೋಜನೆ ಪೈಕಿ ಜಾರಿಗೊಂಡ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ. ಫಲಾನುಭ‍ವಿಗಳಿಗೆ ಇಲ್ಲಸಲ್ಲದ ಮಾಹಿತಿ, ದಾಖಲೆ ಕೇಳಿ ಸೌಲಭ್ಯ ತಪ್ಪಿಸಲಾಗುತ್ತಿದೆ ಎಂದರು.

ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ: ರೇಣುಕಾಚಾರ್ಯ ವಿರುದ್ಧ ರಾಜ್ಯ ಸಮಿತಿಗೆ ದೂರು

ಗೃಹಲಕ್ಷ್ಮಿ ಯೋಜನೆಯಡಿ ಇಬ್ಬರು ಮಹಿಳೆಯರಿಗೆ ಹಣ ಬಂದಿದ್ದರೆ, ಉಳಿದ 8 ಜನರಿಗೆ ಹಣವೇ ಬಂದಿಲ್ಲ. ಆಮ್ ಆದ್ಮಿ ಪಕ್ಷ ದೆಹಲಿ, ಪಂಜಾಬ್‌ ರಾಜ್ಯಗಳಲ್ಲಿ ಜಾರಿಗೊಳಿಸಿದ್ದ ಉಚಿತ ಯೋಜನೆಗಳು ಜನರಿಗೆ ಯಾವುದೇ ಹೊರೆ ಆಗದಂತೆ, ಸೋರಿಕೆ ತಪ್ಪಿಸಿ ಬಂದ ಆದಾಯದಲ್ಲಿ ಜನರಿಗೆ ಸೌಲಭ್ಯ ನೀಡಲಾಗುತ್ತಿದೆ. ಆಮ್ ಆದ್ಮಿ ಆಡಳಿತದ ಎರಡೂ ರಾಜ್ಯದಲ್ಲಿ ಉಳಿತಾಯ ಬಜೆಟ್ ಮಂಡಿಸಿದ್ದು ತಮ್ಮ ಪಕ್ಷದ ಹೆಗ್ಗಳಿಕೆ ಎಂದು ತಿಳಿಸಿದರು.

ಪಂಜಾಬ್‌, ದೆಹಲಿಯಲ್ಲಿ ಸಾಮಾನ್ಯ ವ್ಯಕ್ತಿಗಳು ಆಮ್ ಆದ್ಮಿ ಪಕ್ಷವನ್ನು ಸದೃಢಗೊಳಿಸಿ, ಜನರ ವಿಶ್ವಾಸ ಗಳಿಸಿ ಜನ ಮೆಚ್ಚುವ ಆಡಳಿತ ನೀಡುತ್ತಿದ್ದಾರೆ. ರಾಜ್ಯದಲ್ಲಿ ಬದಲಾವಣೆ ಬರಬೇಕಿದೆ. ದೆಹಲಿ, ಪಂಜಾಬ್ ಮಾದರಿ ಆಡಳಿತ ರಾಜ್ಯದಲ್ಲೂ ಬರಬೇಕಿದೆ. ಅದಕ್ಕಾಗಿ ಜನ ಸಾಮಾನ್ಯರ ಪ್ರತಿನಿಧಿಯಾಗಿ ಆಮ್ ಆದ್ಮಿ ಪಕ್ಷಕ್ಕೆ ಮತದಾರರು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಆಮ್ ಆದ್ಮಿ ಪಕ್ಷದ ಮುಖಂಡರಾದ ಉಮಾ ಶಂಕರ್‌, ಶಿವಕುಮಾರಪ್ಪ, ಅರುಣಕುಮಾರ, ಗಣೇಶ ದುರ್ಗದ, ಆದಿಲ್ ಖಾನ್‌, ಕೆ.ರವೀಂದ್ರ, ಕೆ.ಎಲ್.ರಾಘವೇಂದ್ರ, ಸುರೇಶ, ಅಜಿತ್‌, ಬಸವರಾಜ ಇತರರಿದ್ದರು. 

ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲೂ ಗುತ್ತಿಗೆದಾರರಿಗೆ ಬಿಲ್ ಮಾಡಿಕೊಡಲು, ಅಧಿಕಾರಿಗಳಿಗೆ ಆಯಕಟ್ಟಿನ ಸ್ಥಳಗಳಿಗೆ ವರ್ಗಾಯಿಸಲು, ವಿವಿಧ ಹುದ್ದೆಗಳ ನೇಮಕಾತಿಗೆ, ವಿವಿಧ ಕೆಲಸಗಳಿಗೆ ಹಣ ಇಲ್ಲದೇ ಯಾವ ಕೆಲಸವೂ ಆಗದ ಸ್ಥಿತಿ ಇದೆ ಎಂದು ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ. 

