60 ವರ್ಷ ವೋಟ್‌ ಬ್ಯಾಂಕ್‌ಗೆ ಸೀಮಿತವಾಗಿಟ್ಟಿದ್ದ ಎಸ್‌ಸಿ, ಎಸ್ಟಿ ಸಮುದಾಯದ ಶಾಪ ಕಾಂಗ್ರೆಸ್‌ಗೆ ತಟ್ಟುತ್ತಿದೆ: ಸಿಎಂ ಬೊಮ್ಮಾಯಿ

By Sathish Kumar KH  |  First Published Nov 20, 2022, 3:28 PM IST

ರಾಜ್ಯದಲ್ಲಿ ಅರವತ್ತು ವರ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಜನರನ್ನು ವೋಟ್‌ ಬ್ಯಾಂಕ್‌ ಮಾಡಿಕೊಂಡು ಬಳಸಿಕೊಂಡರು. ಹೀಗಾಗಿಯೇ ಎಸ್‌ಸಿ, ಎಸ್‌ಟಿಯವರ ಶಾಪ ಕಾಂಗ್ರೆಸ್ ಗೆ ತಟ್ಟುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.


ಬಳ್ಳಾರಿ (ನ.20): ರಾಜ್ಯದಲ್ಲಿ ಅರವತ್ತು ವರ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಜನರನ್ನು ವೋಟ್‌ ಬ್ಯಾಂಕ್‌ ಮಾಡಿಕೊಂಡು ಬಳಸಿಕೊಂಡರು. ಹೀಗಾಗಿಯೇ ಎಸ್‌ಸಿ, ಎಸ್‌ಟಿಯವರ ಶಾಪ ಕಾಂಗ್ರೆಸ್ ಗೆ ತಟ್ಟುತ್ತಿದೆ. ಇನ್ನು ಮುಂದೆ ವೋಟ್‌ ಬ್ಯಾಂಕ್‌ ರಾಜಕಾರಣ ನಡೆಯುವುದಿಲ್ಲ. ಎಸ್‌ಟಿ ಸಮಾವೇಶದ ಮೂಲಕ 2023ರಲ್ಲೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಳ್ಳಾರಿಯಲ್ಲಿ ನಡೆದ ಎಸ್‌ಟಿ ನವಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಅರವತ್ತು ವರ್ಷ ಆಳ್ವಿಕೆ (Reign)ಮಾಡಿ ಏನು ಮಾಡಿದ್ದೀರಿ. ನಮ್ಮಿಂದಲೇ ಎಸ್‌ಟಿ ಸಮುದಾಯ (ST Community) ಅಭಿವೃದ್ಧಿ ಎಂದು ಹೇಳಿಕೊಂಡು ಸುತ್ತಾಡುವ ನಾಯಕರು ಏನು ಮಾಡಿದ್ದಾರೆ. ಕೇವಲ ವೋಟ್‌ ಬ್ಯಾಂಕ್‌ (Vote Bank) ಮಾಡಿಕೊಂಡು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಅನ್ಯಾಯ (Injustice) ಮಾಡಿದ ಪ್ರತಿಫಲವೇ ನಿಮಗೆ ಶಾಪವಾಗಿ ಕಾಡಲಿದೆ. ಇನ್ನು ಮುಂದೆ ನಿಮ್ಮ ವೋಟ್‌ ಬ್ಯಾಂಕ್‌ ರಾಜಕಾರಣದ ನಾಟಕ ಹಾಗೂ ದ್ರೋಹ ನಡೆಯುವುದಿಲ್ಲ. ಜನರು‌ ಜಾಗೃತರಾಗಿದ್ದು, ಅಹಿಂದ ನಾಯಕನ ಹಿಂದೆ ಹೋಗೋದಿಲ್ಲ. ಅಹಿಂದ ಮುಖವಾಡ (Mask) ಹಾಕಿಕೊಂಡು ಏನು ಮಾಡಿದ್ದೀರಿ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

