ಗ್ಯಾರಂಟಿ ದುಡ್ಡು ಹೊಡೆಯೋದೇ ಕಾಂಗ್ರೆಸ್‌ ಯೋಚನೆ: ಈಶ್ವರಪ್ಪ ವಾಗ್ದಾಳಿ

By Kannadaprabha News  |  First Published Sep 13, 2023, 3:39 PM IST

ರಾಜ್ಯದಲ್ಲಿ ಕಂದಾಯ ಇಲಾಖೆ ಸತ್ತು ಹೋಗಿದೀಯಾ? ಎಲ್ಲೆಲ್ಲಿ ಬರಗಾಲ, ಅತಿವೃಷ್ಟಿಯಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೀರಾ? ಯಾವುದೇ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಕಷ್ಟ ಆಲಿಸುತ್ತಿಲ್ಲ. ರೈತರ ಶಾಪ ನಿಮಗೆ ತಟ್ಟುತ್ತದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಮಾಜಿ ಸಚಿವ‌ ಕೆ.ಎಸ್.ಈಶ್ವರಪ್ಪ


ಶಿವಮೊಗ್ಗ(ಸೆ.13):  ರೈತರ ಹೊಲ-ಗದ್ದೆಗಳಿಗೆ ಹೋಗಿ ರೈತರ ಸಂಕಷ್ಟಗಳನ್ನು ಕೇಳಬೇಕಾದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳೇ ಗ್ಯಾರಂಟಿ ಯೋಜನೆಗಳ ಮೂಲಕ ದುಡ್ಡು ಹೇಗೆ ಹೊಡೆಯಬೇಕು ಎಂದು ಯೋಚಿಸುತ್ತಿದ್ದಾರೆ‌ ಎಂದು‌ ಮಾಜಿ ಸಚಿವ‌ ಕೆ.ಎಸ್.ಈಶ್ವರಪ್ಪ ಆರೋಪಿಸಿದರು. ಜಿಲ್ಲಾ ಬಿಜೆಪಿ ರೈತ‌ ಮೋರ್ಚಾ ವತಿಯಿಂದ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 130 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರದ ವರದಿಯೇ ಹೇಳುತ್ತಿದೆ. ನೀವು ಕೊಡುವ ಭಿಕ್ಷೆಗೆ ಆತ್ಮಹತ್ಯೆ ಮಾಡಿಕೊಳ್ಳುವ ದುರ್ಗತಿ ರೈತರಿಗೆ ಬಂದಿಲ್ಲ. ರಾಜ್ಯದಲ್ಲಿ ಮಳೆಯಾಗಿಲ್ಲ. ಬರಗಾಲದ ಅಧ್ಯಯನ ಮಾಡುವುದಕ್ಕೆ ಸರ್ಕಾರಕ್ಕೆ ಎಷ್ಟು ದಿನ ಬೇಕು? ಕಳೆದ ತಿಂಗಳೇ ಘೋಷಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ‌ ನೀಡಿದ್ದರು ಎಂದರು.

Tap to resize

Latest Videos

ಚೈತ್ರಾ ಕುಂದಾಪುರ ಅರೆಸ್ಟ್‌: ಅನಗತ್ಯವಾಗಿ‌ ಹಿಂದೂಪರ ಕಾರ್ಯಕರ್ತರಿಗೆ ತೊಂದರೆ ಕೊಡೋದು ಸರಿಯಲ್ಲ, ಜ್ಞಾನೇಂದ್ರ

ರಾಜ್ಯದಲ್ಲಿ ಕಂದಾಯ ಇಲಾಖೆ ಸತ್ತು ಹೋಗಿದೀಯಾ? ಎಲ್ಲೆಲ್ಲಿ ಬರಗಾಲ, ಅತಿವೃಷ್ಟಿಯಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೀರಾ? ಯಾವುದೇ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಕಷ್ಟ ಆಲಿಸುತ್ತಿಲ್ಲ. ರೈತರ ಶಾಪ ನಿಮಗೆ ತಟ್ಟುತ್ತದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಸಿಎಂ ಕಚೇರಿ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಕಾಂಗ್ರೆಸ್‌ನವರು ದುಡ್ಡು ಹೊಡೆಯೋದರಲ್ಲಿ ನಿಸ್ಸೀಮರು. ಎಲ್ಲ ಟ್ರಾನ್ಸಫರ್ ನಾನೇ ಮಾಡುತ್ತೇನೆ ಎಂದು ಸಿಎಂ ಹೇಳುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಸರ್ಕಾರ ಐದು ಗ್ಯಾರಂಟಿಗಳಿಂದ ಜನರಿಗೆ ಟೋಪಿ ಹಾಕುತ್ತಿದ್ದಾರೆ. ಗ್ಯಾರಂಟಿ ಯೋಜನೆ ಮೂಲಕ ದುಡ್ಡು ಹೊಡೆಯುದಕ್ಕೆ ನಿಂತಿದ್ದಾರೆ. ಲೂಟಿ ಹೊಡೆಯುವುದು ಲೆಕ್ಕಕ್ಕೆ ಸಿಗಬಾರದು ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ವಿದ್ಯುತ್ ಅಭಾವವಿದೆ. ಬೇರೆ ರಾಜ್ಯದಿಂದ ವಿದ್ಯುತ್ ಖರೀದಿ ಮಾಡುವ ಬಗ್ಗೆಯೂ ಯೋಚಿಸಿಲ್ಲ. ಗೃಹಲಕ್ಷ್ಮೀ ಯೋಜನೆ ನಿಲ್ಲಿಸಿದ್ದೇವೆ ಎಂದು ಮೊದಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳ್ತಾರೆ, ಆಮೇಲೆ ಇಲ್ಲ ನಿಲ್ಸಿಲ್ಲ ಅಂತಾರೇ. ರಾಜ್ಯದಲ್ಲಿ 6.5 ಕೋಟಿ ಜನ ಇದ್ದಾರೆ. ನ್ಯಾಯವಾಗಿ 1.5 ಕೋಟಿ ಜನರಿಗೆ ನಿಜವಾಗಿ ಕೊಡಬೇಕು. ಆದರೆ ಸರ್ಕಾರ ಅವರೆಲ್ಲರಿಗೂ ಪಂಗನಾಮ ಹಾಕಿದೆ ಎಂದರು.