ಕುಟುಂಬ ರಾಜಕಾರಣದ ಜೆಡಿಎಸ್‌ ಜೊತೆಯೇ ಬಿಜೆಪಿ ಮೈತ್ರಿ

ರಾಜ್ಯದಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್ ಪಕ್ಷಗಳು ಬೊಕ್ಕಸವನ್ನು ಲೂಟಿ ಮಾಡಿವೆ. ಇದೀಗ ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು, ಕ್ಷೇತ್ರಗಳ ಹಂಚಿಕೆಯಲ್ಲಿ ತೊಡಗಿವೆ. ಕುಟುಂಬ ರಾಜಕಾರಣಕ್ಕೆ ಅ‍ವಕಾಶ ಇಲ್ಲವೆಂದು ಹೇಳುತ್ತಾ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಕುಟುಂಬ ರಾಜಕಾರಣದ ಪಕ್ಷದ ಜೊತೆಗೆ ಕೈಜೋಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ಟೀಕಿಸಿದರು.

ಪಕ್ಷದ ಪದಾಧಿಕಾರಿಗಳಿಂದ ಸಾರ್ವಜನಿಕರೊಂದಿಗೆ ಚರ್ಚೆ

ದಾವಣಗೆರೆ: ಜನರ ಸಮಸ್ಯೆಗಳ ಅರಿಯುವ ಸಲುವಾಗಿ ಗ್ರಾಮಾಂತರ ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷದಿಂದ ಸೇರೋಣ ಬನ್ನಿ, ಮಾತಾಡೋಣ ಸಂವಾದ ಕಾರ್ಯಕ್ರಮ ಜಿಲ್ಲೆಯಲ್ಲಿ ಸೆ.12ರಿಂದ ಆರಂಭಿಸಿದ್ದು, ದಾವಣಗೆರೆ ತಾಲೂಕು ಮಾಯಕೊಂಡ ಮೀಸಲು ಕ್ಷೇತ್ರದ ವಡ್ಡಿನಹಳ್ಳಿ ಗ್ರಾಮದಲ್ಲಿ ಸಂವಾದ ಹಮ್ಮಿಕೊಂಡಿದ್ದೇವೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ಬಿಜೆಪಿಯ ಮಾಜಿ ಉಚ್ಚಾಟಿತ ಶಾಸಕ ಸಿದ್ದನಗೌಡ ಹಾಗೂ ವಿರೂಪಾಕ್ಷಪ್ಪ ಜೊತೆ ರೇಣುಕಾಚಾರ್ಯ ಮಾತುಕತೆ: ಯಾಕೆ

ಸ್ಥಳೀಯ ನಾಗರಿಕರು, ರೈತರು, ಜನ ಸಾಮಾನ್ಯರ ಕುಂದು ಕೊರತೆಗಳ ನೇರವಾಗಿ ತಿಳಿಯಲು ಸಂವಾದ ಹಮ್ಮಿಕೊಳ್ಳಲಾಗುತ್ತಿದೆ. ಮುಂಬರುವ ಗ್ರಾಪಂ, ತಾಪಂ, ಜಿಪಂ ಚುನಾವಣೆಗಳು, ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಗ್ಗೆ ಸಾರ್ವಜನಿಕರೊಂದಿಗೆ ಪಕ್ಷದ ಪದಾಧಿಕಾರಿಗಳು ಸಂವಾದದಲ್ಲಿ ಭಾಗವಹಿಸುವರು ಎಂದರು.

ರೈತರ ಶ್ರಮಕ್ಕೆ ತಕ್ಕ ಬೆಲೆ ಸಿಗದಿದ್ದರೆ, ರೈತರ ಋಣ ತೀರಿಸಲು ಸಾಧ್ಯವೇ? ಮಹಿಳೆಯರಿಗೆ ಸಮಾನ ಅವಕಾಶ ಇಲ್ಲದೇ, ಸಮಾಜದ ಏಳಿಗೆ ಸಾಧ್ಯವೇ? ಭ್ರಷ್ಟಾಚಾರ ತಾಂಡವವಾಡುತ್ತಿದ್ದರೆ, ಶಿಷ್ಟಾಚಾರದ ಜೀವನ ಸಾಧ್ಯವೇ? ಯುವಕರಿಗೆ ಅ‍ವಕಾಶ, ಉದ್ಯೋಗ, ಕಲ್ಪಿಸದೇ, ದೇಶದ ಅಭಿವೃದ್ಧಿ ಸಾಧ್ಯವೇ ಹೀಗೆ ಹಲವು ವಿಷಯಗಳ ಬಗ್ಗೆ ಸಂವಾದದಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

click me!