Tap to resize

Latest Videos

undefined

Ballari ST Convention: ನಮ್ಮ ಜನಾಂಗದ ಋಣ ತೀರಿಸಿದ್ದೇನೆ- ಸಚಿವ ಶ್ರೀರಾಮುಲು

ರಾಷ್ಟ್ರಪತಿಯನ್ನು ಒಪ್ಪಿಕೊಳ್ಳಲಿಲ್ಲ: ದೇಶದಲ್ಲಿ ಎಸ್‌ಟಿ ಸಮುದಾಯದ ದ್ರೌಪದಿ  ಮುರ್ಮು (Droupadi murmu) ಅವರನ್ನು ರಾಷ್ಟ್ರಪತಿ ಮಾಡುವುದಕ್ಕೆ ಕಾಂಗ್ರೆಸ್ ಒಪ್ಪಿಕೊಳ್ಳಲಿಲ್ಲ. ಅವರ ವಿರುದ್ಧ ಅಬ್ದುಲ್‌ ಕಲಾಲ್‌ ಅವರನ್ನು ಸ್ಪರ್ಧೆ ಮಾಡುವಂತೆ ಮಾಡಿದರು. 60 ವರ್ಷ ಹೀಗೆಯೇ ತಳ ಸಮುದಾಯ ಜನರನ್ನು ಬಳಸಿಕೊಂಡಿದ್ದಾರೆ. ಭಾರತ ಜೋಡೋ ಕುರಿತು ಸಣ್ಣ ಮೈದಾನದಲ್ಲಿ ಸಭೆ ನಡೆಸಿ ಅದನ್ನೇ ಸುನಾಮಿ (Tsunami) ಎಂದು ಹೇಳಿದರು. ಇಲ್ಲಿ ಬಂದು ನೋಡಿ ಈ ಸುನಾಮಿಗೆ ಕೊಚ್ಚಿಕೊಂಡು ಹೋಗುತ್ತೀರಿ. ಬಳ್ಳಾರಿಯಲ್ಲಿ ಸೋನಿಯಾ ಸ್ಪರ್ಧೆ ಮಾಡಿದಾಗ ನೀಡಿದ್ದ ಪ್ಯಾಕೇಜ್ (Package) ಏನಾಯಿತು. ಬಳ್ಳಾರಿ ಜನರು ಗೆಲ್ಲಿಸಿದರೂ ಅವರಿಗೆ ಒಂದು ಕೃತಜ್ಞತೆ ಹೇಳಲಿಲ್ಲ ಜೊತೆಗೆ ಮೂರು ಕಾಸಿನ ಅಭಿವೃದ್ಧಿಯೂ (Devolopment) ಮಾಡಲಿಲ್ಲ. ಬಳ್ಳಾರಿ ಜನರಿಗೆ ಮೋಸ (Cheating) ಮಾಡಿದ ಕಾಂಗ್ರೆಸ್ ವಿರುದ್ಧ, ಹತ್ತಕ್ಕೆ ಹತ್ತು ಪಕ್ಷ ಕಮಲ ಅರಳುವಂತೆ ನೀವು ಮಾಡಬೇಕು ಎಂದು ಮನವಿ ಮಾಡಿದರು.

ಸ್ನೇಹಕ್ಕೂ ಸೈ, ಹೋರಾಟಕ್ಕೂ ಸೈ: ವಾಲ್ಮೀಕಿ ನಾಯಕರು ಅಂದ್ರೆ ಅವರು ನಿಜವಾದ ನಾಯಕರು. ಸ್ನೇಹಕ್ಕೂ (Friendship) ಸೈ ಮತ್ತು ಹೋರಾಟಕ್ಕೂ (Fight) ಸೈ ಎಂದು ವಾಲ್ಮೀಕಿ ಸಮುದಾಯ ಹೇಳುತ್ತದೆ. ಈ ಎಸ್ಟಿ ಸಮಾವೇಶ ಮೂಲಕ 2023ರ ಚುನಾವಣೆಯ ಮತ್ತೊಮ್ಮೆ ಬಿಜೆಪಿ (BJP) ತರಬೇಕು. ಎಸ್ಸಿ ಎಸ್ಟಿ ಸಮುದಾಯಕ್ಕೆ ಮತ್ತಷ್ಟು ಸೇವೆ ಮಾಡಲು ಆಯ್ಕೆ ಮಾಡಬೇಕು. ಇದು ಪರಿವರ್ತನೆ , ಸಮುದಾಯ ಬದುಕು ಬದಲಾವಣೆಯಾಗೋ ಸಮಾವೇಶ ಆಗಬೇಕು. ಮೋದಿ ಹಾಕಿಕೊಟ್ಟ ‌'ಸಬ್ ಕೆ ಸಾಥ್ ಸಬ್ ಕೆ‌ ವಿಕಾಸ' ಮಾದರಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಮೀಸಲಾತಿ ಹೆಚ್ಚಿಸಲು ನನಗೆ ವಾಲ್ಮೀಕಿ (Valmiki) ಗುರುಗಳು ಸ್ಫೂರ್ತಿ ಆಗಿದ್ದಾರೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಈ ಮೀಸಲಾತಿ ಅನುಕೂಲ ಆಗಲಿದೆ ಎಂದು ಹೇಳಿದರು.