ಬರುವ ದಿನಗಳಲ್ಲಿ ಸಚಿವರು, ಶಾಸಕರ ಮನೆ ಮುಂದೆ ಧರಣಿ ಮಾಡಲಾಗುವುದು. ಶಿವಮೊಗ್ಗದಲ್ಲಿ ಆಶ್ರಯ ಯೋಜನೆಯಡಿ ಎರಡು ತಿಂಗಳಲ್ಲಿ ಮನೆ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಮೂರು ಸಾವಿರ ಜನರನ್ನೂ ಕರೆದುಕೊಂಡು ಜಿಲ್ಲೆಗೆ ಬರುವ ಸಚಿವರಿಗೆ ಘೇರಾವ್ ಹಾಕಲಾಗುವುದು. ಜೈಲ್ ಭರೋ ಕಾರ್ಯಕ್ರಮ ನಡೆಸಲಾಗುವುದು. ಡಿಕೆಶಿ, ಸಿದ್ದರಾಮಯ್ಯ ಬಂದರೆ ಮುತ್ತಿಗೆ ಹಾಕುತ್ತೇವೆ ಎಂದರು.

ಕಣ್ಣು, ಕಿವಿ, ಬಾಯಿ ಇಲ್ಲದ ಸರ್ಕಾರ: ಸಂಸದ ರಾಘವೇಂದ್ರ

ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಈಗಾಗಲೆ ಸರ್ಕಾರಕ್ಕೆ ನೂರು ದಿನ ದಾಟಿದೆ. ಈ ಸಮಯದಲ್ಲಿ ಸರ್ಕಾರ ಏನು ಸಾಧನೆ ಮಾಡಿದೆ ಎಂಬುದನ್ನು ನೋಡಿದ್ದೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಬರ ಬರುತ್ತದೆ ಎಂಬುದು ಮತ್ತೆ ಮತ್ತೆ ನಿಜವಾಗುತ್ತಿದೆ ಎಂದರು.

ಸಿದ್ದರಾಮಯ್ಯ ಮೊದಲಸಲ ಗೂಟದ ಕಾರು ಹತ್ತಿದ್ದು ಬಿಜೆಪಿ ಬೆಂಬಲದಿಂದ: ಈಶ್ವರಪ್ಪ ತಿರುಗೇಟು

ರೈತರಿಗೆ ನೀರು, ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುತ್ತಿತ್ತು. ಒಂದು ಕಡೆ ಗ್ಯಾರಂಟಿ ನೀಡುತ್ತಾ, ಇನ್ನೊಂದು ಕಡೆ ತೆರಿಗೆ ಹಾಕುತ್ತಿದ್ದಾರೆ. ₹5 ಲಕ್ಷಕ್ಕಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಪುಟ ಸಚಿವರೊಬ್ಬರು ಹಗುರವಾದ ಹೇಳಿಕೆ ನೀಡುತ್ತಾರೆ. ಬಿಜೆಪಿ ಪಕ್ಷದಿಂದಲೇ ₹3 ಕೋಟಿ ಜೋಡಿಸಿ ಕೊಡುತ್ತೇವೆ. ಅದನ್ನು ಬಳಸಿಕೊಳ್ಳಿ. ಕಣ್ಞು, ಕಿವಿ, ಬಾಯಿ ಇಲ್ಲದ ಸರ್ಕಾರಕ್ಕೆ ಎಚ್ಚರಿಸುವ ಕೆಲಸವನ್ನು ಈ ಪ್ರತಿಭಟನೆಯಿಂದ ಮಾಡುತ್ತಿದ್ದೇವೆ. ಇದಕ್ಕೆ ಸರ್ಕಾರ ಅವಕಾಶ ನೀಡಬಾರದು. ರೈತರಿಗೆ ಕೇಂದ್ರದಿಂದ ಮಾಡಬೇಕಾದ ಎಲ್ಲ ಸಹಾಯ ಮಾಡಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಹಾಗೂ ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕ ಅಶೋಕ್ ನಾಯ್ಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಪ್ರಮುಖರಾದ ಎಸ್‌.ದತ್ತಾತ್ರಿ, ಮಂಜುಳಾ ಸೇರಿದಂತೆ ಹಲವರಿದ್ದರು.

click me!