ಎಸ್‌ಟಿ ಸಮಾವೇಶ ಕಾಂಗ್ರೆಸ್‌ ನಾಯಕರಿಗೆ ಉತ್ತರ ನೀಡಲಿದೆ: ಶ್ರೀರಾಮುಲು

ವಾಲ್ಮೀಕಿ ಸಮುದಾಯ ಶ್ರೀರಾಮನಂತೆ: ದೇಶದಲ್ಲಿ ವಾಲ್ಮೀಕಿ ರಾಮಾಯಣ (Ramayana)  ಶ್ರೇಷ್ಠ ಗ್ರಂಥವಾಗಿದೆ. ರಾಮ ಅಂದರೆ ಕೊಟ್ಟ ಮಾತನ್ನು ನೆರೆವರೆಸೋನು ಎಂಬುದು ಅರ್ಥ. ಈ ಶ್ರೀರಾಮನಂತೆ ವಾಲ್ಮೀಕಿ ಸಮಯದದ ಜನರು ಇದ್ದಾರೆ. ಬ್ರಿಟಿಷರ ವಿರುದ್ಧ ವಾಲ್ಮೀಕಿ ಸಮುದಾಯ ಹೋರಾಟ ಮಾಡಿದೆ. ವಿಜಯನಗರ ಕಾಲದಲ್ಲಿ ಬಹುಮನಿ ಸುಲ್ತಾನನನ್ನು ಸೋಲಿಸಿದ್ದಾರೆ. ಸ್ವಾತಂತ್ರದಲ್ಲಿ ರಾಜವೆಂಕಟಪ್ಪ ನಾಯಕ ಪಾತ್ರ ಅಮೂಲ್ಯವಾದುದು. ಹೈದರಾಲಿ ಮೋಸದಿಂದ ಕೊಲ್ಲಲು ಬಂದಾಗ ಶೌರ್ಯ ಮರೆದಿದ್ದು ಮದಕರಿ ನಾಯಕ. ಬೇಡರ ಕುಲದ ಏಕಲವ್ಯ ಕೂಡ ಶ್ರೇಷ್ಠ ನಾಯಕನಾಗಿದ್ದಾನೆ. ಅಂತಹ ಸಮುದಾಯದ ಅಭಿವೃದ್ಧಿ ಸಮಾಜಕ್ಕೆ ಪೂರಕವಾಗಲಿದೆ ಎಂದರು.

ಶ್ರೀರಾಮುಲು ಸಿಎಂ ಆಗುವ ಕಾಲ ಸನ್ನಿಹಿತ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರ್ಕಾರ ಕೇವಲ ಅನುದಾನ ಕೊಟ್ಟರೆ ಸಾಲುವುದಿಲ್ಲ. ತಳ ಸಮುದಾಯದ ಅಭಿವೃದ್ಧಿಗಾಗಿ ನಮ್ಮ ಸರ್ಕಾರದಿಂದ ಎಸ್ಇಪಿ, ಟಿಎಸ್‌ಪಿಗೆ (SEP-TSP) ಅತಿ ಹೆಚ್ಚು ಅನುದಾನ ನೀಡಿದ್ದೇವೆ. ಆದರೆ, ಕಾಂಗ್ರೆಸ್‌ ಅಧಿಕಾರದಲ್ಲಿದ್ದ ವೇಳೆ ಎಸ್‌ಇಪಿ ಮತ್ತು ಟಿಎಸ್‌ಪಿಗೆ ಅನುದಾನವನ್ನೇ ನೀಡಲಿಲ್ಲ. ಸಮಾಜ ಕಲ್ಯಾಣ ಇಲಾಖೆಗೆ ಅತಿಹೆಚ್ಚು ಅನುದಾನ ನೀಡಿದ್ದೇವೆ. ಸ್ವಾಮೀಜಿ (Swamiji) ಪಾದಯಾತ್ರೆ ಮಾಡಿದಾಗ ನಿಮ್ಮದೇ ಸರ್ಕಾರ ಅಧಿಕಾರದಲ್ಲಿ ಇದ್ದರೂ ಮೀಸಲಾತಿ ನೀಡಲಿಲ್ಲ. ಮೀಸಲಾತಿ ಹೆಚ್ಚಿಸುವ ಬಗ್ಗೆ ಪ್ರಮಾಣ ಮಾಡಿದ ಶ್ರೀರಾಮುಲುಗೆ (Sriramulu) ಅವಮಾನ ಮಾಡಿದರು. ತನ್ನ ಮಾತಿಗೆ ಬದ್ದರಾಗಿದ್ದ ಶ್ರೀರಾಮುಲು ರಕ್ತ ಪವಿತ್ರ ರಕ್ತ. ಜನರ ಭಾವನೆಯಿಂದ ಶ್ರೀರಾಮುಲು ಗೆದ್ದಿದ್ದಾರೆ. ಶ್ರೀ ರಾಮುಲು ಪೆದ್ದ ಎಂದು ಹೇಳುವ ಸಿದ್ದರಾಮಯ್ಯ (Siddaramaiah)  ಅವರೇ ಹಾಲುಮತ ಸಮುದಾಯಕ್ಕೂ ನ್ಯಾಯ ಕೊಡಿಸಲು ಸಾಧ್ಯವಾಗದ ನೀವು ಬುದ್ಧಿವಂತರಾ?  ಶ್ರೀರಾಮುಲು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುವ  ಕಾಲ ಬಂದೇ ಬರುತ್ತದೆ. ಕಾಂಗ್ರೆಸ್‌ ಕಿತ್ತೆಸೆದು ಪಾಠಕಲಿಸಬೇಕಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. 

ಬಳ್ಳಾರಿಯಲ್ಲಿ ಇಂದು ಬಿಜೆಪಿ ಎಸ್‌ಟಿ ರ‍್ಯಾಲಿ, ಮೀಸಲಾತಿ ಹೆಚ್ಚಳ ಬಳಿಕ ಮೊದಲ ಸಮಾವೇಶ

ದಲಿತರಿಗೆ ಉನ್ನತ ಸ್ಥಾನ ನೀಡೋದು ಬಿಜೆಪಿ ಮಾತ್ರ: ರಾಜಕೀಯದಲ್ಲಿ ಮೀಸಲಾತಿ ಹೆಚ್ಚಳ ಮಾಡಿರುವುದು ವಿಶೇಷವಾಗಿದೆ. ದೇಶದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದಲಿತರ ಪರ ನಿಂತಿದ್ದಾರೆ. ಬಿಜೆಪಿ ದಲಿತ ಮಹಿಳೆಯನ್ನು ರಾಷ್ಟಪತಿ (President) ಮಾಡಿದೆ. ಕಾಂಗ್ರೆಸ್‌ಗೆ ದಲಿತರು ಯಾಕೆ ನೆನಪಾಗಲಿಲ್ಲ ಅವರಿಗೆ ಯಾಕೆ ಉನ್ನತ ಸ್ಥಾನ (High position) ನೀಡಲಿಲ್ಲ. ಬಿಜೆಪಿಯಿಂದ ಮುಂಡಾ ಅವರನ್ನು ಎರಡು ‌ಮುಖ್ಯಮಂತ್ರಿ ಮಾಡಿದೆ. ರಾಜಕೀಯದಲ್ಲಿ ದಲಿತರಿಗೆ ಉನ್ನತ ಸ್ಥಾನ ಕೊಡೋದು ಬಿಜೆಪಿ ಮಾತ್ರ ಬೇರೆ ಯಾರಿಗೂ ಇದು ಸಾಧ್ಯವಿಲ್ಲ. ಆದಿವಾಸಿ, ದಲಿತ,  ಹಿಂದೂಳಿದವರಿಗೆ ಮೋದಿ ಸರ್ಕಾರ  ಉಜ್ವಲ, ಗರೀಬ್ ಕಲ್ಯಾಣ ಸೇರಿ ಸಾಕಷ್ಟು ಯೋಜನೆ ನೀಡಿದೆ. ಮೀಸಲಾತಿ ಹೆಚ್ಚಳ ಮಾಡಿದ ಬೊಮ್ಮಯಿ, ಶ್ರೀರಾಮುಲು‌  ದೊಡ್ಡ ಬದಲಾವಣೆ  ಮಾಡೋ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದರು.

ಈ ಸಮಾವೇಶದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಾರಿಗೆ  ಹಾಗೂ ಪರಿಶಿಷ್ಟ ಪಂಗಡ ಇಲಾಖೆ ಸಚಿವ ಬಿ‌. ಶ್ರೀರಾಮುಲು, ಸಚಿವರಾದ ಗೋವಿಂದ ಕಾರಜೋಳ, ಆನಂದ ಸಿಂಗ್, ಪ್ರಭು ಚೌಹ್ವಾಣ್, ಶಾಸಕರಾದ ಸೋಮಶೇಖರ್ ರೆಡ್ಡಿ, ಕರುಣಾಕರ್ ರೆಡ್ಡಿ, ರಾಜು ಗೌಡ ಹಾಗೂ ಮತ್ತಿತರರು ಹಾಜರಿದ್ದರು.

click me!